ಮಕ್ಕಳೇ ಬರೆಯುವ ” ಮಕ್ಕಳ ಮಂದಾರ” ಪತ್ರಿಕೆ

ಮಕ್ಕಳೇ ಬರೆಯುವ ” ಮಕ್ಕಳ ಮಂದಾರ” ಉಚಿತ ಪತ್ರಿಕೆ

12 ವರ್ಷಗಳಿಂದ ಹಳ್ಳಿ ಶಾಲೆಯೊಂದರ ಮಕ್ಕಳೇ ಬರೆದು ಸಂಪಾದಿಸಿ ಪಾಲಕರ ಕೈಗೆ “ಮಕ್ಕಳ ಮಂದಾರ” ಉಚಿತ ಪತ್ರಿಕೆ ಹಂಚುವ ಶಾಲಾ ಮಕ್ಕಳು

ಪತ್ರಿಕೆಯೇ ಬಾರದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಲ್ಕಾಪುರ ಗ್ರಾಮದಲ್ಲಿ ಮಕ್ಕಳೇ ಬರೆದ ಸೃಜನಶೀಲ ಬರಹಗಳಿಗೆ ವೇದಿಕೆಯಾಗಿ ಮಕ್ಕಳಿಂದಲೇ ವರದಿ , ಸೃಜನಶೀಲ ಬರಹ ಬರೆಸಿ ಮಕ್ಕಳಿಂದಲೇ 12 ವರ್ಷಗಳಿಂದ ಪ್ರಕಟವಾಗುತ್ತಿದೆ. 20 ಪುಟಗಳ ಕಲರ್ ಪತ್ರಿಕೆಯನ್ನು ಸ್ವಂತ ಖರ್ಚಿನಲ್ಲಿ 2008 ನವೆಂಬರ್ ರಿಂದ ಮಕ್ಕಳಿಗಾಗಿ ಉಚಿತವಾಗಿ ಪ್ರಕಟಿಸುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಕಾಪುರದ ರವಿಚಂದ್ರ ಅವರ ವಿನೂತನ ಪ್ರಯೋಗ ರಾಜ್ಯಾದ್ಯಂತ ಗಮನಸೆಳೆದಿದೆ. ಇವರ ಪ್ರಯೋಗದಿಂದ ಪ್ರೇರಣೆಗೊಂಡು ರಾಜ್ಯದ ಹಲವು ಶಾಲೆಗಳಲ್ಲಿ ಇವರ ಸ್ನೇಹಿತರು ಮಕ್ಕಳ ಪತ್ರಿಕೆ ಆರಂಭಿಸಿದ್ದಾರೆ.

ಆರಂಭದಲ್ಲಿ ರವಿಚಂದ್ರ ಶಿಕ್ಷಕರು ಕಾರ್ಯನಿರ್ವಹಿಸುವ ಮಲ್ಕಾಪುರ ಶಾಲೆಗೆ ಸೀಮಿತವಾಗಿದ್ದ ಪತ್ರಿಕೆಯನ್ನು ಹಲವು ಶಾಲೆಗಳ ಶಿಕ್ಷಕರ ಬೇಡಿಕೆಯಂತೆ ತಮ್ಮ ಶಾಲಾ
ಮಕ್ಕಳ ಪತ್ರಿಕೆ ಮೂಲಕ ರಾಜ್ಯದ ಬಾಲಪ್ರತಿಭೆಗಳಿಗೂ ಬರಹಗಳನ್ನು ಪ್ರಕಟಿಸಲು ಅವಕಾಶ ನೀಡಿದ್ದಾರೆ. ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಮೂಡಿಸಿ ಬರೆಯುವ ಕೌಶಲ ಮೂಡಿಸಲು ಶ್ರಮಿಸುತ್ತಿರುವುದಲ್ಲದೆ ತಮ್ಮ ಶಾಲೆಯ ಸಬಲೀಕರಣಕ್ಕೆ, ಸಮುದಾಯವನ್ನು ಒಳಗೊಳ್ಳಲು, ಶಾಲೆಬಿಟ್ಟ ಮಕ್ಕಳನ್ನು ಕರೆತರಲು, ಶಾಲೆಯನ್ನು ಕಲಿಕಾ ಆಕರ್ಷಕ ಕೇಂದ್ರವಾಗಿಸಲು , ಶಾಲಾ ಶೈಕ್ಷಣಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಸಹ ಮಕ್ಕಳ ಮಂದಾರ ಪತ್ರಿಕೆಯನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ.

