ನನ್ನ ಮಕ್ಕಳಿಗೆ ಒಳ್ಳೆಯ ಆಹಾರ ನೀಡಲೆಂದೇ ಅಮೆರಿಕಾ ಬಿಟ್ಟು ಬಂದೆ !

ನನ್ನ ಮಕ್ಕಳಿಗೆ ಒಳ್ಳೆಯ ಆಹಾರ ನೀಡಲೆಂದೇ ಅಮೆರಿಕಾ ಬಿಟ್ಟು ಬಂದೆ !

ಸಿರಿ ಬದುಕು

ಇದೆಲ್ಲವೂ 30 ವರ್ಷಗಳ ಹಿಂದಿನ ಸಂಗತಿ. ಆಗ ನಾನು ವಿಜ್ಞಾನದ ವಿದ್ಯಾರ್ಥಿ. ಜೀವ ರಾಸಾಯನಿಕ ವಿಷಯದಲ್ಲಿ ನನಗೆ ಅತೀವ ಆಸಕ್ತಿ ಇತ್ತು. ಹಾಗಾಗಿ, ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ ಸೇರಿಕೊಂಡು, ಪ್ರಚೋದಕ ಪದಾರ್ಥಗಳ(ಸ್ಟೆರಾಯಿಡ್ಸ್‌) ಮೇಲೆ ಸಂಶೋಧನೆ ನಡೆಸಿದೆ.

ಇದೇ ವಿಷಯದಲ್ಲಿ ಪಿಎಚ್‌ಡಿ ಪದವಿ ಪೂರ್ಣಗೊಳಿಸಿದೆ. ಬಳಿಕ ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಗಳು ನನಗೆ ಉದ್ಯೋಗ ನೀಡಲು ಮುಂದೆ ಬಂದವು. ಮೊದಲು ಅಮೆರಿಕಾದ ಒರೆಗಾನ್‌ ಸ್ಕಿ ಎಂಬ ಕಂಪನಿಯಲ್ಲಿ ನಾಲ್ಕು ವರ್ಷ ಸಂಶೋಧನೆ ನಡೆಸಿದೆ. ಪರ್ಯಾವರಣ ವಿಷ ಪದಾರ್ಥಗಳ ಉಳಿಕೆ ಕುರಿತು ಅಲ್ಲಿ ಕೆಲಸ ಮಾಡಿದೆ. ಬಳಿಕ ಅದೇ ದೇಶದಲ್ಲಿದ್ದ ಡ್ಯೂಪಾಂಟ್‌ ಎಂಬ ಕಂಪನಿಗೆ ಆಹಾರ ವಿಜ್ಞಾನಿಯಾಗಿ ಸೇರಿಕೊಂಡು, ಐದು ವರ್ಷ ಸೇವೆ ಸಲ್ಲಿಸಿದೆ.

ಆ ದಿನಗಳಲ್ಲಿಯೇ ಅಮೆರಿಕಾದ ಜೀವನ ಶೈಲಿ ಹಾಗೂ ಅಲ್ಲಿನ ಆಹಾರ ಪದ್ಧತಿ ಬದಲಾವಣೆಯ ಸುಳಿಗಾಳಿಗೆ ಸಿಲುಕಿತ್ತು. ನಿತ್ಯವೂ ಹಾಲು ಕುಡಿಯುವುದು, ಅಡುಗೆ ಎಣ್ಣೆ, ಸಕ್ಕರೆಯಂಥ ಆಹಾರ ಪದಾರ್ಥಗಳು ನಿತ್ಯದ ಊಟದ ಮೆನು ಪಟ್ಟಿಗೆ ಸೇರಿದ್ದವು. ಅಮೆರಿಕಾದ ಕಂಪನಿಗಳು ನಾವು ತಿನ್ನುವ ಘನ ಹಾಗೂ ದ್ರವ ರೀತಿಯ ಆಹಾರ ಪದಾರ್ಥಗಳನ್ನು ಕಲುಷಿತ ಮಾಡಲಾರಂಭಿಸಿದ್ದವು.

