ಶತಮಾನಕೊಬ್ಬ ಮಹಾಪುರುಷ ವಿಜಯಮಹಾಂತೇಶ

ಶತಮಾನಕೊಬ್ಬ ಮಹಾಪುರುಷ ವಿಜಯಮಹಾಂತೇಶ
12 ನೇ ಶತಮಾನ ಸಮಾಜದಲ್ಲಿ ಅಚ್ಚಳಿಯದೆ ನಿಚ್ಚಳವಾಗಿ ಉಳಿಯುವ ನಿತ್ಯ ಸತ್ಯತೆಯ ಸಮಷ್ಠಿಯ, ಧರ್ಮ ವಿಜಯದ, ಸತ್ಯ ಶುದ್ದ ಕರ್ಮ ಮಾರ್ಗ ತೋರಿದ, ಸ್ವಾವಲಂಬನೆಯ ಸ್ವಾಭಿಮಾನದ ಜೊತೆಗೆ ಆಧ್ಯಾತ್ಮಿಕ ಅನುಸಂಧಾನದಿ ಸಾಧನೆಯ ಶಿಖರವೇರಿದ ಸಾಹಿತ್ಯಾತ್ಮಕ ಅದ್ಬುತ ಯುಗ ವೆಂದರೆ ತಪ್ಪಾಗಲಾರದು
ಮುಂದೆ 15 ನೇಯ ಶತಮಾನದಲ್ಲಿ ಹುದುಗಿ ಹೋಗಿದ್ದ ಶರಣ ಧರ್ಮವನ್ನು ಮತ್ತೆ ಅರಿವಿನ ಬೆಳಕಿನಲ್ಲಿ ಆಚರಣೆಗೆ ತಂದು ಅದನ್ನು ಹೆಮ್ಮರವಾಗಿ ಬೆಳಸಿದವರು ಮಹಾತಪಸ್ವಿ ಯೆಡೆಯೂರು ತೋಂಟದ ಸಿದ್ದಲಿಂಗ ಯತಿಗಳು. ಇವರ ಪರಿಶ್ರಮದ ಫಲ ಇಂದು ಬೆಳೆದು ನಿಂತ ಅನೇಕ ಮಠ ಮಾನ್ಯಗಳು ಮತ್ತು ಸರಳ ಸುಂದರ ಮಾರ್ಗ ತೋರುವ ಬಸವ ತತ್ವ.

ಇಂತಹ ಮಠಗಳಲ್ಲಿ ಹೆಮ್ಮರದಂತೆ ಬೆಳೆದುನಿಂತ ಚಿತ್ತರಗಿ ಮಠವು ಒಂದು. ಒಮ್ಮೆ ಸಿದ್ದಲಿಂಗ ಯತಿಗಳು ತಮ್ಮ ನೂರೊಂದು ಶಿಷ್ಯರ ಜೊತೆ ಮಲಫ್ರಭಾ ನದಿ ದಂಡೆಯ ಮೇಲೆ ಹಾದು ಹೋಗುವಾಗ ಸುತ್ತ ಮುತ್ತ ಹಸಿರಿನ ಮಧ್ಯೆ ಕಂಗೊಳುಸುತ್ತಿರುವ ಚಿತ್ತರಗಿ ಗ್ರಾಮದಲ್ಲಿ ಒಂದು ಮಠವನ್ನು ನಿರ್ಮಿಸಿ ಅಲ್ಲಿ ತಮ್ಮ ಒಬ್ಬ ಶಿಷ್ಯನನ್ನು ಬಿಟ್ಟು ಹೋದರು. ಅಂತಹ ಮಹಾನ ಯೋಗಿಯಿಂದ ನಿರ್ಮಾಣವಾದ ಚಿತ್ತರಗಿ ಮಠ ಇಂದು ಭಕ್ತರ ತಪೋವನವಾಗಿದೆ .