ಪಾಲಕರ ಕೈಗೆ ಮಕ್ಕಳೇ ತಾವು ಬರೆದ ಬರಹಗಳ ತಮ್ಮದೇ ಸಂಪಾದನೆಯ ಪತ್ರಿಕೆಯನ್ನು ನೀಡಿ ಸಮುದಾಯದ ಮೆಚ್ಚುಗೆಗಳಿಸಿದ್ದಾರೆ . ಮಕ್ಕಳ ಕಾರ್ಯವನ್ನು ಶಿಕ್ಷಣ ಇಲಾಖೆಯು, ಮಕ್ಕಳ ಸಾಹಿತಿಗಳು, ಶಿಕ್ಷಕರು ಪ್ರಶಂಶಿಸಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಪ್ರಧಾನ ಸಂಪಾದಕರಾದ ಮಲ್ಕಾಪುರ ಶಾಲೆಯ ಶಿಕ್ಷಕ ರವಿಚಂದ್ರ ಅವರು ತಿಳಿಸಿದರು.

ಹನ್ನೆರಡು ವರ್ಷಗಳನ್ನು ಪೂರೈಸಿದ್ದು ಐವತ್ತನೇ ಸಂಚಿಕೆಯತ್ತ ಇದೇ ವರ್ಷ ಸಾಗಲಿದ್ದು ಮಕ್ಕಳಿಗಾಗಿ ಒಂದಿಷ್ಟು ವಿಶೇಷ ಚಟುವಟಿಕೆಯಾಗಿ ಮಕ್ಕಳ ಬರಹಗಳನ್ನು ಟೈಪಿಸಿ ಮುದ್ರಿಸಲು ಪತ್ರಿಕೆಯಲ್ಲಿ ತೊಡಗಿಕೊಂಡ ಕ್ಷಣಗಳು ವೃತ್ತಿ ಸಂತೃಪ್ತಿ ತಂದಿದೆ ಎನ್ನುತ್ತಾರೆ.

ಸಮುದಾಯವನ್ನು, ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವಲ್ಲಿ
ಪತ್ರಿಕೆ ಯಶಸ್ವಿ

ತಮ್ಮದೆ ಊರಿನ ವಿಶೇಷ ಸುದ್ದಿಗಳು, ಶಾಲಾ ಸುದ್ದಿಗಳ ವರದಿ ಜೊತೆಗೆ ಊರಿನ ಕಲಾವಿದರ ಸಂದರ್ಶನ, ಹಿರಿಯ ವಿದ್ಯಾರ್ಥಿಗಳ ಸಾಧನೆಗಳ ಪರಿಚಯ, ಮಕ್ಕಳ ಪಾಲಕರ ಜಾನಪದಗಳ ಸಂಗ್ರಹ , ಪತ್ರಿಕಾ ಬಳಗದ ಮಕ್ಕಳಿಂದ ಹಲವಾರು ಜಾಗೃತಿ ಅಭಿಯಾನಗಳು, ಮಕ್ಕಳ ನಾಟಕಗಳು, ಜಾನಪದ ಕ್ಷೇತ್ರಕಾರ್ಯಗಳ ಮೂಲಕ ಸಮುದಾಯವನ್ನು ಒಳಗೊಂಡು ಶಾಲಾ ಪತ್ರಿಕೆ ಮಕ್ಕಳ ಮನೆ ತಲುಪುತ್ತಿದೆ. ಶಾಲಾ ಮಕ್ಕಳೇ ಬರೆದ ಕಥೆ-ಕವನ ಜಾನಪದ ಸಂಗ್ರಹ, ಪ್ರಬಂಧ, ಚಿತ್ರಕಲೆ, ಪದಬಂಧ, ರಸಪ್ರಶ್ನೆಗಳು , ಜ್ಞಾನ-ವಿಜ್ಞಾನ ಮತ್ತಿತರ ಅಂಕಣಗಳನ್ನು ಮಕ್ಕಳಿಂದಲೇ ಬರೆಸುತ್ತಿದ್ದಾರೆ. ಮಕ್ಕಳ ಸಾಹಿತಿಗಳ ಸಂದರ್ಶನ, ಮಕ್ಕಳ ಸಾಹಿತ್ಯ ಪುಸ್ತಕ ಪರಿಚಯ, ಇಂಗ್ಲಿಷ್ ಭಾಷಾ ಅನುವಾದ ಮತ್ತಿತರ ವೈವಿಧ್ಯಮಯ ವಿಷಯವನ್ನು ಹೊತ್ತು ಪತ್ರಿಕೆ ಸಾಹಿತ್ಯ ವಲಯದಲ್ಲೂ ಗಮನಸೆಳೆದಿದೆ.

