e-ಸುದ್ದಿ, ಮಸ್ಕಿ
ತಾಲೂಕಿನ ಬಳಗಾನೂರು ಪಟ್ಟಣ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ಸುಮಾರು 10-15 ಪ್ರೌಢ ಶಾಲೆಗಳಿವೆ. ಪ್ರತಿವರ್ಷ 800 ಕ್ಕೂ ಅಧಿಕ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತಿದ್ದಾರೆ. ಆದರೆ ಬಳಗಾನೂರು ಪಟ್ಟಣದಲ್ಲಿ ಕಾಲೇಜು ಇಲ್ಲ.
ತಾಲೂಕಿನ ದೊಡ್ಡ ಹೋಬಳಿ ಇದಾಗಿದ್ದು ಪಟ್ಟಣ ಪಂಚಾಯತಿ ಹೊಂದಿದೆ. ಸ್ಥಳಿಯವಾಗಿ ಕಾಲೇಜು ಇಲ್ಲದ್ದರಿಂದ ಪ್ರತಿವರ್ಷ 300-400 ವಿದ್ಯಾರ್ಥಿಗಳು ದೂರದ ಕಾಲೇಜುಗಳಿಗೆ ಹೋಗಲು ಹಿಂದೇಟು ಹಾಕಿ ಕಾಲೇಜು ಕಲಿಯಲಾಗದೆ ಮನೆಯಲ್ಲಿ ಕಾಲ ತಳ್ಳುತ್ತಿದ್ದಾರೆ.
ಬಳಗಾನೂರುಪಟ್ಟಣದಲ್ಲಿಪಿಯು ಮತ್ತು ಪದವಿ ಕಾಲೇಜು ಆರಂಭಿಸಬೇಕು ಎಂದು ಕಳೆದ 7 ವರ್ಷಗಳಿಂದ ಇಲ್ಲಿನ ನಾಗರೀಕರು, ವಿವಿಧ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿವೆ. ಸ್ಥಳಿಯ ಶಾಸಕರಿಂದ ಹಿಡಿದು ಶಿಕ್ಷಣ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಇದೀಗ ವಿವಿಧ ಸಂಘಟನೆಗಳು ಹಾಗೂ ಗ್ರಾಮಸ್ಥರು ಸೇರಿ ಕಾಲೇಜು ಮಂಜೂರಿಗಾಗಿ ಮಾರ್ಚ್ 8 ರಂದು ಬಳಗಾನೂರು ಬಂದ್ ಮಾಡಲಾಗುವದು ಎಂದು ಕಾಲೇಜು ಹೋರಾಟ ಸಮಿತಿಯವರು ಕರೆ ನೀಡಿದ್ದಾರೆ.
30 ಕ್ಕೂ ಹೆಚ್ಚು ಹಳ್ಳಿಗಳು ಬಳಗಾನೂರು ಪಟ್ಟಣಕ್ಕೆ ಹೊಂದಿಕೊಂಡಿವೆ. ಬಳಗಾನೂರು ಸಮೀಪದ ದಿದ್ದಗಿ, ಜಾಲವಾಡಗಿ, ಉದ್ಬಾಳ, ಹುಲ್ಲೂರು, ಗೌಡನಭಾವಿ ಸೇರಿ ಹಲವು ಹಳ್ಳಿಗಳ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಮರಿಚೀಕೆಯಾಗಿದೆ.
ನಿತ್ಯ ಪರದಾಟ: ಪದವಿ ಪೂರ್ವ, ಪದವಿ ಶಿಕ್ಷಣಕ್ಕಾಗಿ ಮಸ್ಕಿ, ನೆರೆಯ ಸಿಂಧನೂರು ಇಲ್ಲವೇ ಪೋತ್ನಾಳ ಕೇಂದ್ರಕ್ಕೆ ತೆರಳಬೇಕು. ಕಾಲೇಜು ಕಲಿಯಲು ನಿತ್ಯ ಸುಮಾರು 15-30 ಕಿ.ಮೀ. ಪ್ರಯಾಣ ಮಾಡಬೇಕಾದ ದುಸ್ಥಿತಿ ಇದೆ. ಮಸ್ಕಿ, ಸಿಂಧನೂರು, ಪೋತ್ನಾಳ ಕಾಲೇಜುಗಳಿಗೆ ತೆರಳಬೇಕಾದರೆ ನಿತ್ಯ ಬಸ್‍ನಲ್ಲಿ ನೂಕು-ನುಗ್ಗಲಿನ ನಡುವಿಯೇ ಬಸ್ ಹಿಡಿದು ಸಾಗಬೇಕು. ಇಂತಹ ಫಜೀತಿಯಲ್ಲಿ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.
———————————————
ಹಳ್ಳಿಯಿಂದ ದಿಲ್ಲಿಗೆ
ಬಳಗಾನೂರು ಪಟ್ಟಣ ಕೇಂದ್ರಕ್ಕೆ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳನ್ನು ಮಂಜೂರು ಮಾಡುವಂತೆ ಇಲ್ಲಿನ ಗ್ರಾಮಸ್ಥರು ಹಳ್ಳಿಯಿಂದ ದಿಲ್ಲಿಯವರೆಗೂ ಒತ್ತಡ ಹಾಕುತ್ತಿದ್ದಾರೆ. ಸ್ಥಳೀಯ ಶಾಸಕರಿಂದ ಹಿಡಿದು ಮಂತ್ರಿಗಳು, ಮುಖ್ಯಮಂತ್ರಿ, ರಾಜ್ಯಪಾಲರಿಗೂ ಮನವಿ ಮಾಡಿದ್ದಾರೆ. ಅಲ್ಲದೇ ಕೇಂದ್ರದ ಮಂತ್ರಿಗಳಿಗೂ ಮನವಿ ಪತ್ರ ಬರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬೇಡಿಕೆ ಕುರಿತು ನಾಗರೀಕರು ಮನವಿ ಮಾಡಿದ ವಿಡಿಯೋಗಳು ಹೆಚ್ಚು ಸದ್ದು ಮಾಡುತ್ತಿವೆ ಈಗಲಾದರೂ ಸÀರ್ಕಾರ ಕಾಲೇಜು ಮಂಜೂರು ಮಾಡಿ ಇಲ್ಲಿನ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಮುಕ್ತಿ ಹಾಡಬೇಕಿದೆ.
————————