ಜಯಂತಿ ಸ್ಮರಣಾರ್ಥ
ಕನ್ನಡದ ತ್ರಿಪದಿ ಕವಿ ಸರ್ವಜ್ಞ ಚಿಂತನೆಗಳು
ಕನ್ನಡದ ತ್ರಿಪದಿ ಕವಿ ಸರ್ವಜ್ಞನವರ ವೈಚಾರಿಕ ಅರಿವು, ಸಾಮಾಜಿಕ ಪ್ರಜ್ಞೆ ಅರ್ಥಪೂರ್ಣವಾಗಿದೆ. ಸರ್ವಜ್ಞರ ಬಹುತೇಕ ವಚನಗಳಲ್ಲಿ ಮೌಢ್ಯ ವಿರೋಧಿ ನಿಲುವು, ಜಾತ್ಯತೀತ ಪ್ರಜ್ಞೆ, ವೈಜ್ಞಾನಿಕ ದೃಷ್ಟಿಕೋನ ಹೆಚ್ಚು ಅಡಗಿರುವುದು ನೋಡುತ್ತೇವೆ. ಬಸವಾದಿ ಶರಣರ ಸಮಾನತೆ ಸಮಾಜದ ಆಶಯವನ್ನು ಮುನ್ನೆಲೆಗೆ ತಂದ ಸರ್ವಜ್ಞನವರ ಸಾವಿರಾರು ತ್ರಿಪದಿ ವಚನಗಳು ಸಾರ್ವಕಾಲಿಕ ಸತ್ಯವಾಗಿವೆ.
ಅಂದಿನ ಸಮಾಜದಲ್ಲಿ ಜಾತಿ ವ್ಯವಸ್ಥೆ ಮಿತಿಮೀರಿತ್ತು, ಮೌಢ್ಯತೆ ತಾಂಡವವಾಡುತ್ತಿತ್ತು, ಅವೈಜ್ಞಾನಿಕ ಅನಿಷ್ಟ ಪದ್ಧತಿಗಳು ಆಳವಾಗಿ ಬೇರೂರಿದವು. ಇಂಥ ವಿಷಮ ಕಾಲಘಟ್ಟದಲ್ಲಿ ಜನಿಸಿದ ಸರ್ವಜ್ಞ ಕನ್ನಡ ನಾಡು ಕಂಡ ಅದ್ಭುತ ವಚನಕಾರ. ಕವಿ ಸರ್ವಜ್ಞನ ಕಾಲ 16ನೇ ಶತಮಾನದ ಎಂದು ಹೇಳಲಾಗುತ್ತದೆ. ಇಂದಿನ ಹಾವೇರಿ ಜಿಲ್ಲೆಯ ಹಿರೇಕೇರೂರ ತಾಲ್ಲೂಕಿನ
ಅಂಬಲೂರು ಅಥವಾ ಮಾಸೂರು ಸರ್ವಜ್ಞನವರ ಹುಟ್ಟೂರು.
ಸರ್ವಜ್ಞ ಕವಿ ತನ್ನ ಹುಟ್ಟಿನ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳಲು ಈ ಒಂದು ತ್ರಿಪದಿ ವಚನ ಸಾಕ್ಷಿಯಾಗಿ ತೆಗೆದುಕೊಳ್ಳಬಹುದು.
‘ಅಂಬಲೂರೊಳಗೆಸೆವ | ಕುಂಬಾರಸಾಲೆಯಲಿ ಇಂದಿನ | ಕಳೆಯ | ಮಾಳಿಯೊಳು ಬಸವರಸ ನಿಂಬಿಟ್ಟನೆನ್ನ ಸರ್ವಜ್ಞ’
ಕನ್ನಡ ಸಾಹಿತ್ಯದ ಶ್ರೇಷ್ಠ ಕವಿಗಳಲ್ಲಿ ಸರ್ವಜ್ಞನಿಗೆ ಮಹೋನ್ನತ ಸ್ಥಾನವಿದೆ. ತ್ರಿಪದಿಗಳ ಮೂಲಕ ಕನ್ನಡದ ಅಸ್ಮಿತೆ ಅರ್ಥಮಾಡಿಸಿದ ಅಸಾಮಾನ್ಯ ವಚನಕಾರ. ಭಾಷೆಯ ಸರಳ ನಿರೂಪಣೆ, ಜಾನಪದ ಸೊಗಡಿನ ಮೂರು ಸಾಲಿನ ವಚನಗಳಲ್ಲಿ ಮಾನವೀಯ ಮೌಲ್ಯಗಳನ್ನು ಹಿಡಿದಿಟ್ಟಿರುವುದು ಕಾಣಬಹುದು.
