ಮಾನ್ಯಖೇಟದ ರಾಷ್ಟ್ರಕೂಟರು

ಮಾನ್ಯಖೇಟದ ರಾಷ್ಟ್ರಕೂಟರು

ಮಾನ್ಯಖೇಟ (ಮಾಳಖೇಡ) ದ ರಾಷ್ಟ್ರಕೂಟರು (ಕ್ರಿ. ಶ. 725 – 985) :
ಕರ್ನಾಟಕದ ಸಾಮ್ರಾಜ್ಯಗಳಲ್ಲಿ ಅತ್ಯಂತ ವೈಭವಯುತವಾಗಿ ಆಳಿದ ಮತ್ತೊಂದು ಐತಿಹಾಸಿಕವಾಗಿ ಮೆರೆದ ಅರಸು ಮನೆತನ ರಾಷ್ಟ್ರಕೂಟರು. ಕ್ರಿ. ಶ. 725 ರಲ್ಲಿ ದಂತಿವರ್ಮ (ದಂತಿದುರ್ಗ) ನು ರಾಷ್ಟ್ರಕೂಟರ ಸಾಮ್ರಾಜ್ಯವನ್ನು ಕಟ್ಟಿದನು. ಗೋದಾವರಿಯಿಂದ ಹಿಡಿದು ವಿಮಾ ವರೆಗಿನ ಪ್ರದೇಶವನ್ನು ಆಳಿದಂಥಾ ರಾಷ್ಟ್ರಕೂಟರು ಕಳಿಂಗ, ಕೋಸಲ, ಕಂಚಿ, ಶ್ರೀಶೈಲ, ಮಾಳವ, ಲಾಟ ಪ್ರದೇಶವನ್ನೊಳಗೊಂಡ ಸಾಮ್ರಾಜ್ಯದ ಒಡೆಯರು. ಇಮ್ಮಡಿ ಕೀರ್ತಿವರ್ಮನನ್ನು ಸೋಲಿಸಿ ಚಾಲುಕ್ಯ ಸಾಮ್ರಾಜ್ಯ ಮೊದಲನೆ ಅಧ್ಯಾಯವನ್ನು ಕೊನೆಗೊಳಿಸಿದವರು. ಇಡೀ ದಕ್ಷಿಣ ಪ್ರಸ್ಥಭೂಮಿಯನ್ನು ತಮ್ಮ ತೆಕ್ಕೆಗೆ ತಗೆದುಕೊಂಡಿದ್ದಂಥವರು ರಾಷ್ಟ್ರಕೂಟರು. ಅತ್ಯಂತ ಶ್ರೀಮಂತಿಕೆ ಮತ್ತು ವೈಭವದ “ಲಟ್ಟಲೂರು” (ಈಗಿನ ಲಾಟೂರ) ಪಟ್ಟಣದ ರಾಜಮನೆತನವು ಬಾದಾಮಿ ಚಾಲುಕ್ಯರನ್ನು ಸೋಲಿಸಿ ತಮ್ಮ ಸಾಮ್ರಾಜ್ಯವನ್ನು ಪ್ರತಿಷ್ಠಾಪಿಸಿದರು. ಕ್ರಿ. ಶ. 725 – 985 ರವರೆಗೆ ಆಳಿದ ರಾಷ್ಟ್ರಕೂಟರ ಸಾಮ್ರಾಜ್ಯವು ಭಾರತದಲ್ಲಿಯೇ ಅದ್ವಿತೀಯ ಸಾಮ್ರಾಜ್ಯವಾಗಿತ್ತು.

ಕನ್ನಡದ ಪ್ರಪ್ರಥಮ ಕಾವ್ಯ ಗ್ರಂಥವೆಂದೇ ಐತಿಹಾಸಿಕವಾಗಿ ದಾಖಲಾದ “ಕವಿರಾಜ ಮಾರ್ಗ” ಮೊದಲನೆ ಅಮೋಘವರ್ಷ (ಕ್ರಿ. ಶ. 814 – 878) ನ ಕಾಲಘಟ್ಟದ ಅದ್ಭುತ ಪ್ರಾಚೀನ ಅಪ್ಪಟ ಕನ್ನಡದ ಕಾವ್ಯ ಗ್ರಂಥ.

ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಸಾಹಿತ್ಯ, ಸಂಸ್ಕೃತ, ಕಲೆಗಳಿಗೆ ಆಶ್ರಯ ನೀಡಿದ್ದು ಅನುಪಮ ಮತ್ತು ಅಪ್ರತಿಮ. ಅತ್ಯಂತ ವೈಭವದಿಂದ ರಾಜ್ಯವಾಳಿದ ಮೊದಲನೆ ಕೃಷ್ಣನ ಆಡಳಿತದವಿದ್ದಾಗ ಕಟ್ಟಿದ “ಕಲ್ಲಿನ ಕೈಲಾಸನಾಥ ದೇವಸ್ಥಾನ” ಇಡೀ ಜಗತ್ತಿನಲ್ಲಿಯೇ ಅಪರೂಪದ ವಾಸ್ತುಶಿಲ್ಪ ಕಲಾವೈಭವ. ಆಧುನಿಕ ಪ್ರಪಂಚದ ಕಲೆಗಳ ಇತಿಹಾದಲ್ಲಿ “ಯುನೆಸ್ಕೋ ಪರಂಪರೆ” ಗೆ ಸೇರಿಸಲಾದ ಈ ಅದ್ಭುತ ಶಿಲ್ಪಕಲಾ ವೈಭವದ ಮಹಾರಾಷ್ಟ್ರದ “ಎಲ್ಲೋರಾ” ದಲ್ಲಿರುವ ಕೈಲಾಸನಾಥ ದೇವಸ್ಥಾನ ಒಂದನೆ ಕೃಷ್ಣನ ಕಾಲದ ಕೊಡುಗೆ.