ಈ ಹುನ್ನಾರ ನನಗೆ ನಿಧಾನವಾಗಿ ಅರ್ಥವಾಗಲಾರಂಭಿಸಿತ್ತು. ಆ ದಿನಗಳಲ್ಲಿಯೇ, ಆರು ವರ್ಷದ ಹೆಣ್ಣು ಮಗುವೊಂದು ಮೈ ನೆರೆದ ಸಂಗತಿಯನ್ನು ಅಮೆರಿಕಾದಲ್ಲಿ ನಾನು ಕಂಡೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು 15 ವರ್ಷ ಬಳಿಕ ಋತುಮತಿಯಾಗುವುದು ಸಾಮಾನ್ಯ. ಆದರೆ, ಒಂದನೇ ತರಗತಿಗೆ ಹೋಗುವ ಮಗುವೊಂದು ಹೆಣ್ಣಾಗಲು ಏನು ಕಾರಣ ಎಂದು ಯೋಚನೆಗೆ ಬಿದ್ದೆ. ಆಗ ಗೊತ್ತಾಯಿತು- ನಮ್ಮ ಚಿಕ್ಕ ಮಕ್ಕಳ ದೇಹಕ್ಕೆ ಸತ್ವಯುತ ಹಾಲಿನ ಹೆಸರಿನಲ್ಲಿ ಸ್ಟೆರಾಯಿಡ್‌ ಕೂಡ ಸೇರುತ್ತಿದೆ ಎಂಬ ಸಂಗತಿ.

ಸಾಮಾನ್ಯವಾಗಿ ಯಾವುದೇ ಹಸುವಿನಿಂದ ನಾವು ನಿತ್ಯವೂ 1 ರಿಂದ 2 ಲೀಟರ್‌ ಹಾಲು ಕರೆಯಲು ಮಾತ್ರ ಸಾಧ್ಯ. ಅದು ತನ್ನ ಕರುವಿಗೆ ಹಾಲುಣಿಸಿದ ಬಳಿಕ, ಮನುಷ್ಯರಿಗೆ ದೊರೆಯುವುದು ಅಷ್ಟು ಪ್ರಮಾಣದ ಹಾಲು ಮಾತ್ರ. ಆದರೆ, ಹಾಲನ್ನು ಹೆಚ್ಚೆಚ್ಚು ಮಾರಾಟ ಮಾಡಲು ಮುಂದಾಗಿದ್ದ ಬಹುರಾಷ್ಟ್ರೀಯ ಕಂಪನಿಗಳು ಮೊದಲು, ಹಸುಗಳನ್ನು ಕುಲಾಂತರ ತಳಿಯನ್ನಾಗಿಸಿದವು.

ಬಳಿಕ ಈ ಕುಲಾಂತರಿ ಹಸುಗಳಿಗೆ ಸ್ಟೆರಾಯಿಡ್‌ ಅಂಶವುಳ್ಳ ಚುಚ್ಚುಮದ್ದು ನೀಡಿ, ಅವುಗಳು ನೀಡುವ ಹಾಲಿನ ಪ್ರಮಾಣವನ್ನು 15 ರಿಂದ 20 ಲೀಟರ್‌ಗೆ ಹೆಚ್ಚಿಸಿದ್ದವು. 2 ಲೀಟರ್‌ ಹಾಲು ಕರೆಯಬಲ್ಲ ಯಾವುದೇ ಹಸು 20 ಲೀಟರ್‌ ಹಾಲು ಕರೆಯುತ್ತದೆ ಎಂಬುದು ಜನ ಸಾಮಾನ್ಯರಿಗೆ ಅಸಹಜ ಎನಿಸಿಲೇ ಇಲ್ಲ.

