ಬಾದಾಮಿಯ ಚಾಲುಕ್ಯರು

ಇತಿಹಾಸ

ಬಾದಾಮಿಯ ಚಾಲುಕ್ಯರು

ಕರ್ನಾಟಕದ ಸಾಮ್ರಾಜ್ಯಗಳಲ್ಲಿ ಅತ್ಯಂತ ವೈಭವಯುತವಾಗಿ ಆಳಿದವರಲ್ಲಿ ಬಾದಾಮಿಯ ಚಾಲುಕ್ಯರು ಅಗ್ರಗಣ್ಯರು. ದಕ್ಷಿಣ ಪ್ರಸ್ಥಭೂಮಿಯನ್ನು ಆಳಿದ ರಾಜಮನೆತನಗಳಲ್ಲಿ ಬಾದಾಮಿಯ ಚಾಲುಕ್ಯರು ಮತ್ತು ಮಾಳಖೇಡದ ರಾಷ್ಟ್ರಕೂಟರು ಪ್ರಮುಖರು. ಅತ್ಯಂತ ಪ್ರಬಲ ಮತ್ತು ಬಲಶಾಲಿ ಅರಸರಾದ ಬಾದಾಮಿಯ ಚಾಲುಕ್ಯರು ದಕ್ಷಿಣದ ಪ್ರಸ್ಥಭೂಮಿಯನ್ನು ಕ್ರಿ. ಶ. 543 ರಿಂದ 753 ರ ವರೆಗೆ ಆಳ್ವಿಕೆಯನ್ನು ನಡೆಸಿದ್ದಾರೆ. ತದ ನಂತರ ರಾಷ್ಟ್ರಕೂಟರು ಕ್ರಿ. ಶ. 725 ರಿಂದ 985 ರ ವರೆಗೆ ಬಾದಾಮಿ ಚಾಲುಕ್ಯರಿಂದ ರಾಜ್ಯವನ್ನು ವಶಪಡಿಸಿಕೊಂಡು ಆಳ್ವಿಕೆಯನ್ನು ಮಾಡುತ್ತಾರೆ.

ಬನವಾಸಿಯ ಕದಂಬರ ರಾಜ್ಯ ಕ್ಷೀಣವಾಗತೊಡಗಿದಾಗ ಅವರಿಂದ ಸ್ವತಂತ್ರರಾದ ಚಾಲುಕ್ಯರು “ವಾತಾಪಿ” ಎನ್ನುವ ಈಗಿನ ಬಾದಾಮಿಯನ್ನು ರಾಜಧಾನಿಯನ್ನಾಗಿಸಿಕೊಂಡು 6 ನೇ ಶತಮಾನದ ಮಧ್ಯಭಾಗದಿಂದ 8 ನೇ ಶತಮಾನದವರೆಗೂ ಆಳ್ವಿಕೆಯನ್ನು ನಡೆಸಿದ್ದಾರೆ. ಇಮ್ಮಡಿ ಪುಲಕೇಶಿಯ (ಕ್ರಿ. ಶ. 609 – 642) ಆಡಳಿತದಲ್ಲಿ ಉತ್ತುಂಗ ಶಿಖರಕ್ಕೇರಿ ವೈಭವದ ದಿನಗಳನ್ನು ಕಂಡಿತು. ಇಮ್ಮಡಿ ಪುಲಕೇಶಿಯ ನಂತರ ಪೂರ್ವ ಚಾಲುಕ್ಯರು ಸ್ವತಂತ್ರರಾಗಿ “ವೆಂಗಿ” ಎನ್ನುವ ನಗರವನ್ನು ರಾಜಧಾನಿಯನ್ನಾಗಿರಿಕೊಂಡು 11 ನೇ ಶತಮಾನದ ವರೆಗೂ ಆಳುತ್ತಾರೆ. ದಕ್ಷಿಣ ಪ್ರಸ್ಥಭೂಮಿಯಲ್ಲಿ 8 ನೇ ಶತಮಾನದ ಹೊತ್ತಿಗೆ ರಾಷ್ಟ್ರಕೂಟರು ಪ್ರಬಲರಾಗುವ ಕಾಲಕ್ಕೆ ಬಾದಾಮಿ ಚಾಲುಕ್ಯರು ನಿಧಾನವಾಗಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಾರೆ. ಹಾಗೆಯೇ ಪಶ್ಚಿಮ ಚಾಲುಕ್ಯರು 10 ನೇ ಶತಮಾನದಿಂದ 12 ನೇ ಶತಮಾನದವರೆಗೂ ಪ್ರಬಲರಾಗಿ ಕಲ್ಯಾಣ (ಈಗಿನ ಬಸವ ಕಲ್ಯಾಣ) ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸುತ್ತಾರೆ.

