ಸಂಗ——ಸಂಘ —–

ಸಂಗ——ಸಂಘ —–

ಪ್ರಸ್ತುತ ದಿನಗಳಲ್ಲಿ ನಾವಿಂದು ಈ ಮೇಲಿನ ಎರಡು ಪದಗಳನ್ನು ಸರಿಯಾಗಿ ಅರ್ಥೈಸಿಕೊಂಡು ಜೀವನ ಸಾಗಿಸಬೇಕಾಗಿದೆ.
ಸಂಗ ——–ಒಡನಾಟ,ಸಹವಾಸ,ಗೆಳೆತನ.
ಸಂಘ–—-ಗುಂಪು, ಸಮೂಹ, ಒಕ್ಕೂಟ.
ಸಂಗ ಮತ್ತು ಸಂಘ ಈ ಎರಡೂ ಶಬ್ದಗಳು ಕೇಳುಗನ ಕಿವಿಗೆ ಎಷ್ಟು ಹಿತವೆನಿಸುವುದೋ ಅಷ್ಟೇ ಭಯ-ಆಘಾತ ಹುಟ್ಟಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ದೈಹಿಕ, ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ, ಶೈಕ್ಷಣಿಕ, ಕೌಟುಂಬಿಕ ಸಂಬಂಧಗಳು ಪ್ರಭಾವವನ್ನು ಬೀರುತ್ತವೆ.

ಸಂಗ—-

ಸಾರ ಸಜ್ಜನರ ಸಂಗ ಲೇಸು ಕಂಡಯ್ಯ ದೂರ ದುರ್ಜನರ ಸಂಗ ಭಂಗವಯ್ಯ ಸಂಗವೆರಡು ಒಂದು ಬಿಡು ಒಂದ ಹಿಡಿ ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರ

ಉಣ್ಣೆ ಕೆಚ್ಚಲೊಳಿರ್ದು ಉನ್ನದದು ನೊರೆವಾಲು ಎನ್ನುವಂತೆ.ನಾವು ನಮ್ಮ ಜೀವನ ಯಾತ್ರೆಯಲ್ಲಿ ಲಕ್ಷಾಂತರ ಜನರ ಸಂಗವ ಮಾಡುತ್ತೇವೆ ಅವರುಗಳಲ್ಲಿ ಕೆಲವರು ಒಳ್ಳೆಯವರು ಇನ್ನು ಕೆಲವರು ಕೆಟ್ಟವರು ಇರುತ್ತಾರೆ. ಸಮಾಜಮುಖಿಯಾಗಿ ನಾವು ಬೆಳೆಯಬೇಕಾದರೆ ಕೆಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಹಾಗೆಯೇ ಸಜ್ಜನರ ಸಹವಾಸವನ್ನು ಮತ್ತು ಉತ್ತಮವಾದ ಶಿಕ್ಷಣ, ಅಧ್ಯಯನ ಬಹಳ ಮುಖ್ಯ. ಸಂಗ ಸಹವಾಸದಿಂದ ಏನಾಗುತ್ತದೆ ಎಂಬುದಕ್ಕೆ ಈ ಕೆಳಗಿನ ವಚನ ಒಂದು ಉತ್ತಮ ಉದಾಹರಣೆ
ಸಾರ! ಸಜ್ಜನರ ಸಂಗವ ಮಾಡುವುದು ದೂರ! ದುರ್ಜನರ ಸಂಗ ಬೇಡವಯ್ಯ ಆವ ಹಾವಾದರೇನು? ವಿಷವೊಂದೆ ಅಂತವರ ಸಂಗ ಬೇಡವಯ್ಯಾ ಅಂತರಂಗಶುದ್ಧವಿಲ್ಲದವರ ಸಂಗ ಸಿಂಗಿ-ಕಾಳಕೂಟ ವಿಷವೋ ಕೂಡಲಸಂಗಮದೇವಾ
ಉತ್ತಮರ ಸಹವಾಸದಿಂದ ಸಮಾಜದಲ್ಲಿ ಗೌರವ ಘನತೆ ಸನ್ಮಾನ ಬಿರುದು ಹೊಗಳಿಕೆ ಕಂಡುಬರುತ್ತವೆ ಆದರೆ ಅದೇ ದುಷ್ಟರ ಸಹವಾಸ ಮಾಡಿದರೆ ಕಷ್ಟನಷ್ಟಗಳು ಮಾನಸಿಕ ಹಿಂಸೆ ಕೊಲೆ, ಆತ್ಮಹತ್ಯೆಗಳು ಕಂಡುಬರುತ್ತವೆ.

