ಸಂತೆ ಕೆಲ್ಲೂರು ಶ್ರೀ ಘನಮಠ ನಾಗಭೂಷಣ ಶಿವಯೋಗಿಗಳು

ಸಂತೆ ಕೆಲ್ಲೂರು ಶ್ರೀ ಘನಮಠ ನಾಗಭೂಷಣ ಶಿವಯೋಗಿಗಳು

ಜಗತ್ತಿನ ಎಲ್ಲಾ ಕಾಲದಲ್ಲಿ ಎಲ್ಲಾ ದೇಶಗಳಲ್ಲಿ ಶರಣರು ಸಂತರು ಆಗಿ ಹೋಗಿದ್ದಾರೆ.ಅಂತೆಯೇ ಪರಶಿವ ಸ್ವರೂಪಿಗಳಾದ ಶರಣರ ಮಾರ್ಗ ಸರಳ ಮತ್ತು ನೇರ ವಾದದ್ದು . ಇಲ್ಲಿಜಾತಿ ಮತ ಪಂಥಗಳ ಕಡಿವಾಣವಿಲ್ಲ.ಉಚ್ಚ ನೀಚ ತಾರತ ಮ್ಯಗಳಿಲ್ಲ.ಧರ್ಮ ಸಾಧನೆಯ ಪ್ರಮುಖ ಉದ್ದೇಶ ಹೊಂದಿದ ಶರಣರು ಚಿತ್ತ ಶುದ್ದ ತೆಯಿಂದ ಶಿವನ ಉಪಾಸನೆ ಮಾಡ ಬೇಕೆಂದು ವ್ಯಾಖ್ಯಾನಿಸಿದರು.ಹೀಗಾಗಿ ಯಾರು ಅಂತರಂಗ ಶುದ್ದತೆಯಿಂದ ಆನಂದಮಯ ಭಕ್ತಿಯನ್ನು ಸ್ವೀಕರಿಸುತ್ತಾನೋ ಅವನೇ ಶರಣ.
ಪರಶಿವನಲ್ಲಿ ಕಾಣುವ ಅಸ್ಮಿತಾ ಸಂವೇಧನೆಗೆ ಶರಣ ಎಂಬ ಶಬ್ದವಿದೆ. ಇದು ಸೃಷ್ಟಿಯ ಪ್ರಥಮ ತತ್ವ. ಶರಣ ಎನ್ನುವ ಪದ ಸಮಸ್ಥವಿಶ್ವದಶ೯ಕ. ಏನೇನು ಇಲ್ಲದ ಪರಮ ಸತ್ಯದಿಂದ ಮೊದಲು ಸ್ಪುರಿಸುವ ಆತ್ಮಿಕ ಸಂವೇಧನೆ ಪರಶಿವ. ಆ ಪರಶಿವನಿಗೆ ಶರಣ ಎನ್ನುವ ಪದ ಬಳಕೆಯಲ್ಲಿದೆ.ಏನೂ ಇಲ್ಲದ ವಸ್ತುವಿನಿಂದ ಉದಯಿಸಿದವನು ಶರಣನಾಗಿದ್ದಾನೆ.