ಚಾಲುಕ್ಯರ ಅರಸ ಇಮ್ಮಡಿ ತೈಲಪನ ಧರ್ಮಪತ್ನಿ ಜಾಕಬ್ಬೆ (ರಾಷ್ಟ್ರಕೂಟ ಮನೆತನದ ರಾಜಕುಮಾರಿ) ಯವರಿಗೆ ಸತ್ಯಾಶ್ರಯ ಮತ್ತು ದಾಸವರ್ಮನ್ ಎನ್ನುವ ಇಬ್ಬರು ಗಂಡುಮಕ್ಕಳಿದ್ದರು. ಅವರಲ್ಲಿ ಸತ್ಯಾಶ್ರಯನು ಇಮ್ಮಡಿ ತೈಲಪನ ನಂತರ ರಾಜ್ಯಭಾರವನ್ನು ವಹಿಸಿಕೊಳ್ಳುತ್ತಾನೆ. ಸತ್ಯಾಶ್ರಯ ಕ್ರಿ. ಶ. 997 ರಿಂದ 1008 ರವರೆಗೆ ರಾಜ್ಯಭಾರವನ್ನು ಮಾಡುತ್ತಾನೆ. ಮಕ್ಕಳಿಲ್ಲದ ಕಾರಣ ಐದನೇ ವಿಕ್ರಮಾದಿತ್ಯನು (ಕ್ರಿ. ಶ. 1008 ರಿಂದ 1015) ರಾಜನಾಗುತ್ತಾನೆ. ಅಜೀತಪುರಾಣ, ಗಧಾಯುದ್ಧ (ಸಾಹಸ ಭೀಮ ವಿಜಯ) ಎನ್ನುವ ಕೃತಿಗಳನ್ನು ರಚಿಸಿದ ರನ್ನ ಇವನ ರಾಜಾಶ್ರಯದಲ್ಲಿದ್ದ ಕವಿ.

ಐದನೇ ವಿಕ್ರಮಾದಿತ್ಯನ ನಂತರ ಇವನ ತಮ್ಮ ಇಮ್ಮಡಿ ಜಯಸಿಂಹ ಸಿಂಹಾಸನವನ್ನು ಏರುತ್ತಾನೆ. ಇಮ್ಮಡಿ ಜಯಸಿಂಹನ ಮಡದಿ ರಾಣಿ ಸುಗ್ಗಲಾದೇವಿ. ರಾಣಿ ಸುಗ್ಗಲಾದೇವಿ ಶೈವಧರ್ಮವನ್ನು ಪಾಲಿಸುತ್ತಿದ್ದ ದೇವರ ದಾಸಿಮಯ್ಯನ ಪರಮ ಭಕ್ತೆ. ಚೋಳರಿಂದ ಸುಟ್ಟು ಕರಕಲಾದ ಮಾಳಖೇಡದಿಂದ ಇಮ್ಮಡಿ ಜಯಸಿಂಹ ತನ್ನ ರಾಜಧಾನಿಯನ್ನು ಯೇತಗಿರಿ (ಇಂದಿನ ಕಲಬುರ್ಗಿ ಜಿಲ್ಲೆಯ ಯಾದಗಿರಿ) ಗೆ ವರ್ಗಾಯಿಸುತ್ತಾನೆ. ಕ್ರಿ. ಶ. 1040 ರಲ್ಲಿ ಇಮ್ಮಡಿ ಜಯಸಿಂಹನ ನಿಧನದ ನಂತರ ಅವನ ಪುತ್ರ ಒಂದನೆ ಸೋಮೇಶ್ವರ ರಾಜನಾಗುತ್ತಾನೆ. ಕ್ರಿ. ಶ. 1042 ರಿಂದ 1068 ರ ವರೆಗೆ ಅತ್ಯಂತ ವೈಭವಯುತ ಆಡಳಿತ ನಡೆಸಿದ ಅಭಿನವಮಲ್ಲ ಮತ್ತು ತ್ರೈಲೋಕ್ಯಮಲ್ಲ ಎಂದು ಖ್ಯಾತಿಯನ್ನು ಪಡೆದ ಒಂದನೆ ಸೋಮೇಶ್ವರ ಕಲ್ಯಾಣ (ಇಂದಿನ ಬಸವ ಕಲ್ಯಾಣ) ವೆಂಬ ರಾಜಧಾನಿಯನ್ನು ಅತ್ಯಂತ ಅದ್ಭುತವಾಗಿ ಮತ್ತು ಸುಂದರವಾಗಿ ಕಟ್ಟಿ ಬೆಳೆಸಿದನೆಂದು ತಿಳಿದು ಬರುತ್ತದೆ. ಇವನ ಆಸ್ಥಾನದಲ್ಲಿ ಕವಿಗಳಿಗೆ, ಕಲಾವಿದರಿಗೆ ಮನ್ನಣೆಯನ್ನು ನೀಡಲಾಗಿತ್ತು ಎಂದು ತಿಳಿದು ಬರುತ್ತದೆ. ಇದೇ ಕಲ್ಯಾಣ ಪಟ್ಟಣ ಬಸವಣ್ಣನವರ ಕಾಲಘಟ್ಟದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗೆ ಹೆಸರಾಗಿದ್ದು ಐತಿಹಾಸಿಕ ಘಟನೆ.