ಸಂಗ ಲೇಸು ಸಾಧು ಸತ್ಪುರುಷರ ಸಂಗಲೇಸು ಸದ್ಭಕ್ತರ ಶರಣಜನಂಗಳ.ಸಂಗಲೇಸು ಸುಜ್ಞಾನ ಸಹವಾಸಿಗಳ ಸಂಗ ಲೇಸು ಅಖಂಡೇಶ್ವರಲಿಂಗವ ಕೂಡಿದ ಸದ್ ಭೋಗಿಗಳ.
“ಕೂಡಲಸಂಗನ ಶರಣರ ಅನುಭಾವದಿಂದ ಎನ್ನ ಮನದ ಕೇಡು ನೋಡಯ್ಯ” ಎನ್ನುವಂತೆ ತಂದೆತಾಯಿಗಳ ಗುರುವಿನ ಸಹವಾಸದಿಂದ ಉತ್ತಮ ಸಂಸ್ಕಾರ ಪಡೆಯುತ್ತೇವೆ.
ಉತ್ತರ ಕರ್ನಾಟಕದಲ್ಲಿ ಒಂದು ಜನಪ್ರಿಯ ಗಾದೆ ಮಾತಿದೆ ಅದೇನೆಂದರೆ
ಸಹವಾಸದಿಂದ ಸನ್ಯಾಸಿ ಕೆಟ್ಟ ಸನ್ಯಾಸಿಯಿಂದ ಸರ್ವರು ಕೆಟ್ಟರು

ಸಂಗದಿಂದಲ್ಲದೆ ಅಗ್ನಿ ಹುಟ್ಟದು. ಸಂಗದಿಂದಲ್ಲದೆ ಬೀಜ ಮಳೆ ತೋರದು. ಸಂಗದಿಂದಲ್ಲದೆ ದೇಹ ವಾಗದು. ಸಂಗದಿಂದಲ್ಲದೆ ಸರ್ವ ಮುಖದೋರದು. ಚೆನ್ನಮಲ್ಲಿಕಾರ್ಜುನದೇವಯ್ಯ ನಿಮ್ಮ ಶರಣರ ಅನುಭವ ಸಂಗದಿಂದಾನು ಪರಮಸುಖಿಯಾದೆನು
“ಕೂಡಲಸಂಗನ ಶರಣರ ಅನುಭಾವದಿಂದ ಎನ್ನ ಭವದ ಕೇಡು ನೋಡಯ್ಯ“ಎನ್ನುವಂತೆ ಸಜ್ಜನ ಸಂಗ ಹೆಜ್ಜೇನು ಸವಿದಂತೆ.

