ಪುಸ್ತಕ ಪರಿಚಯ- ಕವನ ಸಂಕಲನ
” ಕೊಲ್ಲುವವನೇ ದೇವರಾದನಲ್ಲ ”
— ಶಿಲ್ಪ ಬೆಣ್ಣೆಗೆರೆ
ಕಾವ್ಯ ಎನ್ನುವ ಮಾಯಾ ಜಿಂಕೆಯ ಬೆನ್ಹತ್ತಿ ಹೊರಟವರೆಲ್ಲರೂ ಅಕ್ಷರದಮ್ಮನ ಮಡಿಲ ಸೇರುತ್ತೇವೆ. ಅವಳ ಮಡಿಲಲ್ಲಿ ಅಕ್ಷರ ಕಲಿತು ಪದ ಕಟ್ಟುವಿಕೆಯಲ್ಲಿ ಅಂಬೆಗಾಲಿಡುತ್ತ ಸಾಗುವ ನಾವು ಒಂದು ಉತ್ಕೃಷ್ಟ ಕಾವ್ಯ ಸೃಷ್ಟಿಸುವ ಹೊತ್ತಿಗೆ ಭಾವನಾ ಲೋಕಕ್ಕೆ ಇಳಿದಿರುತ್ತೇವೆ.
ಭಾವನೆಗಳ ತರಂಗಗಳು ಎದ್ದಿವೆ ಎಂದರೆ ಕವಿಯ ಭಾವದ ಅಲೆಗಳು ಸಾಹಿತ್ಯದ ದಡ ಸೇರಲು ತವಕಿಸುತ್ತವೆ ಎಂದರ್ಥ. ಅಂತಹ ದಡವನ್ನು ಮುಟ್ಟಲು ಕವಿ ಅನೇಕ ಶಬ್ದಗಳ ಹುಟ್ಟನ್ನು ಹಾಕುತ್ತಾನೆ. ಅಲೆಗಳ ರಭಸಕ್ಕೆ ತಕ್ಕಂತಹ ಔಚಿತ್ಯ, ವಿದ್ವತ್ಪೂರ್ಣ, ಭಾವುಕ ಪದಗಳನ್ನು ಬಳಸುವ ಕೌಶಲ್ಯವೂ ಕವಿ ಹೊಂದಬೇಕಾಗುತ್ತದೆ. ಅಂತಹ ಸೊಗಸಾದ ಮತ್ತು ಪರಿಪೂರ್ಣ ಕೌಶಲ್ಯ ಹೊಂದಿರುವ ಕವಯಿತ್ರಿ ” ಶಿಲ್ಪ ಬೆಣ್ಣೆಗೆರೆ” ಹಸಿರು ಬೆಟ್ಟಗಳ ನಡುವೆ, ಕಡಲದಂಡೆಯ ಕುಮುಟಾದಲ್ಲಿ ಕಾಣಸಿಗುತ್ತಾರೆ.
ಕನ್ನಡ ಸಹಾಯಕ ಪ್ರಾಧ್ಯಾಪಕಿಯಾದ ಶ್ರೀಯುತರ ಪ್ರಥಮ ಕವಿತಾ ಸಂಕಲನ ” ಕೊಲ್ಲುವವನೇ ದೇವರಾದನಲ್ಲ” ಒಂದು ಪ್ರಬುದ್ಧವಾದ, ಸುಮ್ಮನೆ ಕಣ್ಣಾಡಿಸಿದರೆ ಅರ್ಥವಾಗದ ಮತ್ತು ಪದಗಳ ಜೋಡಣೆಯನ್ನು ಅಂತರ್ಗತ ಮಾಡಿಕೊಂಡಾಗಲೇ ಅರ್ಥವಾಗುವ ಸುಂದರ ಅರ್ಥಪೂರ್ಣ ಕವಿತೆಗಳ ಗಣ.
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸಹಾಯಧನ ಪಡೆದ ಕೃತಿ ಅತ್ಯಂತ ಪ್ರಾವೀಣ್ಯತೆಯಿಂದ ಹುಟ್ಟಿರುವಂತಹದ್ದು.
(ಕವಯಿತ್ರಿ ಶಿಲ್ಪಾ ಬೆಣ್ಣೆಗೆರೆ)
ಕವಯಿತ್ರಿಯವರ ವೈಚಾರಿಕ ಪ್ರಜ್ಞೆ, ಸಮಾಜಮುಖಿ ಮನಸ್ಸು, ವರ್ತಮಾನದ ಅರಿವು, ವಾಸ್ತವತೆಯ ಚೀಂತನೆ ಬಹುತೇಕ ಕವಿತೆಗಳಲ್ಲಿ ಕಾಣಸಿಗುತ್ತವೆ.
