ನಾನು ರೈತರ ಪರ ಕೆಲಸ ಮಾಡಿ ಹುತಾತ್ಮನಾಗುವೆ- ಮಾಧುಸ್ವಾಮಿ


e-ಸುದ್ದಿ, ಮಸ್ಕಿ
ರೈತರ ಕನಸು ತಮ್ಮ ಹೊಲಗಳಿಗೆ ನೀರು ಬೇಕು. ನೀರು ಸಿಕ್ಕರೆ ತೃಪ್ತಿಯಿಂದ ಜೀವನ ಮಾಡುತ್ತಾರೆ. ಆ ಅರಿವು ಇಟ್ಟುಕೊಂಡು ಸಣ್ಣ ನೀರಾವರಿ ಇಲಾಖೆಯಲ್ಲಿ ರೈತರ ಪರ ಕೆಲಸ ಮಾಡಿ ಹುತಾತ್ಮನಾಗುತ್ತೇನೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪಕ್ಷದ ವತಿಯಿಂದ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು ರಾಜ್ಯದ ಅಭಿವೃದ್ದಿಗಾಗಿ ಈ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಲು, ನಾನು ಸಚಿವನಾಗಲು ಪ್ರತಾಪಗೌಡ ಪಾಟೀಲ ಅವರ ತ್ಯಾಗದ ಪ್ರತಿಫಲವಾಗಿದ್ದು, ಅವರು ತ್ಯಾಗ ಮಾಡಿ ಬಿಜೆಪಿಯನ್ನು ಬೆಂಬಲಿಸಿದಿದ್ದರೆ ಈ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿರಲಿಲ್ಲ ಎಂಬ ಅರಿವು ನನಗಿದೆ ಎಂದರು.
ಬಿಜೆಪಿ ಪಕ್ಷದ ಹೆಚ್ಚಿನ ಶಾಸಕರು ಕಲ್ಯಾಣ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟದ ಭಾಗದಿಂದ ಆಯ್ಕೆಯಾಗಿದ್ದಾರೆ. ಈ ಭಾಗದ ಅಭಿವೃದ್ದಿ ಬಗ್ಗೆ ಕೆಲಸ ಮಾಡುವ ಪಣ ತೊಟ್ಟಿರುವದಾಗಿ ಹೇಳಿದ ಮಾಧುಸ್ವಾಮಿ. ರಾಜ್ಯದಲ್ಲಿ 41 ತಾಲೂಕುಗಳಲ್ಲಿ ಅಂತರಜಲ ಕುಸಿತವಾಗಿ ತಳ ಮಟ್ಟಕ್ಕೆ ಹೋಗಿದೆ. ಅಟಲ್ ಯೋಜನೆ ಮೂಲಕ ಅಂತರ ಜಲ ಅಭಿವೃದ್ಧಿ ಪಡಿಸುವದಕ್ಕಾಗಿ ಕೆರೆ ತುಂಬಿಸುವ ಯೋಜನೆ ಜಾರಿಗೆ ತರಲಾಗಿದ್ದು ನಮ್ಮ ಸರ್ಕಾರದ ಅವಧಿ ಮುಗಿಯುವದರೊಳಗಾಗಿ ರೈತರು ನೆಮ್ಮದಿಯಿಂದ ಇರುವ ಹಾಗೆ ಮಾಡುವ ಸಂಕಲ್ಪ ಮಾಡಿದ್ದೇನೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಸಿದ್ಧರಾಮಯ್ಯಗೆ ಟೀಕೆ ಃ ಸ್ವಂತ ಕ್ಷೇತ್ರದಲ್ಲಿ ಗೆಲ್ಲಲಾರದ ಚುನಾವಣೆಯ ನಂತರ ದೊಡ್ಡ ಪಕ್ಷವಾಗಿದ್ದ ಬಿಜೆಪಿಯನ್ನು ದೂರು ಇಡುವ ದುರಾಲೋಚನೆಯಿಂದ ಕಡಿಮೆ ಗೆದ್ದ ಜೆಡಿಎಸ್‍ನವರೊಂದಿಗೆ ಅನೈತಿಕ ಸಂಬಂಧ ಬೆಳಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಯಾವ ಪುರಾಷಾರ್ಥಕ್ಕಾಗಿ ಬಿಜೆಪಿ ಸರ್ಕಾರವನ್ನು ಟೀಕಿಸುತಿದ್ದಾರೆ ಎಂದು ಪ್ರಶ್ನಿಸಿದ ಮಾಧುಸ್ವಾಮಿ ಬದಾಮಿಯಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ ಎಂದು ಟೀಕಿಸಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ ಮಸ್ಕಿ ಕ್ಷೇತ್ರದಲ್ಲಿ ಒಂದುವರೇ ವರ್ಷದಿಂದ ಶಾಸಕರಿಲ್ಲ ಎಂಬ ಭಾವನೆ ಬರದಂತೆ ಕ್ಷೇತ್ರದ ಅಭೀವೃದ್ದಿಗಾಗಿ ನೂರಾರು ಕೋಟಿ ರೂ ಅನುದಾನ ತಂದು ಕ್ಷೇತ್ರ ಅಭಿವೃದ್ದಿ ಪಡಿಸುತ್ತಿರುವೆ ಎಂದರು.
ಮಸ್ಕಿ ಕ್ಷೇತ್ರದಲ್ಲಿ ಬರುವ ಎಲ್ಲಾ ಕೆರೆಗಳನ್ನು ತುಂಬಿಸುವ ಸಲುವಾಗಿ 457 ಕೋಟಿ ರೂ ಅಂದಾಜು ಪತ್ರಿಕೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಯವರು ಕೆರೆ ತುಂಬಿಸುವ ಯೋಜನೆಗೆ ಸಂಪೂರ್ಣ ಒಪ್ಪಿಗೆ ನೀಡಿದ್ದು ಮೊದಲ ಕಂತಾಗಿ 82 ಕೋಟಿ ರೂ.ಬಿಡುಗಡೆ ಮಾಡಿದ್ದಾರೆ ಎಂದು ಪ್ರತಾಪಗೌಡ ಪಾಟೀಲ ತಿಳಿಸಿದರು.
ಈಗಾಗಲೇ ನಂದವಾಡಗಿ ಏತ ನೀರಾವರಿ ಯೋಜನೆಗೆ 1800 ಕೋಟಿ ರೂ ಮೊದಲ ಯೋಜನೆ ಜಾರಿಗೊಂಡಿದ್ದು ಕಾಮಗಾರಿ ನಡೆದಿದೆ. 2ನೇ ಹಂತದ ಯೋಜನೆ ಜಾರಿಗೊಳಿಸಲು ನೀರವಾರಿ ಸಚಿವರಾದ ರಮೇಶ ಜಾರಕಿಹೊಳೆ ಅವರು ಒಪ್ಪಿಗೆ ಸೂಚಿಸಿದ್ದು ರೈತರ ಬೇಡಿಕೆಯಂತೆ ಹನಿ ನೀರಾವರಿ ಬದಲಿಗೆ ಹರಿನಿರಾವರಿ ಯೋಜನೆಯಾಗಿ ಪರಿವರ್ತಿಸಿದ್ದಾರೆಂದು ಪ್ರತಾಪಗೌಡ ಪಾಟೀಲ ಹೇಳಿದರು.
ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್, ರಾಯಚೂರು ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿದರು.

Don`t copy text!