ಶತಮಾನಕ್ಕೊಬ್ಬ ಮಹಾ ಪುರುಷ ಸಮಾಜ ಬೆಳಗಲು ಪ್ರತಿಸೂರ್ಯನಾಗಿ ಭೂವಿಗೆ ಬರುತ್ತಾನೆ. ಅಂತಹ ದಿವ್ಯ ಚೇತನ, ಬಸವಾದಿ ಶರಣರ ಅಂಶವುಳ್ಳ, ಅವರ ವಚನಗಳ ಗಂಟನ್ನು ಸದಾ ಬೆನ್ನಿಗೆ ಕಟ್ಟಿಕೊಂಡು ಸಮಾಜದ ಏಳಿಗೆ ಬಯಸಿದ ಅಪರೂಪದ ಸಂತ. ಮಹಾತಪಸ್ವಿ, ಪಂಚಾಚಾರಪಾಲಿಪ ವರೇಣ್ಯರು ಆದ ಚಿತ್ತರಗಿಯ ಚಿಜ್ಯೋತಿ ಪರಮ ಪೂಜ್ಯ ಶ್ರೀ ವಿಜಯ ಮಹಾಂತ ಶಿವಯೊಗಿಗಳು.

ಹಾಸನ ಜಿಲ್ಲೆಯ ಸಶಿವಾಳ ಒಂದು ಪುಟ್ಟ ಗ್ರಾಮ. ದೈವ ಭಕ್ತಿಗೆ ಹೆಸರಾದ ನಾಡು. ಅಲ್ಲಿರುವ ಕೊಳಗಲ್ಲಮಠ ಎಂಬ ಜಂಗಮ ಮನೆತನ ತುಂಬಾ ಪ್ರಸಿದ್ದಿ ಪಡೆದಿತ್ತು. ಆ ಮನೆತನದ ಶರಣ ದಂಪತಿಗಳಾದ ವೀರಯ್ಯನವರು ಮತ್ತು ಗೌರಮ್ಮ ತಾಯಿ ಇವರು ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದ ಸಾತ್ವಿಕ ದಂಪತಿಗಳಾಗಿದ್ದರು. ಮರುಳ ಸಿದ್ಧ ಶಿವಯೋಗಿಗಳು ಒಮ್ಮೆ ಇವರ ಮನೆಗೆ ದಯಮಾಡಿಸಿದಾಗ, ಆ ಮನೆಯಲ್ಲಿ ಒಬ್ಬ ಶಿವಯೋಗಿ ಜನಿಸುವ ಮುನ್ಸೂಚನೆಯನ್ನು ಕಂಡರು.

ಅದೇ ವರ್ಷ ಗೌರಮ್ಮ ತಾಯಿ ಶಾಲಿವಾಹನ ಶೆಕೆ 1772 ಸಾಧಾರಣ ನಾಮ ಸಂವತ್ಸರ ಜೇಷ್ಠ ಕೃಷ್ಣ, ಷಷ್ಠಿ ಭಾನುವಾರ ಕ್ರಿಸ್ತಾಬ್ದ 1850 ರಂದು ಮಹಾಚೇತನಕ್ಕೆ ಜನ್ಮ ನೀಡಿದಳು. ಆಮಗುವಿಗೆ “ಮಳೆಯಪ್ಪ” ಎಂದು ನಾಮಕರಣ ಮಾಡಲಾಯಿತು ಇವನಿಗೆ ಆರು ವರ್ಷಗಳಾದ ಮೇಲೆ ದೀಕ್ಷಾ ಸಂಸ್ಕಾರವನ್ನು ವೀರಯ್ಯನವರು ಬಿದರೆಯ್ಯ ಹಿರೇಮಠದ ಪಟ್ಟಾಚಾರಯ್ಯರಾದ ಪ್ರಭು ಸ್ವಾಮಿಗಳು ಅವರಿಂದ ದೀಕ್ಷೆ ನೀಡಿಸಿದರು. ದೀಕ್ಷೆ ಆದ ಬಳಿಕ ಮಗುವಿನಲ್ಲಿ ಬಹಳ ಬದಲಾವಣೆಗಳು ಕಾಣಲಾರಂಬಿಸಿದವು. ಪ್ರಭು ಸ್ವಾಮಿಗಳು ಮಳಿಯಪ್ಪನನ್ನು ನೋಡಿ ಇವನಲ್ಲಿ ಏನೊ ಒಂದು ವಿಶೇಷತೆ ಇದೆ. ಇವನನ್ನು ಸಂಸ್ಕೃತ ಪಾಠ ಶಾಲೆಗೆ ಕಳಿಸಿ ಎಂದು ಹೇಳಿದರು.

