ಗೂಗಲ್ ಮೀಟ್ ಶರಣ ಚಿಂತನ ಮಾಲಿಕೆ -16
ಸಮಯೋಚಿತ ಲಿಂಗಪೂಜೆ- ಸಾಂದರ್ಭಿಕ ಜಂಗಮ ಸೇವೆ
ಎನ್ನುವ ವಿಷಯದ ಮೇಲೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
*ಕುಮಾರಿ ಗ್ರೀಷ್ಮ*
ಉಳ್ಳವರು ಶಿವಾಲಯ ಮಾಡುವರು ಎನ್ನುವ ಬಸವಣ್ಣನವರ ವಚನವನ್ನು ಹಾಡಿದಳು…
*ಗೀತಾ ಜಿ ಎಸ್* ಅವರು
ನೀರಿಂಗೆ ನೈದಿಲೆಯೆ ಶೃಂಗಾರ ಎನ್ನುವ ಬಸವಣ್ಣನವರ ವಚನವನ್ನು ಹಾಡಿದರು…
*ವಿದ್ಯಾ ಮುಗ್ದುಮ್* ಅವರು
ಸ್ವಾಮಿ ನೀನು ಶಾಶ್ವತ ನೀನು ಎನ್ನುವ ವಚನವನ್ನು ಹಾಡಿ ವಚನ ಪ್ರಾರ್ಥನೆ ಮಾಡಿದರು.
ರುದ್ರಮೂರ್ತಿ ಸರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತ
ಲಿಂಗವೆಂದರೇನು? ಜಂಗಮದ ಮಹತ್ವವೇನು ಈ ವಿಷಯದ ಬಗ್ಗೆ ಹಲವಾರು ವಚನಕಾರರು ಪ್ರಾಸ್ತಾವನೆ ಮಾಡಿದ್ದಾರೆ. ಇವರೆಡರ ಮಧ್ಯೆ ಇರುವ ಗೊಂದಲವನ್ನು ಬಗೆಹರಿಸಿಕೊಳ್ಳಬೇಕಾಗಿದೆ. ಲಿಂಗಪೂಜೆ ಅರ್ಚನೆಯೋ,ಪೂಜೆಯೋ ಈ ತಾತ್ವಿಕ ದ್ವಂದ್ವದಲ್ಲಿ ವಚನಕಾರರ ನಿಲುವೇನಿತ್ತು, ಎಂದು ತಿಳಿದುಕೊಳ್ಳೋಣ ಎಂದು ತಿಳಿಸಿದರು…
*ಡಾ.ಶಶಿಕಾಂತಪಟ್ಟಣಸರ್* ಮಾತನಾಡಿ ಗುರು, ಲಿಂಗ ಜಂಗಮದ ಸಂಬಂಧದ ತತ್ವಗಳನ್ನು, ಅರಿವುಗಳನ್ನು ವೈದೀಕರಣಗೊಳಿಸುತ್ತಿದ್ದೇವೆ, ಸನಾತನಗೊಳಿಸುತ್ತಿದ್ದೇವೆ. ಯಾವ ವ್ಯವಸ್ಥೆಯ ಬಗ್ಗೆ ಬಸವಣ್ಣನವರು ಮುಕ್ತಗೊಳಿಸಿದ್ದರೋ ಆ ವ್ಯವಸ್ಥೆ ಇಂದು ನಮ್ಮನ್ನು ಗುಲಾಮರನ್ನಾಗಿ ಮಾಡುತ್ತಿದೆ ಎನ್ನುವುದೇ ನೋವಿನ ಸಂಗತಿ, ಎಂದು ತಿಳಿಸುತ್ತಾ…
ಬಸವಾದಿ ಶರಣರ ಆಶಯಗಳೇನಿತ್ತು ಅಂದರೆ ಶರಣರ ವಚನಗಳನ್ನು ಸರಿಯಾಗಿ ತಿಳಿದುಕೊಳ್ಳದೆ,ಜಂಗಮವಾದ ಲಿಂಗವನ್ನು ಸ್ಥಾವರಗೊಳಿಸಿದ್ದೇವೆ.ಲಿಂಗ ತತ್ವದ ಹಿಂದಿನ ಆಶಯವನ್ನು ನಾವು ತಿಳಿದುಕೊಳ್ಳಲಿಲ್ಲ ಎಂದು ನೊಂದು ನುಡಿದರು. ಶರಣರ ಲಿಂಗ ತತ್ವವನ್ನು ಮರೆತು, ಇದನ್ನು ಒಂದು ಭೌತಿಕ ವಸ್ತುವನ್ನಾಗಿ ಮಾಡಿಕೊಂಡಿದ್ದೇವೆ, ಇಷ್ಟಲಿಂಗವನ್ನು ಶೈವೀಕರಣಗೊಳಿಸಿ,ಸ್ಥಾವರವನ್ನಾಗಿ ಮಾಡಿರುವುದು ಅತ್ಯಂತ ನೋವಿನ ಸಂಗತಿ ಎಂದು ತಿಳಿಸಿದರು…
ಲಿಂಗವ ಪೂಜಿಸಿ ಫಲವೇನು ಸಮರತಿ ಸಮಕಳೆ ಸಮಸುಖವನ್ನರಿದನ್ನಕ್ಕ ನದಿಯೊಳಗೆ ನದಿ ಬೆರೆಸಿದಂತಾಯಿತ್ತು ಕೂಡಲಸಂಗಮದೇವ ಎನ್ನುವ ವಚನದ ಅರ್ಥ ತಿಳಿಸಿ,ಎರೆದೆರೆ ನೆನೆಯದು ಮರೆತರೆ ಬಾಡದು ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ ಎನ್ನುವ ಇನ್ನೊಂದು ವಚನದ ಅರ್ಥ ತಿಳಿಸಿದರು.