ಕೈಲಾಸನಾಥ ದೇವಸ್ಥಾನ ಇಡೀ ಒಂದೇ ಕಲ್ಲಿನ ಬೆಟ್ಟವನ್ನೇ ಮೇಲಿನಿಂದ ಕೆತ್ತಿರುವ ತಂತ್ರಜ್ಞಾನ ಬಳಸಿ ಕಟ್ಟಿದಂಥಾದ್ದು. ಇದರ ಅಗಾಧ ವಿಸ್ತಾರ ಮತ್ತು ಇದರಿಂದ ಹೊರತೆಗೆದ ಕಲ್ಲಿನ ರಾಶಿಯನ್ನು ಎಲ್ಲಿ ಬಳಸಿದರು ಎನ್ನುವುದೇ ನಿಗೂಢ. ಇನ್ನು ಅದರ ಶಿಲ್ಪಕಲೆಯ ವೈವಿಧ್ಯತೆ ಮತ್ತು ಆಕರ್ಷಕ ವಿನ್ಯಾಸವಂತೂ ನಯನ ಮನೋಹರ.

ಅಪ್ರತಿಮ ಪರಾಕ್ರಮಕ್ಕೆ ಹೆಸರಾದ ರಾಷ್ಟ್ರಕೂಟರು ಯುದ್ಧ ಪರಾಕ್ರಮಿಗಳು. ಮೈಸೂರು ಪ್ರಾಂತ್ಯದ ಗಂಗವಾಡಿಯ ಗಂಗರನ್ನು, ಕಂಚಿಯ ಪಲ್ಲವರನ್ನು ಹದ್ದು ಬಸ್ತಿನಲ್ಲಿಟ್ಟಿದ್ದರು. ಕನೌಜಿನ ರಾಜರನ್ನು ಹತ್ತಿಕ್ಕಿದ್ದ ಬಂಗಾಳದ ಪ್ರತಿಹಾರ ರಾಜನನ್ನು ಸೋಲಿಸಿದವರು. ಮೊದಲನೆಯ ಅಮೋಘವರ್ಷನ ಆಡಳಿತದಲ್ಲಿ ಕಳೆದುಕೊಂಡಿದ್ದ ಗುಜರಾತ ರಾಜ್ಯದ ಪ್ರದೇಶವನ್ನು ಕ್ರಿ. ಶ. 878 ರಲ್ಲಿ ಪಟ್ಟಕ್ಕೆ ಬಂದ ಇಮ್ಮಡಿ ಕೃಷ್ಣ ಮರಳಿ ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಆದರೆ ವೆಂಗಿ ಪ್ರದೇಶವನ್ನು ಮರಳಿ ಪಡೆಯಲು ಯತ್ನಿಸಿ ವಿಫಲನಾಗುತ್ತಾನೆ. ಇಮ್ಮಡಿ ಕೃಷ್ಣನ ಮೊಮ್ಮಗ ಮೂರನೆ ಇಂದ್ರ ಕ್ರಿ. ಶ. 878 ರಲ್ಲಿ ಪಟ್ಟಕ್ಕೆ ಬಂದಾಗ ಕನೌಜನ್ನು ಆಕ್ರಮಿಸಿಕೊಂಡು ರಾಷ್ಟ್ರಕೂಟರ ಸಾಮ್ರಾಜ್ಯವನ್ನು ವಿಸ್ತಾರ ಮಾಡುತ್ತಾನೆ. ರಾಷ್ಟ್ರಕೂಟರನ್ನು ಸೋಲಿಸಿ ಇಮ್ಮಡಿ ತೈಲಪ ಕ್ರಿ. ಶ. 985 ರಲ್ಲಿ ಮತ್ತೆ ಚಾಲುಕ್ಯರ ಸಾಮ್ರಾಜ್ಯವನ್ನು ಮರು ಸ್ಥಾಪಿಸುತ್ತಾನೆ. ಇದು ಚಾಲುಕ್ಯ ಸಾಮ್ರಾಜ್ಯದ ಎರಡನೇಯ ಅಧ್ಯಾಯದ ಪ್ರಾರಂಭವಾದ ಕಾಲಘಟ್ಟ.

ಮಾನ್ಯಖೇಟ (ಮಾಳಖೇಡ) ದ ರಾಷ್ಟ್ರಕೂಟರ ವಂಶಾವಳಿ :
ಕ್ರಿ. ಶ. 752 – 756 : ದಂತಿಗುರ್ಗ (ದಂತಿವರ್ಮ)
ಕ್ರಿ. ಶ. 756 – 774 : ಒಂದನೆಯ ಕೃಷ್ಣ
ಕ್ರಿ. ಶ. 774 – 780 : ಇಮ್ಮಡಿ ಗೋವಿಂದ
ಕ್ರಿ. ಶ. 780 – 793 : ಧೃವ ಧರಾವರ್ಷ
ಕ್ರಿ. ಶ. 793 – 814 : ಮೂರನೆಯ ಗೋವಿಂದ
ಕ್ರಿ. ಶ. 814 – 880 : ಒಂದನೆಯ ಅಮೋಘವರ್ಷ
ಕ್ರಿ. ಶ. 878 – 914 : ವಿಜಯಾದಿತ್ಯ ಇಮ್ಮಡಿ ಕೃಷ್ಣ
ಕ್ರಿ. ಶ. 914 – 929 : ಮೂರನೆಯ ಇಂದ್ರ
ಕ್ರಿ. ಶ. 929 – 930 : ಇಮ್ಮಡಿ ಅಮೋಘವರ್ಷ
ಕ್ರಿ. ಶ. 930 – 935 : ನಾಲ್ಕನೆ ಗೋವಿಂದ
ಕ್ರಿ. ಶ. 934 – 939 : ಮೂರನೆಯ ಅಮೋಘವರ್ಷ
ಕ್ರಿ. ಶ. 939 – 967 : ಮೂರನೆಯ ಕೃಷ್ಣ
ಕ್ರಿ. ಶ. 967 – 972 : ಖೊಟ್ಟಿಗ ಅಮೋಘವರ್ಷ
ಕ್ರಿ. ಶ. 972 – 973 : ಇಮ್ಮಡಿ ಕರ್ಕ / ಮೂರನೆಯ ಕೃಷ್ಣ
ಕ್ರಿ. ಶ. 973 – 982 : ನಾಲ್ಕನೆಯ ಇಂದ್ರ
ಕ್ರಿ. ಶ. 973 – 997 : ಇಮ್ಮಡಿ ತೈಲಪ