ಪ್ರತಿ ವರ್ಷ ಮಕ್ಕಳಿಗೆ ವರದಿಗಾರಿಕೆ, ಬರಹ ಕೌಶಲ್ಯಗಳ ತರಬೇತಿ ನೀಡುತ್ತಾ ಮಕ್ಕಳಲ್ಲಿ ಬರಹ ಕೌಶಲ ಬೆಳೆಸುತ್ತಿದ್ದಾರೆ. ಸಾಹಿತ್ಯ ಕಮ್ಮಟ, ಜಾನಪದ ಕಮ್ಮಟ ನಡೆಸುತ್ತಿದ್ದಾರೆ.

ಪತ್ರಿಕೆಯಿಂದ ಮಕ್ಕಳ ಗುಣಮಟ್ಟದ ಕಲಿಕೆಯಲ್ಲಿ ಪ್ರಗತಿ

ಮಕ್ಕಳಿಂದಲೇ ಜಾನಪದ ಕ್ಷೇತ್ರ ಕಾರ್ಯ ನಡೆಸಿ ನಮ್ಮೂರ ಜಾನಪದ ಅನುಸಂಧಾನ ಎನ್ನುವ ವಿಶಿಷ್ಟ ಜಾನಪದ ಕೃತಿ ಪ್ರಕಟಿಸಿದ್ದಾರೆ. ತಮ್ಮ ಶಾಲಾ ಮಕ್ಕಳ ಬರಹಗಳ ಸಮಗ್ರ ಸಂಕಲನ ಪ್ರಕಟಿಸಿದ್ದಾರೆ. ಈ ಕೃತಿಗಳು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿಯು ವಿಶೇಷ ಗಮನ ಸೆಳೆದಿವೆ. ವಾರ್ಷಿಕ ವಿಶೇಷ ಸಂಚಿಕೆ ಸಹ ಮುದ್ರಿಸಿ ಮಕ್ಕಳಿಗೆ ವಿತರಿಸುತ್ತಿದ್ದಾರೆ.
ಶಾಲಾ ಮಕ್ಕಳ ಜೊತೆಗೆ ಊರಿನ ಸಮುದಾಯವನ್ನು ಸಹ ಒಳಗೊಳ್ಳುವ ಮೂಲಕ ಪತ್ರಿಕೆ ಮುಖೇನ ಪಾಲಕರಿಗೂ ಓದುವ ಅಭಿರುಚಿ ಬೆಳೆಸಿದ್ದಾರೆ. ತಮ್ಮ ಮಕ್ಕಳು ಸಹ ಸೃಜನಶೀಲ ಬರಹ ಬರೆಯಬಲ್ಲರು ಎಂದು ಪಾಲಕರು ಮನಗಂಡಿದ್ದಾರೆ.ಹಲವರು ಪತ್ರಿಕೆಯನ್ನು ಸಂಗ್ರಹಿಸಿ ಇಟ್ಟುಕೊಂಡು ಆಗೀಗ ಓದುತ್ತಿದ್ದಾರೆ.