‘ಅಂದಿನಾ | ಪುಷ್ಪದತ್ತ || ಬಂದ ವರರುಚಿಯಾಗಿ ಮುಂದೆ ದೇವಸಾಲೆ ಸರ್ವಜ್ಞ – ನೆಂದೆನಿಸಿ ನಿಂದವನು ತಾನೇ ಸರ್ವಜ್ಞ ‘ – ಈ ವಚನವು ಸರ್ವಜ್ಞ ಕವಿಯ ಮೂಲ ಹೆಸರಿನ ಬಗ್ಗೆ ಸ್ಪಷ್ಟಪಡಿಸುತ್ತದೆ. ಸರ್ವಜ್ಞನವರ ತಾಯಿ ಮಳಲಾದೇವಿಯು ಮಗನಿಗೆ ‘ಪುಷ್ಪದತ್ತ’ ಎಂದು ನಾಮಕರಣ ಮಾಡಿದಳು. ಹೀಗಾಗಿ ಅಂದಿನ ‘ಪುಷ್ಪದತ್ತ’ ಮುಂದೆ ‘ಸರ್ವಜ್ಞ’ ಕಾವ್ಯನಾಮದಿಂದ ಪ್ರಖ್ಯಾತಿ ಹೊಂದಿದ್ದು ಹೌದೆನಿಸುತ್ತದೆ.
ಸರ್ವಜ್ಞ ಕವಿ ಒಬ್ಬ ಸಂನ್ಯಾಸಿ ಹಾಗೂ ವಿರಾಗಿ, ದೇಶ ಸುತ್ತುತ್ತಾ ಅನುಭವಗಳನ್ನು ಅರ್ಥೈಸಿಕೊಂಡು ಅನುಭಾವಗಳನ್ನು ಹಂಚಿದನು. ಈ ಬಗ್ಗೆ ಆತನೇ ಒಂದು ವಚನದಲ್ಲಿ ಹೇಳಿದ್ದಾನೆ;
‘ಸರ್ವಜ್ಞನೆಂಬುವನು ಗರ್ವದಿಂದಾದವನೇ? ಸರ್ವರೊಳು ಒಂದೊಂದು ನುಡಿಗಲಿತು ವಿದ್ಯೆಯ ಪರ್ವತವೆ ಆದ ಸರ್ವಜ್ಞ’ ಎಂದು ತಾನು ಹೇಗೆ ಜ್ಞಾನಿಯಾದೆ, ಸರ್ವಜ್ಞನಾದೆ ಎನ್ನುವುದನ್ನು ಖಚಿತಪಡಿಸುತ್ತಾನೆ.
ಈ ಸಮಾಜದ ಜಾತಿ ವ್ಯವಸ್ಥೆ, ಅಂಧಶ್ರದ್ಧೆ, ದೌರ್ಜನ್ಯ, ಕಂದಾಚಾರ, ದಬ್ಬಾಳಿಕೆ , ಶೋಷಣೆ, ಮೌಢ್ಯತೆಗಳೆಂಬ ಅನಿಷ್ಟತೆ ಪದ್ಧತಿಯನ್ನು ದಿಕ್ಕರಿಸಿ ಸಮ ಸಮಾಜದ ಪರಿಕಲ್ಪನೆಯನ್ನು ಮುನ್ನೆಲೆಗೆ ತರುವ ಪ್ರಯತ್ನ ಸರ್ವಜ್ಞ ಮಾಡಿದನು. ಮೇಲ್ವವರ್ಗದವರ ಶೋಷಣೆಗೆ ಒಳಪಟ್ಟ ತಳವರ್ಗ ಸಮುದಾಯದವರ ಬದುಕು ಬರ್ಬರವಾಗಿತ್ತು. ಅಂಥ ವಿಷಮ ಪರಿಸ್ಥಿತಿಯ ಕತ್ತಲಲ್ಲಿ ‘ಸರ್ವಜ್ಞರ ತ್ರಿಪದಿಗಳು’ ಸಮಾಜಕ್ಕೆ ಆಕಾಶ ದ್ವೀಪವಾಗಿ ಹೊರಹೊಮ್ಮಿದ್ದು ಸುಳ್ಳಲ್ಲ.