ಶಿವಸ್ವರೂಪಿಗಳಾದ ಬಸವಲಿಂಗ ಸ್ವಾಮಿಗಳು ಸಸಿವಾಳದ ಹಿರಿಯ ಮಠದ ಪಟ್ಟಾಧಿಕಾರಿಗಳು. ಮಠದ ಪಾಠ ಶಾಲೆಯಲ್ಲಿ ಮಳೆಯಪ್ಪ ಕನ್ನಡ ಅಕ್ಷರಭ್ಯಾಸ ವ್ಯಾಕರಣ, ಕಾವ್ಯಗಳ ಪರಿಚಯ ಪಡೆದನು. ಸ್ವಾಮಿಗಳು ನೀಡಿದ ಪ್ರವಚನದಿಂದ ಆಧ್ಯಾತ್ಮಿಕ ಹಸಿವನ್ನು ಅರಿತನು. ಮಳೆಯಪ್ಪ ಸ್ವಾಮಿಗಳಿಗೆ ತುಂಬಾ ಸಮೀಪವರ್ತಿಯಾಗಿ ಅವರ ಆಚಾರ ವಿಚಾರ, ಪೂಜಾವಿಧಾನ, ವೀರ ಮಡಿಯ ನಿಯಮಗಳನ್ನು ಬಾಲಕನ ಮೇಲೆ ತುಂಬಾ ಪ್ರಭಾವ ಬೀರಿದವು.

ಮುಂದೆ ಹನ್ನೆರಡನೇ ವಯಸ್ಸಿಗೆ ಎಲ್ಲ ಶಿವ ಶರಣರ ಕಥೆಗಳನ್ನು, ಮಹಾ ಶಿವಯೋಗಿಗಳ ಕಥೆಗಳನ್ನು ತಾಯಿ ಗೌರಮ್ಮ ಸಹಿತ ಹೇಳುತ್ತಿದ್ದಳು. ಇವು ಮಳೆಯಪ್ಪನ ಮೇಲೆ ತುಂಬಾ ಪ್ರಭಾವ ಬೀರಿದವು.

ಒಮ್ಮೆ ತಾಯಿ ಗೌರಮ್ಮ ಶಿವಯೋಗಿಗಳು ಎಲ್ಲಿರುತ್ತಾರೆ ಅಂದಿದ್ದಕ್ಕೆ ಕಲ್ಬೆಟ್ಟದಲ್ಲಿ ಇರುತ್ತಾರೆ ಎಂದಳು. “ನಂಬಿ ಕರೆದರೆ ಓ ಎನ್ನನೇ ಶಿವನು” ಎಂಬತೆ ಶಿವ ಸಂಕಲ್ಪವು, ಸುಮುರ್ಹೂತವು ಕೂಡಿಬಂತು. ಆಕಸ್ಮಾತಾಗಿ ಕಲ್ಬೆಟ್ಟದ ತಪಸ್ವಿಗಳೊಬ್ಬರು ಸಸಿವಾಳಕ್ಕೆ ಬಂದರು. ಇವರು ಬಸವಲಿಂಗ ಸ್ವಾಮಿಗಳ ಮಠದಲ್ಲಿ ಲಿಂಗಾರ್ಚನೆಗೆಂದು ತಂಗಿದ್ದರು. ಇವರು ಬಂದುಹೋದ ಸುದ್ದಿ ತಿಳಿದು ಮಳೆಯಪ್ಪ ನಾನು ಆ ತಪಸ್ವಿಗಳ ಜೊತೆಗೆ ಹೋಗಿತ್ತೇನೆಂದು ಅವರ ಹಿಂದೆಯೆ ಓಡಿಹೋದ. ತಂದೆತಾಯಿಳ ಕೂಗಿನ ಸೀಮೆ ದಾಟಿ ನಡೆದ್ದಿದ್ದ.