ಕ್ರಿ. ಶ. 1076 ರಿಂದ 1126 ರ ವರೆಗೆ ತ್ರಿಭುವನಮಲ್ಲ ಎಂದು ಬಿರುದಾಂಕಿತನಾಗಿದ್ದ ಆರನೇ ವಿಕ್ರಮಾದಿತ್ಯ ಬಾದಾಮಿಯ ಚಾಲುಕ್ಯ ಅರಸರಲ್ಲಿಯೇ ಅತ್ಯಂತ ಪ್ರಭುದ್ಧ ಮತ್ತು ಬಲಶಾಲಿ ಅರಸ. ಸರಿ ಸುಮಾರು 50 ವರ್ಷ ರಾಜ್ಯಭಾರವನ್ನು ನಡೆಸಿದ ಆರನೇ ವಿಕ್ರಮಾದಿತ್ಯನ ಆಡಳಿತದಲ್ಲಿ ಶಾಂತಿ, ಸಹನೆ, ಪರಂಪರೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಅಭಿವೃದ್ಧಿಯಾದ ಐತಿಹಾಸಿಕವಾದ ಕಾಲಘಟ್ಟ. ಪ್ರಜೆಗಳಿಂದ ಅತ್ಯಂತ ಗೌರವದಿಂದ ಪೂಜಿಸಲ್ಪಟ್ಟ ಆರನೇ ವಿಕ್ರಮಾದಿತ್ಯನ ಆಸ್ಥಾನದಲ್ಲಿ ಬಿಲ್ಹಣ ಎಂಬ ಶ್ರೇಷ್ಠ ಕವಿಯಿದ್ದ. ಬಿಲ್ಹಣನ ಗ್ರಂಥಗಳಿಂದ ಆರನೇ ವಿಕ್ರಮಾದಿತ್ಯನ ರಾಜ್ಯದ ವೈಭವ, ಅವನ ಶೂರತ್ವ, ಸಂಸ್ಕೃತಿ ಪರಂಪರೆಗಳ ಚಿತ್ರಣ ಹೇರಳವಾಗಿ ದೊರೆಯುತ್ತದೆ.

ಜನೈರವಜ್ಞಾತ | ಕವಾಟಮುದ್ರಣೈಃ ||
ಕೃಪಾಸುರಕ್ಷಾ | ವಿಮುಖೈರುಸುಪ್ಯತ್ ||
ಕರಾವಿಶಂತಿಷ್ಮಗವಾಕ್ಷ | ಪಧೈರ್ನತಸ್ಕರಾ ||

ಪ್ರಜೆಗಳು ರಾತ್ರಿವೇಳೆಯಲ್ಲಿ ಮನೆಯ ಬಾಗಿಲುಗಳನ್ನು ಹಾಕೊಕೊಳ್ಳುತ್ತಿರಲಿಲ್ಲ ಯಾಕೆಂದರೆ ಕಳ್ಳ-ಕಾಕರ ಭಯ ಇರಲಿಲ್ಲ. ಚಂದ್ರನ ಬೆಳಕು ಮನೆಯನ್ನು ಪ್ರವೇಶಿಸುತ್ತಿತ್ತೇ ವಿನಃ ಕಳ್ಳರು ಮನೆಯನ್ನು ಪ್ರವೇಶ ಮಾಡುತ್ತಿರಲಿಲ್ಲ ಎಂದು ಬಿಲ್ಹಣ ವರ್ಣಿಸಿದ್ದಾನೆ. ಯುದ್ಧನಿರತನಾಗಿದ್ದಾಗಲೇ ತಂದೆಯ ನಿಧನದ ವಾರ್ತೆ ಕೇಳಿ ರಾಜಧಾನಿಯಾದ ಕಲ್ಯಾಣಕ್ಕೆ ಬರುವಷ್ಟರಲ್ಲಿ ಅವನ ಮಗ ಮೂರನೆ ಸೋಮೇಶ್ವರ ಸಿಂಹಾಸನವೇರಿದ್ದನು. ಸಂಬಂಧಗಳು ವಿಪರೀತಕ್ಕ ಹೋದಾಗ ಆರನೇ ವಿಕ್ರಮಾದಿತ್ಯನು ಕಂಚಿಯ ಕಡೆಗೆ ಹೋಗಿ ಮತ್ತೆ ತಿರುಗಿ ಬನವಾಸಿಗೆ ಬಂದು ನೆಲೆ ನಿಂತನೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಅಲ್ಲಿಗೆ ಬವ್ಯ ಇತಿಹಾಸದ ಒಂದು ಅಧ್ಯಾಯ ಮುಕ್ತಾಯವಾಗಿ ಮೂರನೇ ಸೋಮೇಶ್ವರನ ಇತಿಹಾಸ ಪ್ರಾಂಭವಾಯಿತು.