1. ದಂತಿಗುರ್ಗ (ದಂತಿವರ್ಮ) (ಕ್ರಿ. ಶ. 752 – 756) :
ಚಾಲುಕ್ಯ ಅರಸು ಇಮ್ಮಡಿ ಕೀರ್ತಿವರ್ಮನನ್ನು ಕ್ರಿ. ಶ. 753 ಸೋಲಿಸಿ ಸಾಮಂತ ರಾಜನಾಗಿದ್ದ ದಂತಿದುರ್ಗ (ದಂತಿವರ್ಮ) ರಾಷ್ಟ್ರಕೂಟರ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾನೆ. ಬೇರಾರ್ (ಈಗಿನ ಮಾಹಾರಾಷ್ಟ್ರದ ಎಳಿಚಾಪುರ) ಪ್ರದೇಶದ ಅಚಲಾಪುರವನ್ನು ರಾಜಧಾನಿಯನ್ನಾಗಿಸಿಕೊಂಡು ರಾಷ್ಟ್ರಕೂಟರ ಸಾಮ್ರಾಜ್ಯವನ್ನು ಆಳಲು ಪ್ರಾರಂಭಿಸುತ್ತಾನೆ. ಸ್ವಲ್ಪ ಕಾಲದ ನಂತರ “ಲಟ್ಟಲೂರು” (ಮಹಾರಾಷ್ಟ್ರದ ಈಗಿನ ಲಾಟೂರ) ನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡು ತದನಂತರ ರಾಜಧಾನಿಯನ್ನು ಮಾನ್ಯಖೇಟ (ಕಲಬುರ್ಗಿ ಜಿಲ್ಲೆಯ ಈಗಿನ ಮಾಳಖೇಡ) ಕ್ಕೆ ವರ್ಗಾಯಿಸುತ್ತಾನೆ.

2. ಒಂದನೆ ಕೃಷ್ಣ (ಕ್ರಿ. ಶ. 756 – 774) :
ಆಗತಾನೇ ಅರಳಿದ್ದ ಸಾಮ್ರಾಜ್ಯಕ್ಕೆ ದಂತಿದುರ್ಗ (ದಂತಿವರ್ಮ) ನ ನಂತರ ಪಟ್ಟಕ್ಕೇರಿದವನು ಆತನ ಚಿಕ್ಕಪ್ಪನಾದ “ಅಕಾಲವರ್ಷ”, “ಶ್ರೀವಲ್ಲಭ”, “ಶುಭತುಂಗ”, “ಪೃಥ್ವೀವಲ್ಲಭ” ಎನ್ನುವ ಬಿರುದುಗಳಿಂದ ಅಲಂಕೃತನಾಗಿದ್ದ ಒಂದನೆ ಕೃಷ್ಣ. ಆಧುನಿಕ ಪ್ರಪಂಚದ ಕಲೆಗಳ ಇತಿಹಾದಲ್ಲಿ “ಯುನೆಸ್ಕೋ ಪರಂಪರೆ” ಗೆ ಸೇರಿಸಲಾದ ಅದ್ಭುತ ಶಿಲ್ಪಕಲಾ ವೈಭವದ ಮಹಾರಾಷ್ಟ್ರದ “ಎಲ್ಲೋರಾ” ದಲ್ಲಿರುವ ಕೈಲಾಸನಾಥ ದೇವಸ್ಥಾನ ಒಂದನೆ ಕೃಷ್ಣನ ಕೊಡುಗೆ.

3. ಇಮ್ಮಡಿ ಗೋವಿಂದ (ಕ್ರಿ. ಶ. 774 – 780) :
ಒಂದನೆ ಕೃಷ್ಣನ ನಂತರ ಆತನ ಮಗ ಇಮ್ಮಡಿ ಗೋವಿಂದ ಕ್ರಿ. ಶ. 774 ರಲ್ಲಿ ಸಿಂಹಾಸನವನ್ನೇರುತ್ತಾನೆ. ಪೂರ್ವ ಚಾಲುಕ್ಯರ ಅರಸು ನಾಲ್ಕನೆ ವಿಷ್ಣುವರ್ಧನನನ್ನು ಸೋಲಿಸಿ ವೆಂಗಿ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಾನೆ. ಕಾಲಾನಂತರದಲ್ಲಿ ರಾಜ್ಯದ ಆಡಳಿತದಲ್ಲಿ ಹಿತಾಸಕ್ತಿಯನ್ನು ಕಳೆದುಕೊಂಡ ಇಮ್ಮಡಿ ಗೋವಿಂದನನ್ನು ಬದಿಗೆ ಸರಿಸಿ ಆತನ ತಮ್ಮ ಧ್ರುವ ಧರಾವರ್ಷ ಕ್ರಿ. ಶ. 780 ರಲ್ಲಿ ರಾಜ್ಯಭಾರವನ್ನು ವಹಿಸಿಕೊಳ್ಳುತ್ತಾನೆ.