ಮೊದ ಮೊದಲು ಇದೊಂದು ಕ್ರಾಂತಿ ಎಂದೇ ಬಹುತೇಕರು ಭಾವಿಸಿದರು. ಆದರೆ, ಆರು ವರ್ಷದ ಹೆಣ್ಣು ಮಗು ಋತುಮತಿಯಾಗಲು ಈ ಹಾಲು ಕ್ರಾಂತಿ ಕಾರಣ ಎಂಬುದು ಅಲ್ಲಿನವರಿಗೆ ಅಷ್ಟೊಂದು ಅರಿವಿಗೆ ಬಂದಿರಲಿಲ್ಲ. ಕೇವಲ ಹಾಲಷ್ಟೇ ಮಾತ್ರವಲ್ಲ. ನಾವು ತಿನ್ನುವ ಎಲ್ಲ ದ್ರವ ಹಾಗೂ ಘನ ಪದಾರ್ಥಗಳ ಮೇಲೂ ಬಹುರಾಷ್ಟ್ರೀಯ ಕಂಪನಿಗಳು ಇಂಥಾ ಪ್ರಯೋಗಗಳನ್ನು ನಡೆಸಿ, ಆಹಾರ ಉತ್ಪಾದನೆಯನ್ನು ಹೆಚ್ಚು ಮಾಡಿದ್ದವು.

ಹಸಿ ತರಕಾರಿ, ಹಣ್ಣು ಹಂಪಲ, ಬೇಳೆ ಕಾಳು, ದವಸ ಧಾನ್ಯ, ಎಣ್ಣೆ , ಮಾಂಸ- ಹೀಗೆ ಯಾವುದನ್ನೋ ಬಳಸಿ ತಯಾರಿಸಿದ ಆಹಾರ ಕಲಬೆರಕೆಯಾಗಲಾರಂಭಿಸಿತ್ತು. ಪರಿಣಾಮ ಇದರ ಬೆನ್ನೆ ಹಿಂದೆಯೇ ಮನುಷ್ಯನ ಆರೋಗ್ಯವೂ ವ್ಯತ್ಯಾಸ ವಾಗಲಾರಂಭಿಸಿತ್ತು. ಸ್ವತಃ ನಾನು ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನಾದ್ದರಿಂದ, ಕಂಪನಿಗಳ ಹುನ್ನಾರ ಬಹುಬೇಗ ಅರ್ಥವಾಯಿತು. ಈ ಎಲ್ಲ ಸಂಗತಿಯನ್ನು ತಿಳಿಸಿ ಹೇಳಿದರೂ, ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಕಾಲ ಕೂಡ ಆಗ ಪಕ್ವವಾಗಿರಲಿಲ್ಲ.