ಲಿಂಗದ ಗುಡಿ ಲೇಸು ಗಂಗೆಯಾ ತಡೆ ಲೇಸು ಲಿಂಗ ಸಂಗಿಗಳ ನುಡಿ ಲೇಸು ಭಕ್ತರ ಸಂಗವೇ ಲೇಸು ಸರ್ವಜ್ಞ

ಹಲವು ಸಂಗದ ತಾಯಿ! ಹೊಲಸು ನಾರುವ ನಾಯಿ! ಸಲೆ ಸ್ಮರಹರನ ನೆನೆಯದಾ ಬಾಯಿ! ನಾಯ್ ಮಲವ ಮೆದ್ದಂತೆ ಸರ್ವಜ್ಞ
ಜಗತ್ತಿನಲ್ಲಿ ಕೆಟ್ಟ ತಂದೆ ಕೆಟ್ಟ ಗುರು ಕೆಟ್ಟ ಸ್ನೇಹಿತರು ಕೆಟ್ಟ ಬಂಧು-ಬಳಗ ಕೆಟ್ಟ ಸಮಾಜ ಇರಬಹುದು. ಆದರೆ ಕೆಟ್ಟ ತಾಯಿ ಇರಲಾರಳು. ಒಂದು ವೇಳೆ ಅವಳು ಹಲವುಸಂಗಿ ಅಂದರೆ ವ್ಯಭಿಚಾರ ಮಾಡಿ ತಂದ ಹಣದಲ್ಲಿ ಉಣಿಸಿದ ಕೂಳು ನಾಯಿಯ ಮಲವ ತಿಂದ ಹಾಗೆ ಎನ್ನುತ್ತಾರೆ ಸರ್ವಜ್ಞ.

ಸಂಘ—–

ಸಂಘಟನೆಗಳು ಹಲವು ವಿವಿದೋದ್ದೇಶಗಳಿಂದ ಸ್ಥಾಪಿಸಲ್ಪಟ್ಟ ಇರುತ್ತದೆ ಸಂಘ-ಸಂಸ್ಥೆಗಳು ಮಠ-ಮಾನ್ಯಗಳು ಉಚಿತ ಪ್ರಸಾದ ನಿಲಯಗಳು ಸಹಾಯ-ಸಹಕಾರ ಸಂಘಗಳು ಸಮಾಜಮುಖಿಯಾಗಿ ಸೇವೆ ಮಾಡುವವು ಒಂದೆಡೆಯಿದ್ದರೆ ಜಾತಿ ಧರ್ಮಗಳ ವಿಷ ಬೀಜ ಬಿತ್ತುವ ಸಂಘಟನೆಗಳು ಜಗತ್ತಿನಾದ್ಯಂತ ಪಾಪಸಕಳ್ಳಿ ಹಾಗೆ ಬೆಳೆದು ನಿಂತಿವೆ.

*ಆಡುವುದು, ಹಾಡುವುದು, ಕೇಳುವುದು, ಹೇಳುವುದು, ನಡೆಯುವುದು, ನುಡಿಯುವುದು,ಸರಸ ಸಮ್ಮೇಳನವಾಗಿಪ್ಪುದಯ್ಯಾ ಶರಣರೊಡನೆ. ಚೆನ್ನಮಲ್ಲಿಕಾರ್ಜುನಯ್ಯ,

ನೀನು ಕೊಟ್ಟ ಆಯುಷ್ಯವುಳ್ಳನ್ನಕ್ಕರ ಲಿಂಗ ಸುಖಿಗಳ ಸಂಗದಲ್ಲಿ ದಿನಂಗಳ ಕಳೆವೆನು* ವೈರಾಗ್ಯ ನಿಧಿ ಅಕ್ಕಮಹಾದೇವಿಯು ತನ್ನ ಈ ವಚನದಲ್ಲಿ ಶರಣರ ಸಂಗದಲ್ಲಿ ತನ್ನ ಇಡೀ ಆಯುಷ್ಯವನ್ನು ಕಳೆಯಬೇಕೆಂದು ಹೇಳಿದ್ದಾಳೆ.
ಅರಿಯದವರೊಡನೆ ಸಂಗವ ಮಾಡಿದರೆ, ಕಲ್ಲು ಹೊಯ್ದು ಕಿಡಿಯ ತೆಗೆದುಕೊಂಬಂತೆ. ಬಲ್ಲವರೊಡನೆ ಸಂಗವ ಮಾಡಿಹರೆ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗ ಕರ್ಪೂರ ಗಿರಿಯ ಉರಿ ಕೊಂಡಂತೆ.
ಬೆಟ್ಟದಂತಹ ಕರ್ಪೂರದ ಗಿರಿಗೆ ಬೆಂಕಿ ಹತ್ತಲಾಗಿ ಸುಟ್ಟು ಭಸ್ಮವಾಗುವುದು ಬೊಟ್ಟಿಡಲೂ ಕೂಡ ಬೂದಿ ಇರುವುದಿಲ್ಲ ಹಾಗೆ ಸಜ್ಜನರ ಸಂಗದಲ್ಲಿದ್ದರೆ ಹೊಸೆದು ಬೆಣ್ಣೆಯ ತಿಂದ ಹಾಗೆ.

