ಶಿವನಾಗಿ ಶಿವನ ಪೂಜಿಸು
ಶಿವ ಅಂದ್ರೆ ಯಾರು ವ್ಯಕ್ತಿಯೋ, ಶಕ್ತಿಯೋ, ತತ್ವವೋ…. ಶಿವರಾತ್ರಿ ಎಂದರೆ ಎನು ಇದರ ಉಲ್ಲೇಖ ವಚನಗಳಲ್ಲೂ ಇದೆ ಅಂದ್ರೆ ಇದು ಎಷ್ಟು ಪುರಾತನವಾದ ಆಚರಣೆ ಇರಬಹುದು, ಹೀಗೆ ಏನೇನೋ ಯೋಚನೆಗಳು…..
ಬಸವಣ್ಣನವರು ಹೇಳತಿದ್ದಾರೆ
” ಜನ್ಮ ಹೊಲ್ಲೆಂಬೆನೆ ಜನ್ಮವ ಬಿಡಲಹೆನು.
ಭಕ್ತರೊಲವ ಪಡೆವೆನೆ ಭಕ್ತಿಯಪಥವನರಿವೆನು.
ಲಿಂಗವೆಂದು ಬಲ್ಲೆನೆ ಜಂಗಮವೆಂದು ಕಾಂಬೆನು .
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಬಲ್ಲೆನೆ ಕೈಲಾಸವ ಕಾಣಬಲ್ಲೆನು.
ಎನ್ನಲ್ಲಿ ನಡೆಯಿಲ್ಲಾಗಿ ಭಕ್ತನೆಂತೆಂಹೆನಯ್ಯಾ ಕೂಡಲಸಂಗಮದೇವಾ”
ಈಜನ್ಮ ಬೇಡವಾದರೆ ತೊರೆಯ ಬಲ್ಲೆ, ಭಕ್ತರೊಲವ ಬೇಕಾದರೆ ಭಕ್ತಿಯ ಪಥವು ಗೊತ್ತು. ಲಿಂಗದ ಮುಖ ಜಂಗಮವೆಂದು ಗೊತ್ತು. ನಿತ್ಯವೂ ಶರಣನ ಎಚ್ಚರದ ಶಿವರಾತ್ರಿಯ ಮಾಡಿದರೆ ಕೈಲಾಸವ ಕಾಣಬಲ್ಲೆ ಎಂಬುದೂ ಗೊತ್ತು ಆದರೆ ಎನ್ನಲ್ಲಿ ನಡೆಯೇ ಇಲ್ಲ ಭಕ್ತ ಹೇಗಾದೇನು ಎಂದು ಬಸವಣ್ಣ ರೋಧಿಸುತ್ತಿರುವರು.
ಮುಕ್ತಾಯಕ್ಕ ಹೇಳತಿದಾಳೆ…” ಸುಮ್ಮನೇಕೆ ದಿನ ಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ಸ್ವಾಮಿಗಳಿರಾ, ಮಾಡ ಬನ್ನಿ ದಿನ ಶಿವರಾತ್ರಿಯ, ಕೇಳಬನ್ನಿ ಶಿವಾನುಭವವ ನೋಡಬನ್ನಿ ಅಜಗಣ್ಣನ ಇರವ ಬಸವಣ್ಣತಂದೆ.”