ನಾನು ಹತಾಶನಾದೆ. ನನ್ನ ತಲೆಯಲ್ಲಿ ಈ ವಿಚಾರವೇ ಗಿರಕಿ ಹೊಡೆಯುತ್ತಿತ್ತು. ಯಾವುದೇ ಕಾರಣಕ್ಕೂ ಇಂಥಾ ಆಹಾರ ಪದಾರ್ಥ ಸೇವಿಸಿ ಕಾಯಿಲೆಗೆ ಬೀಳಬಾರದು, ನಿತ್ಯವೂ ಮಾತ್ರೆ ನುಂಗಬಾರದು, ನನಗೆ ಹುಟ್ಟುವ ಮಗು ಆರೋಗ್ಯದಿಂದ ಇರಬೇಕು, ಅದಕ್ಕೆ ಪ್ಲಾಸ್ಟಿಕ್‌ ಓವರಿ ಇರಬಾರದು- ಹೀಗೆ ಏನೇನೋ ಯೋಚನೆಗಳು ತಲೆಗೆ ಬರುತ್ತಿದ್ದವು. ಈ ಆಸೆಗಳು ಕೈಗೂಡಬೇಕಾದರೆ ನಾನು ಅಮೆರಿಕಾದಿಂದ ವಾಪಸ್‌ ಭಾರತಕ್ಕೆ ಬಂದು, ಉತ್ತಮ ಆಹಾರ ದೊರಕಿಸಿಕೊಳ್ಳಲು ಏನಾದರೂ ಮಾಡಲೇ ಬೇಕಿತ್ತು. ಇದೆಲ್ಲವನ್ನೂ ಗೆಳೆಯರೊಂದಿಗೆ ಹಂಚಿಕೊಂಡರೆ, ಎಲ್ಲವೂ ಸರಿ, ಭಾರತಕ್ಕೆ ಹೋಗಿ ದುಡ್ಡು ಮಾಡಲು ಸಾಧ್ಯವಿಲ್ಲ ಎಂದು ನನಗೆ ಬುದ್ಧಿಮಾತು ಹೇಳುತ್ತಿದ್ದರು. ಆದರೆ 1997ರಲ್ಲಿ ನಾನು ಕೆಲಸ ಮಾಡುತ್ತಿದ್ದ ಕಂಪನಿಗೆ ರಾಜೀನಾಮೆ ನೀಡಿದೆ. ವಿದೇಶದ 10 ವರ್ಷಗಳ ಬದುಕಿಗೆ ಗುಡ್‌ ಬೈ ಹೇಳಿ, ಭಾರತಕ್ಕೆ ಬಂದೆ. ಮೈಸೂರಿನ ಪ್ರತಿಷ್ಠಿತ ಕೇಂದ್ರೀಯ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾಲಯ ಸೇರಿಕೊಂಡೆ. ಇಲ್ಲಿಯೂ ಎರಡು ವರ್ಷ ಕಾಲ ನ್ಯೂಟ್ರೀಷನ್‌ ವಿಭಾಗದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದೆ. ಬಳಿಕ ಆ ಕೆಲಸವನ್ನೂ ತೊರೆದೆ.

ಈ ಅವಧಿಯಲ್ಲಿ ಭಾರತದ ಒಂದು ವರ್ಗದ ಜೀವನಶೈಲಿ ಅಮೆರಿಕಾದ ಜೀವನಶೈಲಿಗೆ ಮಾರು ಹೋಗಿರುವುದನ್ನು ಮನಗಂಡೆ. ನಾವೇನು ತಿನ್ನುತ್ತಿದ್ದೇವೆ ಎಂಬುದರ ಪರಿವೇ ಇಲ್ಲದಂತೆ ಜನ ತಮ್ಮ ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳಲಾರಂಭಿಸಿದ್ದರು.

*”ಹಸಿರು ಕ್ರಾಂತಿಯ ಶಿಶು”* ಎಂದೇ ಹೇಳಬಹುದಾದ ಕುಳ್ಳನೆ ಗೋಧಿ ಹಾಗೂ ಅಕ್ಕಿ ಭಾರತೀಯರ ಅಡುಗೆ ಮನೆಗಳಲ್ಲಿ ಆಧಿಪತ್ಯ ಸಾಧಿಸಿ ದಶಕಗಳೇ ಆಗಿದ್ದವು. ಮೊದಲೇ ಪೋಷಕಾಂಶವಿಲ್ಲದ ಅಕ್ಕಿ-ಗೋಧಿಗೆ ಮಾರು ಹೋಗಿದ್ದ ಜನ, ಕ್ರಮೇಣ ಅಕ್ಕಿಯ ಮೇಲಿನ ಹೊಟ್ಟು ತೆಗೆದು, ಬೆಳ್ಳಗೆ ಪಾಲಿಷ್‌ ಮಾಡಿ ಬಳಸಲಾರಂಭಿಸಿದ್ದರು. ಪೋಷಕಾಂಶ ಇರುವ ಹೊಟ್ಟು ತೆಗೆದಮೇಲೆ ಅಕ್ಕಿಯಲ್ಲಿ ಇರುವುದಾದರೂ ಏನು ?

