ಕಲ್ಯಾಣದ ಕಳಚೂರಿಗಳು

ಕಲ್ಯಾಣದ ಕಳಚೂರಿಗಳು

ಕಲ್ಯಾಣದ ಕಳಚೂರಿಗಳು (ಕ್ರಿ. ಶ. 1156 – 1193) :
ಜಾನಪದದಲ್ಲಿ “ಕಲ್ಲಿ” ಎಂದರೆ ಉದ್ದನೆಯ ಮೀಸೆ, “ಚೂರಿ” ಎಂದರೆ ಹರಿತವಾದ ಚಾಕು. “ಕಟಚೂರಿ” ಎಂದರೆ ಹರಿತವಾದ ಚಾಕು ಎಂತಲೂ ಪ್ರಸಿದ್ಧಿಯನ್ನು ಪಡೆದವರು. “ಕಲಂಜರಪುರವರಾಧೀಶ್ವರ, ಅಂದರೆ ಕಲಂಜರ ಪರ್ವತದ ಅರಸ” ಮತ್ತು “ಹೈಹೇಯ ಅಥವಾ ಹೇಹೇಯ” ಎಂತಲೂ ಕರೆದಿದ್ದಾರೆ. ಮೂಲತಃ ಶೈವರು. 10 ನೇ ಶತಮಾನದಿಂದ 12 ನೇ ಶತಮಾನ ಕಾಲಘಟ್ಟದಲ್ಲಿ ಕಳಚೂರಿ ವಂಶದ ಎರಡು ಸಾಮ್ರಾಜ್ಯಗಳು ರಾಜ್ಯಭಾರವನ್ನು ನಡೆಸಿದ್ದಾರೆ. ಮಧ್ಯ ಭಾರತ (ಪೂರ್ವ ಮಧ್ಯಪ್ರದೇಶ ಮತ್ತು ರಾಜಸ್ಥಾನ) ವನ್ನು ಆಳಿದ ಛೇದಿ ಅಥವಾ ಹೇಹೇಯ (ಉತ್ತರದ ಹೇಹೇಯರು) ಅರಸರು ಆಳಿದ್ದಾರೆ. ದಕ್ಷಿಣದ ಕಳಚೂರಿಗಳು ಎಂದೆ ಹೆಸರಾದ ಇನ್ನೊಂದು ವಂಶ ಕರ್ನಾಟಕ, ಉತ್ತರ ಮಾಹಾರಾಷ್ಟ್ರ, ಮಾಳವ ಮತ್ತು ದಕ್ಷಿಣ ಪ್ರಸ್ಥಭೂಮಿಯನೊಳಗೊಂಡ ಪ್ರದೇಶವನ್ನು ನರ್ಮದಾ ನದೀತೀರದ “ಮಹಿಷ್ಮತಿ” ಎಂಬ ಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ಆಳಿದ್ದಾರೆ. ಶಿಲಾಶಾಸನಗಳಲ್ಲಿ ನಿರೂಪಿಸಿದ ಹಾಗೆ ಕೃಷ್ಣರಾಜ, ಶಂಕರಗಣ ಮತ್ತು ಬುದ್ಧಿರಾಜ ಅರಸರು ಪ್ರಸಿದ್ಧ ರಾಜರು. ನೆರೆಯ ಪ್ರಬಲ ಸಾಮ್ರಾಜ್ಯಗಳಾದ ವಲ್ಲಭಿ ಮೈತ್ರಕರು ಮತ್ತು ಬಾದಾಮಿ ಚಾಲುಕ್ಯರ ಜೊತೆಗೆ ಸಂಘರ್ಷ ಮಾಡುತ್ತಲೇ ರಾಜ್ಯಭಾರವನ್ನು ಮಾಡಿದವರು. ಈ ಮೊದಲೆ ಹೇಳಿದ ಹಾಗೆ ಬುದ್ಧಿರಾಜನು ಚಾಲುಕ್ಯರ ಅರಸ ಮಂಗಳೇಶನ ಜೊತೆ ಯುದ್ಧ ಮಾಡಿ ಹಲವು ಪ್ರಾಂತ್ಯಗಳನ್ನು ಕಳೆದುಕೊಂಡಿದ್ದನು. ಆದರೂ ಕಳಚೂರಿಗಳನ್ನು ಯಾರೂ ಕಡೆಗಣಿಸುವಂತಿಲ್ಲ. ಇಮ್ಮಡಿ ವಿನಯಾದಿತ್ಯನು ಹೇಹೇಯ ಅರಸರ ಇಬ್ಬರು ರಾಜಕುಮಾರಿಯರನ್ನು ವಿವಾಹವಾಗಿದ್ದನು. ಮಂಗಳವೇಡೆ (ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಈಗಿನ ಮಂಗಳವೇಡೆ) ಯಿಂದ ತಮ್ಮ ರಾಜಧಾನಿಯನ್ನು ಕಲ್ಯಾಣ (ಬೀದರ ಜಿಲ್ಲೆಯ ಈಗಿನ ಬಸವ ಕಲ್ಯಾಣ) ಕ್ಕೆ ಸ್ಥಳಾಂತರಿಸುತ್ತಾರೆ.