ಭೂಲೋಕಮಲ್ಲ ಎಂದು ಬಿರುದಾಂಕಿತನಾಗಿದ್ದ ಮೂರನೇಯ ಸೋಮೇಶ್ವರನು ಆರನೇ ವಿಕ್ರಮಾದಿತ್ಯನನ್ನು ಬದಿಗೆ ಸರಿಸಿ ಕ್ರಿ. ಶ. 1126 ರಲ್ಲಿ ಸಿಂಹಾಸನವನ್ನೇರಿದನು. ಮೂರನೇಯ ಸೋಮೇಶ್ವರನ ಆಳ್ವಿಕೆಯಲ್ಲಿ ಕಲೆ ಸಾಹಿತ್ಯ ಮತ್ತು ಸಾಮಾಜಿಕ ಬೆಳವಣಿಗೆಗೆ ಪ್ರಾಶಸ್ತ್ಯ ನೀಡಲಾಗಿತ್ತು. ಸ್ವತಃ ಮೂರನೇ ಸೋಮೇಶ್ವರನು ಕವಿಯಾಗಿದ್ದು ಮನೋಲ್ಲಾಸ (ಅಭಿಲಾಷಿತಾರ್ಥ ಚಿಂತಾಮಣಿ) ಎನ್ನುವ ಸಂಸ್ಕೃತದಲ್ಲಿ ಕೃತಿಯನ್ನು ರಚಿಸಿದ್ದಾನೆ. ಈ ಕೃತಿಯಲ್ಲಿ ವಿಜ್ಞಾನ, ರಾಜಕೀಯ, ಶಸ್ರಾತ್ರ ವಿದ್ಯೆ, ಕುದುರೆ ಸವಾರಿ, ಆನೆಗಳ ಸವಾರಿ, ಕವನ, ಸಂಗೀತ, ಜ್ಯೋತಿಷ್ಯಗಳ ಹೇರಳವಾದ ನಿರೂಪಣೆ ಇದೆ.

ಮೂರನೇ ಸೋಮೇಶ್ವರನ ನಂತರ ಅವನ ಮಗ ಜಗದೇಕಮಲ್ಲ ಕ್ರಿ. ಶ. 1138 ರಲ್ಲಿ ಸಿಂಹಾನವೇರುತ್ತಾನೆ. ತದನಂತರ ಮೂರನೇ ತೈಲಪ ಕ್ರಿ. ಶ. 1150 ರಲ್ಲಿ ಸಿಂಹಾನವೇರುತ್ತಾನೆ. ಆರನೇ ವಿಕ್ರಮಾದಿತ್ಯನ ನಂತರ ಬಾದಾಮಿ ಚಾಲುಕ್ಯರ ಪ್ರಭಾವ ಕಡಿಮೆಯಾಗಿ ಅವಸಾನದ ಹಂತಕ್ಕೆ ತಲುಪಿತು. ಕ್ರಿ. ಶ. 1156 – 1162 ರಲ್ಲಿ ದಂಡನಾಯಕನಾಗಿದ್ದ ಕಳಚೂರಿಯ ಬಿಜ್ಜಳ ಚಾಲುಕ್ಯರ ವಿರುದ್ಧ ತಿರುಗಿ ಬಿದ್ದು ತನ್ನದೇ ಆದ ಸಾಮ್ರಾಜ್ಯವನ್ನು ಕಟ್ಟಿಕೊಳ್ಳುತ್ತಾನೆ. ಕ್ರಿ. ಶ. 1184 ರವರೆಗೆ ರಾಜ್ಯಭಾರ ಮಾಡಿದ ಕಳಚೂರಿ ವಂಶದ ಇಮ್ಮಡಿ ಬಿಜ್ಜಳನು ಚಾಲುಕ್ಯರ ಮೂರನೇ ತೈಲಪನನ್ನು ಬಂಧಿಸಿ ಬಿಡುಗಡೆ ಮಾಡಿದಾಗ ಮೂರನೇ ತೈಲಪ ಈಗಿನ ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿ ಆಶ್ರಯ ಪಡೆಯುತ್ತಾನೆ. ನಂತರ ಮೂರನೇ ತೈಲಪನ ಮಗ ನಾಲ್ಕನೇ ಸೋಮೇಶ್ವರ ಕಳಚೂರಿಗಳಿಂದ ಮತ್ತೆ ಕಲ್ಯಾಣವನ್ನು ಕ್ರಿ. ಶ. 1184 ಚಾಲುಕ್ಯರ ವಶಕ್ಕೆ ಪಡೆಯುತ್ತಾನೆ.

ಬಾದಾಮಿ ಚಾಲುಕ್ಯರ ವಂಶಾವಳಿ :
ಕ್ರಿ. ಶ. 543 – 566 : ಒಂದನೆಯ ಪುಲಿಕೇಶಿ
ಕ್ರಿ. ಶ. 566 – 597 : ಒಂದನೆಯ ಕೀರ್ತಿವರ್ಮ
ಕ್ರಿ. ಶ. 597 – 609 : ಮಂಗಳೇಶ
ಕ್ರಿ. ಶ. 609 – 642 : ಇಮ್ಮಡಿ ಪುಲಿಕೇಶಿ
ಕ್ರಿ. ಶ. 655 – 680 : ಒಂದನೆಯ ವಿಕ್ರಮಾದಿತ್ಯ
ಕ್ರಿ. ಶ. 680 – 696 : ವಿನಯಾದಿತ್ಯ
ಕ್ರಿ. ಶ. 696 – 733 : ವಿಜಯಾದಿತ್ಯ
ಕ್ರಿ. ಶ. 733 – 746 : ಇಮ್ಮಡಿ ವಿಕ್ರಮಾದಿತ್ಯ
ಕ್ರಿ. ಶ. 746 – 753 : ಇಮ್ಮಡಿ ಕೀರ್ತಿವರ್ಮ