ಜಾತಿ, ಕುಲ, ಮತ, ಲಿಂಗ ಭೇದದ ತಾರತಮ್ಯ ಮೀರಿ ಜಾತ್ಯತೀತ ಹಾಗೂ ಸಾಮರಸ್ಯದ ಸಮಾಜ ರೂಪಿಸಲು ಪಣತೊಟ್ಟು ದೇಶ ಸಂಚರಿಸಿದ ‘ಅನುಭಾವಿ ಕವಿ’ ಸರ್ವಜ್ಞ ಎಂದು ಹೇಳಿದರೂ ತಪ್ಪಾಗಲಾರದು.
ಜಾತಿ ,ಮತ, ಕುಲ, ಲಿಂಗಭೇದಗಳ ಕುರಿತು
ಸರ್ವಜ್ಞ ಕವಿ ಹೊಸ ವ್ಯಾಖ್ಯಾನ ಕೊಡುತ್ತಾರೆ,
“ನಡೆವುದೊಂದೆ ಭೂಮಿ ಕುಡಿಯುದೊಂದೆ ನೀರು ಸುಡುವಗ್ನಿಯೊಂದೆ ಇರುತ್ತಿರಲು ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞ“. ಇನ್ನೊಂದು ವಚನ;
‘ಎಲುವಿನ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ” ಎಂದು ಚರ್ಮದ ದೇಹಕ್ಕೆ ಯಾವ ಕುಲವೆಂದು ಪ್ರಶ್ನಿಸುತ್ತಾ ‘ಯಾತರ ಹೂವೇನು ನಾತವಿದ್ದರೆ ಸಾಕು, ಶಿವನೊಲಿದಾತನೇ ಜಾತವೆಂದು ಅರಿತುಕೋ ಮರುಳ ಮಾನವ’, ಸರ್ವಜ್ಞ ಕವಿಯು ಜಾತಿ ಮತ ಪಂಥಗಳ ಬಗ್ಗೆ ಕಠೋರವಾದ ನಿಲುವು ವ್ಯಕ್ತಪಡಿಸಿದ್ದು ನೋಡುತ್ತೇವೆ.
ಶರಣರ ಹಾಗೇ ಸರ್ವಜ್ಞರಿಗೂ ವೇದ, ಪುರಾಣ, ಆಗಮ, ಶಾಸ್ತ್ರಗಳ ಮೇಲೆ ನಂಬಿಕೆ ಇರಲಿಲ್ಲ. ಹಾಗಾಗಿಯೇ ಬಹುದೇವೋಪಾಸನೆ, ಮೂರ್ತಿಪೂಜೆ, ಮೂಢನಂಬಿಕೆಗಳನ್ನು ತೀವ್ರವಾಗಿ ಅಲ್ಲಗಳೆದಿದ್ದಾರೆ. ಶರಣರು ವಚನಗಳಲ್ಲಿ ‘ಪುರಾಣವೆಂಬುದು ಪುಂಡರ ಗೋಷ್ಠಿ’, ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,’ಎಂದು ದಿಕ್ಕರಿಸಿದರೆ ಸರ್ವಜ್ಞರು ‘ಓದು ವಾದಗಳೇಕೆ ಗಾದಿಯ ಮಾತೇಕೆ ವೇದ ಪುರಾಣ ನಿನಗೇಕೆ ಲಿಂಗದಾ ಹಾದಿಯರಿದನಗೆ’ ಎಂದು ವೇದಾಗಮ ಶಾಸ್ತ್ರಗಳು ನಿರಾಕರಿಸಿದ ಹಾಗೇ
ಸರ್ವಜ್ಞ ಕೂಡ ಮೌಢ್ಯ, ಅಸಮಾನತೆಯ ಜಾಡ್ಯದಿಂದ ಹೊರಬಂದು ವೈಚಾರಿಕ, ವೈಜ್ಞಾನಿಕ ದೃಷ್ಟಿಕೋನದಿಂದ ವಿವೇಚಿಸಲು ಸಲಹೆ ನೀಡುತ್ತಾನೆ.