*ಘನಮಠರ ಜೀವನ, ಸಾಧನೆ ಮತ್ತು ಅವರ ವ್ಯಕ್ತಿತ್ವ:*

ಕನ್ನಡ ನಾಡಿನ ಶರಣ ಮನಸ್ಸುಗಳ ಹೆಮ್ಮೆಯ ಗುರುಗಳಾಗಿರುವ ಘನಮಠ ನಾಗಭೂಷಣರು ಘನಮಠದಪ್ಪಗಳೆಂದೇ ಪ್ರಸಿದ್ದಿ ಪಡೆದಿದ್ದಾರೆ. ಇವರು ಹುಟ್ಟಿದ್ದು ಕರ್ನಾಟಕ ದಲ್ಲಲ್ಲ.ಆಂದ್ರ ಪ್ರದೇಶದ ಅತ್ರಾಫ್ ಬಲ್ದಾ ಜಿಲ್ಲೆಯ ಪಟ್ಲೂರು ತಾಲ್ಲೂಕಿನ ದೋರ್ವಾಡ ವೆಂಬ ಚಿಕ್ಕ ಹಳ್ಳಿಯಲ್ಲಿ ..ಶ್ರೀ ವೀರಯ್ಯ ಶ್ರೀಮತಿ ವೀರಮ್ಮ ಎಂಬ ಜಂಗಮ ದಂಪತಿಗಳಿಗೆ ಕ್ರಿ. ಶ.೧೮೨೮ ರಲ್ಲಿ ವಿರೋಧಿನಾಮ ಸಂವತ್ಸರ ಆಶ್ವೀಜ ಶುದ್ದ ಪಂಚಮಿ ಮಂಗಳವಾರದಂದು ಶ್ರೀ ನಾಗಭೂಷಣರು ಜನ್ಮಿಸಿದರು.ದೋರ್ವಾಡ ಗ್ರಾಮದಲ್ಲಿ ಕೆಲವು ಲಿಂಗಾಯತ ಕುಟುಂಬ ಗಳಿದ್ದು ಅವರ ಮಾತೃಭಾಷೆ ತೆಲುಗಾಗಿತ್ತು. ಊರಿನ ಈ ಪೆದ್ದಮಠಕ್ಕೆ ಕೃಷಿಕ ಭಕ್ತರು ಬರುತ್ತಿದ್ದರು. ಈ ಪೆದ್ದಮಠವೆ ಕನ್ನಡದಲ್ಲಿ ಘನಮಠವಾಗಿರ ಬೇಕೆಂದು ನನ್ನ ಸಮರ್ಥನೆಯಾಗಿದೆ.ಕನ್ನಡದಲ್ಲಿ ಘನವೆಂದರೆ ಹಿರಿದುಗಟ್ಟಿ .ತೆಲುಗು ಭಾಷೆಯಲ್ಲಿ ಪೆದ್ದ…/ಪೆದ್ದಮಠ ವಾಗಿದೆ ಎಂದು ಸಮರ್ಥಿಸ ಬಹುದು ಪೆದ್ದಮಠಕ್ಕೆ ವೀರಯ್ಯನವರ ಮನೆಗುರುಗಳಾದ ಚೆನ್ನವೀರ ಶಿವಾಚಾರರು ಬರುತ್ತಿದ್ದರು. ಇವರಿಂದಲೇ ನಾಗಭೂಷಣರಿಗೆ ಶಿವ ದೀಕ್ಷೆ ಕೊಡಿಸಿದರು.ಬಾಲ್ಯದಲ್ಲಿಯೇ ಧರ್ಮ ತತ್ವಜ್ಞಾನ ಶಿವ ಜ್ಞಾನ ಶರಣರ ಸಾಹಿತ್ಯ ಸಂಗೀತ ಕೃಷಿ ಕುರಿತಾದ ಜ್ಞಾನವನ್ನು ಸಂಪಾದಿಸಿದರು. ತಂದೆ ತಾಯಿಯರ ಬಲವಂತಕ್ಕೆ ಸಂಗಮ್ಮ ಎಂಬ ಕನ್ಯೆಯ ಜೊತೆ ವಿವಾಹವಾದರು. ಗಿರಿಜ ಎನ್ನುವ ಮಗಳು ಇವರಿಗಿದ್ದಳು. ಮುಂದೆ ಹೆಂಡತಿ ಮಗಳ ಪ್ರಸ್ತಾಪ ಎಲ್ಲಿಯೂ ಬರುವುದಿಲ್ಲ. ಅಭ್ಯಾಸಕ್ಕೆ ಬದ್ದರಾಗಿ ತೆಲುಗು ಕವಿ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣದಿಂದ ಪ್ರೇರಿತರಾಗಿ ಮಠದ ಪರಿಸರದಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಪಡೆದರು. ಅನುಭಾವ ಮಾರ್ಗದ ಮುಖ್ಯ ದಾಶ೯ನಿಕ ಬಸವಣ್ಣ ಘನಮಠರಿಗೆ ವಚನ ಧರ್ಮದ ಆದಶ೯ ನಾಯಕನಾಗಿದ್ದ.

ಮದುವೆಯ ನಂತರ ಗಂಡ ಹೇಂಡಿರ ನಡುವೆ ವಿರಸವಾಗಿ ಮನೆಬಿಟ್ಟು ಊರೂರು ಅಲೆ ಯುತ್ತಾರೆ. ಮೆಂದೆ ತಮ್ಮ ೨೧ ನೇ ವಯಸ್ಸಿನಲ್ಲಿ ಕನಾ೯ಟಕಕ್ಕೆ ಬರುತ್ತಾರೆ. ಕಲ್ಯಾಣದ ಸುತ್ತ ಮುತ್ತಲಿನ ಕಲ್ಬುರ್ಗಿ ಬಿಜಾಪುರ ರಾಯಚೂರು ಜಿಲ್ಲೆಗಳಲ್ಲಿಯೇ ಹೆಚ್ಚಾಗಿ ಸಂಚರಿಸುವರು. ಬಸವ ಪುರಾಣದಿಂದ ಪ್ರೇರಿತರಾಗಿ ಬಸವ ಸಂದೇಶದ ಹಂಬಲವ ಹೊತ್ತು ಕನ್ನಡ ಕಲಿ ಯುವ ಗುರುವಿಗಾಗಿ ಹುಡುಕುತ್ತಾರೆ. ಘನಮಠರು ನಡೆ ದಾಡಿದ ಪರಿಸರವೆಲ್ಲಾ ಸಮಸ್ತ ಪವಿತ್ರ ದಶ೯ನವಾಗಿದೆ.ತಮ್ಮ ಭಕ್ತ ವೃಂದಕ್ಕೋಸ್ಕರ ಭೋಗದ ಆಶೆಗಳನ್ನು ತ್ಯಜಿಸಿ ಲಿಂಗಾಯತ ಧರ್ಮಕ್ಕೆ ಶರಣಾಗುತ್ತಾರೆ. ಭಕ್ತಿ ಮಾರ್ಗದ ಭಾವುಕ ಮನದಿಂದ ಯಲಗೋಡಿಗೆ ಬರುತ್ತಾರೆ.ಯಲಗೋಡಿನ ರೇವಣ ಸಿದ್ದಪ್ಪ ಹಿರೇಮಠರ ಸಾಮಿಪ್ಯದಲ್ಲಿ ಕನ್ನಡ ಕಲಿಯುವರು.ಯಲಗೋಡ ಮಠದಲ್ಲಿ ಶರಣರ ವಚಣಗಳನ್ನು ದೈವಾನುಭೂತಿಯಿಂದ ಸಂಗೀತದೊಂದಿಗೆ ಹಾಡಲು ಕಲಿತರು.ರೇವಣಸಿದ್ದ ಸ್ವಾಮಿಗಳು ಪ್ರೇಮದಿಂದ ಶಿಷ್ಯನನ್ನು ಆಲಂಗಿಸಿಕೊಂಡು ಶಾಸ್ತ್ರ ಪುರಾಣ ಯೋಗ ಶಾಸ್ತ್ರ ಬಲ್ಲವನಾಗಿರುವ ನೀನು ಪರಿಪೂರ್ಣ ಜ್ಞಾನವನ್ನು ಪಡೆದಿರುವೆ. ಕನ್ನಡದ ನೆಲದಲ್ಲಿ ಶಿವಧರ್ಮವನ್ನು ಸಾರು.ಎಂದು ಆಶೀರ್ವದಿಸಿದರು.ಇವರ ಆಶೀರ್ವಾದವೇ ಬಸವನ ಪಾಯಸ ವೆಂದು ಲೋಕ ಸಂಚಾರದಲ್ಲಿ ತಮ್ಮನ್ನು ತೊಡಗಿಸಿ ಕೊಂಡರು..