4. ಧೃವ ಧರಾವರ್ಷ (ಕ್ರಿ. ಶ. 780 – 793) :
ರಾಷ್ಟ್ರಕೂಟರ ಅರಸರಲ್ಲಿಯೇ ಶ್ರೇಷ್ಟ ರಾಜನೆಂದು ಕರೆಯಿಸಿಕೊಂಡ ಧೃವ ಧರಾವರ್ಷ ಅಣ್ಣ ಇಮ್ಮಡಿ ಗೋವಿಂದನನ್ನು ಬದಿಗೆ ಅರಿಸಿ ಆಡಳಿತದ ಚುಕ್ಕಾಣಿಯನ್ನು ಹಿಡಿಯುತ್ತಾನೆ. ಈತನ ಆಳ್ವಿಕೆಯಲ್ಲಿ ವತ್ಸ್ಯರಾಜ ಎನ್ನುವ ಪ್ರಬಲ ಗುಜರಾತಿನ ಪ್ರತಿಹಾರ ಸಾಮ್ರಾಜ್ಯದ ರಾಜನನ್ನು ಸೋಲಿಸುತ್ತಾನೆ. ಹಾಗೆಯೇ ಕಂಚಿಯ ಪಲ್ಲವರನ್ನೂ, ಬಂಗಾಳದ ಪಾಲ ಸಾಮ್ರಾಜ್ಯದ ಅರಸ ಧರ್ಮಪಾಲನನ್ನೂ ಸೋಲಿಸುವುದರ ಮೂಲಕ “ಮಾಹಾರಾಜಾಧಿರಾಜ”, “ಧರಾವರ್ಷ”, “ಪರಮೇಶ್ವರ”, ಕಾಳೀವಲ್ಲಭ” ನೆಂಬ ಬಿರುದುಗಳನ್ನು ಪಡೆದುಕೊಂಡನು.

5. ಮೂರನೆ ಗೋವಿಂದ (ಕ್ರಿ. ಶ. 793 – 814) :
ಧೃವ ಧರಾವರ್ಷನ ಮೂರನೇಯ ಮಗ ಮೂರನೆ ಗೋವಿಂದನ ಪಟ್ಟಾಭಿಷೇಕದೊಂದಿಗೆ ರಾಷ್ಟ್ರಕೂಟ ಸಾಮ್ರಾಜ್ಯದ ಐತಿಹಾಸಿಕ ಚಾರಿತ್ರಿಕ ವೈಭವದ ದಿನಗಳು ಪ್ರಾರಂಭವಾದವು ಎನ್ನಬಹುದು. ತ್ರಿಕೋಣ ಪ್ರಾಬಲ್ಯವನ್ನು ಮೆರೆಯುವಲ್ಲಿ ರಾಷ್ಟ್ರಕೂಟರು, ಪಾಲರು ಮತ್ತು ಪ್ರತೀಹಾರ ನಡುವೆ ಕದನವೇರ್ಪಟ್ಟಿತ್ತು. ಪ್ರತಿಹಾರ ರಾಜ ಇಮ್ಮಡಿ ನಾಗಭಟ್ಟನನ್ನು ಸೋಲಿಸಿದ್ದನ್ನು ಮತ್ತು ಪಾಲ ಸಾಮ್ರಾಜ್ಯದ ರಾಜ ಧರ್ಮಪಾಲನನ್ನು ಸೋಲಿಸಿದ್ದನ್ನು “ಸಂಜನ ಶಾಸನ” ಗಳಲ್ಲಿ ನಮೂದಿಸಿದ್ದನ್ನು ಕಾಣಬಹುದು. ಈ ಶಾಸನದಲ್ಲಿ ಮೂರನೆ ಗೋವಿಂದನ “ಕುದುರೆಗಳು ಹಿಮಾಲಯದ ಹೆಪ್ಪುಗಟ್ಟಿದ್ದ ನೀರನ್ನು ಕುಡಿದಿದ್ದವು ಮತ್ತು ಆನೆಗಳು ಗಂಗಾನದಿಯ ನೀರಿನಲ್ಲಿ ಆಟವಾಡಿದ್ದವು” ಎನ್ನುವ ಉಲ್ಲೇಖವಿದೆ.

ಮೂರನೆ ಗೋವಿಂದನ ಯುದ್ಧ ಪ್ರೀತಿ ಮತ್ತು ಯುದ್ಧ ನೀತಿಯನ್ನು ಅಲೆಕ್ಙಾಂಡರನ ದಂಡಯಾತ್ರೆಗೆ ಮತ್ತು ಮಹಾಭಾರತದ ಅರ್ಜುನನ ಪರಾಕ್ರಮಕ್ಕೆ ಹೋಲಿಸಲಾಗಿದೆ. ಉತ್ತರ ಭಾರತದ ಕನೌಜನ್ನು ವಶಪಡಿಸಿಕೊಂಡ ಮೇಲೆ ದಕ್ಷಿಣದತ್ತ ಮುಖ ಮಾಡಿದ ಮೂರನೆ ಗೋವಿಂದನು ಗುಜರಾತ, ಕೋಸಲ (ಕೌಶಾಲ), ಗಂಗವಾಡಿ ಪ್ರದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡನು. ಕಂಚಿಯ ಪಲ್ಲವರನ್ನು ಸೆದೆಬಡಿದು ತನ್ನ ಪರವಾಗಿರುವ ಸಾಮಂತ ರಾಜನನ್ನು ವೆಂಗಿಯಲ್ಲಿ ಪಟ್ಟಕ್ಕೆ ಕೂರಿಸಿದನು. ಸಿಂಹಳ ರಾಜನನ್ನು ಸೋಲಿಸಿ ತನ್ನ ಮಾಂಡಲೀಕ ರಾಜನನ್ನಾಗಿಸಿಕೊಂಡ ಕೀರ್ತಿ ಮೂರನೆ ಗೋವಿಂದನಿಗೆ ಸಲ್ಲುತ್ತದೆ. ಚೋಳರು, ಪಾಂಡ್ಯರು ಮತ್ತು ಚೇರರ ರಾಜರು ಈತನಿಗೆ ಕಪ್ಪ ಕಾಣಿಕೆಗಳನ್ನು ಸಲ್ಲಿಸುತ್ತಿದ್ದರೆಂದು ಇತಿಹಾಸದಿಂದ ತಿಳಿದು ಬರುತ್ತದೆ.

