e-ಸುದ್ದಿ, ಮಸ್ಕಿ
ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದಲ್ಲಿ ಆರ್.ಎಸ್.ಎಸ್ ಕುತಂತ್ರ ಅಡಗಿದ್ದು ಇದರ ಹಿಂದೆ ರಾಜಕೀಯವಿದೆ ಎಂದು ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ ಭಾಯ್ಯಾಪೂರ ಹೇಳಿದರು.
ತಾಲೂಕಿನ ಮೆದಕಿನಾಳ ಗ್ರಾಮದಲ್ಲಿ ಬುಧವಾರ ನಡೆದ ಸಂತೆಕೆಲ್ಲೂರು ಹಾಗೂ ಮೆದಕಿನಾಳ ಜಿ.ಪಂ.ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಮಾಜಿ ಶಾಸಕ ಪ್ರಾತಪಗೌಡ ಪಾಟೀಲ ಅವರು ಮಸ್ಕಿ ಕ್ಷೇತ್ರದಲ್ಲಿ ನೈತಿಕತೆ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಉಪ ಚುನಾವಣೆಯ ನೇತೃತ್ವ ವಹಿಸಿಕೊಳ್ಳುವಂತೆ ಮುಖ್ಯಮಂತ್ರಿಯ ಮಗ ವಿಜೇಂದ್ರನಿಗೆ ಬೆನ್ನು ಬಿದ್ದಿದ್ದಾರೆ ಎಂದು ಟೀಕಿಸಿದರು.
ಎರಡು ಬಾರಿ ಕಾಂಗ್ರೆಸ್‍ನಿಂದ ಗೆದಿದ್ದ ಪ್ರತಾಪಗೌಡ ಪಾಟೀಲರಿಗೆ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ 2500 ಕೋಟಿ ಅಭಿವೃದ್ದಿಗಾಗಿ ಕೊಟ್ಟಿದ್ದರು. ಅದನ್ನು ಮರೆತ ಪ್ರತಾಪಗೌಡ ಪಾಟೀಲ ರಾಜಿನಾಮೆ ನೀಡಿ ಮಂತ್ರಿಯಾಗುವ ದುರಾಸೆಯಿಂದ ಕ್ಷೇತ್ರದ ಮತದಾರರಿಗೆ ಮೋಸ ಮಾಡಿದ್ದಾರೆ. ಈ ಸಲದ ಉಪ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲರನ್ನು ಸೋಲಿಸುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮತದಾರರು ಎತ್ತಿ ಹಿಡಿಯುವ ಮೂಲಕ ಸಂವಿಧಾನ ರಕ್ಷಣೆ ಮಾಡಬೇಕು ಎಂದು ಭಯ್ಯಾಪೂರ ಮತದಾರರಿಗೆ ಮನವಿ ಮಾಡಿದರು.
ಮಸ್ಕಿ ಕ್ಷೆತ್ರದಲ್ಲಿ ಅಭಿವೃದ್ದಿಗಾಗಿ ಸಾಕಷ್ಟು ಹಣ ಹರಿದು ಬರುತ್ತಿದೆ. ಕೆರೆ ತುಂಬಿಸುವ ಯೋಜನೆಗೆ ನೂರಾರು ಕೋಟಿ ರೂ ಕೊಟ್ಟಿದ್ದಾರೆ ಎಂದು ಪ್ರತಾಪಗೌಡ ಪಾಟೀಲ ಸುಳ್ಳು ಹೇಳುತ್ತಿದ್ದಾರೆ. ಅದು ಬರಿ ಕಾಗದಲ್ಲಿ ಮಾತ್ರ ಅಭಿವೃದ್ದಿಯ ಮಂತ್ರ ಜಪಿಸುತ್ತಾರೆ ಎಂದರು.
