ರಾಜಕೀಯ ದುರುದ್ದೇಶಕ್ಕೆ ಕೇಸ್ ದಾಖಲು-ಎಚ್.ಬಿ.ಮುರಾರಿ
e-ಸುದ್ದಿ, ಮಸ್ಕಿ
ಕಾಂಗ್ರೆಸ್ ಕಚೇರಿಯಲ್ಲಿ ಪೂಜೆ ಕಾರ್ಯಕ್ರಮವೊಂದರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಕೆಳಗಿಟ್ಟಿರುವುದು ಅಚಾತುರ್ಯದಿಂದ ನಡೆದ ಘಟನೆ ನಡೆದಿದೆ ವಿನಃ ಇದು ಉದ್ದೇಶ ಪೂರ್ವಕವಲ್ಲ. ಈ ಘಟನೆ ಬಗ್ಗೆ ನಮಗೂ ವಿಷಾಧವಿದೆ ಆದರೆ ಬಿಜೆಪಿಯವರು ಇದ್ದನ್ನೇ ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಜಿ.ಪಂ.ಮಾಜಿ ಸದಸ್ಯ ಎಚ್.ಬಿ.ಮುರಾರಿ ಹೇಳಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಎಚ್.ಬಿ.ಮುರಾರಿ, ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹನುಮತಂಪ್ಪ ಮುದ್ದಾಪೂರ ಸೇರಿ ಇತರೆ ನಾಯಕರು ಜಂಟಿಯಾಗಿ ಮಾತನಾಡಿದರು.
ಮಾ.6ರಂದು ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಘಟನೆ ನಡೆದಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ಈ ಭಾವಚಿತ್ರ ತೆಗೆದಿದ್ದು ಎಂಟು ತಿಂಗಳ ಹಿಂದೆ ಕಾಂಗ್ರೆಸ್ ಕಚೇರಿ ಉದ್ಘಾಟನೆಗೂ ಮುನ್ನವೇ ಇನ್ನು ಬಾಕಿ ಕೆಲಸ ನಡೆದಿದ್ದ ವೇಳೆ ಕಚೇರಿಯಲ್ಲಿ ಅಳವಡಿಸುವುದಕ್ಕಾಗಿ ಎಲ್ಲ ಮಹಾತ್ಮರ ಭಾವಚಿತ್ರಗಳನ್ನು ತಂದು ಒಂದು ಕಡೆ ಇಡಲಾಗಿತ್ತು. ಆದರೆ ಆಗಿನ ಫೋಟೊವನ್ನು ಈಗ ಬಳಸಿಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಮಹಾತ್ಮರ ಹೆಸರು ಬಳಸಿಕೊಂಡು ರಾಜಕೀಯ ಮಾಡುವುದು ಸರಿಯಲ್ಲ ಎಂದು ಎಚ್.ಬಿ.ಮುರಾರಿ ಹೇಳಿದರು.
ದೂರು ದಾಖಲಿಸಿದ ಮಲ್ಲಪ್ಪ ಗೋನಾಳ ಅವರ ಜತೆ ಮಾತನಾಡುತ್ತೇವೆ. ಅವರು ನಮ್ಮ ಸಹೊದರ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ. ಆದರೆ ಬಿಜೆಪಿ ನಾಯಕರು ಸೋಲುವ ಹತಾಸೆಯಿಂದ ಹೀಗೆ ಕೆಟ್ಟ ರಾಜಕಾರಣಕ್ಕೆ ಇಳಿಯಬಾರದು. ಡಾ.ಬಿ.ಆರ್.ಅಂಬೇಡ್ಕರ್ ಸೇರಿ ಎಲ್ಲ ಮಹಾತ್ಮರ ಬಗ್ಗೆ ಕಾಂಗ್ರೆಸ್‍ಗೆ ಗೌರವವಿದೆ. ಅಂಬೇಡ್ಕರ್ ತತ್ವಗಳು ಮತ್ತು ಕಾಂಗ್ರೆಸ್‍ನ ಸಿದ್ದಾಂತಗಳಿಗೆ ಸಾಮ್ಯತೆ ಇದೆ. ಆದರೆ ಬಿಜೆಪಿಯವರ ರೀತಿ ಸಂವಿಧಾನವನ್ನೇ ತೆಗೆದು ಹಾಕುವ, ಬದಲಾವಣೆ ಮಾಡುವ ವ್ಯತಿರಿಕ್ತ ಸಿದ್ದಾಂತ ನಮ್ಮದಲ್ಲ. ಹೀಗಾಗಿ ಕಣ್ತಪ್ಪಿನಿಂದ ಆದ ಘಟನೆಗಳಲ್ಲಿ ಯಾವುದೇ ರಾಜಕೀಯ ಪಕ್ಷವು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳದೇ ಜನರ ಮನ ಗೆದ್ದು ಚುನಾವಣೆ ಎದುರಿಸಬೇಕು ಎಂದು ಹೇಳಿದರು.
ಘಟಕದ ಅಧ್ಯಕ್ಷ ಹನುಮತಂಪ್ಪ ಮುದ್ದಾಪೂರ, ಮಲ್ಲಯ್ಯ ಸೇರಿ ಇತರರು ಇದ್ದರು.