ನಿರಂತರವಾಗಿ ಪತ್ರಿಕೆಯನ್ನು ಪ್ರಕಟಿಸುತ್ತಾ ತ್ರೈಮಾಸಿಕ ವಾಗಿ ಮುಂದುವರಿಸಿ ಇಡೀ ಗ್ರಾಮದ ಮಕ್ಕಳಲ್ಲಿ ಓದುವ ಬರೆಯುವ ಕೌಶಲ ಮೂಡಿಸಿದೆ. ರಾಜ್ಯದ ಹಲವಾರು ಬಾಲ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಬಾಲ ಸಾಹಿತಿಗಳನ್ನು ಪ್ರೋತ್ಸಾಹಿಸಿದೆ.

ಮಲ್ಕಾಪುರದ ಶಿವಶಂಕರಯ್ಯ ಸ್ವಾಮಿ ಈ ಪತ್ರಿಕೆ ಮೂಲಕ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡು ಪದಮಾಲೆ ಎನ್ನುವ ಸಾಹಿತ್ಯ ಕೃತಿ ಪ್ರಕಟಿಸಿದ್ದಾನೆ. ಧಾರವಾಡ, ಮಂಡ್ಯ, ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ, ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಾನೆ.ರಾಜ್ಯದ ಹಲವು ಸಾಹಿತ್ಯ ಕಮ್ಮಟ , ಸಮ್ಮೇಳನಗಳಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾನೆ. ಅಲ್ಲದೆ ಮಲ್ಕಾಪುರ ಶಾಲೆಯ ಹಲವು ವಿದ್ಯಾರ್ಥಿಗಳು ತಾಲೂಕು ಜಿಲ್ಲಾ ರಾಜ್ಯ ಹಂತದ ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಆಕಾಶವಾಣಿ ನಾಟಕಗಳು, ಬೀದಿ ನಾಟಕಗಳು, ಜಾನಪದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವೆಲ್ಲ ನಮ್ಮ ಮಕ್ಕಳ ಮಂದಾರ ಪತ್ರಿಕೆಯ ಫಲಶ್ರುತಿಯೆಂದು ಮಕ್ಕಳು ಸ್ಮರಿಸುತ್ತಾರೆ.

ಶಾಲಾ ಪತ್ರಿಕೆಯಿಂದ ಶಾಲಾ ಸಬಲೀಕರಣಕ್ಕೆ ಬಳಕೆ

ಮಕ್ಕಳ ಮಂದಾರ ಪತ್ರಿಕೆ ಮುಖೇನ ಮಲ್ಕಾಪುರ ಶಾಲಾ ಮಕ್ಕಳು ರಾಜ್ಯದ ಗಮನ ಸೆಳೆದಿದ್ದು ಮಕ್ಕಳ ಸೃಜನಶೀಲತೆ ಕಂಡು ಬೆಂಗಳೂರಿನ ಇಂಡಿಯಾ ಪೌಂಡೇಶನ್ ಪಾರ್ ದಿ ಆರ್ಟ್ಸ್ ಸಂಸ್ಥೆ , ಹಾಗೂ ರಾಜ್ಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಕಲಿ ಕಲಿಸು ಯೋಜನೆಯ ಕಲಾಂತರ್ಗತ ಬೋಧನಾ ವಿಧಾನ ಅಳವಡಿಸಲು ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿತ್ತು.
ವಿಮುಕ್ತಿ ಚಾರಿಟಬಲ್ ಟ್ರಸ್ಟ್ ಶಾಲಾ ಸಬಲೀಕರಣಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ. ಸ್ಮಾರ್ಟ್ ಕ್ಲಾಸ್ ಪೂರಕ ಬೋಧನಾ ವ್ಯವಸ್ಥೆ ಮಾಡಿದೆ. ಹಿರಿಯ ವಿದ್ಯಾರ್ಥಿಗಳು , ಪೋಷಕರು ಶಾಲೆಗೆ ನೆರವು ನೀಡುತ್ತಿದ್ದಾರೆ. ಈ ಶಾಲೆಯ ಕಲಾಂತರ್ಗತ ಗುಣಾತ್ಮಕ ಶಿಕ್ಷಣವನ್ನು ಶಿಕ್ಷಣ ಇಲಾಖೆ , ಹಲವಾರು ಸಂಘ-ಸಂಸ್ಥೆಗಳು, ಶಿಶ್ಲೆಪ್ ಕಮಿಟಿ ಶ್ಲಾಘಿಸಿದೆ.