6. ಒಂದನೆ ಅಮೋಘವರ್ಷ (ಕ್ರಿ. ಶ. 814 – 880) :
ಮೂರನೆ ಗೋವಿಂದನ ನಂತರ ಬೃಹತ್ ಸಾಮ್ರಾಜ್ಯವನ್ನು ಆಳಿದವನು ಒಂದನೆ ಅಮೋಘವರ್ಷ. ಮಾನ್ಯಖೇಟ (ಕಲಬುರ್ಗಿ ಜಿಲ್ಲೆಯ ಈಗಿನ ಮಾಳಖೇಡ) ವನ್ನು ಅಧಿಕೃತ ರಾಜಧಾನಿಯನ್ನಗಿಸಿದವನು ಒಂದನೆ ಅಮೋಘವರ್ಷ. ರಾಷ್ಟ್ರಕೂಟರ ಆಳ್ವಿಕೆಯ ಕೊನೇಯವರೆಗೂ ಈ ಪಟ್ಟಣ ರಾಜಧಾನಿಯಾಗಿತ್ತು. ಪಶ್ಚಿಮ ಗಂಗರ ಜೊತೆಗೆ ಸೌಹಾರ್ದಯುತ ಸಂಬಂಧ ಹೊಂದಿದ್ದ ಒಂದನೆ ಅಮೋಘವರ್ಷ ತನ್ನ ಇಬ್ಬರು ರಾಜಕುಮಾರಿಯರನ್ನು ಗಂಗರ ರಾಜಕುಮಾರರೊಂದಿಗೆ ವಿವಾಹ ಮಾಡಿಸಿ ಸಂಬಂಧವನ್ನು ಗಟ್ಟಿಗೊಳಿಸಿದ್ದನು. ಪೂರ್ವ ಚಾಲುಕ್ಯರನ್ನು ವೆಂಗಿ ಪ್ರದೇಶದಲ್ಲಿ ಸೋಲಿಸಿ “ವೀರ ನಾರಾಯಣ” ಎನ್ನುವ ಬಿರುದನ್ನು ಪಡೆದನು. ವೈವಾಹಿಕ ಸಂಬಂಧಗಳನ್ನು ಬೆಸೆಯುವುದರ ಮೂಲಕ ಗಂಗರು, ಚಾಲುಕ್ಯರು ಮತ್ತು ಪಲ್ಲವರ ಜೊತೆಗೆ ಸೌಹಾರದಯುತ ವಾತಾವರಣವನ್ನು ನಿರ್ಮಿಸಿದನು.

ಒಂದನೆ ಅಮೋಘವರ್ಷನ ಕಾಲಘಟ್ಟದಲ್ಲಿ ಸಾಹಿತ್ಯ, ಕಲೆ ಸಂಸ್ಕೃತಿಗೆ ವ್ಯಾಪಕವಾಗಿ ಪ್ರೋತ್ಸಾಹ ನೀಡಿದ್ದನ್ನು ನಾವು ಕಾಣಬಹುದು. ಕನ್ನಡ ಸಾಹಿತ್ಯ ಲೋಕದ ಮೈಲುಗಲ್ಲು ಎಂದೇ ಬಿಂಬಿತವಾಗಿರುವ “ಕವಿರಾಜಮಾರ್ಗ” ಎನ್ನುವ ಕಾವ್ಯ ಗ್ರಂಥ ಇದೇ ಕಾಲದಲ್ಲಿಯೇ ರಚನೆಯಾಗಿದ್ದು. ಇದೇ ಕಾಲಘಟ್ಟದಲ್ಲಿ ಸಂಸ್ಕೃತದಲ್ಲಿ ರಚನೆಯಾದ “ಪ್ರಶ್ನೋತ್ತರ ರತ್ನಮಾಲಿಕಾ” ಸಂಸ್ಕೃತ ಸಾಹಿತ್ಯದ ಅದ್ಭುತ ಕೃತಿಯೆಂದೇ ಬಿಂಬಿತವಾಗಿದೆ. ಈ ಸಂಸ್ಕೃತ ಗ್ರಂಥವನ್ನು ಟಿಬೇಟಿಯನ್ ಭಾಷೆಗೂ ಅನುವಾದ ಮಾಡಲಾಗಿದೆ. ಒಂದನೆ ಅಮೋಘವರ್ಷನ ಕಾಲದಲ್ಲಿ ಜೈನರಿಗೆ ವಿಶೇಷ ಪ್ರೋತ್ಸಾಹ ನೀಡಿದ್ದು ಇತಿಹಾಸದಿಂದ ತಿಳಿದು ಬರುತ್ತದೆ. ಜೊತೆ ಜೊತೆಗೆ ಕನ್ನಡ ಸಾಹಿತ್ಯವೂ ವಿಪುಲವಾಗಿ ಬೆಳೆಯಿತು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ತನ್ನ ಆಸ್ಥಾನದಲ್ಲಿ ಅವಕಾಶ ನೀಡಿದ್ದಕ್ಕೆ “ದಕ್ಷಿಣದ ಅಶೋಕ” ಎಂಬ ಬಿರುದನ್ನೂ ಸಂಪಾದಿಸಿದ್ದನು.

7. ಇಮ್ಮಡಿ ಕೃಷ್ಣ (ಕ್ರಿ. ಶ. 878 – 914) :
ಅಪ್ರತಿಮ ಸಾಹಸಿ ಅರಸನಾದ ಒಂದನೆ ಅಮೋಘವರ್ಷನ ನಂತರ ಅವನ ಮಗ ಇಮ್ಮಡಿ ಕೃಷ್ಣ ಸಿಂಹಾಸನವನ್ನೇರುತ್ತಾನೆ. ಈತನಿಗೆ “ಕನ್ನರ” ಎನ್ನುವ ಹೆಸರೂ ಇತ್ತು. ಛೇದಿಯ ರಾಜಕುಮಾರಿ ಮಹಾದೇವಿ ಇಮ್ಮಡಿ ಕೃಷ್ಣನ ಪಟ್ಟದ ರಾಣಿ. ಶಾಸನಗಳ ಪ್ರಕಾರ ತಿಳಿದು ಬರುವುದೇನೆಂದರೆ ತಂದೆ ಒಂದನೆ ಅಮೋಘವರ್ಷನು ತನ್ನ ಕೊನೆಯ ದಿನಗಳಲ್ಲಿ ರಾಜ್ಯಭಾರವನ್ನು ನೋಡಿಕೊಳ್ಳಲು ಮಗನಾದ ಇಮ್ಮಡಿ ಕೃಷ್ಣನಿಗೆ ವಹಿಸಿದ್ದನು. ಇಮ್ಮಡಿ ಕೃಷ್ಣನ ಆಳ್ವಿಕೆಯಲ್ಲಿ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಗಳ ಅನಾವರಣ ಮಾಡಿರುವುದನ್ನು ಕಾಣಬಹುದು. ರಾಜಕೀಯವಾಗಿ ಇಮ್ಮಡಿ ಕೃಷ್ಣನ ಕಾಲದಲ್ಲಿ ವೆಂಗಿಯ (ಪೂರ್ವ) ಚಾಲುಕ್ಯರು ಕಳೆದುಕೊಂಡಿದ್ದ ತಮ್ಮ ಪ್ರದೇಶಗಳನ್ನು ಮರಳಿ ಪಡೆಯುತ್ತಾರೆ.

