ಸವಾರಿ
ಬಾಳ ಬಂಡಿಯನ್ನು
ಎಳೆಯುವ ನನಗೆ
ಈ ಸವಾರಿ ಮೋಜಿನದು
ಭಾರವನೆಷ್ಟೆ ಹೇರಿದರು
ಜಾರದಹಾಗೆ
ಗಾಡಿ ಓಡಿಸುವೆನು||
ಮಣ್ಣಿನ ಮಗಳು ನಾ
ಬೆಳೆದಿಹೆ ತರತರ ತರಕಾರಿ
ಬಂಡಿಯ ಗಾಡಿಗೆ
ಎತ್ತುಗಳಿಲ್ಲದೆ
ನಡೆಸುತಿರುವೆ
ಈ ಬೈಕ್ ಸವಾರಿ||
ಹಳ್ಳಿಯ ಹೆಣ್ಣು
ಬಲ್ಲಳು ಏನು ಎಂದು
ಕಡೆಗಣಿಸದಿರಿ
ಮಣ್ಣಲ್ಲಿ ಅನ್ನವ ಬೆಳೆಯುವ ನಾವು
ಬಲ್ಲೆವು ಎಲ್ಲನೂ
ಈ ಬದುಕಿಗಾಗಿ||
ಜಗದಲಿ ಏನೆ ಆದರು
ನಮಗೆ ಅರಿವಿರದು
ಬೆಳೆಯನು ಬೆಳೆದು
ಉಣ್ಣುವ ಬಾಯಿಗೆ
ಅನ್ನವ ನೀಡುವುದೊಂದೆ
ಗೊತ್ತಿಹುದು||
ಬಿಡಿಸಿದ ಬೆಳೆಯನು
ತುಂಬಿಸಿ ಚೀಲದಿ
ಹೊರಟಿಹೆ ಮಾರಲು
ಬೈಕನು ಏರಿ
ಶ್ರಮಕೆ ಸಮ ಬೆಲೆ ಸಿಕ್ಕರೆ ಸಾಕು
ಸಾರ್ಥಕ ನನ್ನ ದುಡಿಮೆಯು||
– ಶ್ರೀ ಮತಿ ಆಶಾ ಎಸ್ ಯಮಕನಮರಡಿ