ಘನಮಠ ಶಿವಯೋಗಿಗಳು ಕನ್ನಡದ ಮೇಲಿನ ಪ್ರೀತಿ ಮಮತೆ ಬಸವಣ್ಣನವರ ಮೇಲಿನ ಭಕ್ತಿ ಇಂದಿಗೂ ಅನುಕರಣೀಯವಾಗಿದೆ. ತೆಲುಗರು ಕನ್ನಡ ಭಾಷೆಯನ್ನು ಕಲಿಯಲು .ಸಾದ್ಯವಾಗಿಸಿದ್ದು ಬಸವಾದಿ ಪ್ರಮಥರ ವಚನಗಳಿಂದ ಎಂದು ಸ್ಪಷ್ಟಪಡಿಸ ಬಹುದು. ಬಸವನ ಸಂದೇಶಗಳನ್ನು ಅನಂದವಾದ ಭಕ್ತಿಯಿಂದ ಸ್ವೀಕರಿಸಿ ಶಿವನಿಗೆ ಶರಣಾದ ಘನಮಠರು ಮುಂದೆ ಸೊನ್ನಲಾಪುರ ಕಲ್ಬುರ್ಗಿ ಬಿಜಾಪುರ ಚಿತ್ರಾಲಿ ಗೂಗಲ್ಲ ಗೋನ್ವಾರ ಸಂಗಮೇಶ್ವರ ತಾಳಿಕೋಟಿ ಬಾಗೇವಾಡಿ ಮುದ್ದೆಬಿಹಾಳ ಮುದಗಲ್ ಲಿಂಗಸುಗೂರ ಚಿಂಚೋಳಿ ನಾರಾಯಣ ಪೇಟೆ ಜಾಲಹಳ್ಳಿ ಹೇರೂರು ರೊಟ್ನಡಗಿ ಬಳ್ಳಾರಿ ಕುಂಟೋಜಿ ತವಡಿಮಟ್ಟು ಬೆಳವಾಡಿ
ಹುನಗುಂದ ಇಳಕಲ್ ಮುದಗಲ್ ನೀರಲಕೇರಿ ಮೊದಲಾದ ಗ್ರಾಮಗಳಿಗೆ ಹೋದ ಉಲ್ಲೇಖ ಗಳು ಸಿಗುತ್ತವೆ. ಘನಮಠರ ಆದ್ಯಾತ್ಮದ ಪ್ರಖರತೆಯು ಶರಣ ಧರ್ಮದ ಅರಿವಿನ ಜ್ಯೋತಿ ಯಾಗಿ ಇಲ್ಲೆಲ್ಲಾ ವ್ಯಾಪಿಸಿದ್ದನ್ನು ಕಾಣಬಹುದು ಅಂದು ನಿರ್ಮಾಣವಾದ ಸಾಮಾಜಿಕ ಧಾರ್ಮಿಕ ವಿಸಂಗತಿಗಳನ್ನು ಪ್ರಶ್ನಿಸುವ ಮೂಲಕ ಜಢ ಸಮಾಜವನ್ನು ನಾಗಭೂಷಣರು ಜಾಗೃತ
ಗೊಳಿಸಿದರು. “ಬಸವಾ ನಿನ್ನ ಸಮಾನ ದೈವದಾರೋ..” ಶಿವನೇ ಬಸವಂ ಬಸವನೆ ಶಿವಂ.ಹರನಿಂದಲಧಿಕ ಸದ್ಗುರು ಬಸವ..೧೮ನೇ ಶತಮಾನದಲ್ಲಿಸಾಮಾಜಿಕ ಧಾರ್ಮಿಕ ಭಕ್ತಿ ಪ್ರಜ್ಞೆಯ ಅನನ್ಯ ಯುಗ ವಾಗಿತ್ತು.ಏಕೆಂದರೆ ಅನುಭಾವಿ ವ್ಯಕ್ತಿತ್ವದಿಂದಲೇ ಜನಸಾಮಾನ್ಯ ರನ್ನುಆಕರ್ಷಿಸಿದಾ ,ನಾಗಭೂಷಣರು ಅಧಿಕಾರ ಸಂಪತ್ತು ಭೋಗವನ್ನು ಖಂಡಿಸಿದರು ಮತ್ತು ಅಂಥ ವ್ಯವಸ್ಥೆಯನ್ನು ತಮ್ಮ ಅನುಭವದಿಂದ ನಿಯಂತ್ರಿಸಿದರು.ಅಂದು ಸಮಾಜ ಪರಕೀಯರ ಆಕ್ರಮಣಕ್ಕೆ ತತ್ತರಿಸಿತ್ತು.ಜಢ ಸಮಾಜ ಚಲನ ಶೀಲತೆಯನ್ನು ಕಳೆದುಕೊಂಡಾಗ ಘನಮಠರ ಸೃಜನ ಮನಸ್ಸು ಹಾಡುಗಳ ಮೂಲಕ ಬಡಿದೆಬ್ಬಿಸುತ್ತಾ ಲೋಕ ಸಂಚಾರ ಮಾಡಿದರು.ಅರಿವಿನ ಹಣತೆ ಆದ್ಯಾತ್ಮ ವಾದಾಗ ಸಮಾಜಕ್ಕೆ ಬೆಳಕು ಕೊಡಲು ಪ್ರಯತ್ನಿಸಿದರು.
ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ಬಸವ ಪುರಾಣದ ಮೆರವಣಿಗೆಯ ಕಾಲಕ್ಕೆ ಅಡ್ಡಿ ಆತಂಕಗಳು ಬಂದಾಗನಿಂತಲ್ಲಿಯೇ “ಬಸವಪೂಣ೯ಸ ಶಿವ ” ಎಂಬ ಹನ್ನೊಂದು ನುಡಿಯ ಶಕ್ತಿಯುತವಾದ ಸ್ತ್ರೋತ್ರವನ್ನು ರಚಿಸಿ ಹಾಡಿದರು.ಅಡ್ದಿ ತಂದೊಡ್ಡಿದವರಿಗೆ ಮತಿಭ್ರಮಣೆಗ್ಯಾಯಿತಂತೆ. ನಂತರ ಘನಮಠ ಶರಣರಿಗೆ ಸನ್ಮಾನಿಸಿ ಎಲ್ಲರೂ ಸೇರಿ ಮೆರವಣಿಗೆಯನ್ನು ಮುಂದುವರಿಸಿದರಂತೆ. ಸೊಲ್ಲಾಪುರದಲ್ಲಿ ಸಿದ್ದಾರಾಮೇಶ್ವರರ ದಶ೯ನಕ್ಕೆ ಹೋದಾಗ ದೇವಾಲಯದ ಪೂಜಾರಿಗಳು ಯಾರೋ ಬೈರಾಗಿ ಎಂದು ತಿಳಿದು ದೇವಾಲಯದ ಕದ ತೆಗೆಯದಿರಲು ಮುಚ್ಚಿದ ಬಾಗಿಲ ಬಳಿಯೇ ನಿಂತು ” ಸಿದ್ದರಾಮ ಹೋ ನಿಜ ಗುರು ಸಿದ್ದರಾಮ ಹೋ” ಎಂದು ೪೧ ನುಡಿಗಳ ಸ್ತ್ರೋತ್ರ್ವನ್ನು ಹಾಡಿ ಸಿದ್ದರಾಮನನ್ನುಒಲಿಸಿ ಕೊಂಡ ಶರಣರು ಇವರು.
ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ವೀರಭದ್ರ ಶಾಸ್ತ್ರಿಗಳು ವಚನ ಸಾಹಿತ್ಯದ ಬಗ್ಗೆ ಅಪಹಾಸ್ಯ ಮಾಡಿದಾಗ ಅವರಿಗೆ ಒಂದು ವ್ಯಾಧಿ ಬಂದಿತು. ವ್ಯಾಧಿ ನಿವಾರಣೆಗಾಗಿ ಘನಮಠರ ಸಲಹೆ ಯಂತೆ ಶಾಸ್ತ್ರಿಗಳು ಪುರಾತನರ ಪುರಾಣವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿ ರೋಗ ಮುಕ್ತ ರಾದರೆಂಬ ಪವಾಡ ಸಾದೃಶ್ಯ ಕಥೆಗಳಿವೆ. ಘನಮಠರು ಭಕ್ತಿಯ ಹಾಡುಗಳ ಮೂಲಕ ಆರೋಗ್ಯ ಪೂಣ೯ ಸಮಾಜವನ್ನು ಕಟ್ಟದರು.. ಆ ಭಾಷೆ ಜನಭಾಷೆಯಾಗಿ” ಶ್ರೀಗುರು ಬಸವನ ಸ್ಮರಿಸಲು ಜನಪದ ವಾಗುವುದು
ನಂಬೋ ಮನುಜವೆಂದು ” ಆಡು ಭಾಷೆಯ ತತ್ವದಲ್ಲಿ ತಮ್ಮನ್ನು ಬಸವ ಧರ್ಮಕ್ಕೆ ಸಾಕ್ಷಾತ್ಕರಿ ಸಿಕೊಂಡರು.ಬಸವ ಬೀಜ ಮಂತ್ರವನ್ನು ಭಕ್ತಿಯ ಶುದ್ದತೆಯಿಂದ ಸಮಾಜಕ್ಕೆ ಸಮರ್ಪಿಸಿದರು. ಘನಮಠರ ಪ್ರಕಾರ ಬಸವಣ್ಣ ಲೌಕಿಕ ವ್ಯಕ್ತಿ ಯಲ್ಲ.ಪಾರಮಾರ್ಥಿಕ ಪಥದ ಅಧಿನಾಯಕ.