ಕಲ್ಬೆಟ್ಟದಲ್ಲಿ ಅನೇಕ ನೈಸರ್ಗಿಕ ಗುಹೆಗಳು ಸೃಷ್ಟಿಯಾಗಿದ್ದವು. ಅಲ್ಲಿ ಅನೇಕ ತಪಸ್ವಿಗಳು ತಪಗೈದು ಕೈವಲ್ಯಸಾಧಿಸಿದ್ದಾರೆ. ಅಂತಹ ಕಲ್ಬೆಟ್ಟದ ಸಾಧನೆ ಘಟಕ್ಕೆ ಏರಿ ಯೋಗ ಜೀವನದ ಪಾಠವನ್ನು ಮಳೆಯಪ್ಪ ಪ್ರಾರಂಭಿಸಿದ. ತಪಸ್ವಿಗಳ ಕೂಟದಲ್ಲಿ ಅವರ ಪ್ರಜ್ಞಾವಲಯದಲ್ಲಿ ಮಲತ್ರಯಗಳನ್ನು ಕಳೆದು ಘಟಸ್ಥಲದ ಸಾಧನಾಮಾರ್ಗದಲ್ಲಿ ಏರಲು ಸಂಘಟಿತನಾದ.

ತಾಯಿಯ ತೊಡೆಯ ಮೇಲೆ ಭಕ್ತಸ್ಥಲದ ಪರಿಚಯ ವಾಗಿತ್ತು. ಅಲ್ಲಿಯ ಶಿವಯೋಗಿಗಳೆ ಜಂಗಮ್ಮ ಚೈತನ್ಯರು. ಯೋಗ ಮಾರ್ಗದಲ್ಲಿ ಮುನ್ನಡೆಯಲು ಅಲ್ಲಿಯ ರಮಣೀಯ ವಾತವರಣ ಅನುವು ಮಾಡಿಕೊಟ್ಟಿತು.

ಗೌರಮ್ಮ ಮತ್ತು ವೀರಪ್ಪನವರು ಕಲ್ಬೆಟ್ಟಕ್ಕೆ ಬಂದು ಮಳಿಯಪ್ಪನನ್ನು ಸಂಸಾರಿಯಾಗುವಂತೆ ಮನವಲಿಸಲು ಪ್ರಯತ್ನಿಸಿದರು. ಆದರೆ ಮಳೆಯಪ್ಪ ಆಪ್ತ ಪ್ರಜ್ಞಾನದೊಂದಿಗೆ ಅಂತರಾಳದ ಅರಿವಿನ ಗುರುವಿನೊಂದಿಗೆ ಆಪ್ತಲೋಚನೆ ಮಾಡಿ ವಿನಯದೊಂದಿಗೆ ಕೆಲಕಾಲ ಯೋಗ ವ್ಯಾಸಂಗಕ್ಕೆ ಅನುವು ಮಾಡಿಕೊಡಬೇಕೆಂದು ಕೇಳಿಕೊಂಡನು.