ಕವಿಯಾದವನ ದೃಷ್ಟಿ ವಿಮರ್ಶಾತ್ಮಕವಾಗಿರಬೇಕು, ಅಂದಾಗಲೇ ಅವನ ಬರಹ ಸಮಾಜಕ್ಕೆ ಒಂದು ಸುದಾರಿಯನ್ನು, ರಹದಾರಿಯನ್ನು ತೋರಿಸುತ್ತದೆ. ಅಂತಹ ವಿಡಂಬನಾತ್ಮಕ ಕವಿತೆಗಳೂ ಈ ಕೃತಿಯಲ್ಲಿದ್ದು ನಮ್ಮ ಮನಸೋರೆಗೊಳಿಸುತ್ತವೆ ಎಂಬುದನ್ನು ಕೃತಿಯ ಅವಲೋಕನ ಮಾಡಿದಾಗ ನಮ್ಮ ಅರಿವಿಗೆ ಬಂದುಬಿಡುತ್ತದೆ.
ಅಬ್ಬಬ್ಬಾ…. ಊರ ಬಲ್ಲಿದರು, ಎಲ್ಲ ಬಲ್ಲವರೆನಿಸಿಕೊಂಡವರು ಊರಿಗೆ, ಊರ ಜನರಿಗೆ ಅವಶ್ಯಕ ಎನಿಸುವ ಆಸ್ಪತ್ರೆ, ಶಾಲೆಗಳನ್ನು ಕಟ್ಟಿಸದೆ ಗುಡಿ, ಚರ್ಚು, ಮಸೀದಿಗಳನ್ನು ಕಟ್ಟಲು ತವಕಿಸುವರು ಎಂದು ಪ್ರಥಮ ಕವಿತೆ “ನಿಲುಗಂಬ”ದಲ್ಲಿ ಮಾರ್ಮಿಕವಾಗಿ ಈ ಪದಗಳ ಮೂಲಕ ಅಭಿವ್ಯಕ್ತಿಸುತ್ತಾರೆ.
ಊರ ಬಲ್ಲಿದರು ಎಲ್ಲ ಬಲ್ಲವರು
ಶುಶ್ರೂಷಾಲಯಗಳಿಗೆ ಇಂಬುಗೊಡದವರು
ಗೋಪುರಗಳ ಕಟ್ಟಿದರು
ರೋಗಗ್ರಸ್ತ ಹೆಣಗಳ ಸೋಪಾನದ ಮೇಲೆ
ಜ್ಞಾನ ಬೀಜ ಬಿತ್ತಿಬೆಳೆದ
ಹೊತ್ತಿಗೆಗಳ ಚೆಲುವ ನಿಲಯವನು
ನಿರ್ಮಿಸಲಾಗದವರು
ಹೆತ್ತದ್ದು ಅವಿಚಾರವನ್ನು
ಹರಕೆಯ ಕುಣಿಕೆಗೆ ಕೊರಳ ಕೊಡುವ ಕುರಿಗಳನ್ನು…
ಗೋಡೆಗಳ ನಡುವಲ್ಲಿ ದೇವರನ್ನು ಬಂಧಿಸಿ ವರಗಳನ್ನು ಅರುಹಿದಾಕ್ಷಣ ನೀಡಲು…. ದೇವರೇನು
“ಕೊಟ್ಟಿಗೆಯಲಿ ಕಟ್ಟಿದ ಹಸುವಲ್ಲ” ಎಂದು ಢಾಂಬಿಕ ಜನರ ಕುರಿತಾದ ಆಕ್ರೋಶವನ್ನು ಓದುಗನಲ್ಲಿಯೂ ಹುಟ್ಟಿಸುವಲ್ಲಿ ಈ ಕವಿತೆ ಗಟ್ಟಿಯಾಗಿ ನಿಲ್ಲುತ್ತದೆ.