1. ಒಂದನೆಯ ಪುಲಿಕೇಶಿ (ಕ್ರಿ. ಶ. 543 – 566) :
ಬನವಾಸಿಯ ಕದಂಬರ ರಾಜ್ಯ ಕ್ಷೀಣವಾಗತೊಡಗಿದಾಗ ಮೊದಲನೇ ಪುಲಕೇಶಿಯ ನೇತೃತ್ವದಲ್ಲಿ ಚಾಲುಕ್ಯರು “ವಾತಾಪಿ” ಎನ್ನುವ ಈಗಿನ ಬಾದಾಮಿಯನ್ನು ರಾಜಧಾನಿಯನ್ನಾಗಿಸಿಕೊಂಡು ಕ್ರಿ. ಶ 543 ರಲ್ಲಿ ನೇ ಬಾದಾಮಿ ಚಾಲುಕ್ಯರ ಸಮ್ರಾಜ್ಯವನ್ನು ಸ್ಥಾಪಿಸಿದರು. ರಣರಂಗನ ಮಗನಾದ ಮೊದಲನೇ ಸೋಮೇಶ್ವರನ ಪತ್ನಿ ಬಪ್ಪೂರ ಎನ್ನುವ ಮನೆತನದ ಮಗಳು.

2. ಒಂದನೆಯ ಕೀರ್ತಿವರ್ಮ (ಕ್ರಿ. ಶ. 566 – 597) :
ಒಂದನೆಯ ಸೋಮೇಶ್ವರನ ನಂತರ ಪಟ್ಟಕ್ಕೆ ಬಂದವನು ದನೆಯ ಕೀರ್ತಿವರ್ಮ. ಚಾಲುಕ್ಯರ ಸಾಮ್ರಾಜ್ಯವನ್ನು ಮತ್ತಷ್ಟು ಬಲಗೊಳಿಸಿದವನು. ಇವನ ಮಗ ಇಮ್ಮಡಿ ಪುಲಕೇಶಿ ಇನ್ನೂ ಬಾಲಕನಾಗಿದ್ದ ಕಾರಣ ಒಂದನೇ ಕೀರ್ತಿವರ್ಮನ ತಮ್ಮ ಮಂಗಳೇಶ ಪಟ್ಟಕ್ಕೆ ಬರುತ್ತಾನೆ.

3. ಮಂಗಳೇಶ (ಕ್ರಿ. ಶ. 597 – 609) :
ಬಲಶಾಲಿ ಮತ್ತು ಮಹಾತ್ವಾಕಾಂಕ್ಷಿಯಾಗಿದ್ದ ಮಂಗಳೇಶನು ಒಂದನೇ ಕೀರ್ತಿವರ್ಮನ ನಂತರ ಸಿಂಹಾಸನವನ್ನೇರಿದನು. ರಾಜಪ್ರತಿನಿಧಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಕಳಚೂರಿ ರಾಜ ಬುದ್ಧಿರಾಜನಿಂದ ಗುಜರಾತಿನ ಮಾಳ್ವ ಮತ್ತು ಖಂಡೇಶ ಭಾಗಗಳನ್ನು ವಶಪಡಿಸಿಕೊಂಡು ರಾಜ್ಯವನ್ನು ವಿಸ್ತಾರ ಮಾಡಿದನು. ಹಾಗೆಯೇ ಗಂಗ, ಪಲ್ಲವ, ಚೋಳ ಮತ್ತು ಕದಂಬರನ್ನು ಹದ್ದು ಬಸ್ತಿನಲ್ಲಿಟ್ಟದ್ದನು.
ಆದರೆ ಇಮ್ಮಡಿ ಪುಲಕೇಶಿ ವಯಸ್ಸಿಗೆ ಬಂದಾಗ ರಾಜ್ಯವನ್ನು ಹಸ್ತಾಂತರಿಸಲು ನಿರಾಕರಿಸಿದನು. ತೀವ್ರ ಪ್ರತಿರೋಧ ಒಡ್ಡಿದ ಮಂಗಳೇಶನನ್ನು ಏಲಪಟ್ಟು-ಸಿಂಬಿಗೆ ಯುದ್ಧದಲ್ಲಿ ಸೋಲಿಸಿ ಇಮ್ಮಡಿ ಪುಲಕೇಶಿ ಪಟ್ಟವನ್ನೇರುತ್ತಾನೆ.