ಆರಂಭದಲ್ಲಿ ರವಿಚಂದ್ರ ಶಿಕ್ಷಕರು ತಮ್ಮ ಶಾಲೆಗಾಗಿ ಆರಂಭಿಸಿದ ಪತ್ರಿಕೆಯನ್ನು ಇದೀಗ ರಾಜ್ಯದ ಹಲವು ಪ್ರತಿಭಾವಂತ ಮಕ್ಕಳ ಬರಹಗಳಿಗೂ ವಿಸ್ತರಿಸಿದ್ದಾರೆ.
ಸ್ವಂತ ಖರ್ಚಿನಲ್ಲಿ ಮುದ್ರಿಸುತ್ತಿದ್ದ ಅವರ ಜೊತೆಗೆ ಕೆಲವು ಶಿಕ್ಷಕರು, ಸ್ನೇಹಿತರು ಸಹ ಕೈಜೋಡಿಸಿದ್ದಾರೆ. ಪತ್ರಿಕೆಯ ವಿನ್ಯಾಸದಲ್ಲಿ ಸುಜಯ್ ಲಿಂಗಪ್ಪ ಅವರು ಸಹಕರಿಸುತ್ತಿದ್ದಾರೆ.

ಮುದ್ರಿತ ಪ್ರತಿಗಳನ್ನು ಪ್ರಕಟಿಸುವುದರ ಜೊತೆಗೆ ಮಕ್ಕಳ ಮಂದಾರ ಪತ್ರಿಕೆಯ ಆನ್ಲೈನ್ ಬ್ಲಾಗ್ ಆವೃತ್ತಿಯಲ್ಲಿ ಸಾವಿರಾರು ಓದುಗರಿಗೆ ತಲುಪಿಸುತ್ತಿದ್ದಾರೆ. ಪತ್ರಿಕೆಯ ಪಿಡಿಎಫ್ ಆವೃತ್ತಿಯನ್ನು ಸಾವಿರಾರು ಸಾಹಿತ್ಯಾಸಕ್ತರಿಗೆ ತಲುಪಿಸುತ್ತಿದ್ದಾರೆ.

ಇವರ ಪತ್ರಿಕೆಯಿಂದ ಸ್ಪೂರ್ತಿ ಪಡೆದು ರಾಜ್ಯದ ಹಲವಾರು ಶಾಲೆಗಳಲ್ಲಿ ಶಾಲಾ ಮಟ್ಟದ ಪತ್ರಿಕೆಯನ್ನು ಪ್ರಕಟಿಸುತ್ತಿದ್ದಾರೆ.ಮಕ್ಕಳ ಸಾಹಿತ್ಯಾಸಕ್ತರು ಇಂತಹ ಪತ್ರಿಕೆಗಳನ್ನು ಪೋಷಿಸಿದರೆ ಕನ್ನಡ ಸಾಹಿತ್ಯ ಪೋಷಿಸುವಲ್ಲಿ, ಮಕ್ಕಳ ಬರಹಗಳಿಗೆ ವೇದಿಕೆ ಒದಗಿಸುವಲ್ಲಿ ದೊಡ್ಡ ಆಸ್ತಿಯಾಗುತ್ತದೆ. ಮಕ್ಕಳೇ ಬರೆದ ಬರಹಗಳಿಗೆ ವೇದಿಕೆ ಒದಗಿಸುವ ಹನ್ನೆರಡು ವರ್ಷಗಳ ನಿರಂತರವಾದ ಇವರ ಕಾರ್ಯ ಶ್ಲಾಘನೀಯ.

