e-ಸುದ್ದಿ, ಮಸ್ಕಿ
ಎರಡನೇ ಶ್ರೀಶೈಲ ಎಂದೇ ಪ್ರಸಿದ್ದಿ ಪಡೆದ ಪಟ್ಟಣದ ಮಲ್ಲಿಕರ್ಜುನ ದೇವರ ಮಹಾ ರಥೋತ್ಸವ ಶನಿವಾರ ಸವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಸಂಜೆ 4-30 ಕ್ಕೆ ಗಚ್ಚಿನ ಹಿರೇಮಟದ ವರರುದ್ರಮುನಿ ಶಿವಾಚಾರ್ಯರ ಸ್ವಾಮೀಜಿ ನೇತೃತ್ವದಲ್ಲಿ ಮಹಾ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಲ್ಲಿಕಾರ್ಜುನ ವಿಗ್ರಹ ಹೊತ್ತ ಪಲ್ಲಕ್ಕಿಯನ್ನು ರಥದ ಸುತ್ತ ಪ್ರದಕ್ಷಣೆ ಹಾಕಿದ ಮೇಲೆ ಸೇರಿದ್ದ ಭಕ್ತರ ಜಯಘೋಷಗಳ ನಡುವೆ ಉತ್ಸವ ಮೂರ್ತಿಯನ್ನು ರಥದ ಮೇಲೆ ಪ್ರತಿಷ್ಠಾಪಿಸಲಾಯಿತು.
ಈಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ರಥದ ಮಿಣಿ ಹಿಡಿದು ರಥ ಎಳೆದು ಪುನಿತಭಾವ ತಾಳಿದರು. ರಥಕ್ಕೆ ಉತ್ತುತ್ತಿ, ಬಾಳೆಹಣ್ಣು ಎಸೇದು ಭಕ್ತಿ ಸಮರ್ಪಿಸಿದರು.
ಮಲ್ಲಿಕಾರ್ಜುನ ದೇವಸ್ಥಾನದಿಂದ ದಯವದ ಕಟ್ಟೆವರೆಗೆ ರಥ ಎಳೆದು ವಾಪಾಸು ದೇವಸ್ಥಾನಕ್ಕೆ ತರಲಾಯಿತು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಬಸನಗೌಡ ಪಾಟೀಲ, ತಾ.ಪಂ.ಅಧ್ಯಕ್ಷ ಶಿವಣ್ಣ ನಾಯಕ ಸೇರಿದಂತೆ ಗ್ರಾಮದ ಮುಖಂಡರು ಆಗಮಿಸಿದ್ದರು.
ಶನಿವಾರ ಬೆಳಿಗ್ಗೆ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಲ್ಲಿಕಾರ್ಜುನ ದೇವರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನಡೆದಿದ್ದವು.