ತ್ರಿಪುರಿ ಕಳಚೂರಿಯ ಮತ್ತೊಂದು ಶಾಖೆಯ ವಂಶಕ್ಕೆ ಸೇರಿದ ಇಮ್ಮಡಿ ಬಿಜ್ಜಳನ ತಾಯಿ ಕಲ್ಯಾಣದ ಚಾಲುಕ್ಯರ ಅರಸ ಮೂರನೆ ಸೋಮೇಶ್ವರನ ತಂಗಿಯಾಗಿದ್ದಳು ಎಂದು ತಿಳಿದು ಬರುತ್ತದೆ.

ಚಾಲುಕ್ಯರ ಅರಸು ಮೂರನೇ ತೈಲಪನಿಂದ ಸ್ವತಂತ್ರರಾದ ಕಲ್ಯಾಣದ ಕಳಚೂರಿಗಳು ಕ್ರಿ. ಶ. 1156 ರಲ್ಲಿ ತಮ್ಮ ಅತ್ಯಲ್ಪ ಕಾಲದ ಮಧ್ಯಂತರ ರಾಜ್ಯವನ್ನು ಸ್ಥಾಪಿಸಿದರು. ಇಮ್ಮಡಿ ಬಿಜ್ಜಳ ಇವರ ಕಾಲಘಟ್ಟದ ಪ್ರಭಾವಿ ದೊರೆ. ಕ್ರಿ. ಶ. 1130 ರಲ್ಲಿ ಮಹಾ ದಂಡನಾಯಕನಾಗಿ ತನ್ನ ಪ್ರಭಾವ ಬೆಳೆಸಿಕೊಂಡ ಇಮ್ಮಡಿ ಬಿಜ್ಜಳ ಕ್ರಿ. ಶ. 1156 ರಲ್ಲಿ ಸ್ವತಂತ್ರನಾಗಿ ರಾಜ್ಯಭಾರವನ್ನು ವಹಿಸಿಕೊಂಡನು. ಅಲ್ಲಿಂದ ತನ್ನ ಪ್ರಬಲತೆಯಿಂದ ಹೊಯ್ಸಳರನ್ನು, ಕದಂಬರನ್ನು, ಮಲಬಾರಿನ ಚೇರರನ್ನು, ಪಾಂಡ್ಯರನ್ನು ಮತ್ತು ಚಾಲುಕ್ಯರನ್ನು ಹದ್ದು ಬಸ್ತಿನಲ್ಲಿಟ್ಟಿದ್ದನು. ಆದರೆ ತನ್ನ ಕುಟುಂಬದಲ್ಲಿಯ ಒಳಜಗಳವನ್ನು ಎದುರಿಸಬೇಕಾಯಿತು. ಮಕ್ಕಳಾದ ಮಲ್ಲುಗಿ ಮತ್ತಿತರ ಆರು ಮಕ್ಕಳು ಸಿಂಹಾಸನವನ್ನೇರಲು ಪೈಪೋಟಿಗೆ ಬಿದ್ದಂತೆ ಕಾಣುತ್ತದೆ. ಇವರ ಮೇಲೆ ಕಣ್ಣಿಡಲು “ಕರಣ” ರೆನ್ನುವ ಸಹಾಯಕರನ್ನು ನೇಮಿಸಿದ್ದನೆಂದು ತಿಳಿದು ಬರುತ್ತದೆ.