ಈ ಪತ್ರಿಕೆಯ ಆನ್ಲೈನ್ ಆವೃತ್ತಿ ಮಕ್ಕಳ ಮಂದಾರ ಬ್ಲಾಗ್ಸ್ಪಾಟ್ ನಲ್ಲಿಯೂ ಸಹ ನೋಡಬಹುದು. ಮಕ್ಕಳ ಮಂದಾರ ಪತ್ರಿಕಾ ಪ್ರಧಾನ ಸಂಪಾದಕರಾದ ರವಿಚಂದ್ರ ಇವರ ಸಂಪರ್ಕ 9980952630. ಮಕ್ಕಳ ಪತ್ರಿಕೆಯೊಂದಿಗೆ ರಾಜ್ಯದ ಬಾಲ ಪ್ರತಿಭೆಗಳು , ಪಾಲಕರು ಪತ್ರಿಕೆಗೆ ನೆರವಾಗಬಹುದು.
ಬರಹ ಅಭಿರುಚಿ ಬೆಳೆಸಿಕೊಂಡು ಪತ್ರಿಕೆಯ ಪೋಷಿಸಿಕೊಂಡು ಹೋಗುತ್ತಿರುವ ಮಕ್ಕಳಿಗೆ ಶುಭವಾಗಲಿ ಎನ್ನುವುದೇ ಪತ್ರಿಕಾ ಬಳಗದ ಹಾರೈಕೆ.

—————–

50 ನೆ ಸಂಚಿಕೆ ಪೂರೈಸಿರುವ ಮಕ್ಕಳ ಮಂದಾರ ಬಳಗಕ್ಕೆ
ಗುಬ್ಬಚ್ಚಿ ಗೂಡು ಮಕ್ಕಳ ಪತ್ರಿಕೆ ಸಂಪಾದಕರಾದ ಶಂಕರ  ಹಲಗತ್ತಿ ಅವರ ಅಭಿಪ್ರಯ…..

“ಇಂದು ಎಲ್ಲರ ಮನೆಯಲ್ಲಿ ಒಂದೇ ಮಾತು…. ಮಕ್ಕಳು ಓದತಾ ಇಲ್ಲಾ ಎಂದು..