4. ಇಮ್ಮಡಿ ಪುಲಿಕೇಶಿ (ಕ್ರಿ. ಶ. 609 – 642) :
ರಾಜ್ಯದ ಪಟ್ಟಭೀಷೇಕದ ಸಮಯದಲ್ಲಿ ಇಮ್ಮಡಿ ಪುಲಿಕೇಶಿ ಎಂದು ನಾಮಾಂಕಿತನಾದ “ಎರೆಯ” ನ ಸಾಮ್ರಾಜ್ಯವು ಬಾದಾಮಿ ಚಾಲುಕ್ಯರ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂಥ ಕಾಲಘಟ್ಟ. ಒಂದನೇಯ ಕೀರ್ತಿವರ್ಮನ ಮಗನಾದ ಇಮ್ಮಡಿ ಪುಲಕೇಶಿಯನ್ನು ಅವನ ತಮ್ಮ ಮಂಗಳೇಶನನ್ನು ರಾಜ್ಯದಿಂದ ಹೊರ ದಬ್ಬಿದಾಗ ಈಗಿನ ಕೋಲಾರ ಜಿಲ್ಲೆಯ ಬಾಣರ ಆಶ್ರಯದಲ್ಲಿ ಪಡೆದನು. ಬಾಣರ ಸಹಾಯದಿಂದ ಮಂಗಳೇಶನ ಮೇಲೆ ಯುದ್ಧ ಸಾರಿ ಏಲಪಟ್ಟು-ಸಿಂಬಿಗೆ ಯುದ್ಧದಲ್ಲಿ ಮಂಗಳೇಶನನ್ನು ಹತ್ಯೆಗೈದದ್ದನ್ನು “ಪೆದ್ದವಡಗೂರು ಶಾಸನ” ದಲ್ಲಿ ಉಲ್ಲೇಖಿಸಲಾಗಿದೆ. ಇಂಥ ಯುದ್ಧ ಸಾಹಸಕ್ಕಾಗಿ “ಚಾಲುಕ್ಯ ಪರಮೇಶ್ವರ”, “ಸತ್ಯಾಶ್ರಯ”, “ಪೃಥ್ವೀವಲ್ಲಭ” ಎನ್ನುವ ಬಿರುದಗಳನ್ನು ಪಡೆದನು. ಕ್ರಿ. ಶ. 630 ರಿಂದ 634 ರವರೆಗೆ ಈಗಿನ ಮಹಾರಾಷ್ಟ್ರ, ಗುಜರಾತ ಮತ್ತು ಮಧ್ಯಪ್ರದೇಶದ ಕೆಲ ಪ್ರದೇಶಗಳನ್ನೊಳಗೊಂಡಂತೆ ಸಂಪೂರ್ಣ ದಕ್ಷಿಣ ಬಾರತವನ್ನು ತನ್ನ ವಶದಲ್ಲಿಟ್ಟುಕೊಂಡಿದ್ದನು. ಇದಕ್ಕಾಗಿ “ದಕ್ಷಿಣಪತೇಶ್ವರ” ಎಂಬ ಬಿರುದನ್ನೂ ಸಹ ಪಡೆದಿದ್ದನು. ಗಂಗ ರಾಜ ದುರವಿನೀತನ ಮಗಳನ್ನು ಇಮ್ಮಡಿ ಪುಲಕೇಶಿಗೆ ಕೊಟ್ಟು ವಿವಾಹ ಮಾಡಿದ್ದನು. ಪುಲಕೇಶೀಗೆ ಚಂದ್ರಾದಿತ್ಯ, ಆದಿತ್ಯವರ್ಮ, ವಿಕ್ರಮಾದಿತ್ಯ, ಜಯಸಿಂಹ ಮತ್ತು ಅಂಬರ ಎನ್ನುವ ಐವರು ಮಕ್ಕಳು. ಕದಂಬರ ಜೊತೆಯಲ್ಲಿನ ಕಾದಾಟದ ಸಂದರ್ಭದಲ್ಲಿ ಇಮ್ಮಡಿ ಪುಲಕೇಶಿ ಮಡಿದ ನಂತರ ಈ ಐವರು ಮಕ್ಕಳಲ್ಲಿ ದಾಯಾದಿ ಕಲಹವಾಯಿತು. ಸಹೋದರರನ್ನೆಲ್ಲಾ ಸೆದೆ ಬಡಿದು ಮೂರನೆಯ ಮಗನಾದ ಒಂದನೆ ವಿಕ್ರಮಾದಿತ್ಯನು ಕ್ರಿ. ಶ. 642 ರಲ್ಲಿ ಪಟ್ಟಕ್ಕೇರಿದನು.

5. ಒಂದನೆಯ ವಿಕ್ರಮಾದಿತ್ಯ (ಕ್ರಿ. ಶ. 655 – 680) :
ಇಮ್ಮಡಿ ಪುಲಕೇಶಿಯ ಮೂರನೆಯ ಮಗನಾದ ಒಂದನೆಯ ವಿಕ್ರಮಾದಿತ್ಯ ತನ್ನ ಸಹೋದರರನ್ನು ಬಗ್ಗು ಬಡಿದು ಕ್ರಿ. ಶ. 655 ರಲ್ಲಿ ಸಿಂಹಾಸನವನ್ನೇರುತ್ತಾನೆ. ತನ್ನ ಅಜ್ಜ ಗಂಗರಾಜನಾದ ಭೂವಿಕರ್ಮನ ಸಹಾಯದಿಂದ ಪಲ್ಲವರ ರಾಜರನ್ನು ಯಶಸ್ವಿಯಾಗಿ ರಾಜಧಾನಿ ವಾತಾಪಿಯಿಂದ ಹಿಮ್ಮಟ್ಟುತ್ತಾನೆ. ಪಲ್ಲವ ರಾಜ ಒಂದನೆ ನರಸಿಂಹನನ್ನು ಸಿಂಹಾಸನದಿಂದ ಕೆಳಗಿಳಿಸಿ ವಾತಾಪಿಯಿಂದ ಓಡಿಸುತ್ತಾನೆ. ದಕ್ಷಿಣ ಗುಜರಾತಿನ ಲಾಟ ಪ್ರದೇಶವನ್ನು ವಶಪಡಿಸಿಕೊಂಡು ಆ ಪ್ರದೇಶಕ್ಕೆ ತಮ್ಮನಾದ ಜಯಸಿಂಹವರ್ಮನಿಗೆ ಬಿಟ್ಟು ಕೊಡುತ್ತಾನೆ. ಗಂಗರ ರಾಜಕುಮಾರಿ ಗಂಗಮಹಾದೇವಯನ್ನು ವಿವಾಹ ಮಾಡಿಕೊಂಡಿದ್ದ ಒಂದನೆ ವಿಕ್ರಮಾದಿತ್ಯ ಕ್ರಿ. ಶ. 680 ರಲ್ಲಿ ಮಡಿದನು.