‘ಗಂಗೆ, ಗೋದಾವರಿ ತುಂಗಭದ್ರಗಳಲ್ಲಿ ಮುಳಗಿದರೇನು ಫಲವಯ್ಯಾ? ನಿಷ್ಠೆ ನೆಲೆಗೊಳದೆ ಭಜಿಸುವ ಪೂಜೆ ತಾ ನಷ್ಟ ಕಾಣಯ್ಯಾ’ ಎಂದು
ವೈಜ್ಞಾನಿಕ ಪ್ರಜ್ಞೆ ಕುರಿತು ಪ್ರತಿಪಾದಿಸುತ್ತಾನೆ.
ಸರ್ವಜ್ಞರ ಇನ್ನೊಂದು ತ್ರಿಪದಿಯಲ್ಲಿ ‘ನಿಷ್ಠೆಯಿಲ್ಲದ ಪೂಜೆ ಹಾಳೂರ ಕೊಟ್ಟಿಗುರಿದಂತೆ ‘ ಚಿತ್ತವಿಲ್ಲದೆ ಗುಡಿ ಸುತ್ತಿದೆಡೆ ಫಲವೇನು ಎತ್ತು ಗಾಣವನು ಹೊತ್ತು ತಾ ಸತ್ತಿಬಂದಂತೆ’ ಎಂದು ಅಂಧಭಕ್ತಿ ನಿರಾಕರಿಸುತ್ತಾ ಶೋಷಣೆ ಸಮಾಜದ ವಿರುದ್ಧ ಸಿಡಿದೇಳುತ್ತಾನೆ.
ಸಾಮಾಜಿಕ ಬದುಕಿನಲ್ಲಿ ಒಳಿತುಮಾಡುವ ಜನರಿಗೆ ಟೀಕೆ ಮಾಡುವರ ಒಂದು ಗುಂಪು ಇದ್ದೆ ಇದೆ.
ಇಂಥ ಅತೃಪ್ತರನ್ನು ಕಂಡ ಸರ್ವಜ್ಞ ಯಾವುದೇ ಮುಲಾಜಿಲ್ಲದೇ ‘ಆನೆ ಬೀದಿಲಿ ಬರಲು ಶ್ವಾನ ತಾ ಬೊಗಳಿತು ಶ್ವಾನನಂತಾನೆ ಬೊಗಳಿದರೆ ಆನೆಯ ಮಾನವೇ ಹಾನಿ ಸರ್ವಜ್ಞ’ ಎಂದು ಹೇಳುತ್ತಾನೆ.
ಸಕಾರಾತ್ಮಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಆತ್ಮವಿಶ್ವಾಸದಿಂದ ಮುನ್ನುಗುವಂತೆ ತಿಳಿಸುತ್ತಾನೆ. ಇನ್ನೊಂದು ವಚನದಲ್ಲಿ ಆತ್ಮಜ್ಞಾನದ ಬಗ್ಗೆ ಹೇಳುತ್ತಾರೆ; ‘ಕಣ್ಣು ನಾಲಿಗೆ ಮತ್ತು ಮನವು ತನ್ನ ಹಿಡಿತದಲ್ಲದ್ದಿದ್ದರೆ ತನ್ನನ್ನೇ ಕೊಲ್ಲುವವು’ ಎಂದು ಮುಂದಿನ ಅನಾಹುತಗಳಿಗೆ ನಾವೇ ಹೊಣೆಗಾರರು ಎಂಬ ಎಚ್ಚರಿಕೆಯ ಕಿವಿಮಾತು ಹೇಳುತ್ತಾನೆ.
ಸರ್ವಜ್ಞ ಕವಿಯು ತಾನು ಜನಿಸಿದ ಕುಂಬಾರ
ಕುಲದ ಹಿರಿಮೆ ಮಹತ್ವ ತಿಳಿಸಿ ಹೆಮ್ಮೆಪಡುತ್ತಾರೆ.
‘ಕೊಂಬು ಹೋರಿಗೆ ಲೇಸು ತುಂಬು ಕೇರಿಗೆ ಲೇಸು ಕುಂಬಾರ ಲೇಸು ಊರಿಂಗೆ ‘,
‘ತಂದೆ ಕುಂಬಾರಮಲ್ಲ ತಾಯಿ ಮಳಲಾದೇವಿ’ ಎಂದು ಹೇಳುವ ಸರ್ವಜ್ಞರು ಹುಟ್ಟಿದ ಸಮುದಾಯದ ಬಗ್ಗೆ ಹೆಮ್ಮೆಯ ನುಡಿಗಳು ಆಡಿದ್ದಾನೆ.
