ದೇವಗಿರಿಯ ಸೇವುಣರು
ದೇವಗಿರಿಯೆಂದು ಕರೆಯಲ್ಪಡುವ ಮಹಾರಾಷ್ಟ್ರದ ಔರಂಗಾಬಾದ ಹತ್ತಿರವಿರುವ ದೌಲತಾಬಾದ ಕೋಟೆ ದೇವಗಿರಿ ಸೇವುಣರ ರಾಜಧಾನಿಯಾಗಿತ್ತು. ಐತಿಹಾಸಿಕವಾಗಿ 6 ನೇ ಶತಮಾನದಿಂದ ಬೆಳೆದು ಬಂದ ಈ ನಗರದ ಸುತ್ತಲೂ ಕ್ರಿ. ಶ. 1187 ರಲ್ಲಿ ತ್ರಿಕೋಣಾಕಾರದಲ್ಲಿ ಸುಭದ್ರ ಕೋಟೆಯನ್ನು ಸೇವುಣರ ಅರಸ ಐದನೇ ಬಿಲ್ಲನ ಕಟ್ಟಿಸಿದನೆಂದು ತಿಳಿದು ಬರುತ್ತದೆ. ಕ್ರಿ. ಶ. 1308 ರಲ್ಲಿ ದೆಹಲಿಯ ಸುಲ್ತಾನ ಅಲ್ಲಾವುದ್ದೀನ ಖಿಲ್ಜಿ ಈ ಕೋಟೆಯ ಮೇಲೆ ಆಕ್ರಮಣ ಮಾಡುತ್ತಾನೆ. ಕ್ರಿ. ಶ. 1327 ರಿಂದ ಕ್ರಿ. ಶ. 1334 ರ ವರೆಗೆ ದೆಹಲಿಯ ಸುಲ್ತಾನ ಮಹಮ್ಮದ್‌ಬಿನ್‌ತುಘಲಕ್‌ದೇವಗಿರಿಯ ಹೆಸರನ್ನು ದೌಲತಾಬಾದ್‌ಎಂದು ನಾಮಕರಣ ಮಾಡಿ ತನ್ನ ರಾಜಧಾನಿಯನ್ನಾಗಿಸಿಕೊಂಡು ಆಡಳಿತ ನಡೆಸುತ್ತಾನೆ. ಆದರೆ ಕ್ರಿ. ಶ. 1334 ರಲ್ಲಿ ಈ ರಾಜಧಾನಿಯನ್ನು ದೆಹಲಿಗೆ ಮತ್ತೆ ವರ್ಗಾಯಿಸುತ್ತಾನೆ. ಇದಕ್ಕಾಗಿ ಇತಿಹಾಸದ ಪುಟಗಳಲ್ಲಿ ಮಹಮ್ಮದ್‌ಬಿನ್‌ತುಘಲಕ್‌ವಿಕ್ಷಿಪ್ತ ರಾಜನೆಂದೇ ಹೆಸರುವಾಸಿಯಾಗುತ್ತಾನೆ.
ದೇವಗಿರಿಯ ಸೇವುಣರು (ಕ್ರಿ. ಶ. 830 – 1334) :
ಕರ್ನಾಟಕವನ್ನು ವೈಭವಯುತವಾಗಿ ಆಳಿದ ಐತಿಹಾಸಿಕ ಸಾಮ್ರಾಜ್ಯಗಳಲ್ಲಿ ಒಂದಾದ ದೇವಗಿರಿಯ ಸೇವುಣರು ಕ್ರಿ. ಶ. 9 ನೇ ಶತಮಾನದಿಂದ ಕ್ರಿ. ಶ. 14 ನೇ ಶತಮಾನದವರೆಗೂ ಆಳಿದವರು. ದೇವಗಿರಿಯ ಯಾದವರು ಎಂದೇ ಪ್ರಸಿದ್ಧಿಯನ್ನು ಪಡೆದಂಥ ವಂಶವನ್ನು ಇತಿಹಾಸ ತಜ್ಞರೂ ಮತ್ತು ಸಂಶೋಧಕರಾದ ಶ್ರೀ ಏ ವಿ ನರಸಿಂಹಮೂರ್ತಿ ಮತ್ತು ಶ್ರೀ ಶ್ರೀನಿವಾಸ ರಿತ್ತಿಯವರ ಅಧ್ಯಯನದಿಂದ ದೇವಗಿರಿಯ ಸೇವುಣರು ಎಂದು ಇತ್ತೀಚಿನ ಕಾಲಘಟ್ಟದಲ್ಲಿ ಸಂಭೋಧಿಸಲಾಗುತ್ತದೆ. ಅದರಂತೆ ಡಾ. ಸಿ ಎಮ್ ಕುಲಕರ್ಣಿಯವರು, ಕಾಲಿನ್ ಮಸೀಕಾರವರು ಹೇಳುವಂತೆ ಸೇವುಣರು ಮೂಲತಃ ಕನ್ನಡಿಗರು ಮತ್ತು ಇವರ ಕಾಲಘಟ್ಟದ ಶಿಲಾಶಾಸನಗಳಲ್ಲಿ ಸಂಸ್ಕೃತದೊಂದಿಗೆ ಕನ್ನಡವನ್ನೂ ಬಳಸಲಾಗಿದೆ.
ರಾಷ್ಟ್ರಕೂಟರ ಸರದಾರರಾಗಿ, ಕಲ್ಯಾಣದ ಚಾಲುಕ್ಯರ ಸಾಮಂತ ಅರಸರಾಗಿ ಮತ್ತು ಸ್ವತಂತ್ರ ಅರಸರಾಗಿ, ಹೀಗೆ ಹಲವಾರು ಏಳು ಬೀಳುಗಳನ್ನು ಕಂಡಂಥ ದೇವಗಿರಿಯ ಸೇವುಣರು ಉತ್ತರ ಕರ್ನಾಟಕ ಮತ್ತು ಮಾಹಾರಾಷ್ಟ್ರದ ಕೆಲ ಭಾಗಗಳನ್ನೂ ಒಳಗೊಂಡಂಥ ಪ್ರದೇಶವನ್ನು ಆಳಿದವರು. ಇತಿಹಾಸದಿಂದ ತಿಳಿದು ಬಂದಂತೆ ಕ್ರಿ.ಶ. 1173 ರಿಂದ ಐದನೇ ಬಿಲ್ಲಮನ ಕಾಲಘಟ್ಟದಿಂದ ಸ್ವತಂತ್ರ ಅರಸರಾಗಿ ಕ್ರಿ.ಶ. 1312 ರವರೆಗೆ ರಾಜ್ಯಭಾರ ನಡೆಸಿದರು. ಶೌರ್ಯ ಪರಾಕ್ರಮಗಳಿಗೆ ಹೆಸರುವಾಸಿಯಾದಂಥ ಐದನೇ ಬಿಲ್ಲಮ ಕಲ್ಯಾಣವನ್ನು ಆಕ್ರಮಿಸಿಕೊಂಡ ನಂತರ ದೇವಗಿರಿಯನ್ನು ರಾಜಧಾನಿಯನ್ನಾಗಿಸಿಕೊಂಡು ಅಲ್ಲಿಯೇ ಅಭೇದ್ಯ ಕೋಟೆಯನ್ನು ನಿರ್ಮಿಸಿದನು. ದೇವಗಿರಿಯ ಕೋಟೆ ಮತ್ತು ನಾಸಿಕ್ ಜಿಲ್ಲೆಯ ಸಿನ್ನರದಲ್ಲಿನ ಗೊಂಡೆಶ್ವರ ದೇವಸ್ಥಾನಗಳು ಸೇವುಣ ದೊರೆಗಳ ಪ್ರಮುಖ ಕೊಡುಗೆಗಳು. ಒಂದು ಕಾಲದಲ್ಲಿ ದೇವಗಿರಿಯ ಸೇವುಣರ ಸಾಮ್ರಾಜ್ಯ ನರ್ಮದಾ ನದಿಯ ತಟದವರೆಗೂ ವಿಸ್ತಾರವಾಗಿದ್ದು ತಿಳಿದು ಬರುತ್ತದೆ. ದೆಹಲಿಯ ಸುಲ್ತಾನ ಅಲ್ಲಾವುದ್ದೀನ್‌ಖಿಲ್ಜಿ ದೇವಗಿರಿಯ ಮೇಲೆ ದಾಳಿ ಮಾಡಿ ತನ್ನ ರಾಜ್ಯಕ್ಕೆ ಸೇರಿಸಿಕೊಂಡಾಗ ಸೇವುಣರ ರಾಜ್ಯ ಕೊನೆಗೊಂಡಿತೆಂದು ತಿಳಿಯುತ್ತದೆ.
ಸೇವುಣರು ಯುದ್ಧದಲ್ಲಿ ಪಾಲ್ಗೊಂಡಿದ್ದು ಮತ್ತು ಗೆಲುವುಗಳನ್ನು ದಾಖಲಿಸಿದ, ಶೈಕ್ಷಣಿಕ, ಆರ್ಥಿಕ ಮತ್ತು ಆಡಳಿತ ನೀತಿಗಳನ್ನು ತಿಳಿಸುವ ಸುಮಾರು 600 ಶಾಸನಗಳು ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಇದೂವರೆಗೂ ಲಭ್ಯವಾಗಿವೆ. ಸಿಕ್ಕಿರುವ ಒಂದು ಶಾಸನದಲ್ಲಿ ಶರಣ ಸಿದ್ಧರಾಮೇಶ್ವರರೊಂದು ವಚನವನ್ನು ಸಂಸ್ಕೃತಕ್ಕೆ ಭಾಷಾಂತರ ಮಾಡಿದ್ದನ್ನು ಕಾಣಬಹುದು. ಇಲ್ಲಿಯವರೆಗು ಸಿಕ್ಕಿರುವ ಐದನೇ ಬಿಲ್ಲಮ, ಇಮ್ಮಡಿ ಸಿಂಘಣ ಮತ್ತು ಮಹಾದೇವರ ಕಾಲದಲ್ಲಿ ಟಂಕಿಸಲಾದವು ಎನ್ನಲಾದ ಚಿನ್ನ ಮತ್ತು ಬೆಳ್ಳಿ ನಾಣ್ಯಗಳಲ್ಲಿ ಕನ್ನಡ ಮತ್ತು ದೇವನಾಗರಿ ಲಿಪಿಯನ್ನು ನೋಡಬಹುದು.