ಅಂಗದ ಮೇಲಿನ ಲಿಂಗ ಭೌತಿಕ ವಸ್ತುವಲ್ಲ, ಲಿಂಗ ಎನ್ನುವುದು ಸಮುಷ್ಟಿ ಅರಿವಿನ ಅನುಸಂಧಾನ ಎಂದು ತಿಳಿಸಿ,ಅಂದಿನ ಶರಣರು ಲಿಂಗವನ್ನು ಮೂರು ಹೊತ್ತು ಪೂಜಿಸುವುದನ್ನು ಒಪ್ಪಿಲ್ಲ, ಲಿಂಗ ಪೂಜೆಗೆ ಸಮಯವಿಲ್ಲ, ಕಾಯವೇ ಲಿಂಗ, ಅಂಗದೊಳಗೆ ಲಿಂಗ ಸೇರಿದ ಮೇಲೆ ಬೇರೆ ಮತ್ತೇನಿದೆ ಎಂದು ಬಸವಣ್ಣನವರು ಹೇಳಿದ್ದಾರೆ, ಹಾಗಾಗಿ ನಾವು ಸಕಾರದಿಂದ ನಿರಾಕಾರಕ್ಕೆ ಹೋಗಬೇಕು. ಲಿಂಗ ಪೂಜೆಯ ಜೊತೆಗೆ ಜಂಗಮ ಸೇವೆಯನ್ನು ಮಾಡುತ್ತಾ ಶರಣರ ತತ್ವಗಳನ್ನು ಪಾಲಿಸಬೇಕು ಎಂದು ತಿಳಿಸಿದರು..
*ಬಸವರಾಜ್ ಪಿ.ಕೆ* ಮಾತನಾಡಿ
ನಾವು ಅನುಭವ ಮಂಟಪಕ್ಕೆ ಹತ್ತಿರವಾಗುತ್ತಿದ್ಧೇವೆ ಎಂದು ಹೇಳುತ್ತಾ…
ಗುರು, ಲಿಂಗ, ಜಂಗಮ, ಪಾದೋದಕ ಪ್ರಸಾದಗಳೇ ಲಿಂಗ ತತ್ವಗಳು, ಲಿಂಗ ಎನ್ನುವುದು ಅಖಂಡ ಚೈತನ್ಯಾತ್ಮಕ ಶಕ್ತಿ, ಲಿಂಗ ತತ್ವದ ನೆಲೆಯಲ್ಲಿ ವಚನವನ್ನು ಸರಿಯಾಗಿ ಗ್ರಹಿಸಬೇಕು.ಲಿಂಗ ಪೂಜೆಯು ಅಂಗಕ್ಕೆ ಸಂಭಂದವಿದೆ.ಇಷ್ಟಲಿಂಗ ಪೂಜೆಯಲ್ಲಿ ಅಂಗದೊಳಗಿರುವ ನಿರಾಕಾರ ಚೈತನ್ಯ ಮತ್ತು ಚೈತನ್ಯದಾತ್ಮಕ ಚಿಂತನೆ ಇರುತ್ತದೆ ಎಂದು ತಿಳಿಸಿದರು…
*ಸೋಮಶೇಖರ್ ಮುಗ್ದುಮ್* ಮಾತನಾಡಿ
ಲಿಂಗ ಪೂಜೆಯನ್ನು ಬೆಳಗಿನ ಜಾವ ಮಾಡಬೇಕು,ಆಗಿ ಲಿಂಗ ಸಾಮರಸ್ಯವಾಗುತ್ತದೆ ಎಂದಾಗ ಪಟ್ಟಣ ಸರ್ ಕಾಯವೇ ಲಿಂಗ,ಲಿಂಗವೇ ಚೈತನ್ಯ.ಪೂಜೆ ಮಾಡುವಾಗ ಯಾರಾದರೂ ಬಂದರೆ ಮೊದಲು ಜಂಗಮ ಸೇವೆ ಮಾಡಬೇಕು ಎಂದು ತಿಳಿಸಿದರು..