*ಘನಮಠರ ತತ್ವಪದಗಳು:*

ಘನಮಠ ನಾಗಭೂಷಣರು ,ಕ್ರಿ. ಶ ೧೮ ನೇ ಶತಮಾನದಲ್ಲಿ ಬದುಕಿದ್ದ ಶರಣ ಅನುಭಾವಿ. ಅಂದು ಎಡೆದೊರೆ ನಾಡು ಪರಕೀಯರದಾಳಿಗೆ ಈಡಾಗಿತ್ತು.ಯುದ್ದದ ನಾಡಿನಲ್ಲಿ ವಿರಕ್ತಿಯನ್ನು ಚಿಗುರಿಸಿದವರು. ವಿರಕ್ತಿಯೊಳಗೆ ಪ್ರಭುತ್ವವನ್ನು ದಿಕ್ಕರಿಸುವ ಸಶಕ್ತತೆ ನೀಡಿದ್ದರು. ಸೂಫಿಗಳು ಯೋಗಿಗಳು ಅನುಭಾವಿಗಳು ಶರಣರು ತತ್ವಪದಕಾರರು ಜನ ಸಮುದಾಯದಲ್ಲಿ ಮೂಡಿಸಿದ ಈ ವಿರಕ್ತಿಯು ವೈರಾಗ್ಯ ಸನ್ಯಾಸ ಎಂಬರ್ಥ ದಲ್ಲಲ್ಲ.ಪ್ರಾಪಂಚಿಕ ಸುಖಗಳ ಮೇಲೆ ಅತಿ ಯಾದ ವ್ಯಾಮೋಹ ವನ್ನು ಇಟ್ಟು ಕೊಳ್ಳದೆ ಬದುಕುವುದು.ಇದೊಂದು ಧಾರಣ ಶಕ್ತಿ. ಲೌಕಿಕವನ್ನು ಮೀರುವ ಅನುಭಾವದ ಕಡೆಗೆ ನಡೆಯುವ ದಾರಿಯಾಗಿದೆ.ಪ್ರಭುತ್ವ ವಾದಿಗಳ ದಾಹದ ಮುಂದೆ ವಿರಕ್ತಿಯ ಮಾರ್ಗ ಪ್ರತಿಕ್ರಿಯೆಯಾಯಿತು.ಅನಾಯಕತ್ವ ಸಾಂಕ್ರಾಮಿಕ ರೋಗ ಅರಾಜಕತೆಗಳಿಂದ ಬೇಸತ್ತ ಜನಸಾಮಾನ್ಯರನ್ನು ಈ ಭಕ್ತಿಯ ನಿಲುವಿಗೆ ಪರಿವರ್ತಿಸುವುದು ಸಾದ್ಯವಾಯಿತು. ಬೇಧವೆಣಿಸದೆ ಬೆರೆತು ಬದುಕುವ ಸರಳ ಮಾರ್ಗವನ್ನು ತಿಳಿಸಿದರು. ಆತಂಕಗೊಂಡ ಮನಸ್ಸಿಗೆ ನೆಮ್ಮದಿಯನ್ನು ನೀಡಲು ಶಕ್ತರಾದರು. ತತ್ವಗಳನ್ನು ಹಾಡುವುದರ ಮೂಲಕ ದುಗುಡ ಗೊಂಡ ಸಮುದಾಯಗಳಲ್ಲಿ ಸಂತಸ ಮೂಡಿ ಸಿದರು.

ಘನಮಠವಾಸ ಅಂಕಿತದಿಂದ ೧೪೭ ಹಾಡುಗಳಿವೆ. ಭಕ್ತಿ ಜ್ಞಾನ ವೈರಾಗ್ಯ ಗಳನ್ನು ಪ್ರತಿ ಬಿಂಬಿಸುವ ಹಾಡುಗಳು ಇವಾಗಿವೆ. ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹಾಡುಗಳು ಘನಮಠರ ಇಷ್ಟವಾದ ದೈವಗುರು ಬಸವೇಶ್ವರನ ಸ್ತುತಿಪರವಾಗಿವೆ.ಕೆಲವು ಧರ್ಮ ಸಾಧಕರಾದ ರೇವಣಸಿದ್ದ.. ಪಂಡಿತರಾಧ್ಯ.ಸಿದ್ದರಾಮ..ತೋಂಟದ ಸಿದ್ದಲಿಂಗರ ಜೀವನ ಕುರಿತು ಹೇಳಲಾಗಿದೆ.ಇನ್ನುಳಿದಂತೆ ಸದ್ಗುರು ಮಹಿಮೆ..ಹರಮಹಿಮೆ.. ಜ್ಞಾನ ಜಂಗಮ ಲೀಲೆಯನ್ನು ನವಿರಾದ ನಿರೂಪಣೆ ಪರಂಪರೆಯ ಜೊತೆಗೆ ದಾಶ೯ನಿಕ ಸಂವಾದಗಳು ಗಮನ ಸೆಳೆಯುತ್ತವೆ. ಘನಮಠರ ಡಾಂಬಿಕ ಭಕ್ತರ ವಿಡಂಬನೆ..