ಚುನಾವಣೆ ಹತ್ತಿರ ಬಂದಾಗ ಪ್ರತಾಪಗೌಡರಿಗೆ ರಡ್ಡಿ ಜನಾಂಗ, ಕುರುಬ ಜನಾಂಗ ಕಣ್ಣಿಗೆ ಕಾಣುತ್ತಿದ್ದಾರೆ. ತಲಾ 1 ಕೋಟಿ ರೂ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಮೂರು ಅವಧಿಯಲ್ಲಿ ನೀವು ಶಾಸಕರಾಗಿದ್ದೀರಿ ಆಗ ಅನುದಾನ ಕೊಡದ ನೀವು ಈಗ ಈ ಜನಾಂಗದವರನ್ನು ಮರಳು ಮಾಡುತ್ತಿದ್ದೀರಿ. ಜನ ದಡ್ಡರಲ್ಲ ಈ ಸಲ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಭಯ್ಯಾಪೂರು ಆವೇಶ ಭರಿತರಾಗಿ ಪ್ರತಾಪಗೌಡ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಮಾತನಾಡಿ ಪ್ರತಾಪಗೌಡ ಪಾಟೀಲರ ದುರಾಸೆಯಿಂದ ಅನಗತ್ಯವಾಗಿ ಉಪ ಚುನಾವಣೆ ಎದುರಾಗಿದೆ. ಈ ಚುನಾವಣೆಯಿಂದ ಸರ್ಕಾರ ಹಾಗೂ ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗಿದೆ. 5 ವರ್ಷ ಆಡಳಿತ ಮಾಡಲು ಆಯ್ಕೆ ಮಾಡಿ ಪ್ರತಪಾಗೌಡ ಪಾಟೀಲ ವಿಧಾನಸಭೆ ಕಳಿಸಿದರೆ ಹಣಕ್ಕಾಗಿ ಶಾಸಕತ್ವವನ್ನು ಮಾರಿಕೊಂಡು ಮತದಾರರನ್ನು ಕೊಂಡು ಕೊಳ್ಳಲು ಮುಂದಾಗಿದ್ದಾರೆ. ಸ್ವಾಭಿಮಾನಿ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿಯನ್ನು ಗೆಲ್ಲಿಸಿ ಪಕ್ಷಾಂತರಿಗಳಿಗೆ ಪಾಠ ಕಲಿಸಿರಿ ಎಂದರು.
ಸಿಂಧನೂರಿನ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಪ್ರತಿಯೊಂದು ಚುನಾವಣೆಯಲ್ಲಿ ಭಾವನಾತ್ಮಕವಾಗಿ ಜನರನ್ನು ಮರುಳು ಮಾಡಿ ಅಧಿಕಾರ ಹಿಡಿಯುವ ಹುನ್ನಾರ ಮಾಡುತ್ತಾರೆ ಅದು ಬಹಳ ಕಾಲ ನಡೆಯುವುದಿಲ್ಲ ಎಂದರು.
ಮಾಜಿ ಎಂಎಲ್‍ಸಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶೀ ಎನ್.ಎಸ್ ಬೋಸರಾಜ ಮಾತನಾಡಿ ಪ್ರತಾಪಗೌಡ ಪಾಟೀಲ ಈಗಾಗಲೇ ಮತದಾರರಿಗೆ ಹಣದ ಆಮಿಷ ತೊರಿಸಿ ಗೆಲ್ಲಲು ಹವಣಿಸುತ್ತಿದ್ದಾರೆ. ಮತದಾರರು ಅವರು ಕೊಡುವ ವಸ್ತು, ಹಣ ಅಕ್ರಮ ಸಂಪತುನ್ನು ಪಡೆಯಿರಿ ಆದರೆ ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿಗೆ ಮತ ನೀಡಿರಿ ಎಂದರು.
ತುಂಗ ಭದ್ರ ಕಾಡದ ಮಾಜಿ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯಾರ್ಥಿ ಬಸನಗೌಡ ತುರ್ವಿಹಾಳ ಮಾತನಾಡಿ ಕಳೆದ ಚುನಾವಣೆಯಲ್ಲಿ ಮತದಾರರು ನನ್ನನ್ನು ಬೆಂಬಲಿಸಿದ್ದರು. ಪ್ರತಾಪಗೌಡ ಪಾಟೀಲ ಅಕ್ರಮವಾಗಿ ಕೆಲವೇ ಮತಗಳ ಅಂತರದಲ್ಲಿ ಗೆದಿದ್ದಾರೆ. ಈ ಸಲ ನನ್ನನ್ನು ಗೆಲ್ಲಿಸುವ ಮೂಲಕ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಹಂಪಯ್ಯ ನಾಯಕ, ರಾಜ್ಯ ಯುಥ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ, ಮಸ್ಕಿಯ ಸಿದ್ದಣ್ಣ ಹೂವಿನಬಾವಿ, ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ ಮಾತನಾಡಿದರು.