ಇಮ್ಮಡಿ ಬಿಜ್ಜಳನ ಹೆಸರು ಮುಂಚೂಣಿಗೆ ಬಂದದ್ದು ಮತ್ತು ಇಂದಿಗೂ ನೆನಪು ಮಾಡಿಕೊಳ್ಳುವುದು ಬಸವಣ್ಣನವರು ಸ್ಥಾಪಿಸಿದ ಸಮಾಜೋ-ಧಾರ್ಮಿಕ ಕ್ರಾಂತಿಯಿಂದ ಮುನ್ನೆಲೆಗೆ ಬಂದ ಲಿಂಗಾಯತ ಧರ್ಮದಿಂದ. ಬಸವಣ್ಣನವರ ಶ್ರೇಣೀಕೃತ ಸಮಾಜದಿಂದಾದ ಅಸಮಾನತೆಗಳನ್ನು ಹೊಡೆದೋಡಿಸುವಂಥ ಕ್ರಾಂತಿಕಾರಕ ಚಿಂತನೆಗಳು ಇಮ್ಮಡಿ ಬಿಜ್ಜಳನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದವು. ಕ್ರಿ. ಶ. 1167 ರಲ್ಲಿ ಈತನ ಮಗ ಸೋವಿದೇವ (ಸೋಮ) ನನ್ನು ಸಿಂಹಾಸನದ ಮೇಲೆ ಕೂರಿಸಿ ಆಡಳಿತವನ್ನು ನಡೆಸುತ್ತಾನೆ. ಕ್ರಿ. ಶ. 1168 ರಲ್ಲಿ ಇಮ್ಮಡಿ ಬಿಜ್ಜಳನ ಕೊಲೆಯಾಗುವುದರ ಮೂಲಕ ಕಳಚೂರಿಗಳ ಆಡಳಿತದ ಕೊನೆಯ ದಿನಗಳು ಆರಂಭವಾದವು.

ಕ್ರಿ. ಶ. 1176 ರವರೆಗೂ ಆಡಳಿತ ನಡೆಸಿದ ಸೋವಿದೇವ (ಸೋಮ) ನಿಗೆ ತನ್ನ ಕುಟುಂಬದಲ್ಲಯೇ ಪ್ರತಿರೋಧವಿತ್ತು. ಈತನ ನಂತರ ಮಲ್ಲುಗಿ ಸಿಂಹಾಸನವನ್ನೇರಿದರೂ ಕೆಲವೇ ದಿನಗಳಲ್ಲಿ ಅವನನ್ನು ಕೆಳಗಿಳಿಸಿ ತಮ್ಮನಾದ ಸಂಕಮನು ಸಿಂಹಾಸನವನ್ನೇರಿದನು. ತರುವಾಯ ಅಹಾವಮಲ್ಲ, ಸಿಂಘಣರು ರಾಜ್ಯಭಾರ ಮಾಡಿದರು. ಇವರ ಕುಟುಂಬದಲ್ಲಿನ ಒಳಜಗಳಗಳ ಲಾಭ ಪಡೆದ ಚಾಲುಕ್ಯರು ಮತ್ತೆ ಈ ರಾಜ್ಯವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಗುತ್ತಾರೆ. ಕೆಲವೇ ಕೆಲವು ವರ್ಷಗಳಲ್ಲಿ ಕಳಚೂರಿಯವರ ಆಡಳಿತ ಕೊನೆಗೊಂಡರೂ ಇವರ ಕಾಲಘಟ್ಟದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯಿಂದ ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆಯಿತು.

