ಶಿವ ಅಂದರೆ ಮಂಗಳ.

ಶಿವ ಅಂದರೆ ಮಂಗಳ.

ಮೊದಲ ಬಾರಿಗೆ ಶಾಲೆಯಲ್ಲಿ ನನ್ನ ಕಿವಿಗೆ ಬಿದ್ದ ಶಿವನ ಪದದ ಅರ್ಥ. ಆ ಇಡೀ ದಿನ ನನ್ನಲ್ಲಿ ಎಂಥದೋ ಪುಳಕದ ಅಲೆ. ಅರೆ, ಹಾಗಾದರೆ ನನ್ನ ಹೆಸರಿನ ಅರ್ಥ ಶಿವ ಎಂದು ಪದೇ ಪದೇ ಅಂದುಕೊಳ್ಳುತ್ತಾ ಮನೆಯಲ್ಲೆಲ್ಲಾ ಹೇಳಿಕೊಂಡು ಸಡಗರದಿಂದ ಸಂಭ್ರಮಿಸಿದ್ದು ಇಂದಿಗೂ ನೆನಪು. ಚಿಕ್ಕಂದಿನಿಂದ ಪುರಾಣದ ಶಿವನೆಂದರೆ ನನಗೆ ಅಂತಹ ಒಲವಿಲ್ಲದಿದ್ದರೂ ಪಾರ್ವತಿಯನ್ನು ಸದಾ ತೊಡೆಗೆ ಏರಿಸಿಕೊಂಡಿದ್ದ ಆತನ ಬಗ್ಗೆ ವಿಶೇಷ ಗೌರವವಂತೂ ಹುಟ್ಟಿತ್ತು. ಶಿವನ ಧ್ಯಾನಸ್ಥ ಭಾವಚಿತ್ರಗಳು ಆಪ್ಯಾಯಮಾನ ಎನಿಸಿದ್ದವು.

ಮೊದಲ ಬಾರಿಗೆ ಇಂತಹ ಕಲ್ಪನೆಯಿಂದ ಇತಿಹಾಸದ ಹೆಜ್ಜೆಗಳಲ್ಲಿ ಶಿವ ತನ್ನ ಇರುವನ್ನು ನನಗೆ ತೋರಿಸಿದ್ದು ಹರಪ್ಪ ನಾಗರಿಕತೆ ಓದುವಾಗ. ಹರ, ಶಿವ , ಈಶ್ವರ, ಮಹಾದೇವ… ಎಂದೆಲ್ಲ ಕರೆಸಿಕೊಳ್ಳುವ ಈತ ಸಾಮಾನ್ಯನಲ್ಲ. ಸಿಂಧೂ ನದಿಯ ಶಿಷ್ಠ ನಾಗರಿಕತೆಯಲ್ಲಿ ಶಿವನ ಅದೃಶ್ಯ ಪಾತ್ರವಿದೆ. ಇಂತಿಷ್ಟೇ ಸಾವಿರ ವರ್ಷಗಳ ಹಿಂದೆ ಶಿವ ಇದ್ದನೆಂದು ನಿಖರವಾಗಿ ಗುರುತಿಸುವುದು ಕ್ಲಿಷ್ಟವಾದರೂ ಶಿವನ ದೊಡ್ಡ ಪರಂಪರೆಯೇ ಈ ನೆಲದಲ್ಲಿ ಬಂದು ಹೋಗಿದೆ. ನಮ್ಮ ದೇಶದ ಮೂಲೆ ಮೂಲೆಯ ಮನೆ ಮನೆಗಳಲ್ಲಿ ಆತನ ಹೆಸರು ಅಜರಾಮರ. ಅಂಬೇಡ್ಕರ್, ಲೋಹಿಯಾ, ಹಾಗೂ ಇನ್ನೂ ಕೆಲವು ವಿದ್ವಾಂಸರ ಓದಿನಿಂದ ಐತಿಹಾಸಿಕ ವ್ಯಕ್ತಿಯಾಗಿ ಶಿವನ ಬಗೆಗಿನ ತಿಳಿವಳಿಕೆ ವಿಸ್ತಾರಗೊಂಡಿತು…

