e-ಸುದ್ದಿ, ಮಸ್ಕಿ
ಕರೊನಾ ತಡೆಗಟ್ಟುವುದಕ್ಕಾಗಿ ಲಾಕ್‍ಡೌನ್ ವಿಧಿಸಿದ್ಧ ಸಮಯದಲ್ಲಿ ಜನರು ಉದ್ಯೋಗವಿಲ್ಲದೆ ತೊಂದರೆ ಅನುಭವಿಸಿದ್ದರು. ಆರ್ಥಿಕ ಹೊಡೆತದಿಂದ ಜನಸಾಮಾನ್ಯರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವಾಗಲೇ ಜನಸಾಮಾನ್ಯರು ಬಳಸುವ ದಿನಸಿ ವಸ್ತಿಗಳು, ತರಕಾರಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರ ಏರಿಕೆಯಾಗುತ್ತಿದೆ. ಅಲ್ಲದೇ ಕಳೆದ ಐದಾರು ತಿಂಗಳಿನಿಂದ ದಿನ ಬಳಕೆಯ ಅಡುಗೆ ಎಣ್ಣೆ, ತೊಗರಿ ಬೇಳೆ ಬೆಲೆ ಏರಿಕೆ ಯಾಗಿದ್ದು ಇದರಿಂದ ಜನರ ಬದುಕು ಮತ್ತಷ್ಟು ಬಿಗಡಾಯಿಸುತ್ತಿದೆ.
ಬಡವರು ಕೂಲಿ ಕಾರ್ಮಿಕರು ಪ್ರತಿದಿನ ಏರಿಕೆಯಾಗುತ್ತಿರುವ ಬೆಲೆಯಿಂದ ತತ್ತರಿಸಿದ್ದು, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವೆಚ್ಚಗಳು ಹೆಚ್ಚಾಗುತ್ತಿವೆ. ಇದರಿಂದ ಆಹಾರ ಧಾನ್ಯ, ತರಕಾರಿ ಸೇರಿದಂತೆ ಇನ್ನಿತರ ಪದಾರ್ಥಗಳ ದರ ಹೆಚ್ಚಾಗಿವೆ. ಜನರು ದಿನಬಳಕೆಯ ಅಗತ್ಯ ವಸ್ತುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿರುವುದರಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ಇಲ್ಲದೇ ವ್ಯಾಪಾರಸ್ಥರು ಸಂಕಷ್ಟ ಅನುಭವಿಸುವಂತಾಗಿದೆ.
ಸಿಲಿಂಡರ್ ಬೆಲೆ: ರಾಜ್ಯದಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಕಳೆದ ಎರಡುವರೆ ತಿಂಗಳಿನಲ್ಲಿ 225 ರೂಪಾಯಿಗಳಷ್ಟು ಏರಿಕೆಯಾಗಿ ಈಗ ಪ್ರತಿ ಸಿಲಿಂಡರ್‍ಗೆ ಗ್ರಾಹಕರು 822 ರೂಪಾಯಿ ಕೊಟ್ಟು ಖರೀದಿ ಮಾಡಬೇಕಾಗಿದೆ. ಅಲ್ಲದೇ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 100 ರೂಪಾಯಿ ಏರಿಕೆಯಾಗಿದ್ದೂ ಹೋಟೇಲ್ ಸೇರಿದಂತೆ ಇನ್ನಿತರ ವಾಣಿಜ್ಯ ಉಧ್ಯಮಕ್ಕೆ ಬಳಕೆ ಮಾಡುವ ಸಿಲಿಂಡರ್ ದರವು ಏರಿದೆ. ಎಲ್‍ಪಿಜಿ ಸಿಲಿಂಡರಗೆ ಈ ಹಿಂದೆ ಸಿಗುತ್ತಿದ್ದ ಸಬ್ಸಿಡಿಯನ್ನು ಸ್ಥಗಿತ ಮಾಡಲಾಗಿದ್ದು, ಈಗ ಗ್ಯಾಸನ ಸಂಪೂರ್ಣ ಮೊತ್ತವನ್ನು ಭರಿಸಬೇಕಾಗಿದೆ.
———————-
ದಿನೇ ದಿನೇ ಅಡುಗೆ ಪದಾರ್ಥಗಳು, ಸಿಲಿಂಡರ್ ಬೆಲೆ ಹೆಚ್ಚಾಗಿರುವದರಿಂದ ಮನೆ ನೆಸಿಕೊಂಡು ಹೋಗಲು ಕಷ್ಟವಾಗುತ್ತಿದೆ. ಅದರಲ್ಲು ಇಂಧನ ಬೆಲೆ ಏರಿಸಿದ ಪರಿಣಾಮ ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳು ಗಗನಕ್ಕೇರಿದ್ದು ಬಡವರ ಬದುಕುವದು ಕಷ್ಟವಾಗಿದೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಲೆಗಳನ್ನು ನಿಯಂತ್ರಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು.
-ವೀಣಾ ಮಸ್ಕಿ, ಗೃಹಿಣೆ
———————————-
ಕಳೆದ ಏಳೆಂಟು ತಿಂಗಳ ಹಿಂದೆ ಕರೊನಾ ವೈರಸ್ ಭಯದಿಂದ ಜನರು ಹೆಚ್ಚಾಗಿ ತರಕಾರಿ ಖರೀದಿಗಾಗಿ ಮಾರುಕಟ್ಟೆಗೆ ಬರುತ್ತಿರಲಿಲ್ಲ. ಆದರೆ ಈಗ ಸೊಪ್ಪಗಳು ಬೆಲೆ ಮಾತ್ರ ಕಡಿಮೆ ಇದೆ. ಆದರೆ ತರಕಾರಿ ಬೆಲೆ ಏರಿಕೆಯಾಗಿದೆ. ಗ್ರಾಹಕರು ಸಹ ಮೊದಲಿನ ರೀತಿಯಲ್ಲಿ ಹೆಚ್ಚು ತರಕಾರಿಯನ್ನು ಖರೀದಿ ಮಾಡುತ್ತಿಲ್ಲ. ಇದರಿಂದ ಸರಿಯಾಗಿ ವ್ಯಾಪಾರವಾಗುತ್ತಿಲ್ಲ
-ಹನುಮಂತಪ್ಪ ಸಾನಬಾಳ. ತರಕಾರಿ ವ್ಯಾಪಾರಿ ಮಸ್ಕಿ.