*ಅದೊಂದು ನಿಧಾನಗತಿಯ ವಿಷ ಎಂಬುದನ್ನು ಈ ನೆಲದಲ್ಲಿ ತಿಳಿ ಹೇಳುವವರೇ ಇಲ್ಲವಾಗಿದ್ದರು. ಬೆಳ್ಳಗಿರುವ ಅಕ್ಕಿಯೇ ಮಧುಮೇಹಕ್ಕೆ ಕಾರಣ ಎಂಬುದನ್ನು ಇಲ್ಲಿಯ ಜನ ಸುಲಭವಾಗಿ ನಂಬುತ್ತಿಲ್ಲ.*

*ಪಾಲಿಷ್‌ ಮಾಡಿದ ಅಕ್ಕಿಯಲ್ಲಿ ತಯಾರಿಸಿದ ಅನ್ನವನ್ನು ಉಂಡರೆ 45 ನಿಮಿಷದಲ್ಲಿಯೇ ಅದರೊಳಗಿರುವ ಸಕ್ಕರೆ ನಮ್ಮ ರಕ್ತಕ್ಕೆ ಸೇರುತ್ತದೆ. ಇದು ಗೊತ್ತಿದ್ದೇ, ವಿಶ್ವ ಆರೋಗ್ಯ ಸಂಸ್ಥೆಯವರು ಭಾರತವನ್ನು ಮಧುಮೇಹಿಗಳ ರಾಜಧಾನಿ ಎಂದು ಕರೆಯುತ್ತಿರುವುದು !*

ಸಿಎಫ್‌ಟಿಆರ್‌ಐ’ನಲ್ಲಿ ಕೆಲಸ ಬಿಟ್ಟ ಬಳಿಕ, ನಮ್ಮ ಆಹಾರ ಪದ್ಧತಿ ದಾರಿ ತಪ್ಪಿರುವುದು ಎಲ್ಲಿ ಎಂಬುದನ್ನು ಖುದ್ದು ನೋಡಲು ಬಹಳಷ್ಟು ಕಡೆ ಭೇಟಿ ನೀಡಿದೆ. ಹಳ್ಳಿ ಹಳ್ಳಿಗಳಿಗೆ ಹೋದೆ. ಎಲ್ಲ ಕಡೆಯೂ ಹೆಣ್ಣುಮಕ್ಕಳಿಗೆ ವಿಪರೀತ ರಕ್ತ ಹೀನತೆ, ಕ್ಯಾಲ್ಸಿಯಂ ಕೊರತೆ ಕಂಡು ಬಂತು. ಹೆಣ್ಣು ಮಕ್ಕಳಿಗೆ ಸರಿಯಾಗಿ ಋತುಸ್ರಾವವೇ ಆಗುತ್ತಿಲ್ಲ ಎಂಬುದನ್ನು ಕೇಳಿ ತಿಳಿದೆ. ಗರ್ಭಕೋಶದಲ್ಲಿ ಗಡ್ಡೆಗಳು, ರಕ್ತ ಹೀನತೆಯಿಂದ ಅವರೆಲ್ಲರೂ ಬಳಲುತ್ತಿದ್ದರು.

ಇದಕ್ಕೆಲ್ಲಾ ಕಾರಣ ಏನು ಗೊತ್ತೆ ? ನಮ್ಮ ಗ್ರಾಮೀಣ ಪ್ರದೇಶದ ಜನ ಕೂಡ ಸೊಪ್ಪು ತಿನ್ನುವುದನ್ನು ಮರೆತಿದ್ದರು. ಸೊಪ್ಪು ನಮ್ಮ ರೈತಾಪಿ ಜನರ ಅಡುಗೆಯ ಭಾಗವಾಗಿತ್ತು. ಆಗೆಲ್ಲಾ, ಯಾರೂ ಸೊಪ್ಪನ್ನು ಬೆಳೆಯುತ್ತಿರಲಿಲ್ಲ, ಸೊಪ್ಪಿನ ಬೀಜಗಳನ್ನು ಹೊಲ-ಗದ್ದೆಗಳಲ್ಲಿ ಉತ್ತು ಬೆಳೆದಿದ್ದನ್ನು ನಾನು ಯಾವತ್ತೂ ನೋಡಿಲ್ಲ. ಆದರೆ, ಸೊಪ್ಪು ಹೊಲ ಗೆದ್ದೆಗಳಲ್ಲಿ ಹೇರಳವಾಗಿ ಸಿಗುತ್ತಿತ್ತು.