ಕಲ್ಬೆಟ್ಟದಲ್ಲಿ ಬಾಲಕ ಶಿವಯೋಗಿಗಳ ಜೋತೆಗೆ ಸಾಧನೆಗೈಯಗಯುತ್ತ ಇಂದ್ರೀಯ ವಿಜಯವನ್ನು ಸಾಧಿಸಿ ವಿಜಯದಿಂದ ಮಹಾಂತತೆಗೆ,ಮಹಾಂತತೆಯಿಂದ ವಿಜಯಕ್ಕೆ ಸೇತುವೆ ಕಟ್ಟಿ ವಿಜಯಮಹಾಂತನಾಗುವ ಪ್ರಭಲ ಸಾಮರ್ಥ್ಯವನ್ನು ಸಾಧಿಸಿದ. ಬಸವಲಿಂಗ ಸ್ವಾಮಿಗಳು ಕಲ್ಬೆಟ್ಟಕ್ಕೆ ಬಂದಾಗ ಮಳೆಯಪ್ಪನ ಜ್ಞಾನಾರ್ಜಣೆಯ ಹಸಿವನ್ನು ನೋಡಿ ಅವನ ಬೌಧಿಕ ಬೆಳವಣಿಗೆಗೆ ಅನುವುಮಾಡಿಕೊಡಲು ಬಳ್ಳಾರಿಯ ಸಕ್ಕರೆ ಕರೆಡೆಪ್ಪನವರ ಸಂಸ್ಕೃತ ಪಾಠ ಶಾಲೆಗೆ ಸೇರಿಸಲಾಯಿತು. ಸಕ್ಕರೆ ಕರಡೆಪ್ಪನವರು ಗುರು ಲಿಂಗ ಜಂಗಮ ಸೇವೆಯ ಜೊತೆಗೆ ವೇದ, ವೇದಾಂತ, ಸಾಹಿತ್ಯ ಸಂಗೀತ, ತರ್ಕ, ವ್ಯಾಕರಣ, ಅಲಂಕಾರ, ಜೋತಿಷ್ಯ ವೈದ್ಯ ಶಾಸ್ತ್ರ ಹೀಗೆ ಹಲವಾರು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಅನ್ನ, ವಸ್ತ್ರ, ವಸತಿ, ಮತ್ತು ಗ್ರಂಥಗಳನ್ನು ಸಹ ನೀಡುತ್ತಿದ್ದರು. ಮಳೆಯಪ್ಪನು ತುಂಬಾ ಕಟ್ಟು ನಿಟ್ಟಾಗಿ ಅಧ್ಯಯನ ಮುಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾದನು. ಚಿತ್ತರಗಿ ಮೂಲ ಪೀಠ 56 ಶಾಖಾ ಮಠಗಳನ್ನು ಹೊಂದಿದೆ. ಚಿತ್ತರಗಿ ಚಿಕ್ಕ ಊರಾಗಿದ್ದರಿಂದ ವ್ಯಾಪಾರ ಉದ್ಯಮಗಳಿಂದ ಇಲಕಲ್ಲ ಚಿತ್ತರಗಿ ಪೀಠದ ಕೇಂದ್ರ ಸ್ಥಾನವಾಯಿತು.

15 ನೇ ಶತಮಾನದ ಉತ್ತರಾರ್ಧದಲ್ಲಿ ಯೆಡೆಯೂರು ತೋಂಟದ ಸಿದ್ದಲಿಂಗ ಯತಿಗಳು ಚಿತ್ತರಗಿಗೆ ಆಗಮಿಸಿದಾಗ ಚಿತ್ತರಗಿ ಪೀಠವನ್ನು ಸ್ಥಾಪಿಸಿ ನೂರೊಂದು ವಿರಕ್ತರಲ್ಲಿ ಗುರುಮಹಾಂತರನ್ನು ಪಟ್ಟಗಟ್ಟಿದ್ದರು. ಗುರುಮಹಾಂತರು ಮುಂದೆ ವಿಜಯಮಹಾಂತರಿಗೆ ಪಟ್ಟ ಕಟ್ಟಿದರು ಆಗಿಂದ ಚಿತ್ತರಗಿ ಪೀಠವು ಗುರುಮಹಾಂತರ ನಂತರ ವಿಜಯಮಹಾಂತ ಹೀಗೆ ಪರಂಪರೆ ಬೆಳೆದು ಬಂದಿತು.

ಶ್ರೀಮಂತ ರಾಮಪ್ಪ ದೇಸಾಯಿಯವರು ಅಮರಾವತಿ ಸಂಸ್ಥಾನದ ಅಧಿಪತಿಗಳು, ಚಿತ್ತರಗಿ ಪೀಠದ ಪರಮ ಭಕ್ತರು. ಒಮ್ಮೆ ದೇಸಾಯಿಯವರು ಬಳ್ಳಾರಿಗೆ ಹೋದಾಗ, ಸಕ್ಕರೆ ಕರೆಡೆಪ್ಪನವರಲ್ಲಿಗೆ ಹೋಗಿದ್ದರು. ಅಲ್ಲಿ ಮಳೆಯಪ್ಪ ಸ್ವಾಮಿಯನ್ನು ನೋಡಿ, ಅವರ ಬಗ್ಗೆ ತಿಳಿದುಕೊಂಡು, ಹದಿನಾಲ್ಕನೇ ಪೀಠಾಧಿಪತಿಗಳು ಲಿಂಗದೊಳಗಾಗಿ ಪೀಠವು ಬರಿದಾಗಿತ್ತು. ಉಜ್ವಲವಾಗಿ ಬೆಳಗುವ ಮಹಾಂತ ಶಿವಯೋಗಿಯನ್ನು ತರುಣ ಮಳೆಯಪ್ಪನಲ್ಲಿ ಕಂಡರು. ಅಧಿಕಾರದ ಆಸೆ ಇರದ ಮಳೆಯಪ್ಪನನ್ನು ಒಪ್ಪಿಸುವದು ಸುಲಭವಾಗಿರಲಿಲ್ಲ.