ರಾಷ್ಟ್ರಕೂಟರೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದ್ದ ದೇವಗಿರಿಯ ಸೇವುಣರು ಅವರೊಂದಿಗೆ ವೈವಾಹಿಕ ಸಂಬಂಧಗಳನ್ನೂ ಬೆಸೆದಿದ್ದರೆಂದು ತಿಳಿದು ಬರುತ್ತದೆ. ಇಮ್ಮಡಿ ಬಿಲ್ಲಮನ ಪಟ್ಟದ ರಾಣಿ ರಾಷ್ಟ್ರಕೂಟರ ರಾಜಕುಮಾರಿ ಲಚ್ಚಿಯವ್ವ. ವಡ್ಡಗನ ರಾಣಿ ರಾಷ್ಟ್ರಕೂಟರ ಸೇನಾಧಿಪತಿ ದೋರಪ್ಪನ ಪುತ್ರಿ ವಡ್ಡಿಯವ್ವೆ. ಮುಮ್ಮಡಿ ಬಿಲ್ಲಮ ಮತ್ತು ವೇಸುಗಿಯರ ಪಟ್ಟದ ರಾಣಿಯರು ಚಾಲುಕ್ಯ ವಂಶದ ರಾಜಕುಮಾರಿಯರು. ಹೀಗೆ ರಾಷ್ಟ್ರಕೂಟರೊಂದಿಗೆ ಉತ್ತಮ ಮತ್ತು ಸೌಹಾರ್ದಯುತ ಬೆಸುಗೆಯಿತ್ತೆಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.
ನಾಸಿಕದ ಹತ್ತಿರದ ಅಂಜನೇರಿ ಎಂಬಲ್ಲಿ ದೊರಕಿದ ಶಿಲಾಶಾಸನದ ಪ್ರಕಾರ ಸೇವುಣ ವಂಶದ ಒಂದು ಕಿರು ಶಾಖೆಯು ಅಂಜನೇರಿಯನ್ನು ಮುಖ್ಯ ನಗರವಾಗಿಟ್ಟುಕೊಂಡು, ಸಣ್ಣ ಪ್ರದೇಶವನ್ನು ಆಳುತ್ತಿತ್ತು. ಇದೇ ಶಾಸನವು, ಈ ಸೇವುಣ ವಂಶದ ಸೇವುಣದೇವ ಎಂಬ ರಾಜನು ತನ್ನನ್ನು ಮಹಾಸಾಮಂತ ಎಂದು ಕರೆದುಕೊಂಡಿದ್ದಾಗಿಯೂ, ಜೈನ ದೇವಾಲವೊಂದಕ್ಕೆ ದತ್ತಿ ಬಿಟ್ಟದ್ದಾಗಿಯೂ ಹೇಳುತ್ತದೆ. ಶಿವಾಜಿಯ ತಾಯಿ ಜೀಜಾಬಾಯಿಯು ಯಾದವ ವಂಶಸ್ಥರು ಎಂದು ಕರೆದುಕೊಳ್ಳುತ್ತಿದ್ದ ಸಿಂದಖೇಡ ರಾಜರ ಜಾಧವ ಕುಲಕ್ಕೆ ಸೇರಿದವಳಾಗಿದ್ದಳು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.
ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಪ್ರಾಶಸ್ತ್ಯವನ್ನು ದೇವಗಿರಿಯ ಸೇವುಣರು ನೀಡಿದ್ದರು. ಸಂಗೀತ ಕ್ಷೇತ್ರಕ್ಕೆ ತಳಹದಿಯನ್ನು ಒದಗಿಸಿದ ಮೇರುಕೃತಿ ಹಾಗೂ ಶ್ರೇಷ್ಠ ಗ್ರಂಥ “ಸಂಗೀತ ರತ್ನಾಕರ”. ಇದನ್ನು ರಚಿಸಿದ ಕವಿ ಶಾರಂಗದೇವ ದೇವಗಿರಿಯ ಸೇವುಣರ ದೊರೆ ಇಮ್ಮಡಿ ಸಿಂಘಣ (ಕ್ರಿ.ಶ. 1200-1247) ಕಾಲಘಟ್ಟದಲ್ಲಿದ್ದವರು. ಈ ಗ್ರಂಥದಲ್ಲಿ ಸಂಗೀತದ ಆಯಾಮ ಮತ್ತು ನಿಯಮಗಳನ್ನು ನಿರೂಪಿಸಿ, ಕರ್ನಾಟಕಿ ಸಂಗೀತ ಅಥವಾ ದಕ್ಷಿಣಾದಿ ಸಂಗೀತವೆಂಬ ಪ್ರಾಕಾರ ಸೃಷ್ಟಿಯಾಯಿತೆಂದು ಹೇಳಲಾಗಿದೆ. ಶಾರಂಗದೇವ ರಚಿಸಿದ ಸಂಗೀತ ರತ್ನಾಕರ ಗ್ರಂಥಕ್ಕೆ ಸುಧಾಕರವೆಂಬ ಟೀಕೆಯನ್ನು ಕ್ರಿ. ಶ. 1330 ರಲ್ಲಿದ್ದ ಸಿಂಹಭೂಪಾಲ ಎನ್ನುವ ಕವಿ ಉಲ್ಲೇಖಿಸಿದ್ದಾನೆ. ಕ್ರಿ. ಶ. 1309-1380 ನೆಯ ಕಾಲಘಟ್ಟದಲ್ಲಿದ್ದ ಕರ್ನಾಟಕದ ಸಂಗೀತ ವಿದ್ವಾಂಸ ಮತ್ತು ಮಹಾಮಂಡಲಾಧೀಶ್ವರ ಹರಿಪಾಲದೇವ
ತದಪಿ ದ್ವಿವಿಧಂ ಪ್ರೋಕ್ತಂ | ದಕ್ಷಿಣೋತ್ತರಭೇದತಃ ||
ಕರ್ಣಾಟಕಂ ದಕ್ಷಿಣೇಸ್ಯಾತ್ | ಹಿಂದುಸ್ತಾನೀ ತಥೋತ್ತರೇ ||
ಎಂದು ಸ್ಪಷ್ಟವಾಗಿ ಅಂದಿಗೆ ಕರ್ನಾಟಕಿ ಸಂಗೀತ ಎಂಬ ಅನುಪಮ ಸಂಗೀತ ಪದ್ಧತಿ ರೂಢಿತವಾಗಿತ್ತೆಂದು ಹೇಳಿದ್ದಾನೆ.
ಕರ್ನಾಟಕಿ ಸಂಗೀತ ರಾಗ ಪದ್ಧತಿಯ ಮೇಲೆ ಆಧಾರಿತವಾಗಿದೆ. ರಾಗ ಎನ್ನುವ ಶಬ್ದ ಸಂಸ್ಕೃತದಲ್ಲಿನ ಶಬ್ದ “ರಂಜಕತ್ವಾತ್” ಎಂದರೆ ಸಂತೋಷಪಡಿಸುವುದು ಶಬ್ದದ ತದ್ಭವ. ಶುದ್ಧ ಸ್ವರಗಳು ಹನ್ನೆರಡು. ಈ ಹನ್ನೆರಡು ಸ್ವರಗಳಲ್ಲಿ ಏಳು ಅಥವಾ ಐದು ಸ್ವರಗಳನ್ನು ಜೋಡಿಸಿ ಅಥವಾ ಸಮೀಕರಿಸಿ ಮೂಲ ಷಡ್ಜಕ್ಕೆ ಒಂದು ಕ್ರಮದಲ್ಲಿ ಸೇರಿಸಿ ಒಂದು ರಾಗವನ್ನು ಪ್ರಸ್ತುತಪಡಿಸಲಾಗುತ್ತದೆ. ಐದೇ ಸ್ವರಗಳಿದ್ದರೆ ಅದಕ್ಕೆ “ಔಡವ ರಾಗ”, ಆರು ಸ್ವರಗಳಿದ್ದರೆ ಅದು “ಷಾಡವ ರಾಗ” ಏಳೂ ಸ್ವರಗಳಿದ್ದರೆ “ಸಂಪೂರ್ಣ ರಾಗ”. ಹೀಗೆ ರಾಗಗಳನ್ನು ಭಿನ್ನ ಭಿನ್ನವಾಗಿ ಹೆಸರಿಸಲಾಗಿದೆ. ಆರೋಹಣದಲ್ಲಿ ಅವರೋಹಣದಲ್ಲಿ ಎರಡರಲ್ಲೂ ಸಂಪೂರ್ಣವಾಗಿದ್ದರೆ ಅಂಥ ರಾಗಕ್ಕೆ “ಮೇಳಕರ್ತ” ಅಥವಾ “ಜನಕರಾಗ” ಅಥವಾ “ಸಂಪೂರ್ಣ ರಾಗ” ಎಂದು ಹೆಸರು. ಇಂಥ ಮೇಳಕರ್ತಗಳನ್ನು ಎಪ್ಪತ್ತೆರಡಾಗಿ ಶಾರಂಗದೇವ ತನ್ನ “ಸಂಗೀತ ರತ್ನಾಕರ” ಎಂಬ ಗ್ರಂಥದಲ್ಲಿ ಉಲ್ಲೇಖ ಮಾಡಿದ್ದಾನೆ.
