ಮೂಕ ಪ್ರೇಕ್ಷಕ

ಮಸ್ಕಿ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ವಾಚಿಸಿದ ಕವಿತೆ.

ಮೂಕಪ್ರೇಕ್ಷಕ

ಭಾರತಾಂಬೆಯ ಕಣಕಣಗಳನು ಮೈ ಮನಗಳಲಿ ತುಂಬಿಕೊಂಡಿರುವ ನಮ್ಮದೇ ಸೋದರ ಸೋದರಿಯರಿಗೆ ಗುರುತಿನ ಕಾಗದ ಕೇಳುತ್ತಿದ್ದೇವೆ ಕೊಡಲಾಗದೇ ಚಡಪಡಿಸುತ್ತಿರುವ ಅವರ ಆರ್ತನಾದಕೆ ಮೂಕಪ್ರೇಕ್ಷಕರಾಗಿದ್ದೇವೆ ನಾವು

ಹಾಡುಹಗಲೇ ಹಂತಕರ ಗುಂಡಿಗೆ ಬಲಿಯಾದ ಹಿರಿಯ ಚೇತನಗಳ ಗೋರಿಯಿಂದ ಹೊರಹೊಮ್ಮುವ ಸತ್ಯದ ಪಿಸುಮಾತುಗಳಿಗೆ ಕಿವಿಗೊಡದ ಮೂಕಪ್ರೇಕ್ಷಕರಾಗಿದ್ದೇವೆ ನಾವು

ದೇವರನಾಡಿನ ಹದಿನೆಂಟು ಮೆಟ್ಟಲುಗಳ ದೇವಳ ಪ್ರವೇಶ ದ್ವಾರಕೆ ಕಟ್ಟಳೆಗಳ ಹಾಕಿ ನಿಶ್ಚಿಂತರಾಗಿದ್ದೇವೆ ಮಾನಿನಿಯರ ಕೂಗಿಗೆ
ಮೂಕಪ್ರೇಕ್ಷಕರಾಗಿದ್ದೇವೆ ನಾವು

ನಮ್ಮದೇ ಗಡಿಯೊಳಗೆ ತಂತಿಬೇಲಿ ಹಾಕಿ ಮುಳ್ಳು ಹಾಸಿಗೆ ಹಾಸಿ ಭದ್ರಕೊಟೆಯೊಳಗೆ ಬೆಚ್ಚಗೆ ಮಲಗಿದ್ದೇವೆ ಚಳಿಗೆ ಮೈಯೊಡ್ಡಿ ಗಡಗಡ ನಡುಗುತ ಕುಳಿತ ಅನ್ನದಾತನ ಅಳಲಿಗೆ
ಮೂಕಪ್ರೇಕ್ಷಕರಾಗಿದ್ದೇವೆ ನಾವು

ಶ್ರೀಶೈಲಜಾಲಿಹಾಳ,ಮಸ್ಕಿ

 

Don`t copy text!