“ಬಯಸಿ ಬಂದುದು ಅಂಗ ಭೋಗ, ಬಯಸದೇ ಬಂದುದು ಲಿಂಗಭೋಗ” ಎಂಬಂತೆ ಚಿತ್ತರಗಿ ಪೀಠವು ಮಳೆಯಪ್ಪನಿಗಾಗಿ ಕಾಯುತ್ತಿತ್ತು.

1801 ಶಾಲಿವಾಹನ ಶಕೆ ಪ್ರಮಾಥಿನಾಮ ಸಂವತ್ಸರ ವೈಶಾಖ ಶುಕ್ಲದ ಚತುರ್ದಶಿ, ಸೋಮವಾರ ಶ್ರೀ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪೀಠದ ಶೂನ್ಯ ಸಿಂಹಾಸನವನ್ನು ಏರಿದ ಮಳೆಯಪ್ಪ, ಚಿತ್ತರಗಿಯ ಚಿಜ್ಯೋತಿ ಪರಮ ಪೂಜ್ಯ ಶ್ರೀ ವಿಜಯ ಮಹಾಂತೇಶನಾದ. ತರುಣ ಯೋಗಿ ಪ್ರಬುದ್ಧ ಶಿವಯೋಗಿಯಾದ. ನಿಸ್ಸಿಮ ಭಕ್ತ ಪರಿಪಾಲಣೆಗೈದು ನಿರಂಜನ ಜಂಗಮನಾದ. 12 ವರ್ಷಗಳ ಕಾಲ ಧೀರ್ಘ ತಪಗೈದರು ವಿಜಯಮಹಾಂತೇಶ ಶಿವಯೋಗಿಗಳು.
ತಲೆಯಮೇಲೆ ಮಾತ್ರ ಖಾವಿ ರೂಮಾಲು ಸುತ್ತುತ್ತಿದ್ದರು. ಮೈಮೇಲೆ ಬಿಳಿ ಬಟ್ಟೆ ಧರಿಸುತ್ತಿದ್ದರು. ಯಾರೊ ಒಬ್ಬರು ನೀವು ಸಂಪೂರ್ಣ ಖಾವಿ ಬಟ್ಟೆ ಏಕೆ ಧರಿಸುವದಿಲ್ಲ, ಎಂದು ಕೇಳಿದರಂತೆ. ಆಗ ಶಿವಯೋಗಿಗಳು ತಲೆಯ ಮೇಲಿರುವ ಈ ಖಾವಿಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರೆ ಸಾಕು, ಅದರ ಪಾವಿತ್ರ್ಯತೆಯನ್ನು ಕಾಪಾಡಿದರೆ ಸಾಕು ಎಂದರಂತೆ. ಇವರ ಜೊತೆ ಇವರ ತಾಯಿಯಂತೆ ಸದಾ ಮಮತೆಯಿಂದ ಇದ್ದ ಮಹಾಂತಮ್ಮ ಎಂಬ ಗೋಮಾತೆ ಕೊನೆಯವರೆಗೆ ಇವರ ಜೊತೆ ಇದ್ದಳು. ಎಲ್ಲಿಗೆ ಹೋದರು ಅವರ ಜೊತೆಗೆ ಇರುತ್ತಿದ್ದಳು. ಬೆನ್ನಿಗೆ ಸದಾ ವಚನದ ಕಟ್ಟು ಇರುತ್ತಿತ್ತು. ಅದನ್ನು ಬಲು ಜತನದಿಂದ ಜೋಪಾನಮಾಡುತ್ತಿದ್ದರು.