-ಮೂರನೆ ಇಂದ್ರ (ಕ್ರಿ. ಶ. 914 – 929) :

ಇಮ್ಮಡಿ ಕೃಷ್ಣನ ಮೊಮ್ಮಗ ಮತ್ತು ಛೇದಿ ರಾಜಕುಮಾರಿ ಲಕ್ಷ್ಮಿಯ ಮಗನಾದ ಮೂರನೇ ಇಂದ್ರ ಕ್ರಿ. ಶ. 914 ರಲ್ಲಿ ಸಿಂಹಾಸನವನ್ನೇರುತ್ತಾನೆ. ಮೂರನೆ ಇಂದ್ರನ ತಂದೆಯಾದ ಜಗತ್ತುಂಗನ ಅಕಾಲಿಕ ಮರಣದ ನಂತರ ಪಟ್ಟಕ್ಕೆ ಬಂದ ಮೂರನೆ ಇಂದ್ರನಿಗೆ “ರಟ್ಟಕಂದರ್ಪ”, “ರಾಜಮಾರ್ತಾಂಡ”, “ಕೀರ್ತಿನಾರಾಯಾಣ” ಎನ್ನುವ ಬಿರುದುಗಳಿದ್ದವು. ಈತನ ಆಸ್ಥಾನದಲ್ಲಿ ಕನ್ನಡದ ಕವಿ “ಶ್ರೀವಿಜಯ” ಮತ್ತು ಸಂಸ್ಕೃತದ ಕವಿ “ತ್ರಿವಿಕ್ರಮ” ಎನ್ನುವ ಉತ್ಕೃಷ್ಠ ಮೇಧಾವಿಗಳಿಗೆ ಆಶ್ರಯ ನೀಡಿದ್ದನು. ಮಧ್ಯಭಾರತವನ್ನು ಆಳುತ್ತಿದ್ದ ಕಳಚೂರಿ ವಂಶದ ಛೇದಿ ಅರಸರ ರಾಜಕುಮಾರಿ “ವಿಜಂಬಾ” ಳನ್ನು ಮೂರನೆ ಇಂದ್ರನು ವಿವಾಹವಾಗಿದ್ದನು.

9. ಇಮ್ಮಡಿ ಅಮೋಘವರ್ಷ (ಕ್ರಿ. ಶ. 929 – 930) :
ಮೂರನೆ ಇಂದ್ರನ ಮಗ ಇಮ್ಮಡಿ ಅಮೋಘವರ್ಷ ಕ್ರಿ. ಶ. 929 ರಲ್ಲಿ ಪಟ್ಟಕ್ಕೆ ಬರುತ್ತಾನೆ. ಕೇವಲ ಒಂದೇ ವರ್ಷ ರಾಜನಾಗಿದ್ದ ಇಮ್ಮಡಿ ಅಮೋಘವರ್ಷನನ್ನು ಕೊಲ್ಲಿಸಿದ ನಾಲ್ಕನೆ ಗೋವಿಂದ ಪಟ್ಟಕ್ಕೆ ಬಂದನೆಂದು ಇತಿಹಾಸದಿಂದ ತಿಳಿದುಬರುತ್ತದೆ.

10. ನಾಲ್ಕನೆ ಗೋವಿಂದ (ಕ್ರಿ. ಶ. 930 – 935) :
ಕೇವಲ ಒಂದೇ ವರ್ಷ ಕ್ರಿ. ಶ. 930 ರಾಜನಾಗಿದ್ದ ಇಮ್ಮಡಿ ಅಮೋಘವರ್ಷನನ್ನು ಕೊಲ್ಲಿಸಿದ ಅವನ ತಮ್ಮ ನಾಲ್ಕನೆ ಗೋವಿಂದ ಕ್ರಿ. ಶ. 930 ರಲ್ಲಿ ಪಟ್ಟಕ್ಕೆ ಬಂದನೆಂದು ಇತಿಹಾಸದಿಂದ ತಿಳಿದುಬರುತ್ತದೆ. ಅಷೇನೂ ಜನಪ್ರಯನಲ್ಲದ ಆಡಳಿತ ನಾಲ್ಕನೆ ಗೋವಿಂದದು. ಸ್ವೇಚ್ಛಾಚಾರಿಯಾಗಿದ್ದ ಮತ್ತು ಅನೈತಿಕ ಚಟುವಟಿಕೆಗಳನ್ನು ಮಾಡತಿದ್ದ ಅಂತ ತಿಳಿದು ಬರುತ್ತದೆ. ಇಂಥ ಅನಾಗರೀಕ ವರ್ತನೆಗಳಿಂದ ಬೇಸತ್ತಿದ್ದ ಇವನ ಸಾಮಂತ ರಾಜನಾಗಿದ್ದ ಆಂಧ್ರದ ವೇಮುಲವಾಡ ರಾಜ ಅರಿಕೇಸರಿ ಇವನನ್ನು ಪಟ್ಟದಿಂದ ಕೆಳಗಿಳಿಸಿ ಮೂರನೆ ಅಮೋಘವರ್ಷನನ್ನು ಕ್ರಿ. ಶ. 935 ಪಟ್ಟಕ್ಕೆ ಕೂರಿಸಿದರು. ಈ ಎಲ್ಲ ಪ್ರಸಂಗಗಳನ್ನು ರಾಜ ಅರಿಕೇಸರಿಯ ಆಸ್ಥಾನದ ಕನ್ನಡದ ಕವಿ “ಆದಿಕವಿ ಪಂಪ” ತನ್ನ ಕಾವ್ಯಗಳಲ್ಲಿ ನಿರೂಪಿಸಿದ್ದಾನೆ. ಇದೇ ಕಾಲಘಟ್ಟದಲ್ಲಿದ್ದ “ರವಿನಾಗಭಟ್ಟ” ಎನ್ನುವ ಕವಿ ನಾಲ್ಕನೆ ಗೋವಿಂದನ ಆಸ್ಥಾನದಲ್ಲಿದ್ದ ಎನ್ನಲಾಗಿದೆ.