ದೇವಗಿರಿಯ ಸೇವುಣರ ಮತ್ತೊಂದು ವಿಶೇಷತೆ ಎಂದರೆ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಅಮೋಘ ಕೊಡುಗೆಗಳು. ವಚನ ಸಾಹಿತ್ಯದ ದಟ್ಟ ಪ್ರಭಾವ ದೇವಗಿರಿಯ ಸೇವುಣ ಅರಸರ ಮೇಲೆ ಆಗಿತ್ತೆಂದು ಸ್ಪಷ್ಟವಾಗಿ ಉಲ್ಲೇಖಿಸಬಹುದು. ತಿಳವಳ್ಳಿ ದೇವಸ್ಥಾನ ಹಕ್ಕಲು ಶಾಸನ, ದಾವಣಗೆರೆ ಶಾಸನ ಮೂತಾದ 25 ಕ್ಕೂ ಹೆಚ್ಚು ಶಾಸನಗಳಲ್ಲಿ ಸೊನ್ನಲಿಗೆಯ ಸಿದ್ಧರಾಮೇಶ್ವರರ ವಚನಗಳನ್ನು ಚಿತ್ರಿಸಲಾಗಿದೆ. ಟಾಕಳಿ ಶಾಸನದಲ್ಲಿ ಸಿದ್ಧರಾಮೇಶ್ವರರ ವಚನವನ್ನು ಸಂಸ್ಕೃತಕ್ಕೆ ಭಾಷಾಂತರಿಸಲಾಗಿದೆ. ದೇವಗಿರಿಯ ಸೇವುಣರ ಕಾಲಘಟ್ಟದಲ್ಲಿದ್ದ ಕವಿಗಳಾದ ಹರಿಶ್ಚಂದ್ರ, ವೈಜನಾಥ, ಮಾಧವ, ಕವಿರಾಜ, ವಾಗ್ದೇವತಾ ಭಟ್ಟ, ವೇದ ಜ್ಞಾನಿ ಸೂರ್ಯನರಸಿಂಹ ಮತ್ತು ಮಾಯಿದೇವ ಮುಂತಾದವರು ಸಂಸ್ಕೃತದಲ್ಲಿ ಬರೆದದ್ದನ್ನು ಶಾಸನಗಳು ತಿಳಿಸುತ್ತವೆ. ಬೆಡಗಿನ ಸೋಮನಾಥ ಪಂಡಿತ, ವಾಮನ, ಸರಸತಿದೇವ, ಹುಡುಗೆಯ ಸೋಮಯ್ಯ, ಸೇನಬೋವ ಬಾಚರಸ, ಗೋಪಿರಾಜ ಮತ್ತು ಈಶ್ವರಾಚಾರ್ಯ ಮೊದಲಾದವರು ಕನ್ನಡದಲ್ಲಿ ಕೃತಿಗಳನ್ನು ರಚಿಸಿದ್ದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಪ್ರಸಿದ್ಧ ಗಣೀತಜ್ಞ ಮತ್ತು ಜ್ಯೋತಿಷ್ಯನಾದ ಭಾಸ್ಕರಾಚಾರ್ಯ ಮತ್ತು ಅವರ ಮಗನಾದ ಲಕ್ಷ್ಮೀಧರರು ದೇವಗಿರಿ ಅರಸರ ಆಸ್ಥಾನದಲ್ಲಿ ಪಂಡಿತರಾಗಿದ್ದರು.
ಮಹಾರಾಷ್ಟ್ರದಲ್ಲಿರುವ ಬಹುತೇಕ ದೇವಾಲಯಗಳನ್ನು ಸೇವುಣರು ನಿರ್ಮಾಣ ಮಾಡಿದ್ದಾರೆ. “ಹೇಮಾಡ್ ಪಂಥಿ” ಎನ್ನುವ ವಿಶಿಷ್ಠ ಶೈಲಿಯಲ್ಲಿ ನಿರ್ಮಾಣವಾದ ದೇವಸ್ಥಾನಗಳಿವು. ಬೆಳಗಾಂವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಸಮೀಪವಿರುವ ಯಡೂರ ಗ್ರಾಮದಲ್ಲಿರುವ ವಿರೂಪಾಕ್ಷಲಿಂಗ ದೇವಸ್ಥಾನವು ದೇವಗಿರಿ ಸೇವುಣರ ಕೊಡುಗೆ.
ದೇವಗಿರಿ ಸೇವುಣರ ವಂಶಾವಳಿ :
ಮೊದಲನೇಯ ಅಧ್ಯಾಯ-ಕಲ್ಯಾಣಿ (ಪಶ್ಚಿಮ) ಚಾಲುಕ್ಯರ ಮಹಾ ಮಂಡಲೇಶ್ವರರಾಗಿ :
: ಧೃಢಪ್ರಹಾರ
ಕ್ರಿ. ಶ. 850 – 874 : ಸೇವುಣಚಂದ್ರ
ಕ್ರಿ. ಶ. 874 – 900 : ಒಂದನೆ ಧಡಿಯಪ್ಪ
ಕ್ರಿ. ಶ. 900 – 925 : ಒಂದನೆ ಬಿಲ್ಲಮ
ಕ್ರಿ. ಶ. 925 – 950 : ರಾಜಗ
ಕ್ರಿ. ಶ. 950 – 974 : ವಡ್ಡಿಗ
ಕ್ರಿ. ಶ. 974 – 975 : ಇಮ್ಮಡಿ ಧಡಿಯಪ್ಪ
ಕ್ರಿ. ಶ. 975 – 1005 : ಇಮ್ಮಡಿ ಬಿಲ್ಲಮ
ಕ್ರಿ. ಶ. 1005 – 1020 : ವೇಸುಗಿ (ಪೇಣುಗಿ)
ಕ್ರಿ. ಶ. 1020 – 1055 : ಮುಮ್ಮಡಿ (ಮೂರನೆ) ಬಿಲ್ಲಮ
ಕ್ರಿ. ಶ. 1055 – 1068 : ಇಮ್ಮಡಿ ವೇಸುಗಿ
ಕ್ರಿ. ಶ. 1068 : ನಾಲ್ಕನೆ ಬಿಲ್ಲಮ
ಕ್ರಿ. ಶ. 1068 – 1085 : ಇಮ್ಮಡಿ ಸೇವುಣಚಂದ್ರ
ಕ್ರಿ. ಶ. 1085 – 1115 : ಐರಾಮದೇವ
ಕ್ರಿ. ಶ. 1115 – 1145 : ಸಿಂಘಣ
ಕ್ರಿ. ಶ. 1145 – 1150 : ಮಲ್ಲುಗಿ
ಕ್ರಿ. ಶ. 1150 – 1160 : ಅಮರ ಗಾಂಗೇಯ
ಕ್ರಿ. ಶ. 1160 : ಗೋವಿಂದರಾಜ
ಕ್ರಿ. ಶ. 1160 – 1165 : ಇಮ್ಮಡಿ ಮಲ್ಲುಗಿ
ಕ್ರಿ. ಶ. 1165 – 1173 : ಕಲಿಯ ಬಲ್ಲಾಳ
ಎರಡನೇಯ ಅಧ್ಯಾಯ – ಸ್ವತಂತ್ರ ಅರಸರಾಗಿ :
ಕ್ರಿ. ಶ. 1173 – 1192 : ಐದನೇ ಬಿಲ್ಲಮ
ಕ್ರಿ. ಶ. 1192 – 1200 : ಜೈತುಗಿ (ಜೈಪಾಲ)
ಕ್ರಿ. ಶ. 1200 – 1247 : ಇಮ್ಮಡಿ ಸಿಂಘಣ
ಕ್ರಿ. ಶ. 1247 – 1261 : ಕನ್ನರ (ಕಂಧರ, ಕೃಷ್ಣ)
ಕ್ರಿ. ಶ. 1261 – 1271 : ಮಹಾದೇವ
ಕ್ರಿ. ಶ. 1271 : ಅಮಣ
ಕ್ರಿ. ಶ. 1271 – 1309 : ರಾಮಚಂದ್ರ
ಮೂರನೇ ಅಧ್ಯಾಯ – ಅಲ್ಲವುದ್ದೀನ ಖಿಲ್ಜಿಯ ಆಧೀನ ಅರಸರಾಗಿ :
ಕ್ರಿ. ಶ. 1312 – 1313 : ಮುಮ್ಮಡಿ (ಮೂರನೆ) ಸಿಂಘಣ
ಕ್ರಿ. ಶ. 1313 – 1318 : ಹರಪಾಲದೇವ
ಕ್ರಿ. ಶ. 1318 – 1334 : ಮುಮ್ಮಡಿ (ಮೂರನೆ) ಮಲ್ಲುಗಿ
ಮೊದಲನೇಯ ಅಧ್ಯಾಯ – ಕಲ್ಯಾಣಿ (ಪಶ್ಚಿಮ) ಚಾಲುಕ್ಯರ ಮಹಾ ಮಂಡಲೇಶ್ವರರಾಗಿ :
1. ಧೃಢಪ್ರಹಾರ :
ರಾಷ್ಟ್ರಕೂಟರ ಹಾಗೂ ನಂತರ ಪಶ್ಚಿಮ ಚಾಲುಕ್ಯರ ಸಾಮಂತರಾಗಿದ್ದ ಸೇವುಣರ ರಾಜವಂಶ ಜಾರಿಗೆ ಬಂದದ್ದು ಧೃಢಪ್ರಹಾರನ ಕಾಲದಲ್ಲಿ. ಇತಿಹಾಸದಿಂದ ತಿಳಿದು ಬಂದಿರುವ ಪ್ರಕಾರ ದೇವಗಿರಿಯ ಸೇವುಣರ ರಾಜಧಾನಿ ಚಂದ್ರಾದಿತ್ಯ ಪುರವಾಗಿತ್ತು (ಇದು ಇಂದಿನ ನಾಸಿಕ ಜಿಲ್ಲೆಯ ಚಾಂದೋರು). ಸೇವುಣರಿಗೆ ಆ ಹೆಸರು ಬಂದದ್ದು ಧೃಢಪ್ರಹಾರನ ಮಗ ಸೇವುಣಚಂದ್ರನಿಂದ. ಅವನ ರಾಜ್ಯ ಮೂಲತಃ ಸೇವುಣ ದೇಶವೆಂಬ ನಾಸಿಕ ಹತ್ತಿರವಿರುವ ಸಿಂಧಿನೇರ (ಈಗಿನ ಸಿನ್ನಾರ್) ಆಗಿತ್ತು. ದೃಢಪ್ರಹಾರನ ಹೆಸರು ಕೆಲವು ಶಾಸನಗಳಲ್ಲಿ ಮಾತ್ರ ಕಾಣಬರುತ್ತದೆ.