ಬೇಲಿಯಲ್ಲಿ ಹೊಲದಲ್ಲಿ ಬೆರಕೆ ಸೊಪ್ಪು ಕೊಯ್ತಾ ಇದ್ದರು. ಇವತ್ತು ಯಾರೂ ಬೆರಕೆ ಸೊಪ್ಪು ಕೊಯ್ತಾ ಇಲ್ಲ. ರಾಸಾಯನಿಕ ಕೃಷಿಯಿಂದ ವೈವಿಧ್ಯಮಯವಾದ ಸೊಪ್ಪುಗಳೇ ನಾಶವಾಗಿವೆ. ಹಾಗಾಗಿಯೇ ನಮ್ಮ ಹೆಣ್ಣು ಮಕ್ಕಳಿಗೆ ಸರಿಯಾಗಿ ಮುಟ್ಟಾಗುತ್ತಿಲ್ಲ. ಅದರ ವಿಕೋಪ ಎಲ್ಲಿಗೆ ಹೋಗಿದೆ ಅಂದ್ರೆ, ನಗರಗಳಲ್ಲಿ 20-25 ವರ್ಷದ ಹುಡುಗರನ್ನು ವೀರ್ಯ ಪರೀಕ್ಷೆ ಮಾಡಿದರೆ ವೀರ್ಯದಲ್ಲಿ ಕನಿಷ್ಠ 100 ವೀರ್ಯಾಣು ಇರಬೇಕಾದಲ್ಲಿ 20 ಕೂಡ ಇರುವುದಿಲ್ಲ. ದುರ್ಬಲತೆ ಅವರನ್ನು ಆವರಿಸಿದೆ. ಯಾವ ಜೀವಿಗಾದರೂ ಪ್ರಕೃತಿಯಲ್ಲಿ ತನ್ನ ಮುಂದಿನ ಪೀಳಿಗೆಗಳನ್ನು ಬೆಳೆಸಬೇಕು. ಅವು ಆರೋಗ್ಯವಾಗಿ ಇರಬೇಕು ಅನ್ನುವಂಥ ಒಂದು ಬಯಕೆ ಇರುತ್ತದೆ. ಆದರೆ ಮುಂದಿನ ಪೀಳಿಗೆಗಳನ್ನು ಉತ್ಪನ್ನ ಮಾಡುವ ಸಾಮರ್ಥ್ಯ‌ವನ್ನೇ ಕಳೆದುಕೊಳ್ಳುತ್ತಿದ್ದೇವೆ.

ಇದಕ್ಕೆಲ್ಲಾ ಕಾರಣ ನಾವು ತಿನ್ನುತ್ತಿರುವ ಆಹಾರ ಪದಾರ್ಥಗಳು. ರಸಗೊಬ್ಬರ ಹಾಕಿ ಬೆಳೆಸುತ್ತಿರುವಂಥ ಯಾವುದೇ ಆಹಾರದಲ್ಲಿ ಪೋಷಕಾಂಶಗಳು ಕಮ್ಮಿ ಆಗುತ್ತದೆ. ಅತಿಯಾದ ನೀರು ಕಟ್ಟಿ, ರಾಸಾಯನಿಕ ಗೊಬ್ಬರ ಬಳಸಿ ಬೆಳೆಯುತ್ತಿದ್ದ ಆಹಾರ ಪದಾರ್ಥಗಳು ರೋಗ ರುಜಿನಕ್ಕೆ ಕಾರಣವಾಗುತ್ತಿವೆ. ನಾವು ರೈತರಾಗಿ ಇದ್ದುಕೊಂಡು ನಾವು ತಿನ್ನುವ ಆಹಾರವನ್ನು ನಮ್ಮ ಹೊಲದಲ್ಲಿ ನಮ್ಮ ಕೈಯಿಂದ ಬೆಳೆಸಿಕೊಂಡು ತಿನ್ನುವುದನ್ನು ಬಿಟ್ಟು, ಹೊರಗಡೆಯಿಂದ ಕೊಂಡು ತರುತ್ತಿರುವುದು ದೊಡ್ಡ ದುರಂತ.