*ಅಂಬಾರಾಯ ಬೀರದಾರ* ಮಾತನಾಡಿ
ಇಂದು ಇಷ್ಟಲಿಂಗ ಪೂಜೆ ವೈದೀಕರಣಗೊಂಡಿದೆ,ವ್ಯಾಪಾರೀಕರಣವೂ ಆಗಿದೆ. ನಮ್ಮೊಳಗೇ ದೇವರಿದ್ದಾನೆ,ತಾನು ತಾನಾಗುವುದೇ ಸಿದ್ಧಾಂತ ಎಂದು ತಿಳಿಸಿ ಹೇಳಿ, ಇಷ್ಟಲಿಂಗವನ್ನು ಪೂಜಿಸುವಾಗ ಮಂದ ಬೆಳಕು ಇರಬೇಕು.ಇಷ್ಟಲಿಂಗದ ಹೊಳಪು ಕಣ್ಣಿಗೆ ಕಾಣಬೇಕು, ದೃಷ್ಟಿಯೋಗ ಮಾಡಬೇಕು, ಷಡಕ್ಷರಿ ಮಂತ್ರ ಜಪಿಸಬೇಕು, ಇದು ಬಸವಾದಿ ಶರಣರು ಕೊಟ್ಟಂತಹ ಮಹಾ ಕೊಡುಗೆ ಎಂದು ತಿಳಿಸಿದರು…
*ಕುಮಾರ ರಾಜಣ್ಣ ಜರ್ಮನ್* ಮಾತನಾಡಿ
ಲಿಂಗ ಪೂಜೆ ಎಷ್ಟು ಸಮಯೋಚಿತ ಹಾಗೂ ಎಷ್ಟು ಸಮಂಜಸ ಎಂದು ಹೇಳುತ್ತಾ , ಲಿಂಗ ಪೂಜೆ ಎನ್ನುವುದೇ ಜೀವನ ಆಗಬಾರದು.ಅಂಗ ಲಿಂಗ ಒಂದಾಗುವುದೇ ಸಾಧನೆ ಅಲ್ಲ.ಜಂಗಮ ಸೇವೆಯನ್ನು ಹೇಗೆ ಮಾಡಬಹುದು ಎಂದು ತಿಳಿದುಕೊಳ್ಳಬೇಕು ಎಂದು ತಿಳಿಸಿದರು….
*ಕೆ ಎಸ್ ಇನಾಮತಿ* ಮಾತನಾಡಿ
ಲಿಂಗ ಪೂಜೆ ಇಲ್ಲದೆ ಲಿಂಗಾಯತ ಇಲ್ಲ, ಜನರಿಗೆ ತೋರಿಸುವುದರಲ್ಲಿ ತಪ್ಪೇನಿಲ್ಲ, ನಾನು ಬೆಳಿಗ್ಗೆ ಮತ್ತು ಸಾಯಂಕಾಲ ಮಾಡಿಕೊಳ್ಳುತ್ತೇನೆ ಇದರ ಜೊತೆಗೆ ಸಮಾಜ ಸೇವೆಯನ್ನೂ ಮಾಡಬೇಕು ಎಂದು ಹೇಳುತ್ತಿದ್ದಾಗ, ಪಟ್ಟಣ ಸರ್ ರವರು ಲಿಂಗ ಪೂಜೆಗೆ ವಿರೋಧವಿಲ್ಲ ಆದರೆ ಅದು ವೈಭವೀಕರಣ ಆಗಬಾರದು ಎಂದು ತಿಳಿಸಿದರು..