ಆಚಾರ ವಿಚಾರ, ನಿತ್ಯ ನಿಯಮ, ವೀರ ಮಡಿ, ಕಾಯಕ, ತ್ರಿಕಾಲ ಪೂಜೆ, ದಿನನಿತ್ಯದ ಕಾಯಕಗಳು, ತಮ್ಮ ದಿನನಿತ್ಯದ ಪ್ರಸಾದವನ್ನು ಸಹಿತ ತಾವೇ ತಯಾರಿಸಿಕೊಳ್ಳುತ್ತಿದ್ದರು. ಹನ್ನೆರಡು ವರ್ಷಗಳ ಕಾಲ ಧೀರ್ಘ ತಪಗೈದರು. ಅವರ ಸಮಗ್ರ ಜೀವನವೇ ಒಂದು ಮಹಾಲಿಂಗ ಪೂಜೆ. ಪೂಜ್ಯರ ಪ್ರತಿ ಮಾತು ಮಹಾ ಮಂತ್ರ. ಪ್ರತಿ ನೋಟವು ನಿರಂಜನ ನಿರೀಕ್ಷಣೆ.

ವಿಜಯಮಹಾಂತ ಶಿವಯೋಗಿಗಳು ಅನೇಕ ಪವಾಡಗಳನ್ನು ಮೇರೆದು ಪವಾಡಪುರುಷರಾದರು. ಹೇಳುತ್ತ ಸಾಗಿದರೆ ಒಂದೆರಡಲ್ಲ. ಸಾವಿರಾರು. ಅನೇಕ ಕಡೆಗಳಲ್ಲಿ ಬರಗಾಲದಲ್ಲಿ ಬಾವಿ ತೊಡಿಸಿ ನೀರು ತರಿಸಿದರು. ಶಿರೂರು ತೀರ್ಥದಲ್ಲಿ ಈಗಲೂ ನೀರಿನ ಚಿಲುಮೆ ಇದೆ. ಮಲ್ಲಮ್ಮಳಿಗೆ ಬಂದ ಕಳ್ಳಿ ಎಂಬ ಅಪವಾದವನ್ನು ಹೋಗಲಾಡಿಸಿದ್ದು. ಶ್ರೀಮಂತರ ಅಹಂಕಾರದ ಸೊಲ್ಲಡಗಿಸಿದ್ದು, ದೇಹಿ ಎಂದು ನಂಬಿ ಬಂದ ಭಕ್ತರನ್ನು ಕಾಪಾಡಿದ್ದು, ಬಾವಿಗೆ ಬಿದ್ದ ಗರ್ಭಿಣಿ ಸ್ತ್ರೀಯನ್ನು ಕಾಪಾಡಿದ್ದು, ಹೀಗೆ ಹೇಳುತ್ತ ಸಾಗಿದರೆ ಮುಗಿಯದಷ್ಟು ಪವಾಡಗಳು.

1908 ರಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭೆಯಲ್ಲಿ ಪೂಜ್ಯರಾದ ಹಾನಗಲ್ಲ ಕುಮಾರಸ್ವಾಮಿಗಳು, ವಟುಗಳಿಗೆ ಶಿಕ್ಷಣ ಮತ್ತು ಸಂಸ್ಕಾರ ನೀಡುವ ಉದ್ಧೇಶದಿಂದ, ಶಿವಯೋಗ ಮಂದಿರವೆಂಬ ಸಂಸ್ಥೆಯನ್ನು ಪ್ರಾರಂಭಿಸಬೇಕೆಂದು ಪ್ರಭಲವಾಗಿ ಮಂಡಿಸಿದರು. ಇವರ ಸಾಮಾಜಿಕ ಕಳಕಳಿಯನ್ನು ಅರಿತು ಪರಿಷತ್ತು ಸೈಗೊಟ್ಟಿತು.