 

ಉಣುವ ಜಂಗಮll ದೇವರೈ ತಂದು ಹಸಿವೆನಲು

ಮುಂದಿನ ಮನೆಗೆ llಹೋಗಿಲ್ಲೇಕೆ ನಿಂತೆಂದು

ಪಳಿಯುತ್ತಾ ಸಕ್ಕರಿ ಕಣಕ llಮುಂತಾದವು ಬಲಿ

ತಂದು ತೀರ್ಥಾರ್ತಿಯೋಳ್ ll ಧಾರುಣಿಯ

ತಿರುಗುತ ಬಳಲಿ llತಾವಂದು ಪರಿಬ್ರಮಿತ

ರಾಗುತ ಕುಣಿತೆವರ್ llಮಣ್ಣುಳ್ಳ ಗರಿ ಕಾನನ

ಹಂಗಳನರಸಿll ಕಷ್ಟದಿ ಉಣದ ಕಲ್ಲಿಗೆ ಅಟ್ಟು

ನೀಡುವ llಬಣಗ ಮಾನವ ಪಶುಗಳಿಗೆ

ಈ ಮೇಲಿನ ತತ್ವಪದ ಹಾಡಿನಲ್ಲಿ ಜಂಗಮತ್ವದ ಸ್ವಾರ್ಥ ಶೋಷಣೆ ಡಂಬಾಚಾರದ ನೆಲೆಯಾಗಿರುವ ಸಂಗತಿಯನ್ನು ತತ್ವಪದಕಾರ ವಿಡಂಬಿಸಿ ತೋರಿಸುತ್ತಾರೆ. ಅದೊಂದು ಆತ್ಮತತ್ವವಾಗದೆ. ಬಿಕ್ಷ ಮತ್ತು ಆಚಾರ ತತ್ವವಾಗಿ ತನ್ನ ಸತ್ವ ಕಳೆದುಕೊಂಡ ಬಗೆಯನ್ನು ಚಚಿ೯ಸುತ್ತಾರೆ. ಇಂತಹ ಕಪಟ ಜಂಗಮರ ವರ್ತನೆಯಿಂದ ಸಮಾಜದ ವಾತಾವರಣ ಹದಗೆಟ್ಟಿತೆಂಬ
ವಿಶಾದವೂ ಕಂಡುಬರುತ್ತದೆ. ಜಂಗಮನ ಆರ್ಥಿಕ ಆಯಾಮ ಧಾರ್ಮಿಕ ವಲಯ ಒಪ್ಪಿಕೊಂಡರೂ ವಚನಕಾರರ ಜಂಗಮತ್ವದ ಆದಶ೯ಗಳು ಇಲ್ಲಿ ಕಂಡು ಬರುವುದಿಲ್ಲ. ಜಂಗಮ ಪಂಗಡದಲ್ಲಿದ್ದ ಗುಂಪುಗಾರಿಕೆ ಸ್ಥಾನದ ಅಹಂ ಜಂಗಮರ ಹೆಸರಿನಲ್ಲಿ ಭಕ್ತರು ನಡೆಸುವ ಕಪಟತನಗಳಿಂದ ರೋಸಿ ಹೋಗಿದ್ದರು.

ಘನಮಠಾಯ೯ರು ನಿಷ್ಠುರವಾಗದಿಗಳು. ಭಕ್ತರಲ್ಲಿ ಅನಾಚಾರ ದುರಾಚಾರಗಳು ಕಂಡು ಬಂದರೆ ಗುರು ವಿರಕ್ತರಲ್ಲಿ ಆಡಂಬರ ಡಂಬಾಚಾರ ಆಶಿಬುರಕತನ ಗೋಚರಿಸಿದರೆ ಸಹನೆ ಮೀರಿ ಕಟೋಕ್ತಿಗಳನ್ನಾಡಿ ದಾರಿಗೆ ತರುತ್ತಿದ್ದರು. “ಎಲ್ಲಿ ಭಕ್ತಿಯದೆಲ್ಲಿ ಮುಕ್ತಿಯದು ಈ ಸೂಳೆ ಮಕ್ಕಳಿಗೆಲ್ಲಿ ಭಕ್ತಿಯದೆಲ್ಲಿ ಮುಕ್ತಿಯದೊ” ಡಂಬಾಚಾರ ಭಕ್ತರ ಕುರಿತು ಎಚ್ಚರಿಸಿದ್ದಾರೆ. ಶ್ರದ್ದೆ ಭಕ್ತಿ ನಿಸ್ವಾರ್ಥ ಸೇವೆಯನ್ನು ಶಿವನಿಗೆ ಅರ್ಪಿಸ ಬೇಕೆಂಬ ಹಿತೋಕ್ತಿಯ ಮಾತು ಗಳನ್ನು ಗಮನಿಸ ಬೇಕು.