ಕಲ್ಯಾಣದ ಕಳಚೂರಿಗಳ ವಂಶಾವಳಿ :

ಕ್ರಿ. ಶ. 925 : ಉಚಿತ
ಕ್ರಿ. ಶ. (ತಿಳಿದು ಬಂದಿಲ್ಲ) : ಅಸಗ
ಕ್ರಿ. ಶ. (ತಿಳಿದು ಬಂದಿಲ್ಲ) : ಕಣ್ಣಮ
ಕ್ರಿ. ಶ. (ತಿಳಿದು ಬಂದಿಲ್ಲ) : ಇಮ್ಮಡಿ ಅಸಗ
ಕ್ರಿ. ಶ. (ತಿಳಿದು ಬಂದಿಲ್ಲ) : ರಾಜಾ ಬಿಜ್ಜ
ಕ್ರಿ. ಶ. (ತಿಳಿದು ಬಂದಿಲ್ಲ) : ಇಮ್ಮಡಿ ಕಣ್ಣಮ
ಕ್ರಿ. ಶ. (ತಿಳಿದು ಬಂದಿಲ್ಲ) : ಜೋಗಮ
ಕ್ರಿ. ಶ. 1118 – 1130 : ಪೆರ್ಮಾಡಿ
ಕ್ರಿ. ಶ. 1130 – 1168 : ಇಮ್ಮಡಿ ಬಿಜ್ಜಳ (ಕ್ರಿ. ಶ. 1156 ರಲ್ಲಿ ಸ್ವತಂತ್ರನಾಗುತ್ತಾನೆ)
ಕ್ರಿ. ಶ. 1167 – 1176 : ಸೋಮ (ಸೋವಿದೇವ)
ಕ್ರಿ. ಶ. 1176 : ಮಲ್ಲುಗಿ
ಕ್ರಿ. ಶ. 1176 – 1180 : ಸಂಕಮ
ಕ್ರಿ. ಶ. 1180 – 1183 : ಅಹಾವಮಲ್ಲ
ಕ್ರಿ. ಶ. 1183 – 1184 : ಸಿಂಘಣ
ಕ್ರಿ. ಶ. 1184 – 1193 : ಮೂರನೆ ವೀರಬಿಜ್ಜಳ

1. ಉಚಿತ (ಕಾಲಘಟ್ಟ ಸುಮಾರು ಕ್ರಿ. ಶ. 925) :
ಕರ್ನಾಟಕದಲ್ಲಿ ಕಳಚೂರಿಗಳ ವಂಶದ ಆಡಳಿತವನ್ನು ಸುಮಾರು ಕ್ರಿ. ಶ. 925 ರಲ್ಲಿ ಪ್ರಾರಂಭಿಸಿದ ಕೀರ್ತಿ “ಉಚಿತ” ಅರಸನಿಗೆ ಸಲ್ಲುತ್ತದೆ.

2. ಉಚಿತ ಅರಸನ ನಂತರ ಬಂದ ಅಸಗ, ಕಣ್ಣಮ, ಇಮ್ಮಡಿ ಅಸಗ, ರಾಜಾ ಬಿಜ್ಜ, ಇಮ್ಮಡಿ ಕಣ್ಣಮ, ಜೋಗಮ ಅರಸರ ವಿವರಗಳು ತಿಳಿದು ಬಂದಿಲ್ಲ.

3. ಪೆರ್ಮಾಡಿ (ಕ್ರಿ. ಶ. 1118 – 1130) :
ಜೋಗಮನ ನಂತರ ಪಟ್ಟಕ್ಕೆ ಬಂದವನು ಈತನ ಮಗ ಪೆರ್ಮಾಡಿ. ಕಳಚೂರಿ ಅರಸರಲ್ಲಿ ಬಲಶಾಲಿ ಮತ್ತು ಪ್ರಬಲನಾಗಿದ್ದ ಪೆರ್ಮಾಡಿಯು ಚಾಲುಕ್ಯರ ಸಾಮ್ರಾಜ್ಯದಿಂದ ಬೇರೆಯಾಗುವದಕ್ಕೆ ಮುನ್ನುಡಿ ಬರೆದವನು.