ಏನು ಓದತಾ ಇಲ್ಲಾ ಎಂದು ಕೇಳಿದರೆ ಉತ್ತರ ರೆಡಿ ಇರುತ್ತದೆ. ಶಾಲೆ ಪಠ್ಯಪುಸ್ತಕಗಳನ್ನು ಎನ್ನುವ ಪಾಲಕರೇ ಹೆಚ್ಚಾಗುತ್ತಿದ್ದಾರೆ. ಅಷ್ಟೇ ಏಕೆ ಈ ಮಾತು ಶಿಕ್ಷಕ ಸಮೂಹದಿಂದಲೂ ಕೇಳಿಬರುತ್ತಿದೆ. ಆದರೆ ಮಕ್ಕಳಿಗೆ ಓದುವ ಮತ್ತುವ ಬರೆಯುವ ಅಭಿರುಚ್ಚಿ ಹುಟ್ಟಿಸುವಲ್ಲಿ ಪಾಲಕರಾಗಲಿ ಶಿಕ್ಷಕರಾಗಲಿ ಏನು ಪ್ರಯತ್ನ ಮಾಡಿದ್ದಾರೆ ಅಥವಾ ಮಾಡುತ್ತಿದ್ದಾರೆ ಎಂದು ಕೇಳಿದರೆ ಉತ್ತರ ಸಿಗುವದು ಕಷ್ಟವಾದರೂ ಇದಕ್ಕೆ ಇಲ್ಲಿದೆ ಉತ್ತರ ಎಂದು ಹೇಳಬಲ್ಲ ಪುಟ್ಟ ಊರಿನ ಶಾಲೆಯೊಂದರ ಶಿಕ್ಷಕ ರವಿಚಂದ್ರ ಮಲ್ಕಾಪುರ(ರವಿರಾಜ ಸಾಗರ) ಇವರ ವಿಶೇಷ ಮತ್ತು ವಿಶಿಷ್ಟ ಪ್ರಯತ್ನ ಮತ್ತು ಫಲ ಎದುರಿಗೆ ಇಡಬಲ್ಲವರಾಗಿದ್ದಾರೆ.
ಒಬ್ಬ ಕ್ರಿಯಾಶೀಲ ಶಿಕ್ಷಕ ಅದೂ ಸಾಹಿತ್ಯಾಸಕ್ತರಿದ್ದರೆ ಏನು ಮಾಡಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿ ರವಿರಾಜ್ ಶಿಕ್ಷಕರು ನಿಲ್ಲುತ್ತಾರೆ.
ನಿರಂತರತೆ ಎನ್ನುವುದೇ ಒಂದು ದೊಡ್ಡ ಸಾಧನೆ ಹಾದಿ. ೧೨ವರ್ಷಗಳ ಕಾಲ ಮಕ್ಕಳು ತಮ್ಮ ಅರಿವಿನ ವಿಸ್ತಾರ ಹೆಚ್ಚಿಸಿಕೊಳ್ಳಲು “ಮಕ್ಕಳ ಮಂದಾರ” ತ್ರೈಮಾಸಿಕ ಪತ್ರಿಕೆ ವೇದಿಕೆಯನ್ನಾಗಿ ರೂಪಿಸಿದ್ದು, ಈ ಮೂಲಕ ಸರಕಾರಿ ಶಾಲೆಯ ಮಕ್ಕಳ, ಊರಿನ ಜನರ ಮಾದರೀಯ ನಡೆಯನ್ನು ಕಟ್ಟಿಕೊಡುವ ಕಾರ್ಯ ಈ ಪತ್ರಿಕೆ ಮಾಡಿದೆ ಎಂಬುದಕ್ಕೆ ಎರಡುಮಾತಿಲ್ಲ.
ರವಿರಾಜ್ ಶಿಕ್ಷಕರು ಮಕ್ಕಳ ಮಂದಾರ ಎಂಬ ಬೀಜವನ್ನು ಹಾಕಿ, ಬೆಳೆಸಿ, ನಾಡೇ ಗಮನಿಸುವಂತೆ ಹನ್ನೆರಡು ವಸಂತಗಳ ಕಾಲ ಕಾಪಿಟ್ಟುಕೊಂಡು ಇಲ್ಲಿಗೆ ತಂದು ನಿಲ್ಲಿಸಿದ್ದಾರೆ. ಈಗ ಸಸಿ ಮರವಾಗಿದೆ. ಅದು ಯಾರ ಹಂಗು ಇಲ್ಲದಂತೆ ಬೆಳೆಯುತ್ತಾ ಸಾಗಲಿ. ಈ ಮಕ್ಕಳ ಮಂದಾರ ಮರ ಭೋದಿ ವೃಕ್ಷವಾಗಲಿ, ಮಕ್ಕಳ ಜ್ಞಾನದ ಹಸಿವನ್ನು ಹಿಂಗಿಸಿ ಅವರ ಮನಕ್ಕೆ ತಂಪನ್ನೀಯುವಂತಾಗಲಿ.
ಇಂಥ ಸಾಧನೆಯ ಹೆಜ್ಜೆಗುರುತುಗಳು ಉಳಿದ ಸರಕಾರಿ ಶಾಲೆಗಳಿಗೆ ಮಾರ್ಗದರ್ಶಿಯಾಗಿ ನಿಂತುಕೊಳ್ಳುವಂತಾಗಲಿ ಎಂದು ಹಾರೈಸುವೆ.

ಶಂಕರ ಹಲಗತ್ತಿ
ಸಂಪಾದಕರು
ಗುಬ್ಬಚ್ಚಿ ಗೂಡು ಮಕ್ಕಳ ಮಾಸಿಕ
ಧಾರವಾಡ.

Don`t copy text!