ರೈತರ ನ್ಯಾಯಯುತ ಬೇಡಿಕೆಗೆ ಸ್ಪಂದಿಸದ ಸರ್ಕಾರ-ಆರ್. ಮಾನಸಯ್ಯ

e-ಸುದ್ದಿ, ಮಸ್ಕಿ
ನಾರಾಯಣಪುರ ಬಲದಂಡೆ 5ಎ ಕಾಲುವೆ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಟಿಯುಸಿಐ ಹಾಗೂ ಕೆಆರ್‍ಎಸ್ ಸಂಘಟನೆಯ ಮುಖಂಡರು ಮಸ್ಕಿ ತಾಲೂಕಿನ ಪಾಮನಕಲ್ಲೂರು ಬಳಿ ಟಿಯುಸಿಐ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ ನೇತೃತ್ವದಲ್ಲಿ ರಸ್ತಾ ರೋಕ್ ನಡೆಸಿ ಸೋಮವಾರ ಪ್ರತಿಭಟನೆ ನಡೆಸಿ ಲಿಂಗಸಗೂರು ಎಸಿ ರಾಜಶೇಖರ್ ಡಂಬಳ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಟಿಯುಸಿಐ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ ಮಾತನಾಡಿ ಈ ಭಾಗದ ಬಡ ರೈತರು ಬರಗಾಲದಿಂದ ಮುಕ್ತಿ ಹೊಂದಬೇಕಾದರೆ ನೀರಾವರಿ ಯೋಜನೆ ಅವಶ್ಯವಾಗಿದ್ದು ಕಳೆದ 12 ವರ್ಷಗಳಿಂದ ರೈತರು ತಮ್ಮ ಜಮೀನುಗಳಿಗೆ ನೀರಿಗಾಗಿ ಬಿಸಿಲು, ಮಳೆ, ಗಾಳಿ ಚಳಿ ಎನ್ನದೇ ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದರೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮಾತ್ರ ಇದಕ್ಕೂ ತಮಗೂ ಸಂಭಂಧವಿಲ್ಲ ಎಂಬಂತೆ ವರ್ತನೆ ತೋರುತ್ತಿದ್ದಾರೆ ಎಂದು ಟೀಕಿಸಿದರು.

ಮಸ್ಕಿ, ಮಾನ್ವಿ, ರಾಯಚೂರು, ದೇವದುರ್ಗ, ಸಿರವಾರ, ಲಿಂಗಸಗೂರು, ಹಾಗೂ ಸಿಂಧನೂರು ತಾಲೂಕುಗಳ 107 ಗ್ರಾಮಗಳ 1,77,912 ಎಕರೆ ಪ್ರದೇಶಕ್ಕೆ ಮಹತ್ವದ ಯೋಜನೆ ಇದಾಗಿರುವುದರಿಂದ ಯೋಜನೆ ಜಾರಿಯಾದರೆ ಈ ಭಾಗದ ರೈತರ ಬದುಕು ಹಸನಾಗುತ್ತದೆ. ಕಳೆದ 100 ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿರು ರೈತರ ಬೇಡಿಕೆಯನ್ನು ಈಡೇರಿಸಿ ರೈತರ ಸಹಾಯಕ್ಕೆ ಸರ್ಕಾರ ಬರಬೇಕು. ಅಲ್ಲದೇ ರಾಜ್ಯ ಸರ್ಕಾರದ 2021-22ನೇ ಸಾಲೀನ ಬಜೇಟ್‍ನಲ್ಲಿ 5ಎ ನಾಲೆ ಜಾರಿಗಾಗಿ ಹಣವನ್ನು ಮಂಜೂರು ಮಾಡುವ ಮೂಲಕ ರೈತರ ಬದುಕನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿದರು.
ಮಸ್ಕಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಟಿಯುಸಿಐ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೋಟ್ರಕಿ, ರಾಜ್ಯ ಖಜಾಂಚಿ ಅಮಿರಲಿ, ಕೆಆರ್‍ಎಸ್ ಮಸ್ಕಿ ತಾಲೂಕು ಅಧ್ಯಕ್ಷ ಸಂತೋಷ ಹಿರೇದಿನ್ನಿ, ಮಾರುತಿ ಜಿನ್ನಾಪೂರು ಸೇರಿದಂತೆ ಇತರರು ಇದ್ದರು.

Don`t copy text!