4. ಇಮ್ಮಡಿ ಬಿಜ್ಜಳ (ಕ್ರಿ. ಶ. 1130 – 1168 / ಕ್ರಿ. ಶ. 1156 ರಲ್ಲಿ ಸ್ವತಂತ್ರನಾಗುತ್ತಾನೆ) :
ಪೆರ್ಮಾಡಿಯ ನಂತರ ಸಿಂಹಾಸನವನ್ನೇರಿದವನು ಈತನ ಮಗ ಇಮ್ಮಡಿ ಬಿಜ್ಜಳ. ಮೂರನೆ ಸೋಮೇಶ್ವರನಿಂದ “ಮಹಾಮಂಡಲೇಶ್ವರ” ನೆಂದು ನಾಮಾಂಕಿತನಾಗಿ ಆತನ ರಾಜ್ಯದ ದಂಡನಾಯಕನಾಗಿದ್ದನು. ಆರನೇ ವಿಕ್ರಮಾದಿತ್ಯನ ನಂತರ ಪಶ್ಚಿಮ ಚಾಲುಕ್ಯರ ಸಾಮ್ರಾಜ್ಯವು ತನ್ನ ವೈಭವದ ದಿನಗಳನ್ನು ಕಳೆದುಕೊಂಡು ಮೂರನೆ ಸೋಮೇಶ್ವರನ ಕಾಲಘಟ್ಟದಲ್ಲಿ ಇಮ್ಮಡಿ ಬಿಜ್ಜಳನು 1156 ರಲ್ಲಿ ಸ್ವತಂತ್ರನಾಗುತ್ತಾನೆ. ಬಳ್ಳಿಗಾವಿ ಶಾಸನದಲ್ಲಿ ಇಮ್ಮಡಿ ಬಿಜ್ಜಳನ ಸ್ವಾತಂತ್ರ್ಯವನ್ನು ನಿರೂಪಿಸಿದೆ. “ನಿಜವಾದ ವೀರಯೋಧನಿಗೆ ಸಾರ್ವಭೌಮತ್ವದ ಗೌರವ ಸಲ್ಲುತ್ತದೆ” ಎಂದು ಹೊಗಳಿದೆ. ಚಿಕ್ಕಲಗಿ ಶಾಸನದಲ್ಲಿ “ಮಹಾಭುಜಬಲ ಚಕ್ರವರ್ತಿ” ಎಂದು ನಮೂದಿಸಿದೆ.

ಕೇದಾರನಾಥಸ್ವಾಮಿ ದೇವಸ್ಥಾನ-ಬಳ್ಳಿಗಾವಿಯಲ್ಲಿರುವ ವೀರಗಲ್ಲು

ಕ್ರಿ. ಶ. 1156 ರಿಂದ ಕ್ರಿ. ಶ. 1168 ರ ವರೆಗೆ ಅಲ್ಪ ಕಾಲದವರೆಗೆ ಸ್ವತಂತ್ರವಾಗಿ ರಾಜ್ಯಭಾರ ಮಾಡಿದ ಇಮ್ಮಡಿ ಬಿಜ್ಜಳನಿಗೆ ಹೊಯ್ಸಳರ ಅರಸ ಒಂದನೆ ನರಸಿಂಹ ಮತ್ತು ಉಚ್ಚಂಗಿಯ ಪಾಂಡ್ಯರಿಂದ ಬಹಳಷ್ಟು ಪ್ರತಿರೋಧವಿತ್ತು. ಅದರಂತೆ ಸೇವುಣರು ಮತ್ತು ಚೋಳರ ಕಾಟವನ್ನೂ ಸಹ ಎದುರಿಸಬೇಕಾಯಿತು.