2. ಸೇವುಣಚಂದ್ರ (ಕ್ರಿ. ಶ. 850 – 874) :
ದೃಢಪ್ರಹಾರನ ಹೆಸರು ಕೆಲವು ಶಾಸನಗಳಲ್ಲಿ ಮಾತ್ರ ಕಾಣಬರುತ್ತದೆ. ಅನಂತರ ಬಂದವನೇ ಸೇವುಣ ಚಂದ್ರ. ಬಹುಶಃ ಇವನೇ ಈ ವಂಶದ ಮೊದಲನೆಯ ದೊರೆ. ಧೃಢಪ್ರಹಾರನ ನಂತರ ಕ್ರಿ. ಶ. 850 ರಲ್ಲಿ ಸಿಂಹಾಸನವನ್ನೇರಿದವನು. ದೇವಗಿರಿಯ ಯಾದವರೆಂದು ಕರೆಯುತ್ತಿದ್ದವರನ್ನು ಸೇವುಣಚಂದ್ರನ ಕಾಲಾನಂತರದಲ್ಲಿ ದೇವಗಿರಿಯ ಸೇವುಣರು ಎಂದು ಕರೆಯಲ್ಪಟ್ಟರು.
3. ಒಂದನೆ ಧಡಿಯಪ್ಪ (ಕ್ರಿ. ಶ. 874 – 900) :
4. ಒಂದನೆ ಬಿಲ್ಲಮ (ಕ್ರಿ. ಶ. 900 – 925) :
5. ರಾಜಗ (ಕ್ರಿ. ಶ. 925 – 950) :
ಮುಂದೆ ದೇವಗಿರಿ ಸೇವುಣರ ಸಿಂಹಾಸನವನ್ನೇರಿದವರು ರಾಜರಾದ ಒಂದನೆಯ ಧಡಿಯಪ್ಪ, ಒಂದನೆಯ ಭಿಲ್ಲಮ ಮತ್ತು ರಾಜಗ. ಇವರ ಬಗ್ಗೆ ಹೆಚ್ಚಿನ ವಿವರಗಳು ಇತಿಹಾಸದಲ್ಲಿ ಕಂಡು ಬರುವುದಿಲ್ಲ.
6. ವಡ್ಡಿಗ (ಕ್ರಿ. ಶ. 950 – 974) :
ರಾಜಗ ಅರಸನ ತರುವಾಯ ಪಟ್ಟಕ್ಕೆ ಬಂದವನು ಒಂದನೆಯ ವಡ್ಡಿಗ (ಕ್ರಿ. ಶ. 950 – 974). ಇವನು ರಾಷ್ಟ್ರಕೂಟ ದೊರೆ ಮುಮ್ಮಡಿ ಕೃಷ್ಣನ ಸಾಮಂತ ಅರಸನಾಗಿದ್ದನೆಂದು ತಿಳಿದು ಬರುತ್ತದೆ. ರಾಷ್ಟ್ರಕೂಟರ ದೊರೆ ನಾಲ್ವಡಿ ಗೋವಿಂದನನ್ನು ಪದಚ್ಯುತನನ್ನಾಗಿ ಮಾಡಲು ಇವನು ಮುಮ್ಮಡಿ ಕೃಷ್ಣನಿಗೆ ಸಹಾಯ ಮಾಡಿ ಪ್ರಾಮುಖ್ಯವನ್ನು ಪಡೆದು ರಾಷ್ಟ್ರಕೂಟರ ರಾಜಕುಮಾರಿ ದೋರಪ್ಪನ ಮಗಳಾದ ವಡ್ಡಿಯವ್ವಳನ್ನು ವಿವಾಹವಾಗಿದ್ದನೆಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.
7. ಇಮ್ಮಡಿ ಧಡಿಯಪ್ಪ (ಕ್ರಿ. ಶ. 974 –975) :
ದೇವಗಿರಿ ಸೇವುಣರ ಸಿಂಹಾಸನವನ್ನೇರಿದವನು ಇಮ್ಮಡಿ ಧಡಿಯಪ್ಪ. ಇವನ ಬಗ್ಗೆ ಹೆಚ್ಚಿನ ವಿವರಗಳು ಇತಿಹಾಸದಲ್ಲಿ ಕಂಡು ಬರುವುದಿಲ್ಲ.
8. ಇಮ್ಮಡಿ ಬಿಲ್ಲಮ (ಕ್ರಿ. ಶ. 975 – 1005) :
ಕ್ರಿ. ಶ. 975 ರಲ್ಲಿ ದೇವಗಿರಿ ಸೇವುಣರ ಸಿಂಹಾಸನವನ್ನೇರಿದವನು ಇಮ್ಮಡಿ ಬಿಲ್ಲಮ. ಇಮ್ಮಡಿ ಭಿಲ್ಲಮನ ಕಾಲದಿಂದ ದೇವಗಿರಿ ಸೇವುಣರ ಸಾಮ್ರಾಜ್ಯ ಪ್ರಮುಖ ಸ್ಥಾನವನ್ನು ಪಡೆಯವಲ್ಲಿ ಸಫಲವಾಯಿತೆಂದು ಹೇಳಬಹುದು. ಕಲ್ಯಾಣಿ ಚಾಲುಕ್ಯರ ದೊರೆ ಎರಡನೆಯ ತೈಲಪನಿಗೆ ಪರಮಾರರ ರಾಜ ಮುಂಜನ ವಿರುಧ್ದ ಯುದ್ಧದಲ್ಲಿ ನೆರವು ನೀಡಿದ್ದಕ್ಕಾಗಿ ಇವನಿಗೆ “ಮಹಾ ಸಾಮಂತ” ಎಂಬ ಬಿರುದನ್ನೂ ನೀಡಿ ಅಹಮದ್ ನಗರ ಜಿಲ್ಲೆಯ ಸುತ್ತಮುತ್ತಲ ಪ್ರದೇಶಗಳನ್ನೂ ಬಳುವಳಿಯಾಗಿ ನೀಡಿದನೆಂದು ತಿಳಿದು ಬರುತ್ತದೆ. ಇದರಿಂದ ಸೇವುಣರ ಪ್ರಾಬಲ್ಯ ಹೆಚ್ಚಲು ಅವಕಾಶವಾಯಿತು. ಇವನು ರಾಷ್ಟ್ರಕೂಟರ ರಾಜಕುಮಾರಿ ಲಚ್ಚಿಯವ್ವಳನ್ನು ಮದುವೆಯಾಗಿದ್ದನೆಂದು ತಿಳಿದು ಬರುತ್ತದೆ. ಒಟ್ಟಿನಲ್ಲಿ ಸೇವುಣ ರಾಜ್ಯಕ್ಕೆ ಭದ್ರವಾದ ಬುನಾದಿಯನ್ನು ಹಾಕಿದ ಕೀರ್ತಿ ಎರಡನೆಯ ಭಿಲ್ಲಮನಿಗೆ ಸಲ್ಲುತ್ತದೆ.
9. ವೇಸುಗಿ (ಪೇಣುಗಿ) (ಕ್ರಿ. ಶ. 1005 – 1020) :
ಎರಡನೆಯ ಭಿಲ್ಲಮ ನಂತರ ಕ್ರಿ. ಶ. 1005 ರಲ್ಲಿ ಪಟ್ಟಕ್ಕೆ ಬಂದವನು ವೇಸುಗಿ (ಪೇಣುಗಿ). ರಾಜನಾದ ವೇಸುಗಿ (ಪೇಣುಗಿ) ಕಲ್ಯಾಣ (ಪಶ್ಚಿಮ) ಚಾಳುಕ್ಯರ ಅರಸ ಸತ್ಯಾಶ್ರಯನ ಮಗಳಾದ ನಾಯಿಲ್ಲದೇವಿಯನ್ನು ವಿವಾಹವಾಗಿದ್ದನೆಂದು ಇತಿಹಾಸದಿಂದ ತಿಳಿದು ಬರುತ್ತದೆ.