ದೇವರು ನಮ್ಮ ಬದುಕಿನ ಆಪ್ತತೆಯ ಅನುಕ್ಷಣಗಳಿಗೂ ಸವಾಲುಗಳನ್ನೆಸೆಯುತ್ತ ಕಾಡುತ್ತಾನೆ, ನೆಮ್ಮದಿಯ ಬಾಳಿಗೆ ಕೊಳ್ಳಿ ಇಡುತ್ತಾನೆ…. ಎಂಬುದನ್ನು ಈ ರೀತಿಯಾಗಿ ಪ್ರಸ್ತುತ ಪಡಿಸುತ್ತಾರೆ.
“ಧೂರ್ತ ದೇವರ ನಂಬಿ
ನೆಮ್ಮದಿಯ ಬಾಳು ಉಂಟೆ?
ಕಾಡುತಾನೆ ಕಾರುತಾನೆ
ಕೆಡಿಸುತಾನೆ ಕನಲಿಸುತಾನೆ”
ದೇವರು ನಿರ್ದಯಿ, ಕಠೋರಿ
ಅವನ ಹೃದಯ ಗೋರಿ
ಆತ್ಮವಿನಾಶಕ್ಕೆ ಹುಡುಕುತಾನೆ ನೂರು ದಾರಿ,
ಇಷ್ಟೆಲ್ಲವಾದ ಮೇಲೆ, ಮತ್ತೆಲ್ಲಿಯ ನಂಬಿಕೆ ನಮ್ಮಲ್ಲಿ ಹುಟ್ಟಬೇಕೆಂದು ಖೇದವನ್ನು ವ್ಯಕ್ತಪಡಿಸುತ್ತಾರೆ. ಅಲ್ಲದೆ…..
ಬದುಕನ್ನು ಛಿದ್ರಗೊಳಿಸುತ್ತಾನೆ…
ಹರಕೆ ಹೊರುವಂತೆ ಮಾಡುತಾನೆ…
ಮರೆತರೆ ಬಲಿಗಾಗಿ ಕಾದು ಬಲೆಗೆ ಬೀಳಿಸುತಾನೆ…
ಇವನು ಕಾಯುವವನಲ್ಲ, ಕೊಲ್ಲುವವ…
“ಕೊಲ್ಲುವವನೇ ದೇವರಾದನಲ್ಲ”…. ನಮ್ಮನ್ನು ಉಳಿಸುವ ಆಸೆ ಕಿಂಚಿತ್ತೂ ಅವಗಿಲ್ಲ. ಎಂದು ಮಾನವನ ಮನಸಿನ ತಲ್ಲಣಗಳನ್ನು; ಪ್ರಸ್ತುತ ಅವನು ಎದುರಿಸುತ್ತಿರುವ ಸಮಸ್ಯೆಗಳಿಗೆಲ್ಲ ಪರಿಹಾರ ಕಾಣದೆ ಆತ್ಮಹತ್ಯೆಗೆ ಶರಣಾಗುವುದನ್ನು; ಅದಕ್ಕೆಲ್ಲ ಹೊಣೆಗಾರನು ಅವನೇ ಆ ದೇವನೆ…. ಕೊಲ್ಲುವವನೇ ನಮ್ಮ ದೇವರಾಗಿರುವುದು ವಿಪರ್ಯಾಸವೇ ಸರಿ ಎಂಬ ಕ್ರೋಧದ ಭಾವವನ್ನು ವ್ಯಕ್ತಪಡಿಸಿದ್ದು, ಅನೇಕ ಜನರ ಬದುಕನ್ನು ಪ್ರತಿಬಿಂಬಿಸುವ ಕನ್ನಡಿಯಂತಾಗಿದೆ ಈ ಕವನ .
“ನಾಡನವಿಲು” ಕವಿತೆ ಓದಿದರಂತೂ ಎದೆ ಝಲ್ ಎನ್ನುತ್ತೆ…. ಹಳ್ಳಿಯ ಸೊಬಗನ್ನು ತೊರೆದು “ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ” ಎಂದು ಅರಿಯದೆ ನಾಡಿಗೆ ಕಾಲಿಟ್ಟು ಪಡುವ ಪಾಡು…. ಅದೊಂದು ಕರ್ಮದ ಕಥೆಯೆಂದು ಕಿವಿನಿಮಿರಿಸಿ ಕೇಳಿ ಎನ್ನುತ್ತಾರೆ.
