ಮುದ್ದು ಮಗಳು
ತವರಿನಾ ಸಿರಿ ನೀನು
ತಂಪೆರೆವ ಮರ ನೀನು
ಹೆತ್ತವರ ನಿಧಿಯಾಗಿ
ಪ್ರೀತಿ ಪುತ್ತಳಿಯಾಗಿ
ಮುದ್ದಿನಾ ಕಣ್ಮಣಿ ನೀನು //
ಆಸೆಯಾ ಅನುರೂಪ
ಪ್ರೀತಿಯಾ ಪ್ರತಿ ರೂಪ
ಕನಸಿನಾ ಕುಡಿ ದೀಪ
ಮನಸ್ಸು ಮಲ್ಲಿಗೆ ರೂಪ
ನಮ್ಮನೆಯ ನಂದಾದೀಪ//
ಕವಲೊಡೆದ ಮರವಾಗಿ
ಪರಿಮಳದ ಸುಮವಾಗಿ
ಸದ್ಗುಣದ ಗಣಿಯಾಗಿ
ಸೌಮ್ಯ ಸಾಧಕಿಯಾಗಿ
ಬಾಳು ನೀ ಬೆಳಕಾಗಿ //
ಹಾರುವಾ ಕನಸಿಗೆ
ರೆಕ್ಕೆ ಪುಕ್ಕವ ಕಟ್ಟಿ
ಮೇಲೆರುವ ನಿನ್ನ
ನಲಿದು ನೋಡುವಾಸೆ
ಕಣ್ಣಿಟ್ಟು ಕುಳಿತಿರುವೆ ಕಾತರಸಿ//
ವಚನದಾ ಒಲವು
ನೂರಾನೆ ಬಲವು
ಸದ್ಭಾವದಿ ಗೆಲುವು
ಆತ್ಮವಿಶ್ವಾಸದ ಚೆಲುವು
ಬಿಡದೆ ಸಾಧಿಸು ಛಲವು//
ಶರಣರಾ ನಡೆನುಡಿಯು
ದಾರಿ ದೀಪವು ನಿನಗೆ
ಅವರೋಲುಮೆ ಕರುಣೆ
ಇರಲೆಂದು ನಿನಗೆ
ವಿಜಯಮಹಾಂತೇಶ//
–ಸವಿತಾ ಎಮ್ ಮಾಟೂರು, ಇಲಕಲ್ಲ
ಒಬ್ಬ ತಾಯಿಯ ಸಂಸ್ಕಾರಯುತ ಹಾರೈಕೆ…. ಉತ್ತಮವಾಗಿದೆ…..