*ಕೃಷಿಋಷಿ:*
ರೈತ ಸಮುದಾಯ ಮೌನ ಸಂಸ್ಕ್ರತಿ .ಅನಕ್ಷರಸ್ಥರೇ ಆಗಿದ್ದ ರೈತರು ಬರೆಯುವುದಕ್ಕಿಂತ ಹೆಚ್ಚಾಗಿ ಬದುಕುವುದು ದೊಡ್ಡದೆಂದು ಅರಿತು ಬಾಳಿದವರು. ಮೌಖಿಕ ಪರಂಪರೆಯ ಕೃಷಿ ಸಂಸ್ಕ್ರತಿ ಕುರಿತು ನಮ್ಮಲ್ಲಿ ಅಷ್ಟಾಗಿ ದಾಖಲೆಗಳಿಲ್ಲ. ಘನಮಠರ ಕೃಷಿ ಜ್ಞಾನ ಪ್ರದೀಪಿಕೆ ಯೇ ದಾಖಲಾತಿಯಾಗಿದೆ.ಘನಮಠರ ಕೃಷಿ ಜ್ಞಾನ ಪ್ರದೀಪಿಕೆ ಕೃಷಿ ಧರ್ಮಕ್ಕೆ ಸಂಬಂದಿಸಿದ ಮೇರು ಕೃತಿಯಾಗಿದೆ.