6. ವಿನಯಾದಿತ್ಯ. (ಕ್ರಿ. ಶ. 680 – 696) :
ಒಂದನೆಯ ವಿಕ್ರಮಾದಿತ್ಯನ ನಂತರ ಅವನ ಮಗ ವಿನಯಾದಿತ್ಯ ಪಟ್ಟಕ್ಕೆ ಬರುತ್ತಾನೆ. ಯುದ್ಧಮಲ್ಲ, ಸಾಹಸರಸಿಕ ಮತ್ತು ಸತ್ಯಾಶ್ರಯ ಎಂದು ಬಿರುದಾಂಕಿತನಾದ ವಿನಯಾದಿತ್ಯನ ಕಾಳಘಟ್ಟ ಅತ್ಯಂತ ಸಾಂತಿಪೂರ್ಣ ಮತ್ತು ಸಹಬಾಳ್ವೆಯಿಂದ ಕೂಡಿತ್ತು.

7. ವಿಜಯಾದಿತ್ಯ (ಕ್ರಿ. ಶ. 696 – 733) :
ವಿನಯಾದಿತ್ಯನ ತರುವಾಯ ಅವನ ಮಗ ವಿಜಯಾದಿತ್ಯ ಕ್ರಿ. ಶ. 696 ರಲ್ಲಿ ಸಿಂಹಾಸನವನ್ನೇರುತ್ತಾನೆ. ಇವನ ಕಾಲಘಟ್ಟದಲ್ಲಿ ಹಲವಾರು ದೇವಸ್ಥಾನಗಳು ನಿರ್ಮಾಣವಾದವು. ಪಲ್ಲವ ರಾಜರನ್ನು ಹದ್ದು ಬಸ್ತಿನಲ್ಲಿಟ್ಟಿದ್ದ ವಿಜಯಾದಿತ್ಯ ಐದನೇ ಪರಮೇಶ್ವರನಿಂದ ಕಪ್ಪ ಕಾಣಿಕೆಗಳನ್ನು ಪಡೆಯುತ್ತಿದ್ದನೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಚಾಲುಕ್ಯ ಅರಸರಿಗೆ ಪರಮಾಪ್ತನಾಗಿದ್ದ ದಕ್ಷಿಣ ಕರಾವಳಿಯ ಆಲೂಪ ಅರಸ ಚಿತ್ರವಾಹನನ ಸಹಾಯದಿಂದ ಪಾಂಡ್ಯರನ್ನು ಸೋಲಿಸಿ ಕ್ರಿ. ಶ. 705 ರಲ್ಲಿ ಮಂಗಳೂರನ್ನು ಪಾಂಡ್ಯರ ಹಿಡಿತದಿಂದ ಬಿಡುಗಡೆಗೊಳಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ.

8. ಇಮ್ಮಡಿ ವಿಕ್ರಮಾದಿತ್ಯ (ಕ್ರಿ. ಶ. 733 – 746) :
ವಿಜಯಾದಿತ್ಯನ ಮಗ ಇಮ್ಮಡಿ ವಿಕ್ರಮಾದಿತ್ಯ ಕ್ರಿ. ಶ. 733 ರಲ್ಲಿ ಸಿಂಹಾಸನವನ್ನೇರುತ್ತಾನೆ. ಸಾಹಸ ಮತ್ತು ಯುದ್ಧಪ್ರಿಯ ರಾಜನೆಂದೇ ಖ್ಯಾತಿಯನ್ನು ಪಡೆದ ಇಮ್ಮಡಿ ವಿಕ್ರಮಾದಿತ್ಯ ಮೊದಲು ಯುವರಾಜನಾಗಿ, ಇನ್ನೊಮ್ಮೆ ಪಟ್ಟದರಸನಾಗಿ ಮತ್ತು ತನ್ನ ಮೂರನೇ ಸಾರಿ ಮಗನಾದ ಇಮ್ಮಡಿ ಕೀರ್ತಿವರ್ಮನ ಜೊತೆಗೂಡಿ ಹೀಗೆ ಮೂರು ಸಾರಿ ಪಲ್ಲವರ ಮೇಲೆ ಯುದ್ಧ ಮಾಡಿ ಮೂರು ಸಾರಿ ಕಂಚಿ ಪಟ್ಟಣವನ್ನು ವಶಪಡಿಸಿಕೊಳ್ಳುತ್ತಾನೆ. ಪಲ್ಲವರನ್ನು ಸಂಪೂರ್ಣವಾಗಿ ಸೆದೆಬಡಿಯುತ್ತಾನೆ.

