ಹಸಿವಿನ ಆಕ್ರಂದನ

ಕವಿತೆ

ಹಸಿವಿನ ಆಕ್ರಂದನ

ಹೌದು ನೀವು ಶಿಕ್ಷಣ ಕೊಡುತ್ತೀರಿ….
ಮನದಲ್ಲಿ ಹೊಸ ಕನಸ ಬಿತ್ತುತ್ತೀರಿ
ಅದನ್ನೇ ಗುರಿ ಎಂದು ಸಾಧಿಸುವ ಛಲ ತುಂಬುತ್ತೀರಿ
ಆದರೆ ನನ್ನ ಹಸಿವಿನ ಚೀಲಕ್ಕೆ….?
ಹಿಟ್ಟು ಬೇಕಲ್ಲ…… ಕೊಡುವಿರೇನು…….?
ಬಿಡಿ ಸ್ವಾಮಿ…. ಹೊಟ್ಟೆಯ‌ ಚೀಲ ತಂಬಿಕೊಳ್ಳಲು
ಇಲ್ಲಿ ನಾನೇ ದುಡೀಬೇಕು…… ತಿನ್ನಬೇಕು….

ನನ್ನ ಕೈಗಳಿಗೆ ಲೇಖನಿ ಕೊಡುತ್ತೀರಿ…..
ಭವಿಷ್ಯದ ಉತ್ತಮ‌ ಪ್ರಜೆಯನ್ನು
ನನ್ನಲ್ಲಿ ಕಾಣುವ ತವಕ ನಿಮ್ಮದು… ಅಷ್ಟೇ
ಹೊಟ್ಟೆ ತುಂಬಿಕೊಳ್ಳಲು ರೊಟ್ಟಿ ಪಡೆಯುವ ತವಕ ನನ್ನದು‌…….
ಇಂದು ಹಸಿವಿನ ಸಜೆಗೆ‌ ಬಿಡುಗಡೆ ಇದೆಯೇ….ಸ್ವಾಮೀ… ಬಿಡಿ……
ಇಲ್ಲಿ ನಾನೇ ದುಡೀಬೇಕು…. ತಿನ್ನಬೇಕು….

ಹೌದು ಅಲ್ಲಿ ನನ್ನ ಹಸಿವನ್ನು ಇಂಗಿಸುತ್ತೀರಿ
ಅಕ್ಷರದ ಜೂಸು ಕುಡಿಸಿ ಮೈ ಮರೆಸುತ್ತೀರಿ
ಮೃಷ್ಠಾನ್ನ ನೀಡಿ ಕಲಿಯಲು ನನ್ನ ಓಲೈಸುತ್ತೀರಿ….
ನನಗೂ ಅಲ್ಲಿ ಎಲ್ಲರಂತೆ ಕಲಿಯುವ ಆಸೆ…..
ಆದರೆ ಇಲ್ಲಿ ಹಾಗಿಲ್ಲ ಸ್ವಾಮೀ … ದುಡಿತ ಕಲಿಬೇಕಿದೆ ನಾನು, ಏಕೆಂದರೆ
ಇಲ್ಲಿ ನಾನೇ ದುಡೀಬೇಕು … ತಿನ್ನಬೇಕು….

ನೀವು ಅಕ್ಷರ ನೀಡುತ್ತೀರಿ….. ! ಅಕ್ಕರೆಯನ್ನು ತೋರುತ್ತೀರಿ……… ಆ ಅಕ್ಷರಗಳಲ್ಲಿ ಲೀನವಾಗುವ ಬಯಕೆ ನಂದು…….. ಆದರೆ….. ಅನ್ನ…?
ಭವಿಷ್ಯದ ಊಟಕ್ಕೆ ಓದೆನ್ನುತ್ತೀರಿ…. ನೀವು
ಇಲ್ಲಿ……….
ನಮ್ಮವರು ಸತ್ತರೆ ಕಟ್ಟಲು
ಸ್ವಂತ ಗೂಟವೂ ಇಲ್ಲದಂತಿದ್ದೆವೆ….. ನಾವು……
ಇದ್ದ ಜೋಪಡಿ ಕೊಚ್ಚಿ‌ ಹೋದರೂ … ಕೇಳುವವರಿಲ್ಲ… ಕಣ್ರೀ……. ನೋಡಿ…. ಸ್ವಾಮಿ… ಬದುಕಬೇಕೆಂದರೆ
ಇಲ್ಲಿ ನಾನೇ ದುಡೀಬೇಕು….. ತಿನ್ನಬೇಕು….

ಬರ ಬಂದರೂ ನಮಗೇ…. ಬರುತ್ತದೆ
ನೆರೆ ಬಂದರೂ ನಮಗೇ…. ಬರುತ್ತದೆ
ಬಂದ ಪರಿಹಾರ ಮುಟ್ಟಿದ್ಯಾರಿಗೆ…….? ಸ್ವಾಮೀ….
ಅಂದು ಓಟಿಗಾಗಿ‌ ಕರಜೋಡಿಸಿ ಬಂದವ
ಇಂದು ಕೈ ಮುಗಿದರೂ…. ನೋಟ ಹಾಯಿಸಲೊಲ್ಲ
ಇತ್ತ ಕಡೆ…
ಗೌಡ, ಕುಲಕರ್ಣಿ ಅಂತೂ ಬಡವರಿಗಿಲ್ಲ….. ಬಿಡಿ
ಮತ್ತೆ‌ ನೆಲೆ ನಿಲ್ಲಬೇಕೆಂದರೆ
ಇಲ್ಲಿ ನಾನೇ ದುಡೀಬೇಕು…..ನಾನೇ ತಿನ್ನಬೇಕು…

ವರದೇಂದ್ರ. ಕೆ. ಶಿಕ್ಷಕ ಮಸ್ಕಿ

Don`t copy text!