*ಲಿಂಗಪ್ಪ ಕಲ್ಬುರ್ಗಿ* ಮಾತನಾಡಿ
ಇಷ್ಟಲಿಂಗವು ನಮ್ಮ ಧರ್ಮದ ಸೂಚನೆ ಎಂದು ತಿಳಿಯಬೇಕು,ರೂಪವಿಲ್ಲದ,ಆಕಾರವಿಲ್ಲದ ಶಿವನನ್ನು ಪೂಜಿಸದೆ ಇಷ್ಟಲಿಂಗವನ್ನು ಪೂಜಿಸಬೇಕು ಎಂದು ತಿಳಿಸಿದರು….
*ಶಿವಬಸಪ್ಪ ಪೂಜಾರಿ* ಮಾತನಾಡಿ
ಬಸವಣ್ಣನವರಿಗಿಂತ ಪೂರ್ವದಲ್ಲಿ ಇಷ್ಟಲಿಂಗ ಇರಲಿಲ್ಲ.ಇದು ಆಧ್ಯಾತ್ಮಿಕ ಸಾಧನ, ಇಲ್ಲಿ ಸಮಾಜ ಸೇವೆಯೇ ಮುಖ್ಯ ಹಾಗಾಗಿ ಇಷ್ಟಲಿಂಗ ಪೂಜೆ ಮಾಡಬೇಕು ಎಂದು ಹೇಳಿದರು…
*ಡಾ.ಶುಭಾರಾಣಿ ಕಡಪಟ್ಟಿ* ಮಾತನಾಡಿ
ನನ್ನ ಅನುಭವದ ಪ್ರಕಾರ ಯಾವುದು ಮೊದಲು ಅವಶ್ಯಕತೆ ಇರುತ್ತದೋ ಅದನ್ನೇ ಮೊದಲು ಮಾಡಬೇಕು.ನಾವು ಮಾಡುವ ಕಾಯಕದ ಕಡೆ ಗಮನ ಕೊಡಬೇಕು ಎಂದು ತಿಳಿಸಿದರು…
*ಸಿದ್ಧರಾಮ ಯಲವಂಟಿಗೆ* ಮಾತನಾಡಿ
ನಿಮ್ಮ ಮಾತಿಗೆ ನನ್ನ ಸಹಮತವಿದೆ,ಆದರೆ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಮಾಡುವುದರಲ್ಲಿ ತಪ್ಪೇನಿಲ್ಲ, ಆಧುನಿಕ ಜೀವನದಲ್ಲಿ ಧರ್ಮವನ್ನು ಹೆಚ್ಚು ಜನರಿಗೆ ಮುಟ್ಟಿಸಬೇಕಾಗಿದೆ ಎನ್ನುತ್ತಿದ್ದಂತೆ, ಬಸವರಾಜ್ ರವರು ಗುರು, ಲಿಂಗ ಜಂಗಮದ ತಿಳುವಳಿಕೆಯನ್ನೂ ಕೊಡಬೇಕು ಎಂದು ತಿಳಿಸಿದರು..
*ಕಾಂತರಾಜು p y* ಮಾತನಾಡಿ
ದೇಹವನ್ನೇ ಲಿಂಗವಾದ ಮೇಲೆ ಬೇರೆ ಪೂಜೆ ಬೇಡ.ಅಂಗಕ್ಕೆ ಲಿಂಗ ಅಗತ್ಯ ಇಲ್ಲ, ಅನಿವಾರ್ಯ ಎಂದು ತಿಳಿಸಿದರು….
*ದೀಪಾ ತೊಲಗಿ* ಮಾತನಾಡಿ
ಇದು ಅದ್ಭುತವಾದ ಕಾರ್ಯಕ್ರಮ, ಚೆನ್ನಾಗಿತ್ತು ಎಂದು ತಿಳಿಸಿದರು..
*ಗೀತಾ ಜಿ ಎಸ್* ಮಾತನಾಡಿ
ಹಳ್ಳಿಯ ರೈತರು ಮೊದಲು ಕಾಯಕ ಮಾಡುತ್ತಾರೆ ನಂತರ ಲಿಂಗ ಪೂಜೆ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.ನಂತರ “ಕಲ್ಲ ಮನೆಯಾ ಮಾಡಿ ಕಲ್ಲು ದೇವರ ಮಾಡಿ” ಎನ್ನುವ ಅಲ್ಲಮ ಪ್ರಭುಗಳ ವಚನವನ್ನು ಹಾಡಿದರು.,
ಕಡೆಗೆ ರುದ್ರಮೂರ್ತಿ ಸರ್ ಎಲ್ಲರನ್ನೂ ವಂದಿಸಿದರು…
ವರದಿ-
ಗೀತ ಜಿ ಎಸ್
ಹರಮಘಟ್ಟ ಶಿವಮೊಗ್ಗ