*ಗಜಲ್*
ಬದುಕು ಕಣ್ಣೀರಲಿ ಕರಗುತಿದೆ ಒಲವನ್ನಾದರೂ ನೀಡು
ತನುವು ಬಳಲಿ ಕಸುವು ಕುಸಿಯುತಿದೆ ಬಲವನ್ನಾದರೂ ನೀಡು
ಸಮಾನತೆ ಕೊಡುವ ಮಧುಶಾಲೆ ನಾಶವಾದುದು ತಿಳಿಯದೆ ಅಲೆದೆ
ಸಾಕಿ ಇಲ್ಲದೆ ಎದೆ ದಹಿಸುತಿದೆ ಮಧುವನ್ನಾದರೂ ನೀಡು
ಮರದ ರೆಂಬೆಯಲಿ ಹಕ್ಕಿ ಬಿಕ್ಕುತಿದೆ ಜೋತಾಡುವ ಗೂಡಲಿ
ರಣ ರಣ ಬಿಸಿಲು ಬಾಯಾರುತಿದೆ ಜಲವನ್ನಾದರೂ ನೀಡು
ಮಾನವೀಯತೆ ಮರೆಯಾಗಿ ನೆತ್ತರು ಹರಿಸುತಿವೆ ಕತ್ತಿಗಳು
ಕ್ರೂರತೆಯಲಿ ಧೈರ್ಯ ಕುಂದುತಿದೆ ಛಲವನ್ನಾದರೂ ನೀಡು
ಜಗಮಗಿಸುವ ಇರುಳ ಕೂಪದಲಿ ಬಿದ್ದು ನರಳುತಿದೆ ಜೀವ
ಸೂರ್ಯ”ಪ್ರಭೆ”ಗೆ ಸುಮ ಅರಳುತಿದೆ ನಲಿವನ್ನಾದರೂ ನೀಡು
–ಪ್ರಭಾವತಿ ಎಸ್ ದೇಸಾಯಿ ವಿಜಯಪುರ
ಮೊ.೮೪೦೮೮ ೫೪೧೦೮