11. ಮೂರನೆ ಅಮೋಘವರ್ಷ (ಕ್ರಿ. ಶ. 935 – 939) :
“ಬಡ್ಡಿಗ” ಎನ್ನುವ ಕನ್ನಡದ ಹೆಸರಿನಿಂದ ಗುರುತಿಸಲ್ಪಟ್ಟಿದ್ದ ಮೂರನೆ ಅಮೋಘವರ್ಷ ನಾಲ್ಕನೆ ಗೋವಿಂದನ ನಂತರ ಕ್ರಿ. ಶ. 935 ರಲ್ಲಿ ಸಿಂಹಾಸನವನ್ನೇರುತ್ತಾನೆ. ಅಲ್ಲಿಯವರೆಗೂ ಗಡಿಪಾರಾಗಿದ್ದ ಮೂರನೆ ಅಮೋಘವರ್ಷ ಮೂರನೆ ಇಂದ್ರನ ತಮ್ಮ ಮತ್ತು ನಾಲ್ಕನೆ ಗೋವಿಂದನ ಚಿಕ್ಕಪ್ಪನಾಗಿದ್ದ. ರಾಷ್ಟ್ರಕೂಟರ ಕೆಲ ಸಾಮಂತ ರಾಜರು ಮತ್ತು ವಿಶೇಷವಾಗಿ ಆಂಧ್ರದ ವೇಮುಲವಾಡದ ಅರಸು ಅರಿಕೇಸರಿಯ ಸಹಾಯದೊಂದಿಗೆ ಪಟ್ಟಕ್ಕೆ ಬರುತ್ತಾನೆ. ತ್ರಿಪುರಿ ಕಳಚೂರಿಯ ರಾಜಕುಮಾರಿ “ಕುಂದಕದೇವಿ” ಯನ್ನು ವಿವಾಹವಾಗಿದ್ದನೆಂದು ತಿಳಿದು ಬರುತ್ತದೆ. ಮೂರನೆ ಅಮೋಘವರ್ಷ ತನ್ನ ಮಗಳನ್ನು ಪಶ್ಚಿಮ ಗಂಗರ ರಾಜ ಇಮ್ಮಡಿ ಭಟುಗನಿಗೆ ಅಪಾರ ಭೂ ಪ್ರದೇಶವನ್ನು ವರದಕ್ಷಿಣೆಯ ರೂಪದಲ್ಲಿ ಕೊಟ್ಟು ವಿವಾಹ ಮಾಡಿದ್ದನೆಂದು ತಿಳಿದು ಬರುತ್ತದೆ. ಈತನು ಕೊನೆಯ ದಿನಗಳಲ್ಲಿ ತನ್ನ ಮಗ ಮೂರನೆ ಕೃಷ್ಣನ ಕೈಯಲ್ಲಿ ರಾಜ್ಯಭಾರ ಮಾಡಿಸಿದ್ದನ್ನು ಇತಿಹಾಸ ಹೇಳುತ್ತದೆ.

12. ಮೂರನೆ ಕೃಷ್ಣ (ಕ್ರಿ. ಶ. 939 – 967) :
ರಾಷ್ಟ್ರಕೂಟ ರಾಜರಲ್ಲಿಯೇ ಅತ್ಯಂತ ಸಮರ್ಥ, ಚಾಣಾಕ್ಷ ಆಡಳಿತಗಾರ ಮತ್ತು ಸಾಹಸೀ ಯುದ್ಧ ಪ್ರೇಮಿಯಾಗಿದ್ದ ಮೂರನೆ ಕೃಷ್ಣ ತನ್ನ ತಂದೆ ಮೂರನೆ ಅಮೋಘವರ್ಷನ ನಂತರ ಸಿಂಹಾಸನವನ್ನೇರುತ್ತಾನೆ. ರಾಷ್ಟ್ರಕೂಟರ ರಾಜ್ಯವನ್ನು ಸಾಹಸ ಮತ್ತು ಪರಾಕ್ರಮದಿಂದ ಕಳೆದುಕೊಂಡಿದ್ದ ಬಹಳಷ್ಟು ಪ್ರಾಂತ್ಯಗಳನ್ನು ಮರಳಿ ಪಡೆಯುತ್ತಾನೆ. ಈತ ಛೇಧಿಯ ರಾಜಕುಮಾರಿಯನ್ನು ವಿವಾಹವಾಗಿದ್ದನು. ಈತನ ಮಗಳಾದ “ಬಿಜ್ಜಬ್ಬೆ” ಯನ್ನು ಪಶ್ಚಿಮ ಗಂಗ ರಾಜನಿಗೆ ಕೊಟ್ಟಿ ವಿಹಾಹ ಮಾಡಿದ್ದನು.