10. ಮುಮ್ಮಡಿ (ಮೂರನೆ) ಬಿಲ್ಲಮ (ಕ್ರಿ. ಶ. 1020 – 1055) :
ವೇಸುಗಿ (ಪೇಣುಗಿ) ಯ ನಂತರ ಕ್ರಿ. ಶ. 1020 ರಲ್ಲಿ ಪಟ್ಟಕ್ಕೆ ಬಂದವನು ಮುಮ್ಮಡಿ (ಮೂರನೆ) ಬಿಲ್ಲಮ. ಪರಮಾರರ ವಿರುದ್ಧ ಚಾಲುಕ್ಯರ ದೊರೆ ಒಂದನೆ ಸೋಮೇಶ್ವರನಿಗೆ ಸಹಾಯ ಮಾಡಿದ್ದನು. ಇವನು ಕಲ್ಯಾಣ (ಪಶ್ಚಿಮ) ಚಾಳುಕ್ಯರ ಅರಸ ಎರಡನೆಯ ಜಯಸಿಂಹನ ಮಗಳಾದ ಆವಲ್ಲದೇವಿಯನ್ನು ವಿವಾಹವಾಗಿದ್ದನೆಂದು ತಿಳಿದು ಬರುತ್ತದೆ. ಆವಲ್ಲದೇವಿ ಒಂದನೆ ಸೋಮೇಶ್ವರನ ಸಹೋದರಿಯೂ ಕೂಡ. ಜಯಸಿಂಹ ಮತ್ತು ಒಂದನೆ ಸೋಮೇಶ್ವರ ಇಬ್ಬರಿಗೂ ವಿಧೇಯನಾಗಿದ್ದ ಮುಮ್ಮಡಿ (ಮೂರನೆ) ಬಿಲ್ಲಮ ಅವರು ಕೈಗೊಂಡ ಯುದ್ಧಗಳಲ್ಲಿ ಸಹಾಯ ಮಾಡಿದ್ದನೆಂದು ತಿಳಿದು ಬರುತ್ತದೆ.
11. ಇಮ್ಮಡಿ ವೇಸುಗಿ (ಕ್ರಿ. ಶ. 1055 – 1068) :
12. ನಾಲ್ಕನೆ ಬಿಲ್ಲಮ (ಕ್ರಿ. ಶ. 1068) :
ಮುಮ್ಮಡಿ (ಮೂರನೆ) ಬಿಲ್ಲಮನ ನಂತರ ದೇವಗಿರಿ ಸೇವುಣರ ಅರಸರಾದವರು ಇಮ್ಮಡಿ ವೇಸುಗಿ ಮತ್ತು ನಾಲ್ಕನೆ ಬಿಲ್ಲಮ. ಇವರ ಬಗ್ಗೆ ಹೆಚ್ಚಿನ ವಿವರಗಳು ಕಂಡು ಬರುವುದಿಲ್ಲ. ವೇಸುಗಿ ಮತ್ತು ನಾಲ್ಕನೆ ಭಿಲ್ಲಮನ ಪಟ್ಟದ ರಾಣಿಯರು ಕಲ್ಯಾಣಿ (ಪಶ್ಚಿಮ) ಚಾಲುಕ್ಯ ವಂಶದ ರಾಜಕುಮಾರಿಯರಾಗಿದ್ದರು ಎಂದು ಮಾತ್ರ ತಿಳಿದು ಬರುತ್ತದೆ.
13. ಇಮ್ಮಡಿ ಸೇವುಣಚಂದ್ರ (ಕ್ರಿ. ಶ. 1068– 1085) :
ಪ್ರಜೆಗಳ ಪ್ರತಿರೋಧದಿಂದ ಬಹುಶಃ ದೇವಗಿರಿಯ ಅರಸರಲ್ಲಿ ಅಂತಃಕಲಹ ಉಂಟಾಗಿ ಇಮ್ಮಡಿ ವೇಸುಗಿ ಮತ್ತು ನಾಲ್ಕನೆ ಬಿಲ್ಲಮರನ್ನು ಸಿಂಹಾಸನದಿಂದ ಕೆಳಗಿಳಿಸಿ ಕ್ರಿ. ಶ. 1068 ರಲ್ಲಿ ಇಮ್ಮಡಿ ಸೇವುಣಚಂದ್ರ ಪಟ್ಟಕ್ಕೆ ಬಂದಿರಬಹುದು ಎನ್ನುವ ಅನುಮಾನ ಬರುತ್ತದೆ. ಕಲ್ಯಾಣಿ (ಪಶ್ಚಿಮ) ಚಾಳುಕ್ಯರ ದೊರೆ ವಿಕ್ರಮಾದಿತ್ಯನು ಮಾಡಿದ ಯದ್ಧಗಳಲ್ಲಿ ಸಹಾಯ ಮಾಡಿದ್ದಕ್ಕಾಗಿ ಮಹಾಮಂಡಳೇಶ್ವರ ಎಂಬ ಪದವಿಯನ್ನು ಪಡೆದಿರುವುದು ಇತಿಹಾಸ ಮತ್ತು ಶಾಸನಗಳಿಂದ ತಿಳಿದು ಬರುತ್ತದೆ.
14. ಐರಾಮದೇವ (ಕ್ರಿ. ಶ. 1085 – 1115) :
ಇಮ್ಮಡಿ ಸೇವುಣಚಂದ್ರನ ಮಗನಾದ ಐರಾಮದೇವ ಕ್ರಿ. ಶ. 1085 ರಲ್ಲಿ ಆಡಳಿತವನ್ನು ವಹಿಸಿಕೊಂಡು ಸೇವುಣರ ರಾಜ್ಯವನ್ನು ಮುನ್ನಡೆಸುತ್ತಾನೆ. ಅಣ್ಣಿಗೇರಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಕಲ್ಯಾಣಿ (ಪಶ್ಚಿಮ) ಚಾಳುಕ್ಯರ ಅರಸು ಇಮ್ಮಡಿ ಸೋಮೇಶ್ವರನನ್ನು ಸೋಲಿಸಲು ಆರನೇ ವಿಕ್ರಮಾದಿತ್ಯನಿಗೆ ಸಹಾಯ ಮಾಡಿದನೆಂದು ಒಂದು ಶಾಸನದಲ್ಲಿ ಉಲ್ಲೇಖ ಬರುತ್ತದೆ. ಇವನ ರಾಜ್ಯ ನರ್ಮದಾ ತೀರದವರೆಗೂ ಹಬ್ಬಿತ್ತೆಂದು ಈ ಶಾಸನದಿಂದ ಗೊತ್ತಾಗುತ್ತದೆ.
15. ಒಂದನೆ ಸಿಂಘಣ (ಕ್ರಿ. ಶ. 1115 – 1145) :
ಐರಾಮದೇವನ ಮರಣಾನಂತರ ಸಹೋದರನಾದ ಒಂದನೆಯ ಸಿಂಘಣ ಕ್ರಿ. ಶ. 1115 ರಲ್ಲಿ ರಾಜನಾದ. ಸೇವುಣದೇವ ಎಂದು ಕೆಲವು ಶಾಸನಗಳಲ್ಲಿ ಉಲ್ಲೇಖವಿದೆ.
16. ಮಲ್ಲುಗಿ (ಕ್ರಿ. ಶ. 1145 – 1150) :
ಅನಂತರ ಕ್ರಿ. ಶ. 1145 ರಲ್ಲಿ ರಾಜನಾದವನು ಮಲ್ಲುಗಿ. ಮಲ್ಲುಗಿಯ ಮರಣಾನಂತರ ಸೇವುಣರ ಕುಟುಂಬದಲ್ಲಿ ವ್ಯಾಜ್ಯಗಳು ಮತ್ತು ಅಂತಃಕಲಹಗಳು ಪ್ರಾರಂಭವಾದವು. ಇದರಿಂದ ಪ್ರಜೆಗಳು ದಂಗೆ ಎದ್ದದ್ದರಿಂದ ಅವರ ರಾಜ್ಯದಲ್ಲಿ ಕ್ಷೋಭೆ ಉಂಟಾಯಿತೆಂದೂ ತಿಳಿದು ಬರುತ್ತದೆ.
17. ಅಮರ ಗಾಂಗೇಯ (ಕ್ರಿ. ಶ. 1150 – 1160) :
18. ಗೋವಿಂದರಾಜ (ಕ್ರಿ. ಶ. 1160) :
19. ಇಮ್ಮಡಿ ಮಲ್ಲುಗಿ (ಕ್ರಿ. ಶ. 1160 – 1165) :
20. ಕಲಿಯ ಬಲ್ಲಾಳ (ಕ್ರಿ. ಶ. 1165 – 1173) :
ಮಲ್ಲುಗಿಯ ಮರಣಾನಂತರ ಸೇವುಣರ ಕುಟುಂಬದಲ್ಲಿ ವ್ಯಾಜ್ಯಗಳು ಮತ್ತು ಅಂತಃಕಲಹಗಳು ಪ್ರಾರಂಭವಾದವು. ಇದರಿಂದ ಪ್ರಜೆಗಳು ದಂಗೆ ಎದ್ದದ್ದರಿಂದ ಅವರ ರಾಜ್ಯದಲ್ಲಿ ಕ್ಷೋಭೆ ಉಂಟಾಯಿತೆಂದೂ ತಿಳಿದು ಬರುತ್ತದೆ. ಇದರ ಪರಿಣಾಮದಿಂದ ಅಮರ ಗಾಂಗೇಯ, ಗೋವಿಂದರಾಜ, ಇಮ್ಮಡಿ ಮಲ್ಲುಗಿ ಮತ್ತು ಕಲಿಯ ಬಲ್ಲಾಳ ಅರಸರ ಮೇಲಾಗಿ ಗೊಂದಲ ಸೃಷ್ಠಿಯಾಯಿತೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಇವರ ಕೌಟುಂಬಿಕವಾಗಿ ಪರಸ್ಪರ ಸಂಬಂಧಗಳನ್ನು ವಿಶ್ಲೇಷಣೆ ಮಾಡಲಾರದಷ್ಟು ಅಸ್ಪಷ್ಟವಾಗಿವೆ. ಇಂಥ ಅರಾಜಕತೆಯ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಿ ಸೇವುಣರನ್ನು ಸ್ವತಂತ್ರರನ್ನಾಗಿ ಮಾಡಿದವನು ಐದನೆಯ ಭಿಲ್ಲಮ.