ಮರುದಿನ ಶಿವಯೋಗ ಮಂದಿರದ ಸ್ಥಾಪನೆ ಮತ್ತು ಸ್ಥಳವನ್ನು ತೋರಿಸಲು ವಿಜಯಮಹಾಂತ ಶಿವಯೋಗಿಗಳನ್ನು ಸೂಚಿಸಿದರು. ವಿಜಯಮಹಾಂತ ಶಿವಯೋಗಿಗಳು ಮಹಾಂತಮ್ಮನ ಜೋತೆಗೂಡಿ ಮಲಪ್ರಭಾ ನದಿಯ ದಂಡೆಯ ಗುಂಟ ಸಾಗುತ್ತಾ ಬೆಟ್ಟಗುಡ್ಡಗಳ ಸಾಲಿನಲ್ಲಿ ಒಂದು ಪತ್ರಿ ವನವಿತ್ತು. ಮತ್ತು ಅಲ್ಲಿ ಕೊಟ್ಟುರೇಶ್ವರನ ದೇವಸ್ಥಾನವಿತ್ತು. ಈ ಸ್ಥಳವೆ ಸೂಕ್ತ ಎಂದು ಪರಿಷತ್ತಿಗೆ ಸೂಚಿಸಿದರು. ಶಿವಯೋಗ ಮಂದಿರವು ಹಸಿರು ಬೆಟ್ಟಗಳ ಮಧ್ಯೆ, ಮಲಪ್ರಭಾ ನದಿ ದಂಡೆಯ ಮೇಲೆ ಸುಂದರವಾಗಿ ಕಂಗೊಳಿಸುತ್ತಿದೆ. ಇಂದು ಶಿವಯೋಗ ಮಂದಿರವು ಸಾವಿರಾರು ವಟುಗಳನ್ನು, ಮಹಾನ್ ಯೋಗಿಗಳನ್ನು ನಾಡಿಗೆ ನೀಡಿದೆ.

ಹೀಗೆ ವಿಜಯಮಹಾಂತ ಶಿವಯೋಗಿಗಳು ಬಸವಾದಿ ಶರಣರ ಮಾರ್ಗದಲ್ಲಿ ನಡೆದು, ಭಕ್ತ ಸಮೂಹವನ್ನು ಸದಾ ರಕ್ಷಿಸುತ್ತ ಇಲಕಲ್ಲ ನಗರವನ್ನು ಜಗತ್ಪ್ರಸಿದ್ಧ ಮಾಡಿದ್ದಾರೆ. ತಮ್ಮ ಕೊನೆಯ ದಿನಗಳಲ್ಲಿ ಉದರ ಶೂಲೆಯಿಂದ ತುಂಬಾ ನೋವನ್ನು ಅನುಭವಿಸಿದರು.

ಶಾಲಿವಾಹನ ಶಕೆ 1933 ವಿರೋಧಿಕೃತ ಸಂವತ್ಸರ ಕಾರ್ತಿಕ ಶುದ್ಧ ಪಂಚಮಿ, ಶುಕ್ರವಾರ ಕ್ರಿಸ್ಥಾಬ್ಧ 1911 ರಂದು ಪರಮ ಪೂಜ್ಯ ಶ್ರೀ ವಿಜಯಮಹಾಂತ ಶಿವಯೋಗಿಗಳು ಭಕ್ತ ಸಮೂಹವನ್ನು ಅನಾಥಮಾಡಿ ಬಸವ ಬಯಲಿನಲ್ಲಿ ಲಿಂಗೈಕ್ಯರಾದರು. ಬಸವಾದಿ ಶರಣರ ಸಾಲಿಗೆ ಸೇರುವ ಮಹಾನ್ ಯೋಗಿಯ ಬಗ್ಗೆ ಹೇಳುವುದೆಂದರೆ ಬೊಗಸೆಯಲ್ಲಿ ಸಮುದ್ರವನ್ನು ಹಿಡಿದಂತೆ. ಬಯಲಲ್ಲಿ ಬಯಲಾಗಿ ಶತಮಾನಗಳೆ ಕಳೆದರೂ ಸತ್ಯ ಚೇತನರಾಗಿ, ಸದಾ ಜಾಗೃತರಾಗಿ ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿದ್ದಾರೆ.ಎಲ್ಲರಿಗೂ ಶರಣು ಶರಣಾರ್ಥಿಗಳು.

ಸವಿತಾ. ಮಾಟುರ. ಇಲಕಲ್ಲ.

Don`t copy text!