“ಕಾಡಲಿ ನಲಿಯುತಿದ್ದ ನಮ್ಮನ್ನು (ಕೋಗಿಲೆ)
ಹೊರಗಣ ಅಂದ ಚೆಂದದ
ಕೆಂಪಿನ ಓಕಳಿಯ ಚೆಲುವ ತೋರಿ
ಯಾಮಾರಿಸಿ ಕರೆಯುವಿರಿ”
ನಮಗರಿವಿರಲಿಲ್ಲ ಇಲ್ಲಿ ನಿಮ್ಮೊಳಗಿನ ಜಿಗುಪ್ಸೆ, ಮಾತ್ಸರ್ಯದ ಹೂರಣ, ಒಪ್ಪವಾಗಿ ನಮ್ಮ ಮೈಯೆಲ್ಲಾ ಕವುಚಿದ್ದ ಹಸಿರ ಗರಿಯನ್ನು ಮಸಿಯಾಗಿ ಕಪ್ಪಗಿಸಿಬಿಡುತ್ತವೆ, ಎಂದು ಕೋಗಿಲೆಗಳ ಉವಾಚದೊಂದಿಗೆ ಮಾರ್ಮಿಕವಾಗಿ ಕಟ್ಟಿಕೊಡುತ್ತಾರೆ.
ಮುಂದುವರೆದು……
“ಮಾಮರದ ಚಿಗುರ ಮೆದ್ದು ಮುದ್ದಿನಲಿ
ಸರವೆತ್ತಿ ಸೊಗದಲಿ ಪಾಡುತಿದ್ದ ಹಾಡು
ಶಬ್ದಕಾನನದಲಿ ಕೂಗುಮಾರಿಯ ದನಿಗೆ ಬೆಚ್ಚಿ
ಸಿರಿಕಂಠದಲೇ ಅಂತಸ್ಥವಾಯಿತು”.
ಅಲ್ವಾ….. ಸ್ವಚ್ಛಂದವಾಗಿ ಹಾರುತ್ತ, ಹಾಡುತ್ತ ನಲಿಯುವ ಹಕ್ಕಿಯನು, ಸಾವಿರಾರು ಯಂತ್ರಗಳ ಕರ್ಕಶ ದನಿ ನಡುವೆ ಬಿಟ್ಟರೆ, ಸಾಧ್ಯವೇ ಹಾಡಲು, ಮನದುಂಬಿ ನಲಿಯಲು. ನಮ್ಮ ಪ್ರತಿಭೆ ಎಲ್ಲವೂ ನಮ್ಮೊಳಗೇ ಹುದುಗಿ ಹೋಗಿಬಿಡುತ್ತವೆ ಎಂದು ಅಲಂಕಾರಿಕವಾದ ಹಕ್ಕಿ ಧ್ವನಿಯ ಹಾಡಿಗೆ ಹೋಲಿಸಿ ಗಟ್ಟಿಯಾಗಿ ಕಾವ್ಯರಸ ಚೆಲ್ಲುತ್ತಾರೆ….
ಕಾಡಿನಲ್ಲಿ ಇರುವ ಸೌಹಾರ್ದತೆ, ನಮ್ಮ ನಡುವಿನ ಭಾವನೆಗಳ ಜೀವಂತಿಕೆ ನಾಡಿನಲ್ಲಿಲ್ಲ. ಅಲ್ಲಿ ಇರುವುದೆಲ್ಲ ಬರೀ ಹೊಳೆಯುವ ಆಕರ್ಷಿಸುವ ಬಣ್ಣದ ಪರದೆ, ಅಂತಃಕರಣವಿಲ್ಲದ ನಿರ್ಜೀವತೆ ಎಂದು ನಾಡಿಗೆ ಓಡುವ ಹಂಬಲದ ಹೃದಯದ್ಹಕ್ಕಿಗೆ ನಾಡಿನ ನೈಜತೆಯ ಚಿತ್ರಣವನ್ನು ಅನಾವರಣಗೊಳಿಸಿದ್ದಾರೆ..
ಹೌದು ಭೂತ ಕುಣಿಯುತಿದೆ, ಮಾನವೀಯ ಮೌಲ್ಯವನ್ನು ಹೂತು, ಅದರ ಮೇಲೆ ತನ್ನ ರೌದ್ರಾವತಾರದಿ ಹುಚ್ಚೆದ್ದು ಕುಣಿಯುತಿದೆ. ಕಲಿಗಾಲವಿದು. ಸತ್ಯದ ಬೆಳಕಿನೆಡೆಗೆ ಬರಲು, ಮನಸು ಮಾಡದಂತೆ ಜನರನ್ನು ಆವರಿಸಿದ ಮೌಢ್ಯದ ಭೂತ ಕುಣಿಯುತಿದೆ.