ಎರಡನೇಯ ಅಧ್ಯಾಯ – ಸ್ವತಂತ್ರ ಅರಸರಾಗಿ :
1. ಐದನೇ ಬಿಲ್ಲಮ (ಕ್ರಿ. ಶ. 1173 – 1192) :
ಮಲ್ಲುಗಿಯ ಮರಣಾನಂತರ ಸೇವುಣರ ಕುಟುಂಬದಲ್ಲಿ ವ್ಯಾಜ್ಯಗಳು ಮತ್ತು ಅಂತಃಕಲಹಗಳು ಪ್ರಾರಂಭವಾಗಿ ಪ್ರಜೆಗಳು ದಂಗೆ ಎದ್ದದ್ದರಿಂದ ಅವರ ರಾಜ್ಯದಲ್ಲಿ ಕ್ಷೋಭೆ ಉಂಟಾಯಿತೆಂದೂ ತಿಳಿದು ಬರುತ್ತದೆ. ಕ್ರಿ. ಶ. 1173 ರಲ್ಲಿ ಇಂಥ ಅರಾಜಕತೆಯ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಿ ಸೇವುಣರನ್ನು ಸ್ವತಂತ್ರರನ್ನಾಗಿ ಮಾಡಿ ಪಟ್ಟಕ್ಕೇರಿದವನು ಐದನೆಯ ಭಿಲ್ಲಮ. ಕೌಟುಂಬಿಕ ಅಂತಃಕಲಹವಲ್ಲದೇ ಸುತ್ತ ಮುತ್ತಲಿನ ಅರಸೊತ್ತಿಗೆಯವರಾದ ಕಳಚೂರಿಯ ಬಿಜ್ಜಳ, ಹೊಯ್ಸಳರು ಪ್ರಭಾವಿಗಳಾಗಲು ಮಾಡುತ್ತಿರುವ ಪ್ರಯತ್ನಗಳು, ಚಾಲುಕ್ಯರ ಹವಣಿಕೆಗಳನ್ನು ಸಮರ್ಥವಾಗಿ ಐದನೆ ಬಿಲ್ಲಮನು ತನ್ನ ಶೌರ್ಯ ಪರಾಕ್ರಮಗಳಿಂದ ಸಮರ್ಥವಾಗಿ ಎದುರಿಸಿದನು.
ಹೊಯ್ಸಳ ಬಲ್ಲಾಳ ಕಲ್ಯಾಣವನ್ನು ತನ್ನ ವಶಮಾಡಿಕೊಂಡ ಮೇಲೆ ಅವನ ಮೇಲೆ ಸೊರಟೂರು ಎಂಬಲ್ಲಿ ಯುದ್ಧ ಮಾಡಿದ ಐದನೆ ಬಿಲ್ಲಮ, ಈ ಯುದ್ಧದಲ್ಲಿ ಪೂರ್ಣವಾಗಿ ಸೋತು ಹೋದನೆಂದು ತಿಳಿದು ಬರುತ್ತದೆ. ಈ ಯುದ್ಧದ ನಂತರ ಐದನೇ ಬಿಲ್ಲಮ ಹೆಚ್ಚು ಕಾಲ ಬದುಕಲಿಲ್ಲ. ದೇವಗಿರಿ ನಗರವನ್ನು ಸ್ಥಾಪಿಸಿ, ಅಪ್ರತಿಮ ಪರಾಕ್ರಮ, ಶಕ್ತಿ ಸಾಮರ್ಥ್ಯಗಳಿಂದ ಸೇವುಣರ ಸಾಮ್ರಾಜ್ಯವನ್ನು ಸ್ವಾತಂತ್ರ್ಯಗೊಳಿಸಿದ ಕೀರ್ತಿ ಐದನೇ ಬಿಲ್ಲಮನಿಗೆ ಸಲ್ಲುತ್ತದೆ.
2. ಜೈತುಗಿ (ಜೈಪಾಲ) (ಕ್ರಿ. ಶ. 1192 – 1200) :
ಐದನೇ ಬಿಲ್ಲಮ ಕ್ರಿ. ಶ. 1192 ರಲ್ಲಿ ಮರಣ ಹೊಂದಿದಾಗ ಈತನ ಮಗ ಜೈತುಗಿ (ಜೈಪಾಲ) ಪಟ್ಟಕ್ಕೆ ಬರುತ್ತಾನೆ. ಹೊಯ್ಸಳರ ಪ್ರಾಬಲ್ಯದ ನಡುವೆಯೂ ರಾಜ್ಯ ವಿಸತರಣೆಗೆ ಗಮನಸಿರಿಸಿದ್ದ ಜೈತುಗಿ (ಜೈಪಾಲ) ಕಾಕತೀಯರ ಮೇಲೆ ಯುದ್ಧ ಸಾರುತ್ತಾನೆ. ಗಣಪತಿಯನ್ನು ಕಾಕತಿಐರ ರಾಜನನ್ನಾಗಿ ಮಾಡುವಲ್ಲಿ ಯಶಸ್ವಿಯಾಗುತ್ತಾನೆ. ಕ್ರಿ. ಶ. 1200 ರಲ್ಲಿ ಮರಣ ಹೊಂದಿದನು.
3. ಇಮ್ಮಡಿ ಸಿಂಘಣ (ಕ್ರಿ. ಶ. 1200 – 1247) :
ದೇವಗಿರಿಯ ಸೇವುಣರ ದೊರೆಗಳಲ್ಲಿ ಅಪ್ರತಿಮ, ಅನುಪಮ ಮತ್ತು ಅತ್ಯುನ್ನತ ಸ್ಥಾನವನ್ನು ಗಳಿಸಿದಂಥವನು ಇಮ್ಮಡಿ ಸಿಂಘಣ. ಇಮ್ಮಡಿ ಸಿಂಘಣ ಕ್ರಿ. ಶ. 1200 ರಲ್ಲಿ ತಂದೆ ಜೈತುಗಿ (ಜೈಪಾಲ) ಯ ಮರಣಾ ನಂತರ ಪಟ್ಟವನ್ನಲಂಕರಿಸಿದನು. ಹೊಯ್ಸಳರ ಮೇಲೆ ಮುಗಿಬಿದ್ದು ಅವರ ಬಹುತೇಕ ಪ್ರದೇಶಗಳನ್ನೆಲ್ಲಾ ಪಡೆದನೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಯುದ್ಧಪ್ರಿಯ ಮತ್ತು ಪರಾಕ್ರಮಿಯಾಗಿದ್ದ ಇಮ್ಮಡಿ ಸಿಂಘಣ ಮಾಳವ ದೇಶ, ಲಾಟರ ರಾಜ್ಯ, ಕೊಂಕಣದ ಕೇಶಿರಾಜ, ಕದಂಬರ ರಾಜ ಮಲ್ಲಿದೇವ, ಗುತ್ತಲ ದೊರೆ ಜೋಯಿದೇವ, ಸಿಂಧ ರಾಜ್ಯದ ಈಶ್ವರದೇವ, ಚೋಳರ ಅರಸು ತಿಕ್ಕ ಮುಂತಾದವರನ್ನು ಸೋಲಿಸಿ ತನ್ನ ಸಾಮ್ರಾಜ್ಯವನ್ನು ವಿಸ್ತಾರ ಮಾಡಿದನು. ಈತನ ರಾಜ್ಯ ಉತ್ತರದಲ್ಲಿ ನರ್ಮದಾ ತೀರದಿಂದ ಹಿಡಿದು ದಕ್ಷಿಣದ ಕಾವೇರಿ ತೀರದವರೆಗೂ ಹಬ್ಬಿತ್ತೆಂದು ತಿಳಿದು ಬರುತ್ತದೆ.
ಕಲೆ, ಸಾಹಿತ್ಯ ಮತ್ತು ಪರಂಪರೆಗೆ ಉತ್ತಮ ಅವಕಾಶ ನೀಡಿದವನು ಇಮ್ಮಡಿ ಸಿಂಘಣ. ಪ್ರಖ್ಯಾತ ಸಂಗೀತ ವಿಶಾರದ ಶಾರಂಗದೇವ ಇವನ ಆಶ್ರಯದಲ್ಲಿದ್ದು “ಸಂಗೀತ ರತ್ನಾಕರ” ಎನ್ನುವ ಅನುಪಮ ಗ್ರಂಥವನ್ನು ರಚಿಸಿದ್ದಾನೆ. “ಶಾಂತೇಶ್ವರ ಪುರಾಣ” ಎನ್ನುವ ಅದ್ಭುತ ಕಾವ್ಯವನ್ನು ಬರೆದ ಕವಿ “ಕಮಲಭವ” ಈತನ ಆಶ್ರಯದಲ್ಲಿದ್ದ ಮತ್ತೊಬ್ಬ ಶ್ರೇಷ್ಠ ವಿದ್ವಾಂಸ. ಖಗೋಳ ಶಾಸ್ತ್ರ ಪಾರಂಗತರಾದ ಚಂಗದೇವ ಮತ್ತು ಅನಂತದೇವ ಇವನ ಆಸ್ಥಾನದಲ್ಲಿ ಇದ್ದವರು. ಇಮ್ಮಡಿ ಸಿಂಘಣನ ಕಾಲಘಟ್ಟದಲ್ಲಿ ಜೈನ, ವೈಷ್ಣವ, ಶೈವ ಮತ್ತು ಪಾಶುಪತ ದೇವಾಲಯಗಳಿಗೆ ಅನೇಕ ದತ್ತಿಗಳನ್ನು ನೀಡಿದ್ದನ್ನು ಅನೇಕ ಶಾಸನಗಳು ಪುಷ್ಠೀಕರಿಸುತ್ತವೆ.