ಶ್ರೀ ಘನಮಠರ ಶಿಷ್ಯನಾದ ಸಿದ್ದರಾಮಪ್ಪ ಕುನ್ನಾಳರ ಮೂಲಕ ಕೃಷಿ ಜ್ಞಾನ ಪ್ರದೀಪಿಕೆಯನ್ನು ಶ್ರೀಗಳು ಬರೆಯಿಸಿದರು ಎಂಬ ಮಾಹಿತಿ ಇದೆ.ಇವರು ಸಿಂಧಗಿ ತಾಲ್ಲೂಕಿನ ಚಿಕ್ಕನಾಳ ಎಂಬ ಗ್ರಾಮದವರು. ಘನಮಠಾಯ೯ರು ಶರಣ ಧರ್ಮ ಪ್ರಚಾರ ಮಾಡುತ್ತಾದೇಶಚಂಚಾರಿಗಳಾಗಿ ಹುನುಗುಂದಕ್ಕೆ ಬಂದಾಗ ಸಿದ್ದರಾಮಪ್ಪನನ್ನು ಶಿಷ್ಯನಾಗಿ ಸ್ವೀಕರಿಸುತ್ತಾರೆ. ತಾವು ಲೋಕದ ಜನರ ಉದ್ದಾರಕ್ಕಾಗಿ ಬೋಧಿಸಿದ ಕೃಷಿ ಜ್ಞಾನವನ್ನು ಅದಕ್ಕೆ ಹೊಂದಿಸಿ ಹೇಳಿ ಆತ್ಮ ಜ್ಞಾನವನ್ನು ಸಿದ್ದರಾಮಪ್ಪನಿಗೆ ಬರೆಯಲು ಪ್ರೇರೇಪಿಸುತ್ತಿದ್ದರು.ಆತ ಬರೆದು ಕೊಟೃದ್ದನ್ನು ನಂತರ ಶಿವಯೋಗಿಗಳು ತಿದ್ದಿ ಸರಿ ಪಡಿಸಿದರು ಎನ್ನುವ ಹೇಳಿಕೆ ಇದೆ. ಕೃಷಿ ಜ್ಞಾನ ಪ್ರದೀಪಿಕೆಯಲ್ಲಿ ಎರಡು ಭಾಗಗಳಿವೆ.
೧. ಒಕ್ಕಲುತನಕ್ಕೆ ಸಂಬಂದಿಸಿದ ಭೂಮಿ ಬೆಳೆ ಮುಂತಾದ ಕೃಷಿ ಜ್ಞಾನ ಕುರಿತುವಿಸ್ತಾರತೆ ಇದೆ.
೨. ಶರಣ ಧರ್ಮ ತತ್ವಗಳಿಗೆ ಹೇಳಿದ್ದು ಚಿತ್ತಾ ಕರ್ಷವಾಗಿದೆ. ಮನವೆಂಬ ಭೂಮಿಯಲ್ಲಿ ಭಕ್ತಿ ವೈರಾಗ್ಯಗಳನ್ನು ಹೇಗೆ ಬಿತ್ತಿ ಬೆಳೆಯಬೇಕು ಎಂಬುದನ್ನು ಲೌಕಿಕ ಕೃಷಿಗೆ ಹೋಲಿಸಿ ಘನಮಠಾಯ೯ರು ಮಾರ್ಮಿಕವಾಗಿ ಹೇಳಿದ್ದಾರೆ.ಇದು ಅವರ ಜನಹಿತ ಚಿಂತನೆಯ ಉನ್ನತ ವಿಚಾರಗಳನ್ನು ಬಿಂಬಿಸುವ ಪ್ರತಿಬಿಂಬವಾಗಿದೆ.ಸಿದ್ದರಾಮಪ್ಪನು ತನ್ನ ಗುರುವಿನ ವ್ಯಕ್ತಿಚಿತ್ರಣವನ್ನು ಶ್ರೀಗಳು ಮಾಡಿದ ಮಹತ್ಕಾರ್ಯವನ್ನು ಕೂಲಂಕುಷವಾಗಿ ವಿವರ ಕೊಟ್ಟಿದ್ದಾನೆ. ಇದು ಲೌಕಿಕ ಕೃಷಿಗೆ ಕೈ ದೀವಿಗೆಯಾದಂತೆ ಆಧ್ಯಾತ್ಮಿಕ ಕೃಷಿ ತೊಡಗಿದವರಿಗೆ ಮಾರ್ಗದಶಿ೯ ಪುಸ್ತಕ ವಾಗಿದೆ. ಲೌಕಿಕ ಮತ್ತು ಆಧ್ಯಾತ್ಮದ ಸಮನ್ವಯಗಳನ್ನು ಈ ಪುಸ್ತಕದಲ್ಲಿ ಕಾಣಬಹುದು.
ಮಣ್ಣಿನ ರಕ್ಷಣೆ ಉಳುಮೆ ನೀರಿನ ಸದುಪಯೋಗ ತಳಿ ಆಯ್ಕೆ ಮತ್ತು ಬೀಜೋಪಚಾರದ ಮಹತ್ವ ಮಣ್ಣಿನ ಮತ್ತು ಮಣ್ಣಿನಲ್ಲಿರುವ ತೇವಾಂಶದ ರಕ್ಷಣೆಯ ಬಗ್ಗೆ ಈಗಿನ ವೈಜ್ಞಾನಿಕ ಸಂಶೋಧಗಳು ಹೇಳುತ್ತಿರುವುದನ್ನು ಒಂದು ಶತಮಾನದ ಹಿಂದೆಯೇ ಘನಮಠರು ಹೇಳಿದ್ದು ದಾಖಲಾಹ೯ವಾಗಿದೆ.ಗೊಬ್ಬರಗಳನ್ನು ತಯಾರಿಸುವ ವಿಧಾನ ತಳಿ ಆಯ್ಕೆ ಬೀಜೋಪ ಚಾರದ ಮಹತ್ವವನ್ನು ಈ ಪುಸ್ತಕದಲ್ಲು ಕಾಣಬಹುದು.ಕೃಷಿ ಜ್ಞಾನ ಪ್ರದೀಪಿಕೆ ೩೧೨ ಪುಟಗಳನ್ನು ಒಳಗೊಂಡಿದೆ.ಇದುವರೆಗೆ ಈ ಪುಸ್ತಕವು ನಾಲ್ಕು ಮುದ್ರಣಗಳನ್ನು ಕಂಡಿದೆ. ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಗಾದೆಗಳು ಸರ್ವಜ್ಞ ಮತ್ತು ತೆಲುಗಿನ ಕೆಲವು ಹಿತೋಕ್ತಿಗಳನ್ನು ಹೇಳಲಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದ ಶ್ರೀ ಘನಮಠ ನಾಗಭೂಷಣರು ನೆಲೆನಿಂತ ಮಠ ಖ್ಯಾತಿ ಪಡೆದಿದೆ. ಈ ಮಠಇಂದಿಗೂ ಕೃಷಿ ಜ್ಞಾನ ದಾಸೋಹ ಮಾಡುವ ವಿಶೇಷ ಮಠವಾಗಿದೆ.ಪ್ರತಿ ವರ್ಷ ಜಾತ್ರೆಯಲ್ಲಿ ಸೇರುವ ಜನರಿಗೆ ಕೃಷಿ ಸಾಧಕರಿಂದ ಪಾಠ ಹೇಳಿಸಿ ಸಾಧಕರನ್ನು ಸನ್ಮಾನಿಸುತ್ತಾ ಬಂದಿದೆ. ಶಿವತತ್ವ ಬಸವತತ್ವ ಪ್ರಚಾರಕ್ಕಾಗಿ ಮೂವತ್ತು ಮೂವತ್ತೈದು ವರ್ಷಗಳವರೆಗೆ ದುಡಿದ ಘನಮಠ ಶಿವಯೋಗಿಗಳ ಭಾವೋನ್ಮಾದ ತತ್ವಪದಗಳಲ್ಲಿ ಅವರ ಅಂತರಂಗದ ಮಿಡಿತ ಗಳಿವೆ.ಕುಂಟೋಜಿಯಲ್ಲಿ ಅವರ ಪಾದುಕೆಗಳನ್ನು ಸಂತೆಕೆಲ್ಲೂರಿನಲ್ಲು ಈಗಲೂ ಅವರ ಗದ್ದುಗೆಯನ್ನು ಕಾಣಬಹುದು.

ಡಾ.ಸರ್ವಮಂಗಳ ಸಕ್ರಿ,
ಕನ್ನಡ ಉಪನ್ಯಾಸಕರು,
ರಾಯಚೂರು

———-+————————————————————–ಇಂದಿನ ಎಲ್ಲಾ ಪ್ರಕಟನೆಗಳ ಪ್ರಾಯೋಜಕರು

ಬಸವ ಮಂದಾರ ಮೆಡಿಕಲ್‌ & ಜನರಲ್ ಸ್ಟೋರ್ ಮಸ್ಕಿ

One thought on “ಸಂತೆ ಕೆಲ್ಲೂರು ಶ್ರೀ ಘನಮಠ ನಾಗಭೂಷಣ ಶಿವಯೋಗಿಗಳು

Comments are closed.

Don`t copy text!