e-ಸುದ್ದಿ, ಮಸ್ಕಿ
ಎರಡನೇ ಶ್ರೀಶೈಲ ಎಂದೇ ಪ್ರಸಿದ್ದಿ ಪಡೆದ ಪಟ್ಟಣದ ಮಲ್ಲಿಕರ್ಜುನ ದೇವರ ಮಹಾರಥೋತ್ಸವ ಫೆ.27 ಶನಿವಾರ ಸಂಜೆ 4-30 ರಿಂದ 5-10 ಕ್ಕೆ ಸಲ್ಲುವ ಅಮೃತ ಮಹೋತ್ಸವದಲ್ಲಿ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಥೋತ್ಸವ ನಿಮಿತ್ಯ ಬೆಟ್ಟದ ಕೆಳಗೆ ಇರುವ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರ ನೇತೃತ್ವದಲ್ಲಿ ಜರುಗಲಿವೆ.
ಎಲಿಗಾರ ಮನೆತನದವರು ರಥಕ್ಕೆ ಎಣ್ಣೆ ಸಮರ್ಪಣೆ ಮಾಡಿದ ನಂತರ ರಥವನ್ನು ಟೆಂಗಿನ ಗರಿ, ಜೋಳ, ಸಜ್ಜಿಯ ತೆನೆ, ಪಠ ಕಟ್ಟಿ ಹೂವಿನ ಅಲಂಕಾರ ಮಾಡಿ ಶೃಂಗರಿಸುತ್ತಾರೆ. ಸಂಜೆ 4 ಗಂಟೆಗೆ ಕಳಸಾರೋಹಣ ನೆರವೇರುವದು. ನಂತರ ಸಕಲ ವಾಧ್ಯಗಳೊಂದಿಗೆ ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರನ್ನು ರಥೋತ್ಸವ ಸ್ಥಳಕ್ಕೆ ಕರೆತರಲಾಗುತ್ತದೆ. ಬೆಲ್ಲದಮರಡಿಯ ದೇಸಾಯಿ ಮನೆತನದವರು ಕಂಬಳಿ ಹೊದ್ದುಕೊಂಡು ಬಂದು ರಥೋತ್ಸವದಲ್ಲಿ ಪಾಲ್ಗೋಳುವರು.
4-30 ಕ್ಕೆ ಜರುಗುವ ಮಲ್ಲಿಕಾರ್ಜುನ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ರಥ ಎಳೆದು ಪುನಿತರಾಗುತ್ತಾರೆ. ಕಳೆದ ನಾಲ್ಕು ದಿನಗಳಿಂದ ವಿವಿದ ರೀತಿಯ ಪೂಜಾ ಕಾರ್ಯಕ್ರಮಗಳು ಜರುಗಿವೆ. ಕಾರ್ಯಕ್ರಮ ಯಶಸ್ವಿಯಾಗಲೆಂದು ಧ್ವಜಾರೋಹಣ, ಪಲ್ಲಕ್ಕಿ ಸೇವಾ, ಕಳಸದ ಮೆರವಣಿಗೆ ನಡೆದಿವೆ.