ಇದೇ ಕಾಲಘಟ್ಟದಲ್ಲಿ ಇಮ್ಮಡಿ ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಗಳಾಗಿದ್ದಂಥ ಬಸವಣ್ಣನವರಿಂದ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯುಂಟಾಗಿ “ಲಿಂಗಾಯತ” ಎನ್ನುವ ಧರ್ಮದ ಸ್ಥಾಪನೆಗೆ ನಾಂದಿಯಾಯಿತು. ಇಂಥ ಸಂಕ್ರಮಣ ಕಾಲಘಟ್ಟದಲ್ಲಿ ಕ್ರಿ. ಶ. 1167 ರಲ್ಲಿ ಮಗನಾದ ಸೋಮ (ಸೋವಿದೇವ) ನಿಗೆ ಪಟ್ಟಗಟ್ಟುತ್ತಾನೆ. ಆದರೂ ಕುಟುಂಬದ ಒಳಜಗಳದಿಂದ ಸಂಘರ್ಷವುಂಟಾಗಿ ಕ್ರಿ. ಶ. 1168 ರಲ್ಲಿ ಇಮ್ಮಡಿ ಬಿಜ್ಜಳನ ಕೊಲೆ ಆಗುವುದರ ಮೂಲಕ ಈತನ ಆಳ್ವಿಕೆ ಕೊನೆಗೊಳ್ಳುತ್ತದೆ.

5. ಸೋಮ (ಸೋವಿದೇವ) (ಕ್ರಿ. ಶ. 1167 – 1176) :
ಕುಟುಂಬದಲ್ಲಿ ಒಳಜಗಳ ಮತ್ತು ಸಂಚುಗಳಿಂದ ಬೇಸತ್ತಿದ್ದ ಇಮ್ಮಡಿ ಬಿಜ್ಜಳ ಮಗನಾದ ಸೋಮ (ಸೋವಿದೇವ) ನಿಗೆ ಕ್ರಿ. ಶ. 1167 ರಲ್ಲಿ ಪಟ್ಟಾಭಿಷೇಕ ಮಾಡುತ್ತಾನೆ. ಈತನ ಆಡಳಿತದಲ್ಲಿ ಬಹಳಷ್ಟು ಮೂಲಗಳಿಂದ ಕಿರಿಕುಳ ಮತ್ತು ಸುತ್ತಮುತ್ತಲಿನ ಇತರ ಸಾಮ್ರಾಜ್ಯಗಳಿಂದ ಪ್ರತಿರೋಧವಿದ್ದರೂ ಸಹ ಕ್ರಿ. ಶ. 1176 ರವರೆಗೆ ರಾಜ್ಯವನ್ನು ಮುನ್ನಡೆಸುತ್ತಾನೆ.

6. ಮಲ್ಲುಗಿ (ಕ್ರಿ. ಶ. 1176) :
ಸೋಮ (ಸೋವಿದೇವ) ನನ್ನು ಕೆಳಗಿಳಿಸಿ ಸಿಂಹಾಸನವನ್ನು ಏರಿದವನು ಈತನ ತಮ್ಮ ಮಲ್ಲುಗಿ. ಆದರೆ ಕೆಲವೇ ಕೆಲವು ದಿನಗಳಲ್ಲಿ ಸಿಂಹಾಸನವನ್ನು ಏರಿದ ಹಾಗೆಯೇ ಸಿಂಹಾನದಿಂದ ಕೆಳಗಿಳಿದನು.

7. ಸಂಕಮ (ಕ್ರಿ. ಶ. 1176 – 1180) :
ಮಲ್ಲುಗಿಯನ್ನು ಕೆಳಗಿಳಿಸಿ ಸಿಂಹಾಸನವನ್ನು ಏರಿದವನು ಈತನ ತಮ್ಮ ಸಂಕಮ. ಈತ ಕ್ರಿ. ಶ. 1180 ರ ವರೆಗೆ ಆಡಳಿತ ಮಾಡುತ್ತಾನೆ.

8. ಅಹಾವಮಲ್ಲ (ಕ್ರಿ. ಶ. 1180 – 1183) :
ಸಂಕಮನ್ನು ಕೆಳಗಿಳಿಸಿ ಸಿಂಹಾಸನವನ್ನು ಏರಿದವನು ಈತನ ತಮ್ಮ ಅಹಾವಮಲ್ಲ. ಈತ ಕ್ರಿ. ಶ. 1183 ರ ವರೆಗೆ ಆಡಳಿತ ಮಾಡುತ್ತಾನೆ.