ಬಸವಾದಿ ಶರಣರ ದೃಷ್ಟಿಯಿಂದ ನೋಡುವುದಾದರೆ, ಬೀಳಗಿ ತಾಲೂಕಿನ ಬಾಡಿಗಿ ಗ್ರಾಮದ ಕೇಶವ ದೇವಾಲಯದ ಗೋಡೆಯ ಮೇಲೆ ಇಮ್ಮಡಿ ಸಿಂಘಣನ ಕಾಲಕ್ಕೆ ಸಂಬಂಧಿಸಿದ ಎರಡು ದತ್ತಿ ಶಿಲಾಶಾಸನಗಳು ದೊರೆತಿವೆ. ಕ್ರಿ.ಶ 1242 ರ ಶಾಸನ ಅಗ್ರಹಾರ ಬಾಡಗಿಯ ವಿಕ್ರಮಾದಿತ್ಯ ಕೇಶವ ದೇವಾಲಯಕ್ಕೆ ಸದಾಶಿವ ಮಹಿಮುತ್ತಯ್ಯ ಮತ್ತು ಮೊಮ್ಮಗ ಜನಾರ್ದನ ಭಟ್ಟರಿಂದ ಭೂಮಿ, ತೋಟ, ಎಣ್ಣೆಗಾಣ, ನಿವೇಶನ ದಾನವಾಗಿ ದೊರಕಿವೆ ಎಂದು ತಿಳಿಸುತ್ತದೆ. ಮಹಾಪ್ರಭು ಗಡಿಯಂಕ ಭೀಮವಲ್ಲರಸನ ಮಗ ವಿಠ್ಠಲರಸನ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಶರಣ ಸುಂಕದ ಬಂಕಯ್ಯನವರು ಹರಳೇಶ್ವರದಿಂದ ಉಳಿವಿಗೆ ಹೊರಟಾಗ ಇಲ್ಲಯೇ ಐಕ್ಯರಾದರೆಂಬ ಮಾಹಿತಿಯನ್ನು ಸಹ ಈ ಶಾಸನ ನೀಡುತ್ತದೆ.
ರಾಯಚೂರು ಜಿಲ್ಲೆ ಸಿರಿವಾರ ತಾಲೂಕಿನ ಮಲ್ಲಟ ಮತ್ತು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾಡಗಿ, ಇವೆರಡೂ ಗ್ರಾಮಗಳಲ್ಲಿ ಸುಂಕದ ಬಂಕಣ್ಣವರ ಜನ್ಮಸ್ಥಳ ಮತ್ತು ಐಕ್ಯಸ್ಥಳದ ಪ್ರಸ್ತಾಪ ಬರುತ್ತದೆ. ಯಾವುದು ಸರಿ ಎಂದು ವಿದ್ವಾಂಸರು ಪರಾಮರ್ಶಿಸಬೇಕು.
ಇವನಿಗೆ ಜೈತುಗಿ ಎಂಬ ಮಗನಿದ್ದ ಎಂದು ತಿಳಿದು ಬರುತ್ತದೆ. ಆದರೆ ಅವನು ಅಕಾಲ ಮರಣ ಹೊಂದಿದುದರಿಂದ ಇಮ್ಮಡಿ ಸಿಂಘಣನ ಮೊಮ್ಮಗ ಕನ್ನರ (ಕಂಧರ, ಕೃಷ್ಣ) ಇಮ್ಮಡಿ ಸಿಂಘಣನ ನಿಧನಾ ನಂತರ ಕ್ರಿ. ಶ. 1247 ರಲ್ಲಿ ಪಟ್ಟಕ್ಕೆ ಬಂದನೆಂದು ಇತಿಹಾಸ ಹೇಳುತ್ತದೆ.
4. ಕನ್ನರ (ಕಂಧರ, ಕೃಷ್ಣ) (ಕ್ರಿ. ಶ. 1247 – 1261) :
ಇಮ್ಮಡಿ ಇಂಘಣನ ಮಗ ಜೈತುಗಿ ಅಕಾಲ ಮರಣ ಹೊಂದಿದುದರಿಂದ ಇಮ್ಮಡಿ ಸಿಂಘಣನ ಮೊಮ್ಮಗ ಕನ್ನರ (ಕಂಧರ, ಕೃಷ್ಣ) ಇಮ್ಮಡಿ ಸಿಂಘಣನ ನಿಧನಾ ನಂತರ ಕ್ರಿ. ಶ. 1247 ರಲ್ಲಿ ಪಟ್ಟಕ್ಕೆ ಬರುತ್ತಾನೆ. ಅಪ್ರತಿಮ ಸಾಹಸಿಯಾಗಿದ್ದ ಕನ್ನರ (ಕಂಧರ, ಕೃಷ್ಣ) ಗುಜರಾತಿನ ಮಾಳವ ದೇಶದ ಮೇಲೆ ಮತ್ತು ಹೊಯ್ಸಳರ ಮೇಲೆ ಯುದ್ಧ ಮಾಡುತ್ತಾನೆ. ಚಿತ್ರದುರ್ಗದ ಅನೇಕ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಾನೆ. ಕಾಕತೀಯ ಅರಸರ ಜೊತೆಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದನು. ಕಲೆ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಕನ್ನರ (ಕಂಧರ, ಕೃಷ್ಣ) ನ ಆಸ್ಥಾನದಲ್ಲಿ “ಸೂಕ್ತಿ ಮುಕ್ತಾವಲಿ” ಗ್ರಂಥದ ಕರ್ತೃ ಜಲ್ಹಣ, “ಕಲ್ಪತರು” ಗ್ರಂಥದ ಕರ್ತೃ ಅಮಲಾನಂದಲ್ಲಿದ್ದಂಥ ವಿದ್ವಾಂಸರು.
5. ಮಹಾದೇವ (ಕ್ರಿ. ಶ. 1261 – 1271) :
ಕನ್ನರ (ಕಂಧರ, ಕೃಷ್ಣ) ನ ಮರಣದ ನಂತರ ಕ್ರಿ. ಶ. 1261 ರಲ್ಲಿ ಪಟ್ಟಕ್ಕೆ ಬಂದವನು ಇವನ ಸಹೋದರ ಮಹಾದೇವ. ಕಾಕತೀಯರ ರಾಣಿ ರುದ್ರಮ್ಮದೇವಿಯೊಡನೆ ಯುದ್ಧ ಮಾಡಿದ್ದನೆಂದು ಶಾಸನಗಳಿಂದ ತಿಳಿದು ಬರುತ್ತದೆ. ಈ ಯುದ್ಧದಲ್ಲಿ ಸೋತಿದ್ದಾನೆ ಇಲ್ಲ ಗೆದ್ದಿದ್ದಾನೆ ಎನ್ನುವುದು ಇನ್ನೂ ಇತ್ಯರ್ಥವಾಗಿಲ್ಲ. ಮಹಾದೇವನ ಸಾಮಂತರಲ್ಲಿ ಸವದತ್ತಿಯ ರಟ್ಟರು ಮತ್ತ ಸಿಂಧರು ಪ್ರಮುಖರು. ಕ್ರಿ. ಶ. 1271 ರಲ್ಲಿ ಮಹಾದೇವ ಮರಣ ಹೊಂದುತ್ತಾನೆ.
6. ಅಮಣ (ಕ್ರಿ. ಶ. 1271) :
ಕ್ರಿ. ಶ. 1271 ರಲ್ಲಿ ಮಹಾದೇವ ಮರಣವಾದಾಗ ಇವನ ಮಗನಾದ ಆಮಣ ದೊರೆಯಾದ. ಆದರೆ ಕೆಲವೇ ತಿಂಗಳುಗಳಲ್ಲಿ ಕನ್ನರ (ಕಂಧರ, ಕೃಷ್ಣ) ನ ಮಗನಾದ ರಾಮಚಂದ್ರ ಇವನನ್ನು ಕೊಂದು ತಾನೇ ದೊರೆಯಾದನೆಂದು ಇತಿಹಾಸದಿಂದ ತಿಳಿದು ಬರುತ್ತದೆ.