ಹಿಂದೆಯೆಲ್ಲಾ ಯಾರಾದರೂ ತರಕಾರಿ ಬಜಾರಿನಿಂದ ತಂದರೆ ”ನೋಡಯ್ಯ ನಾಚಿಕೆ ಇಲ್ಲ, ಬದನೆಕಾಯಿ, ಟೊಮ್ಯೋಟೋನಾ ಅಂಗಡಿಯಿಂದ ತರ್ತಾನೆ,” ಅಂತ ಬಯ್ಯೋರು. ಈಗ ಯಾರೂ ಒಂದೂ ತರಕಾರಿ ಹಿತ್ತಲಲ್ಲಿ ಬೆಳೆಸಿಕೊಂಡು ತಿನ್ನುವುದಿಲ್ಲ. ನಮ್ಮ ಹಸು ಕರೆದ ಹಾಲನ್ನು ನಾವು ಉಪಯೋಗ ಮಾಡುವ ಬದಲು ಡೈರಿಯಲ್ಲಿ ಹಾಕಿ ಸಂಸ್ಕರಣೆ ಮಾಡಿದ ಹಾಲನ್ನು ತಂದು ಕುಡಿಯುತ್ತೇವೆ. ಇದರಿಂದ ಏನಾಗಿದೆ? ನಮ್ಮ ನಗರಗಳಲ್ಲಂತೂ ಇವತ್ತು ಹೆಣ್ಣು ಮಕ್ಕಳಿಗೆ 10 ವರ್ಷಕ್ಕೆ ಮುಟ್ಟಾಗಲು ಶುರುವಾಗಿದೆ.

ಈ ಎಲ್ಲದರ ಬಗ್ಗೆ ಜನರಿಗೆ ನಾನು ತಿಳಿ ಹೇಳಬೇಕು ಅನಿಸಿತು. ಆದರೆ, ಪರ್ಯಾಯವನ್ನು ತೋರಿಸದೇ ಸುಮ್ಮನೇ ಬಾಯಿ ಮಾತಿನಲ್ಲಿ ಹೇಳಿದರೆ, ಜನ ಅದನ್ನು ನಂಬುವುದಾದರೂ ಹೇಗೆ ? ಆ ಕಾರಣಕ್ಕಾಗಿ ನಾನು ಕೃಷಿಕನಾಗಲು ನಿರ್ಧರಿಸಿದೆ. ಎಚ್‌. ಡಿ. ಕೋಟೆ ತಾಲೂಕು ಬಿದರಹಳ್ಳಿಯಲ್ಲಿ 7 ಎಕರೆ ಬರಡು ಭೂಮಿ ಖರೀದಿಸಿ, ಅಲ್ಲಿ ಕೃಷಿ ಮಾಡುತ್ತಿದ್ದೇನೆ. ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದೇನೆ. ವೈವಿಧ್ಯಮಯವಾದ ವ್ಯವಸಾಯ ಪದ್ಧತಿಯನ್ನು ಅನುಸರಿಸುತ್ತಿರುವ ಮಹಾನ್‌ ದೇಶ ನನ್ನದು. ಇಂಥಾ ಕೃಷಿ ಪದ್ಧತಿಯನ್ನು ಕಡೆಗಣಿಸಿದ ಪರಿಣಾಮ, ನಾವೆಲ್ಲಾ ತಿನ್ನುವ ಆಹಾರವೇ ವಿಷವಾಗಿದೆ. ಇದರ ವಿರುದ್ಧ ನಾನು ಸಮರ ನಡೆಸುತ್ತಿದ್ದೇನೆ. ನನ್ನ ಸಮರ ನಿರಂತರ !

-ಡಾ. ಖಾದರ್‌

Don`t copy text!