ಇದೆಲ್ಲದರ ಮುಕುಟಮಣಿ ಎನ್ನುವಂತೆ ಕ್ರಿ. ಶ. 740 ರಲ್ಲಿ ಇಮ್ಮಡಿ ವಿಕ್ರಮಾದಿತ್ಯನ ಕಾಲದಲ್ಲಿ ಪಟ್ಟದಕಲ್ಲಿನಲ್ಲಿ ದೇವಸ್ಥಾನದ ಸಂಕೀರ್ಣವನ್ನು ಹುಟ್ಟು ಹಾಕುತ್ತಾನೆ. ಆಧುನಿಕ ಪ್ರಪಂಚದ ಕಲೆಗಳ ಇತಿಹಾದಲ್ಲಿ “ಯುನೆಸ್ಕೋ ಪರಂಪರೆ” ಗೆ ಸೇರಿಸಲಾದ ಅದ್ಭುತ ಶಿಲ್ಪಕಲಾ ವೈಭವದ ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಸ್ಥಾನಗಳ ಸಂಕೀರ್ಣವು ಇವನ ಕಾಲದ ಕೊಡುಗೆ. ಈತನ ಪಟ್ಟದರಾಣಿಯರಾದ ಲೋಕಮಹಾದೇವಿ ಮತ್ತು ತ್ರಿಲೋಕದೇವಿಯವರ ಕಾರಣದಿಂದ ಈ ದೇವಸ್ಥಾನಗಳು ನಿರ್ಮಿಸಲ್ಪಟ್ಟವು.

ಕರ್ನಾಟಕದ ಶಿಲ್ಪಕಲೆಗಳ ಇತಿಹಾಸದಲ್ಲಿ ಚಾಲುಕ್ಯ ಅರಸರ ಕಲೆಗಳ ಪ್ರೀತಿಯನ್ನು ಬಿಂಬಿಸುವ ಶ್ರೇಷ್ಠ ದೇವಸ್ಥಾನಗಳ ಸಂಕಿರ್ಣವೇ ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಸ್ಥಾನಗಳ ಸಂಕೀರ್ಣ. ಉತ್ತರ ಭಾರತ ಮತ್ತು ದಕ್ಷಿಣ ಭಾರತಗಳ ಶಿಲ್ಪಕಲೆಗಳ ಮಿಶ್ರಣ ಇಲ್ಲಿ ಕಾಣಬಹುದು. ಇಮ್ಮಡಿ ವಿಕ್ರಮಾದಿತ್ಯನ ಪಟ್ಟದರಸಿ ಲೋಕಮಹಾದೇವಿಯು ಯುದ್ಧದಲ್ಲಿ ಗೆದ್ದಿರುವ ವಿಜಯಕ್ಕಾಗಿ ಸುಮಾರು ಕ್ರಿ. ಶ. 740 ರಲ್ಲಿ ಈ ಸಂಕೀರ್ಣಗಳನ್ನು ಕಟ್ಟಿಸಿದಳು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

9. ಇಮ್ಮಡಿ ಕೀರ್ತಿವರ್ಮ (ಕ್ರಿ. ಶ. 746 – 753) :
ಇಮ್ಮಡಿ ವಿಕ್ರಮಾದಿತ್ಯನ ನಂತರ ಆತನ ಮಗ ರಾಹಪ್ಪ ಕ್ರಿ. ಶ. 746 ಪಟ್ಟವನ್ನೇರುತ್ತಾನೆ. ಈತನೇ ಇಮ್ಮಡಿ ಕೀರ್ತಿವರ್ಮ. ರಾಷ್ಟ್ರಕೂಟರಿಂದ ಪ್ರಬಲ ಪ್ರತಿರೋಧವನ್ನು ಇಮ್ಮಡಿ ಕೀರ್ತಿವರ್ಮ ಎದುರಿಸುತ್ತಾನೆ. ಸಾಮಂತರಾದ ಗಂಗರ ಅರಸು ಶ್ರೀಪುರುಷ ಮತ್ತು ಇಮ್ಮಡಿ ಕೀರ್ತಿವರ್ಮನ ಜೊತೆ ಯುದ್ಧ ಸಾರಿದ ಪಾಂಡ್ಯರ ರಾಜ ಮೊದಲನೆ ಮಾರವರ್ಮ ರಾಜಾಸಿಂಹ ಕಾವೇರಿ ನದಿಯನ್ನು ದಾಟಿ ಬಂದು “ವೆಣಬೈ” ಎನ್ನುವ ಪ್ರದೇಶದಲ್ಲಿ ನಡೆದ ಭೀಕರ ಕಾಳಗದಲ್ಲಿ ಇಬ್ಬರನ್ನೂ ಸೋಲಿಸುತ್ತಾನೆ. ಅಲ್ಲಿಗೆ ಕ್ರಿ. ಶ. 753 ರಲ್ಲಿ ಕೀರ್ತಿವರ್ಮನ ಆಡಳಿತ ಕೊನೆಗೊಳ್ಳುವದರೊಂದಿಗೆ 220 ವರ್ಷಗಳ ವೈಭವದಿಂದ ಮೆರೆದ ಬಾದಾಮಿ ಚಾಲುಕ್ಯರ ರಾಜ್ಯಭಾರ ಕೊನೆಗೊಳ್ಳುತ್ತದೆ.

ವಿಜಯಕುಮಾರ ಕಮ್ಮಾರ
 ತುಮಕೂರು – ಮೋಬೈಲ್ ನಂ : 9741 357 132

ಈ-ಮೇಲ್ : vijikammar@gmail.com

Don`t copy text!