ನೇರ, ಸರಳ, ವೈಚಾರಿಕತೆ ಹಾಗೂ ವೈಜ್ಞಾನಿಕ ನಿಲುವು ಅಡಗಿರುವ ತ್ರಿಪದಿಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಇಂತಹ ಅನನ್ಯವಾಗಿ ಲಭಿಸಿದ ಸಾಹಿತ್ಯ ಸಂಪತ್ತು ಕನ್ನಡಕ್ಕಷ್ಪೇ ಅಲ್ಲದೇ ಜಾಗತೀಕ ಸಮಾಜಕ್ಕೆ ಆದರ್ಶವಾಗಿವೆ.
‘ಆಡು ಮುಟ್ಚದ ಸೊಪ್ಪಿಲ್ಲ’ ಎನ್ನುವ ಹಾಗೇ
ಸರ್ವಜ್ಞ ಕವಿಯು ಹೇಳದ ವಿಷಯವೇ ಇಲ್ಲ. ಸರ್ವಜ್ಞ ಕವಿ ಸಮಾಜದ ಎಲ್ಲಾ ಓರೆಕೋರೆಗಳನ್ನು ತಿದ್ದಿದರು. ಸರ್ವಜ್ಞರ ಮೇಲೆ ಬಸವಾದಿ ಶರಣರ ವಚನ ಚಳುವಳಿಯ ಗಾಢವಾದ ಪ್ರಭಾವ ಇತ್ತು. ಹೀಗಾಗಿ ಸರ್ವಜ್ಞರ ತ್ರಿಪದಿಗಳಿಗೂ ಶರಣರ ವಚನಗಳಿಗೂ ಸಾಮ್ಯತೆ ಕಾಣುತ್ತೇವೆ. ಶರಣರ ಸಾಮಾಜಿಕ ನಿಲುವು ಮತ್ತು ಸರ್ವಜ್ಞ ವೈಚಾರಿಕ ಪ್ರಜ್ಞೆ ಒಂದೇ ಎನ್ನುವುದು ನಾವು ಮತ್ತೊಮ್ಮೆ ಅರ್ಥೈಸಿಕೊಳ್ಳಬೇಕಾಗಿದೆ.
ಸರ್ವಜ್ಞನು ಒಂದಲ್ಲ, ಎರಡಲ್ಲ, ಸಾವಿರಾರು ತ್ರಿಪದಿಗಳು ರಚಿಸಿದ್ದಾರೆ. ಏಳು ಕೋಟಿಯೆ ಕೋಟಿ, ಏಳು ಲಕ್ಷವೇ ಲಕ್ಷ ಏಳು ಸಾವಿರದ ಎಪ್ಪತ್ತು ವಚನಗಳ ಹೇಳಿದನು ಕೇಳ ಸರ್ವಜ್ಞ’;
ಏಳು ಸಾವಿರದ ಎಪ್ಪತ್ತು ವಚನಗಳು ರಚಿಸಿದ್ದೇನೆ ಎನ್ನುವ ಮಾಹಿತಿ ಈ ತ್ರಿಪದಿ ಒದಗಿಸುತ್ತದೆ.
ಊರೂರು ಸುತ್ತಾಡಿ ಬಹಳಷ್ಟು ಶ್ರಮವಹಿಸಿ ಸರ್ವಜ್ಞನವರ ತ್ರಿಪದಿಗಳನ್ನು ಸಂಗ್ರಹಿಸಿದ ‘ರೆವರೆಂಡ್ ಉತ್ತಂಗಿ ಚನ್ನಪ್ಪ’ನವರ ಮಹೋನ್ನತ ಕಾರ್ಯಕ್ಕೆ ನಾವೆಲ್ಲರೂ ತಲೆಬಾಗಲೇಬೇಕು. ಸಂಶೋಧನೆಯ ಮಾಹಿತಿ ಪ್ರಕಾರ ಎರಡು ಸಾವಿರದ ಒಂದು ನೂರು ತ್ರಿಪದಿಗಳು ಈಗ ಲಭ್ಯವಾಗಿವೆ.