9. ಸಿಂಘಣ (ಕ್ರಿ. ಶ. 1183 – 1184) :
ಕ್ರಿ. ಶ. 1183 ರಲ್ಲಿ ಸಿಂಹಾನವನ್ನೇರಿದ ಸಿಂಘಣನ ಕಾಲಘಟ್ಟದಲ್ಲಿ ಕಳಚೂರಿಯವರ ಸಾಮ್ರಾಜ್ಯವು ಬಹಳಷ್ಟು ಶಿಥಿಲಗೊಂಡು ಅವಸಾನದ ಹಂತ ತಲುಪಿತ್ತು. ಪಶ್ಚಿಮ ಚಾಲುಕ್ಯರ ಆಕ್ರಮಣ ದಿನದಿಂದ ದಿನಕ್ಕೆ ಹೆಚ್ಚುತ್ತಲಿತ್ತು. ಹಾಗಾಗಿ ಸಿಂಘಣ ಕೇವಲ ಒಂದೇ ವರ್ಷದಲ್ಲಿ ಸಿಂಹಾಸನವನ್ನು ಬಿಟ್ಟಿಕೊಡಬೇಕಾಗಿ ಬಂತು.

10. ಮೂರನೆ ವೀರಬಿಜ್ಜಳ (ಕ್ರಿ. ಶ. 1184 – 1193) :
ಕಳಚೂರಿಯವರ ಸಾಮ್ರಾಜ್ಯದ ಕೊನೆಯ ರಾಜ ಮೂರನೆ ಬಿಜ್ಜಳ. ಪಶ್ಚಿಮ ಚಾಲುಕ್ಯರು ಆಕ್ರಮಣ ಮಾಡಿ ಕಳಚೂರಿ ರಾಜ್ಯವನ್ನು ವಶಪಡಿಸಿಕೊಳ್ಳುವುದರ ಮೂಲಕ ಅತ್ಯಲ್ಪ ಕಾಲ ಮಿಂಚಿ ಮರೆಯಾಗಿ ಇತಿಹಾಸದಲ್ಲಿ ಸೇರಿ ಹೋಯಿತು.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಲ್ಪ ಕಾಲ ಮಿಂಚಿ ಮರೆಯಾಗಿ ಇತಿಹಾಸದ ಗರ್ಭದಲ್ಲಿ ಸೇರಿಹೋದ ಕಳಚೂರಿ ರಾಜ್ಯವನ್ನು ಇಂದಿಗೂ ನಾವು ನೆನಪಿಸಿಕೊಳ್ಳುತ್ತೇವೆ ಎಂದರೆ ಅದಕ್ಕೆ ಇವರ ಕಾಲಘಟ್ಟದಲ್ಲಿ ಬಸವಣ್ಣನವರು ಕೈಗೊಂಡ ಐತಿಹಾಸಿಕ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯೇ ಕಾರಣ. ವೈದಿಕರು ಮತ್ತು ಬ್ರಾಹ್ಮಣರ ಶ್ರೇಣೀಕೃತ ಸಾಮಾಜಿಕ ಅವ್ಯವಸ್ಥೆಯಿಂದ ಕೀಳು ವರ್ಗದ ಜನರನ್ನು ಶೋಷಿವುದನ್ನು ನೋಡಿ ರೋಸಿ ಹೋಗಿದ್ದ ಬಸವಣ್ಣನವರು “ಲಿಂಗಾಯತ” ಎನ್ನುವ ಸಾಮಾಜಿಕ ಸಮಾನತೆಯನ್ನು ಸಾರುವ ಸಮಾಜವನ್ನು ಕಟ್ಟಿದರು. ಈ ಕ್ರಾಂತಿಯಲ್ಲಿ ಹೊರಹೊಮ್ಮಿದ ಲಿಂಗ ಸಮಾನತೆ ಪ್ರಪಂಚದಲ್ಲಿಯೇ ಅದ್ಭುತ ಕ್ರಾಂತಿ. ವಚನ ಸಾಹಿತ್ಯವೆಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಪ್ರಚಲಿತಗೊಳಿಸಿ ಅದಕ್ಕೆ ವಿಶ್ವಮಾನ್ಯತೆಯನ್ನು ತಂದು ಕೊಟ್ಟಂಥ ಕೀರ್ತಿ ಈ ಕಾಲಘಟ್ಟದಲ್ಲಿದಂಥಾ ಶರಣರಿಗೆ ಸಲ್ಲುತ್ತದೆ. ಬಸವಣ್ಣನವರ ಈ ಕ್ರಾಂತಿಗೆ ಇಮ್ಮಡಿ ಬಿಜ್ಜಳನು ಪ್ರತಿರೋಧ ಮಾಡಿದ್ದರಿಂದ ಐತಿಹಾಸಿಕ ಕ್ರಾಂತಿಯನ್ನು ಹತ್ತಿಕ್ಕುವ ಮತ್ತೊಂದು ಕುಟಿಲ ಕಾರಸ್ಥಾನ ಪ್ರಪಂಚದ ಇತಿಹಾಸದಲ್ಲಿ ದಾಖಲಾಯಿತು.