ಶಾಂತಿಪುರಾಣ ಮತ್ತು ಗಜಾಂಕುಶ ಎನ್ನುವ ಕಾವ್ಯಗಳನ್ನು ಬರೆದ “ಶ್ರೀಪೊನ್ನ (ನಾರಾಯಣ) ನಿಗೆ ರಾಜಾಶ್ರವನ್ನಿತ್ತು ಮೂರನೆ ಕೃಷ್ಣ ಗೌರವಿಸಿದ್ದನು. ಈತನ ಆಶ್ರಯದಲ್ಲಿದ್ದ ಮತ್ತೊಬ್ಬ ಕವಿ ಮಹಾಪುರಾಣವನ್ನು ಬರೆದ ಪುಷ್ಪದಂತ. ಮೂರನೆ ಕೃಷ್ಣನಿಗೆ “ಅಕಾಲವರ್ಷ”, “ಮಹಾರಾಜಾಧಿರಾಜ”, “ಪರಮೇಶ್ವರ”, “ಪರಮ ಮಾಹೇಶ್ವರ”, “ಶ್ರೀ ಪೃಥ್ವೀವಲ್ಲಭ” ಎನ್ನುವ ಬಿರುದಾಂಕಿತಗಳನ್ನು ಹೊಂದಿದ್ದನು. ಇತನ ಉತ್ಕರ್ಷದ ಕಾಲಘಟ್ಟದಲ್ಲಿ ರಾಷ್ಟ್ರಕೂಟರ ಸಾಮ್ರಾಜ್ಯವು ನರ್ಮದಾ ನದಿಯಿಂದ ಹಿಡಿದು ಕಾವೇರಿ ಪ್ರಸ್ಥಭೂಮಿಯವರೆಗೂ ಚಾಚಿತ್ತು.

13. ಖೊಟ್ಟಿಗ ಅಮೋಘವರ್ಷ (ಕ್ರಿ. ಶ. 967 – 972) :
ಮೂರನೆ ಕೃಷ್ಣನ ನಂತರ ಸಿಂಹಾಸನವೇರಿದವನು ನಿತ್ಯವರ್ಷ ಎಂದು ಬಿರುದಾಂಕಿತನಾಗಿದ್ದ ಖೊಟ್ಟಿಗ ಅಮೋಘವರ್ಷ. ಇಲ್ಲಿಂದ ರಾಟ್ಟ್ರಕೂಟ ಅರಸರ ಇಳಿಮುಖವಾಗುವ ಪ್ರಾರಂಭದ ಹಂತ. ರಾಜಧಾನಿ ಮಾನ್ಯಖೇಟದ ಮೇಲೆ ದಾಳಿ ಮಾಡಿದ ಪರಮಾರ ರಾಜ ಇಮ್ಮಡಿ ಸಿಯಾಕನೊಂದಿಗೆ ಯುದ್ಧ ಮಾಡುತ್ತಲೇ ಖೊಟ್ಟಿಗ ಅಮೋಘವರ್ಷ ಯುದ್ಧಕ್ಕೆ ಬಲಿಯಾಗುತ್ತಾನೆ.

14. ಇಮ್ಮಡಿ ಕರ್ಕ / ಮೂರನೆ ಕೃಷ್ಣ (ಕ್ರಿ. ಶ. 972 – 973) :
ಖೊಟ್ಟಿಗ ಅಮೋಘವರ್ಷನ ನಂತರ ಸಿಂಹಾಸನವೇರಿದವನು ಆತನ ಮೊಮ್ಮಗ ಇಮ್ಮಡಿ ಕರ್ಕ. ಇಮ್ಮಡಿ ಕರ್ಕನಿಗೆ ಮೂರನೆ ಕೃಷ್ಣ ಎನ್ನುವ ಹೆಸರೂ ಇತ್ತು. ಗುರ್ಜರರು, ಚೋಳರು ಮತ್ತು ಪಾಂಡ್ಯರ ಮೇಲೆ ಹಿಡಿತ ಸಾಧಿಸಿದ್ದನು. ಈತನ ಅಸಹಾಯಕತೆಯನ್ನು ಬಳಸಿಕೊಂಡ ಇಮ್ಮಡಿ ತೈಲಪ ಇಮ್ಮಡಿಕರ್ಕನನ್ನು ಕೊಂದು ಸ್ವತಂತ್ರನಾದನು.

15. ನಾಲ್ಕನೆಯ ಇಂದ್ರ (ಕ್ರಿ. ಶ. 973 – 982) :
ರಾಷ್ಟ್ರಕೂಟರ ಕೊನೆಯ ಅರಸ ನಾಲ್ಕನೆ ಇಂದ್ರ. ತಲಕಾಡಿನ ಪಶ್ಚಿಮ ಗಂಗರ ಸೋದರಳಿಯ ಈ ನಾಲ್ಕನೆ ಇಂದ್ರ. ಗಂಗರ ಅರಸು ಇಮ್ಮಡಿ ಮಾರಸಿಂಹ ರಾಷ್ಟ್ರಕೂಟರ ಸಾಮ್ರಾಜ್ಯವನ್ನು ಉಳಿಸಲು ಇನ್ನಿಲ್ಲದ ಕಸರತ್ತನ್ನು ಮಾಡಿ ಕೈ ಬಿಡುತ್ತಾನೆ. ಕ್ರಿ. ಶ. 975 ರಲ್ಲಿ ಸಲ್ಲೇಖನ ವೃತವನ್ನು ಕೈಗೊಂಡು ಇಮ್ಮಡಿ ಮಾರಸಿಂಹ ನಿಧನನಾದ ಮೇಲೆ ಕ್ರಿ. ಶ. 982 ರಲ್ಲಿ ಶ್ರವಣಬೆಳಗೊಳದಲ್ಲಿ ನಾಲ್ಕನೆ ಇಂದ್ರನೂ ಕೊನೆಯುಸಿರೆಳೆಯುತ್ತಾನೆ. ಅಲ್ಲಿಗೆ ಕರ್ನಾಟಕದ ಇತಿಹಾಸದಲ್ಲಿ ವೈಭವ ಮತ್ತು ಪರಾಕ್ರಮಗಳಿಂದ ಮೆರೆದ ರಾಷ್ಟ್ರಕೂಟರ ಸಾಮ್ರಾಜ್ಯವು ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿತು

ವಿಜಯಕುಮಾರ ಕಮ್ಮಾರ
ತುಮಕೂರು –
ಮೋಬೈಲ್ ನಂ: 9741 357 132
ಈ-ಮೇಲ್: vijikammar@gmail.

Don`t copy text!