ಕವಿತೆ
ಕೊರೊನಾ
ಹತ್ತು ವರುಷದ ಹಿಂದೆ
ಹಳ್ಳಿಯಲಿ ಬದುಕಿದ್ದೆ
ಹೊನ್ನ ಬೆಳೆಯುತಲಿದ್ದೆ ಹೊಲದ ತುಂಬ
ಚಿನ್ನದಂತಹ ಮಣ್ಣ
ರಸವಿಷವ ಉಣಿಸಿದ್ದೆ
ಕೀಟನಾಶಕ ಸಿಡಿಸಿ ಬರಡಾಗಿಸಿದ್ದೆ
ಮಡದಿ ಮಕ್ಕಳ ಜೊತೆಗೆ
ಬೆಂಗಳೂರಿಗೆ ಬಂದೆ
ವಲಸೆ ಕಾರ್ಮಿಕನಾಗಿ ದುಡಿಯುತಿದ್ದೆ
ಬಂದಿತಿದೊ ಮಹಾಮಾರಿ
ಬಡಜೀವಿಗಳ ವೈರಿ
ಕುತ್ತು ತಂದಿತು ತುತ್ತು ಅನ್ನಕಾಗಿ
ಉದ್ಯೋಗ ಎರವಾಗಿ
ಮಕ್ಕಳಿಗೆ ಹಸಿವಾಗಿ
ಬೆಂಗಳೂರಿದು ನಮಗೆ ಬರಡು ಹೈನ
ಅನ್ನ ಬಟ್ಟೆಗಳಿಲ್ಲ
ಮಡದಿ ಮಕ್ಕಳಿಗೆಲ್ಲ
ಹಸಿದೊಡಲು ಬಾಧೆಯಲಿ ಗುಡುಗು ಸಿಡಿಲು
ನಗರದೊಡವೆಯೇ ಬೇಡಾ
ನಮ್ಮ ನೆಲವೆ ಪಾಡ
ಮರುವಲಸೆ ಹೊರಟೇವು ಹಳ್ಳಿಯತ್ತ
ನಡೆಯುತ್ತ ಎಡವುತ್ತ
ಅಡಿಗಡಿಗೆ ಬೀಳುತ್ತ
ಸಾಗಿತ್ತು ಬಡಯಾತ್ರೆ ನನ್ನೂರಿನತ್ತ
ಬೀಗಿದಪ್ಪಿ ಭೂತಾಯಿ
ಮಣ್ಣ ಮಗನನು ರಮಿಸಿ
ತುತ್ತು ಅನ್ನವ ಕೊಡುವೆ ಬಾ ಎಂದಳು
ಬೆವರ ಹನಿ ಬಿದ್ದಾಯಿತು
ನೆಲವೆಲ್ಲ ಹಸಿರಾಯಿತು
ಜೀವಕಾರುಣ್ಯದ ತಾಯಿ ನಿನಗೆ ಶರಣು
ನಿನ್ನ ಬಿಟ್ಟಿರೆ ಎನಗೆ
ಅನ್ಯ ಜೀವನವಿಲ್ಲ
ನಿನ್ನೊಡಲು ಎನಗಾಯ್ತು ಜೀವದುಸಿರು
ಕಾಪಾಡು ಅನವರತ
ವಾತ್ಸಲ್ಯಮಯಿ ಭೂಮಿ
ನಿನ್ನ ಮಡಿಲಲಿ ನನ್ನ ಬದುಕು ಧನ್ಯ
–ಸಾವಿತ್ರಿ ಮುಜುಮದಾರ
ಕೊಪ್ಪಳ.
ಮೊ: ೯೮೮೬೯೨೨೮೧೫