ಇದಲ್ಲದೆ ವಿರೂಪಾಕ್ಷ ಪಂಡಿತನು ಬರೆದ “ಚೆನ್ನಬಸವ ಪುರಾಣ”, ಧರಣಿ ಪಂಡಿತನು ಬರೆದ “ಬಿಜ್ಜಳರಾಯ ಚರಿತೆ” ಮತ್ತು ಚಂದ್ರಸಾಗರ ವರ್ಣಿ ಬರೆದ “ಬಿಜ್ಜಳರಾಯ ಪುರಾಣ” ಗಳು ಈ ಕಾಲಘಟ್ಟದ ಅಪೂರ್ವ ಕಾವ್ಯ ಸಂಗ್ರಹಗಳು.

ಕಳಚೂರಿಯವರ ಆಡಳಿತದುದ್ದಕ್ಕೂ ಅನೇಕ ಮೂಲೆಗಳಿಂದ ದಾಳಿಗಳಿಂದ ಮತ್ತು ತಮ್ಮದೇ ಕೌಟುಂಬಿಕ ಈರ್ಷೆಗಳಿಂದ ಒಟ್ಟಾರೆ ಪ್ರಜೆಗಳ ಹಿತ ಕಾಯುವಲ್ಲಿ ಎಡವಿದರು ಎಂದು ಹೇಳಬಹುದು. ಆದರೂ ಆರ್ಥಿಕ ದೃಷ್ಟಿಯಿಂದ ಕಳಚೂರಿ ರಾಜರುಗಳು ಅದೃಷ್ಟವಂತರೆಂದು ಕಾಣುತ್ತದೆ. ಸೋಮ (ಸೋವಿದೇವವ) ನ ಕಾಲದಲ್ಲಿ ಟಂಕಿಸಿದ್ದವು ಎನ್ನಲಾದ ಬಂಗಾರದ ನಾಣ್ಯಗಳು ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಸಿಕ್ಕರುವದು ಇದನ್ನು ಪುಷ್ಠೀಕರಿಸುತ್ತವೆ. ಈ ನಾಣ್ಯದ ಒಂದು ಭಾಗದಲ್ಲಿ ಕನ್ನಡದಲ್ಲಿ “ಬಸವಣ್ಣ ಭಟರು” ಎಂದು ಮುದ್ರಿಸಲಾಗಿದೆ. ಇನ್ನೊಂದು ಭಾಗದಲ್ಲಿ “ಕಳಚೂರಿ” ಎಂದು ಮುದ್ರಿಸಲಾಗಿದೆ.

 

ವಿಜಯಕುಮಾರ ಕಮ್ಮಾರ
ತುಮಕೂರು – 
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com

Don`t copy text!