ಬೇವಿನ ಬೀಜವ ಬಿತ್ತಿ ಬೆಲ್ಲದ ಕಟ್ಟೆಯ ಕಟ್ಟಿ ಆಕಳ ಹಾಲನೆರೆದು ಜೇನುತುಪ್ಪವ ಹೊಯ್ದರೆ ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ? ಶಿವಭಕ್ತರಲ್ಲದವರ ಕೂಡಿ ನುಡಿಯಲಾಗದು ಕೂಡಲಸಂಗಮದೇವಾ
ಆಚಾರ-ವಿಚಾರ ಸದ್ಭಾವನೆ ಇಲ್ಲದ ಜನರೊಂದಿಗೆ ಇರಬಾರದೆಂದು ಇಲ್ಲಿ ಹೇಳಲಾಗಿದೆ.

ನುಡಿಯಲಾಗದು ನುಡಿಯಲಾಗದು ಸ್ವಯ ಜ್ಞಾನವಿಲ್ಲದವರೊಡನೆ ಶಿವಾನುಭವ! ಅದೇನು ಕಾರಣವೆಂದೊಡೆ- ತನ್ನ ಅರುಹಿಂಗೆ ಹಾನಿ ಮಹಾ ಪರಿಣಾಮ ಕೆಡುವುದು ಇದು ಕಾರಣ ಕಡುಪಾತಕವ ಜಡಜೀವಿಗಳೊಡನೆ ಲಕ್ಷ ಕೊಮ್ಮೆ ಕೋಟಿಗೊಂದು ವೇಳೆಯಾದಡೂ ನುಡಿಯಲಾಗದಯ್ಯಾ ಅಖಂಡೇಶ್ವರಾ
ಹಿಂದೆ ಸ್ಥಾಪಿತವಾದ ಸಂಘಗಳು ಸಕಲಜೀವಾತ್ಮರಿಗೆ ಲೇಸನ್ನು ಬಯಸುತ್ತಿದ್ದೆವು. ಆದರೆ ಇಂದಿನ ಸಂಘಟನೆಗಳು ಹಸಿರು ಬಾವುಟ ಕೇಸರಿ ಬಾವುಟ ಹಿಡಿದು ಮನೆಮನೆಗಳಲ್ಲಿ ಮನಮನಗಳಲ್ಲಿ ದ್ವೇಷ ಅಸೂಯೆ ಆಮಿಷ ಗಳೆಂಬ ಬೆಂಕಿಯನ್ನು ಹಚ್ಚಿಸುತ್ತಿವೆ ಜಗತ್ತಿನಾದ್ಯಂತ ಕೋಮುದಳ್ಳುರಿ ಮಿತಿಮೀರಿದೆ. ವಿನಾಶಕಾಲೇ ವಿಪರೀತ ಬುದ್ಧಿ.

ರವೀಂದ್ರ ರುದ್ರಪ್ಪ ಪಟ್ಟಣ

ಮುಳಗುಂದ—- ರಾಮದುರ್ಗ
94 81 93 1842.

Don`t copy text!