ಬದುಕಬೇಕಿದೆ ಮಂಕುತಿಮ್ಮನಂತೆ

ಬದುಕಬೇಕಿದೆ ಮಂಕುತಿಮ್ಮನಂತೆ

ಏಳು ನೀ ಬೇಗ ಏಳು ಎಚ್ಚರಗೊಳ್ಳು
ನಮಿಸಬೇಕಿದೆ ನಾವು ದಿವ್ಯ ಚೇತನಗಳನ್ನು
ಬಂಗಾರದ ಬದುಕಿಗೆ
ದಾರಿ ತೋರಿದ ಮಹಾಮಹಿಮರನ್ನು ||

ದೇವರಿದ್ದಾನೋ ಇಲ್ಲವೋ
ಬೇಡ ನಮಗದರ ತಂಟೆ
ಸೃಷ್ಟಿಸಿಹನಲ್ಲವೇ ಸಾಕು.
ನಮಿಸುತ ಬಾರಿಸಿಬಿಡಿ ಗಂಟೆ ||

ಅಮ್ಮ ಮೊದಲ ವಂದಿಪೆ‌.
ತನ್ನುಸಿರು ಕಟ್ಟಿ ಜನ್ಮಕೊಟ್ಟವಳು
ಬದುಕ ಬಂಡಿಯ ಸಾಗಿಸಲು
ಜೀವ ತೇಯ್ದವಳು ||

ರೈತನ ಮರೆಯುವುದುಂಟೆ ?
ಆತ ನಮ್ಮಣ್ಣ, ನಮ್ಮ ಅನ್ನ
ಹಾಲುಣಿಸೊ ಹಸು, ನೀರುದಿಸೊ ಜಲಲಧಾರೆ
ರವಿ ಚಂದಿರರ ಬಾನಿನೊಡನಾಟ
ಅವರ ಅಡಿಯಲ್ಲೇ ನಮ್ಮ ಉಸಿರಾಟ
ಯಾರನ್ನು ಬಿಡುವಿರಿ ?
ಬೇಡ ಎಲ್ಲರಿಗೂ ನಮಿಸಿರಿ ||

ಅಕ್ಕನೋ ತಂಗಿಯೋ
ಗೆಳೆಯನೋ ಗೆಳತಿಯೋ
ಹಿರಿಯರೊಂದಿಗೆ ಗುರುಗಳೂ ಉಂಟಲ್ಲಿ
ಎಲ್ಲರೂ ಉಣಿಸಿಹರು ಪ್ರೀತಿಯ ಋಣ
ಅದಕೇ ನೀ ತೂಗುತಿರುವೆ ಹತ್ತಾರು ಮಣ ||

ಹಗುರವಾಗದೆ ನೀ ದೂರ ಸಾಗಲಾರೆ
ಹಾರೈಕೆಗಳಿಲ್ಲದೆ ಹೆಜ್ಜೆ ಹಾಕಲಾರೆ
ಪ್ರೀತಿಗೆ ಪ್ರತಿಯಾಗಿ ಪ್ರೀತಿಯನೇ ಉಣಿಸು
ಹಗೆತನವನೂ
ಮೌನ ಪ್ರೀತಿಯಿಂದಲೇ ಮಣಿಸು ||

ಬದುಕಿದು ಬರಿ ಮೂರು ದಿನದ ಸಂತೆ
ಎಲ್ಲರೊಳಗೊಂದಾಗು ನೀ ಮಂಕುತಿಮ್ಮನಂತೆ
ಬದುಕ ಬುತ್ತಿಯ ಮುಗಿಸೇಳು
ಎಲ್ಲರ ಪ್ರೀತಿಯ ತಮ್ಮನಂತೆ ||

✍️ ಆದಪ್ಪ ಹೆಂಬಾ ಮಸ್ಕಿ

Don`t copy text!