ಪಂಚಭೂತಗಳನ್ನು ತನ್ನ ವೇಷದಲ್ಲಿ ಹೊದ್ದುಕೊಂಡ ಶಿವನು ಯೋಗ , ಧ್ಯಾನ, ಏಕಾಗ್ರತೆಯ ಸಂಕೇತ. ಆದರೆ ಆತ ಅಷ್ಟಕ್ಕೇ ನಿಲ್ಲಲಾರ. ಇತಿಹಾಸದ ಸ್ಥಿತ್ಯಂತರದಲ್ಲಿ ಶಿವ ಲಿಂಗವಾದ. ಸಗುಣ, ನಿರ್ಗುಣ ಎರಡೂ ಆಗಿ ತನ್ನ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿಕೊಂಡ. ಭೂಮಿ, ಆಕಾಶವನ್ನು ತಬ್ಬಿ ನಿಂತ.
“ಜಗದಗಲ, ಮುಗಿಲಗಲ, ಅಗಮ್ಯ, ಅಗೋಚರನಾದ ಲಿಂಗವನ್ನು” ಶರಣರು ಆರಾಧಿಸಿದರೂ ಆರಂಭದಲ್ಲಿ ಅನೇಕರಿಗೆ ಆಧ್ಯಾತ್ಮದತ್ತ ಒಲವು ಮೂಡಿಸಿಕೊಳ್ಳಲು ಸ್ಫೂರ್ತಿ ನೀಡಿದ್ದೇ ಈ ಶಿವ. ಬಸವಣ್ಣನವರನ್ನು ಸಂಗಮನಾಥನಾಗಿ, ಅಕ್ಕನ ಚನ್ನಮಲ್ಲಿಕಾರ್ಜುನನಾಗಿ ಸೆಳೆದ ಶಿವ ಈತ. ರೂಹಿಲ್ಲದ, ಹೆಸರಿಲ್ಲದ ಆ ಪರಾತ್ಪರ ತತ್ವವನ್ನು ಶರಣರು ನಾನಾ ಹೆಸರುಗಳಿಂದ ಕರೆದರು. ಗುಹೇಶ್ವರಾ, ಕಪಿಲಸಿದ್ಧಮಲ್ಲಿಕಾರ್ಜುನಾ, ಯೋಗಿನಾಥ, ಅಮರೇಶ್ವರ… ಬಹುತೇಕ ಎಲ್ಲ ಹೆಸರುಗಳಲ್ಲಿಯೂ ಅವಿನಾಭಾವ ರೂಪದಲ್ಲಿ ಸೇರಿಕೊಂಡಿದ್ದು ಶಿವನ ಹೆಸರು! “ಹರನೆ ಮೂಲಿಗನಾಗಿ” ಎಂದು ಬಸವಣ್ಣನವರೂ ಶಿವನನ್ನು ತಮ್ಮ ವಚನದಲ್ಲಿ ನೆನೆದಿದ್ದಾರೆ.

ಪ್ರತಿ ಜೀವಿಯೂ ಶಿವನ ಸ್ವರೂಪ ಎಂದರು ಶರಣರು. ವಿಕಾಸದ ಪ್ರಕ್ರಿಯೆಯಲ್ಲಿ ಶಿವ ಧ್ಯಾನಿಸುವ ವಸ್ತುವೇ ತಾನಾದ. ಸ್ಥಾವರಲಿಂಗ ರೂಪ ತಾಳಿ, ದೇವ ಸ್ವರೂಪದಲ್ಲಿ ಲೀನನಾದ. ನಿರಾಕಾರನಾದ. ವಿಶ್ವರೂಪಿಯಾದ. ಆತನಿಗೆ ನಾನಾ ಅರ್ಥಗಳು ಸಹಜವಾಗಿಯೇ ತೆರೆದುಕೊಂಡವು. ಶಿವನೆಂದರೆ ಶೂನ್ಯ, ನಿರವಯ, ನಿರಾಧಾರ, ಅಂತ್ಯವಿಲ್ಲದ ಅನಂತತೆ. ಶರಣರಂತೆ ಬಯಲಲ್ಲಿ ಬಯಲಾದ ಬಯಲು. ಬೆಳಗಿನೊಳಗಿನ ಬೆಳಗು. ಬ್ರಹ್ಮಾಂಡವನ್ನು ಬೆಳಗುವ ಮಂಗಳ ರೂಪಿ!


-ಕೆ ಆರ್ ಮಂಗಳಾ

Don`t copy text!