ಸರ್ವಜ್ಞ ಕವಿಯ ತ್ರಿಪದಿಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿವೆ. ಅವನ್ನು ಪೂರ್ಣವಾಗಿ ಅರ್ಥೈಸಿಕೊಂಡು ಅನುಷ್ಠಾನಗೊಳಿಸಿದರೆ ಸಮಾಜದಲ್ಲಿ ಸಮಾನತೆ, ಸಹಿಷ್ಣುತೆಗೆ ನಿಜವಾದ ನೆಲೆ ದೊರಕುತ್ತದೆ. ಸರ್ವಜ್ಞ ಕವಿಯ ಆದರ್ಶಗಳು ಸಮಾಜಕ್ಕೆ ಮುಟ್ಟಿಸಲು ಸರ್ಕಾರ ‘ಸರ್ವಜ್ಞ ಪ್ರಾಧಿಕಾರ’ ಏನೋ ಸ್ಥಾಪನೆ ಮಾಡಿದೆ. ಆದರೆ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ. ಪ್ರಾಧಿಕಾರದಿಂದ ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಿರುವುದು ಸರ್ವಜ್ಞನವರ ಅನುಯಾಯಿಗಳಿಗೆ ಬೇಸರ ಮೂಡಿಸಿದೆ.
ಕನ್ನಡದ ಶ್ರೇಷ್ಠ ಕವಿ ಸರ್ವಜ್ಞನವರ ಜಯಂತಿ (ಫೆ.20)ಯನ್ನು ಕರ್ನಾಟಕ ರಾಜ್ಯ ಸರ್ಕಾರ ಆಚರಿಸುತ್ತಿದೆ.
ವಾಸ್ತವವಾದಿ ಸರ್ವಜ್ಞ ಕವಿಯ ಜೀವಪರ ಚಿಂತನೆಯ ತತ್ವಾಧಾರಿತ ತ್ರಿಪದಿಗಳು ಸಾರ್ವಕಾಲಿಕವಾಗಿ ಉಳಿಯಬೇಕಾದರೆ ಸರ್ವಜ್ಞ ಪ್ರಾಧಿಕಾರ ಮೂಲಕ ಈ ಮಹತ್ವದ ಕಾರ್ಯಗಳು ಮಾಡುವುದು ತುಂಬಾ ಜರೂರಿದೆ. ಈ ದಿಸೆಯಲ್ಲಿ ಸರ್ಕಾರ ಚಿಂತನೆ ನಡೆಸಬೇಕಾಗಿದೆ.
– – – – – – –
1. ಉತ್ತಂಗಿ ಚನ್ನಪ್ಪನವರ ಸಂಗ್ರಹಿಸಿರುವ ‘ಸರ್ವಜ್ಞ ತ್ರಿಪದಿ ವಚನಗಳ’ ಮೂಲ ಪುಸ್ತಕ ಮರುಮುದ್ರಣಗೊಳಿಸುವುದು.
2. ಸರ್ವಜ್ಞ ಕವಿಯ ತತ್ವಗಳನ್ನು ದೇಶ, ವಿದೇಶಿಯರಿಗೆ ತಲುಪಲು ಸರ್ವಜ್ಞ ತ್ರಿಪದಿಗಳು ಇತರೆ ಭಾಷೆಯಲ್ಲಿ ಭಾಷಾಂತರಗೊಳಿಸುವುದು.
3. ಸರ್ವಜ್ಞ ಕವಿಯ ಜನ್ಮಸ್ಥಳ ಮಾಸೂರಿನಲ್ಲಿ ಸರ್ವಜ್ಞನವರ ಸ್ಮಾರಕ ನಿರ್ಮಾಣ ಹಾಗೂ ಕವಿಯ ಕುರುಹುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮ್ಯೂಸಿಯಂ ಸ್ಥಾಪಿಸುವುದು.
4. ಸರ್ವಜ್ಞ ಕವಿಯ ತ್ರಿಪದಿಗಳ ಬಗ್ಗೆ ‘ರಾಷ್ಟ್ರೀಯ ವಿಚಾರ ಸಂಕಿರಣ’ ಏರ್ಪಡಿಸುವುದು.
5. ಸರ್ವಜ್ಞ ಪ್ರಾಧಿಕಾರ ಸಮಿತಿಗೆ ಹೆಚ್ಚಿನ ಅನುದಾನ ಒದಗಿಸುವುದು ಮತ್ತು ಸರ್ವಜ್ಞ ಹುಟ್ಟೂರು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದು.
–ಬಾಲಾಜಿ ಕುಂಬಾರ, ಚಟ್ನಾಳ