7. ರಾಮಚಂದ್ರ (ಕ್ರಿ. ಶ. 1271 – 1309) :
ದೇವಗಿರಿಯ ಸೇವುಣರ ದೊರೆಗಳಲ್ಲಿಯೇ ಸ್ವತಂತ್ರ ರಾಜ್ಯಭಾರ ನಡೆಸಿದ ಕೊನೆಯ ಪ್ರಖ್ಯಾತ ಅರಸು. ಕ್ರಿ. ಶ. 1271 ರಲ್ಲಿ ಮಹಾದೇವ ಮರಣವಾದಾಗ ಇವನ ಮಗನಾದ ಆಮಣ ದೊರೆಯಾದ. ಆದರೆ ಕೆಲವೇ ತಿಂಗಳುಗಳಲ್ಲಿ ಕನ್ನರ (ಕಂಧರ, ಕೃಷ್ಣ) ನ ಮಗನಾದ ರಾಮಚಂದ್ರ ಇವನನ್ನು ಕೊಂದು ತಾನೇ ದೊರೆಯಾದನೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಮಾಳವ ದೇಶದ ಪರಮಾರರು, ಗುಜರಾತಿನ ವಾಘೇಲರು ಮತ್ತು ಹೊಯ್ಸಳರು, ಗುತ್ತಲರು ಇವರೆಲ್ಲರ ಮೇಲೆ ದಾಳಿ ಮಾಡಿದ್ದನೆಂದು ತಿಳಿದು ಬರುತ್ತದೆ. ಕ್ರಿ. ಶ. 1286 ರಲ್ಲಿ ಕಾಕತೀಯರ ರಾಣಿ ರುದ್ರಮ್ಮದೇವಿಯೊಡನೆ ಯುದ್ಧ ಮಾಡಿದ್ದನೆಂದು ಶಾಸನಗಳಿಂದ ತಿಳಿದು ಬರುತ್ತದೆ.
ವೈಭವದಿಂದ ಮಿನುಗುತ್ತಿದ್ದ ಅತ್ಯಂತ ಶ್ರೀಮಂತವಾಗಿದ್ದ ದೇವಗಿರಿಯ ಸೇವುಣರ ಸಾಮ್ರಾಜ್ಯದ ಸಿರಿ ಸಂಪತ್ತು ದೆಹಲಿಯ ಸುಲ್ತಾನ ಅಲ್ಲವುದ್ದೀನ ಖಿಲ್ಜಿಯ ಕಣ್ಣು ಕುಕ್ಕಿತ್ತು. ಕ್ರಿ. ಶ. 1296 ರಲ್ಲಿ ದಾಳಿ ಮಾಡಿದಾಗ ರಾಮಚಂದ್ರ ಶಾರಣಾಗತನಾಗಿ ಕಪ್ಪ ಕಾಣಿಕೆಗಳನ್ನು ನೀಡಲು ಒಪ್ಪಿಕೊಂಡನೆಂದು ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ. ಆದರೆ ಕ್ರಿ. ಶ. 1306 ರಲ್ಲಿ ಕಾಣಿಕೆಗಳನ್ನು ನೀಡಲು ನಿರಾಕರಿಸಿದಾಗ ಅಲ್ಲಾವುದ್ದೀನನ ಸೇನಾಪತಿ ಮಲ್ಲಕಾಫರ ದಾಲಿ ಮಾಡುತ್ತಾನೆ. ರಾಮಚಂದ್ರನನ್ನು ಬಂಧಿಯಾಗಿಸಿಕೊಂಡು ದೆಹಲಿಗೆ ಕರೆದೊಯ್ಯುತ್ತಾರೆ. ತತದನಂತರದ ಬೆಳವಣಿಗೆಗಳು ಇತಿಹಾಸದಲ್ಲಿ ಸ್ಪಷ್ಟವಾಗಿ ಉಲ್ಲೇಖ ಸಿಗುವುದಿಲ್ಲ. ದೆಹಲಿಯಿಂದ ಹಿಂತಿರುಗಿದ ನಂತರ ಕ್ರಿ. ಶ. 1309 ರಲ್ಲಿ ಮರಣ ಹೊಂದಿದನೆಂದು ತಿಳಿದು ಬರುತ್ತದೆ. ಅಲ್ಲಿಗೆ ಸ್ವತಂತ್ರರಾಗಿ ಆಡಳಿತ ನಡೆಸಿದ ದೇವಗಿರಿಯ ಸಾಮ್ರಾಜ್ಯ ಕೊನೆಗೊಂಡಿತೆಂದು ಹೇಳಬಹುದು.
ಮೂರನೇ ಅಧ್ಯಾಯ – ಅಲ್ಲವುದ್ದೀನ ಖಿಲ್ಜಿಯ ಆಧೀನ ಅರಸರಾಗಿ :
ಕ್ರಿ. ಶ. 1309 – 1312 : ಮುಮ್ಮಡಿ (ಮೂರನೆ) ಸಿಂಘಣ
ಕ್ರಿ. ಶ. 1313 – 1318 : ಹರಪಾಲದೇವ
ಕ್ರಿ. ಶ. 1318 – 1334 : ಮುಮ್ಮಡಿ (ಮೂರನೆ) ಮಲ್ಲುಗಿ
1. ಮುಮ್ಮಡಿ (ಮೂರನೆ) ಸಿಂಘಣ (ಶಂಕರದೇವ) (ಕ್ರಿ. ಶ. 1309 – 1312) :
ಕ್ರಿ. ಶ. 1309 ರಲ್ಲಿ ರಾಮಚಂದ್ರ ಮರಣ ಹೊಂದಲು ಇವನ ಮಗ ಮೂರನೆಯ ಸಿಂಘಣ ರಾಜನಾದ. ಇವನನ್ನು ಇತಿಹಾಸಕಾರರು ಸಂಗಮದೇವ, ಶಂಕರದೇವ ಎನ್ನುವ ಹೆಸರಿನಿಂದಲೂ ಗುರುತಿಸುತ್ತಾರೆ. ಅಲಾವುದ್ದೀನ ಖಿಲ್ಜಿಗೆ ಕೊಡಬೇಕಾದ ಕಪ್ಪಕಾಣಿಕೆಗಳನ್ನು ನಿಲ್ಲಿಸಿದ್ದರಿಂದ ದೆಹಲಿಯ ಸುಲ್ತಾನರ ಸೇನಾಪತಿ ಮಲಿಕಾಫರನು ಮತ್ತೆ ದೇವಗಿರಿಯ ಮೇಲೆ ದಾಳಿ ಮಾಡಿ ಇಮ್ಮಡಿ ಸಿಂಘಣನನ್ನು ಸೋಲಿಸಿ ಅವನನ್ನು ಕೊಲ್ಲಿಸಿದ. ಅಲ್ಲಿಗೆ ದೇವಗಿರಿ ಸೇವುಣರ ಸಾಮ್ರಾಜ್ಯ ಸಂಪೂರ್ಣವಾಗಿ ದೆಹಲಿಯ ಸುಲ್ತಾನರ ವಶವಾಯಿತು.
2. ಹರಪಾಲದೇವ (ಕ್ರಿ. ಶ. 1312 – 1318) :
ಮುಮ್ಮಡಿ (ಮೂರನೆ) ಸಿಂಘಣನನ್ನು ಕ್ರಿ. ಶ. 1312 ರಲ್ಲಿ ದೆಹಲಿಯ ಸುಲ್ತಾನ ಅಲ್ಲಾವುದ್ದೀನ ಖಿಲ್ಜಿಯು ಕೊಲ್ಲಿಸಿದ ನಂತರ ಪಟ್ಟವನ್ನೇರಿದವನು ರಾಮಚಂದ್ರನ ಅಳಿಯ ಹರಪಾಲದೇವ. ಕ್ರಿ. ಶ. 1312 ರಲ್ಲಿ ಅಲ್ಲವುದ್ದೀನನ ವಿರುದ್ಧ ಹರಪಾಲದೇವ ದಂಗೆಯೇಳುತ್ತಾನೆ. ಆಗ ಅಲ್ಲಾವುದ್ದೀನನ ಮಗ ಮುಬಾರಕ್ ದೇವಗಿರಿಯ ಮೇಲೆ ದಾಳಿ ಮಾಡಿದನೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಈ ದಾಳಿಯಲ್ಲಿ ಹರಪಾಲದೇವನನ್ನು ಸೆರೆ ಹಿಡಿದು ಕೊಲ್ಲಲ್ಪಡಲಾಗುತ್ತದೆ.
3. ಮುಮ್ಮಡಿ (ಮೂರನೆ) ಮಲ್ಲುಗಿ (ಕ್ರಿ. ಶ. 1318 – 1334) :
ಹರಪಾಲದೇವನ ಮರಣಾ ನಂತರ ದೆಹಲಿಯ ಸುಲ್ತಾನರ ಪರವಾಗಿ ಮಲ್ಲಿಕ್ ಯಾಖ್‍ಲಾಖಿ ದೇವಗಿರಿಯ ಆಡಳಿತ ಸೂತ್ರವನ್ನು ಹಿಡಿದನು ಎಂದು ತೀಳಿದು ಬರುತ್ತದೆ. ಕ್ರಿ. ಶ. 1334 ರ ಕಾಲಘಟ್ಟದ ಶಾಸನವೊಂದರಲ್ಲಿ ಮುಮ್ಮಡಿ (ಮೂರನೆ) ಮಲ್ಲುಗಿಯ ಉಲ್ಲೇಖವಿದೆ.
ಕರ್ನಾಟಕದ ಇತಿಹಾಸದಲ್ಲಿ ವೈಭವಯುತವಾಗಿ ಮೆರೆದ ದೇವಗಿರಿಯ ಸೇವುಣರ ಸಾಮ್ರಾಜ್ಯ ಇತಿಹಾಸದ ಕಾಲಗರ್ಭದಲ್ಲಿ ಸೇರಿ ಹೋಯಿತು.
-ವಿಜಯಕುಮಾರ ಕಮ್ಮಾರ
ತುಮಕೂರು –ಮೋಬೈಲ್ ನಂ: 9741 357 132
ಈ-ಮೇಲ್: vijikammar@gmail.com