ಹೌದು ತಾಯಿ…ಹೊತ್ತಾರೆ ಎದ್ದು ಶಿವಲಿಂಗದೇವನ ದೃಷ್ಟಿ ವಾರಿ ನೋಡದವನ ಸಂಸಾರವೇನವನ ಬಾಳುವೆಣನ ಬೀಳುವೆಣನ ಸಂಸಾರವೇನವನ ನಡೆವೆಣನ ನುಡಿವೆಣನ ಸಂಸಾರವೇನವನ, ಕರ್ತೃ ಕೂಡಲಸಂಗಮದೇವಾ ನಿಮ್ಮ ತೊತ್ತುಗೆಲಸ ಮಾಡದವನ ಸಂಸಾರವೇನವನ”
ಹೌದು ಹೊತ್ತು ಹೋಗದ ಮುನ್ನ ಜಂಗಮ ಲಿಂಗದ ಮುಖ ನೋಡದ ಸೇವೆಗೈಯ್ಯದ ಬದುಕು ಶವದಂತೆಯೆ….ಶರಣರ ಸಂಗ ಬೇಕು ಅನವರತ…
“ಮಡಕೆಯ ಮಾಡುವರೆ ಮಣ್ಣೆ ಮೊದಲು, ತೊಡಗೆಯ ಮಾಡುವರೆ ಹೊನ್ನೆ ಮೊದಲು, ಶಿವಪಥನರಿವೆಡೆ ಗುರುಪಥವೆ ಮೊದಲು, ಕೂಡಲಸಂಗಮದೇವನರಿವೆಡೆ ಶರಣರ ಸಂಗವೆ ಮೊದಲು”
ಎನ್ನಲು ಸಿದ್ಧರಾಮರೂ ತಲೆದೂಗುತ್ತಾ ಉಲಿವರು…
“ಶಿವ ಶಿವಾ, ಶಿವ ಶಿವಾ, ಶಿವ ಶಿವಾ ಎಂದೊಮ್ಮೆ ಶಿವನಾಗಿ ಶಿವನ ಪೂಜಿಸು ಮನವೇ, ಹರಹರಾ, ಹರಹರಾ, ಹರಹರಾ ಎಂದೊಮ್ಮೆ ಹರನಾಗಿ ಹರನ ಪೂಜಿಸು ಮನವೇ, ಲಿಂಗವೇ ಲಿಂಗವೇ ಲಿಂಗವೇ ಎಂದೊಮ್ಮೆ ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವಾ ಪೂಜಿಸಿ ಲಿಂಗವಾಗು ಮನವೆ ಲಿಂಗವಾಗು ಮನವೆ”
ಶಿವನಾಗಿ ಶಿವನ ಪೂಜಿಸೋ, ಲಿಂಗವಾಗು ಮನವೆ ಲಿಂಗವಾಗು ಮನವೆ ತುಟಿಗಳು ಬಡಬಡಿಸುತಿವೆ….
ಘಂಟೆಯ ಸದ್ದು ಮಂತ್ರಘೋಷ ಕಿವಿ ಅಪ್ಪಳಿಸುತಿವೆ ಫಕ್ಕನೆ ಎಚ್ಚರವಾಯಿತು. ಶಿವರಾತ್ರಿಯ ಪ್ರಶ್ನೆಗಳಿಗೆ ಶರಣರೆ ಉತ್ತರಿಸಿದ್ದರು ಕನಸಿನಲ್ಲಿ.
ಮನಸಿನ ಆಲೋಚನೆಗಳೆಲ್ಲಾ ತೆರೆಕಂಡವು ಹಾಗೆಯೆ ಬಸವ ವಚನಗಳು ಮನದ ಮುಂದೆ ಬಂದು ನಿಂದವು…
” ಅಂದು ಇಂದು ಮತ್ತೊಂದೆನಬೇಡ ದಿನವಿಂದೇ ಶಿವಶರಣೆಂಬುವಂಗೆ , ದಿನವಿಂದೆ ಹರಶರಣೆಂಬುವಂಗೆ, ದಿನವಿಂದೇ ನಮ್ಮಕೂಡಲಸಂಗನ ಮಾಣದೆ ನೆನೆವಂಗೆ”
“ಶರಣ ನಿದ್ರೆಗೈದರೆ ಜಪ ಕಾಣಿರೋ, ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ, ಶರಣಾ ನಡೆದುದೇ ಪಾವನ ಕಾಣಿರೋ, ಶರಣಾ ನುಡಿದುದೆ ಶಿವತತ್ವ ಕಾಣಿರೋ, ಕೂಡಲಸಂಗನ ಶರಣರ ಕಾಯವೇ ಕೈಲಾಸ ಕಾಣಿರೋ”
–ಸುನಿತಾ ಮೂರಶಿಳ್ಳಿ ಧಾರವಾಡ
9986437474