ಹರಿಶಚಂದ್ರನೂ ನಲೆ, ಬೆಲೆ ಕಾಣದೆ ಅನಾಥ ಶವವಾಗಿದ್ದಾನೆ. ಅವನ ವೇಷ ತೊಟ್ಟ ಭೂತ ಜಗವನೆಲ್ಲಾ ಆಳುತಿದೆ. ಮತಿಗೆಟ್ಟು ಬದುಕುತ್ತಿರುವವರ ಮನಕೆ ಸತ್ಯದ ಬಟ್ಟೆ ತೊಡಿಸುವುದೆಂತು. ಬೆಳಕಿನೆಡೆಗೆ ತರುವುದೆಂತು. ಎಂದು ” ಭೂತ ಕುಣಿತದಲ್ಲಿ” ಓದುಗನ ಮೈ ರೋಮಗಳು ನಿಮಿರುವಂತೆ, ರೋಮಾಂಚನವಾಗುವಂತೆ ಮಾಡುತ್ತಾರೆ.
“ಸಮಪಾಲು ಸಮಬಾಳು” ಎನ್ನುವುದು ನಮ್ಮ ಸ್ವತಂತ್ರ ದೇಶದ ಒಂದು ಕಲ್ಪನೆಯಾದಂತಾಗಿದೆ. ನಮ್ಮದೇ ಅಧಿಕಾರವೆಂದೂ ಕೇಳುವವರ ಮಾತುಗಳಿಗೆ ಕಿವುಡರಾಗಿ, ಹೃದಯವನ್ನು ಹಿಮಬಂಡೆಯಾಗಿಸಿ ಎಸಗುತ್ತಿರುವ ಕುಕೃತ್ಯಗಳನ್ನು ಕಂಡು…
“ಅರ್ಥವಾಗದೆ ಕನಸು ಇಂಗಿ ಕುಳಿಬಿದ್ದ ಕಣ್ಣುಗಳು
ಕಕ್ಕಾಬಿಕ್ಕಿಯಾಗಿ ನಿಂತುಬಿಟ್ಟವು!”
ಸಮಪಾಲಂತೆ! ಸಮಬಾಳಂತೆ! ಎಂಬುದೆಲ್ಲವು ಕೇವಲ ಅಂತೆ ಕಂತೆಗಳು ಮಾತ್ರ ಎಂದು ಹೇಳುತ್ತ ಮತ್ತು ನಮ್ಮ ಸುತ್ತಲು ಇಂದಿಗೂ ನಡೆಯುತ್ತಿರುವ ದುರ್ಘಟನೆಗಳನ್ನು ನೆನೆಯುತ್ತ, ಸಿಡಿಮಿಡಿಯ ಭಾವವನ್ನು ಕವಯಿತ್ರಿ…
ಶಿಲೆಯಾದವು ತುಟಿಗಳು
ಉಸುರದಂತೆ ನುಡಿಯೊಂದನು ! ಎಂದು ಭಾವುಕರಾಗಿ ಬರೆದು, ಕವನ ಆಸ್ವಾದಿಸುವವನಲ್ಲೂ ಆ ಭಾವ, ಭಾವುಕತೆ ಹುಟ್ಟುವಂತೆ ಮಾಡಿ ಬಿಡುತ್ತಾರೆ. ಕವಿತೆಯನ್ನು ಓದಿದಾಗಲೆ ಈ ಒಂದು ಅನುಭವವಾಗುತ್ತದೆ ಎಂಬುದು ನನ್ನ ಅಭಿಮತವಾಗಿದೆ.
ಪ್ರಸ್ತುತ ಸಂದರ್ಭ ಎಷ್ಟು ವೈಪರೀತ್ಯಗಳನ್ನು ಸೃಷ್ಟಿಸಿದೆ ಎಂದರೆ,
“ಕಲಿಗಾಲವಿದು ನ್ಯಾಯವಂತರಿಗಲ್ಲದ ಕಾಲ….
ಇಲ್ಲಿ ಬೆಂಕಿ ಇಟ್ಟವರಿಗೇ ಬೆಳಕು,
ಹೊರತು ದೀಪ ಹಚ್ಚಿದವರಿಗಲ್ಲ” ಎಂದು ವೇದನೆಯಿಂದ ಕವಯಿತ್ರಿ.
“ ವನಸಿರಿಯ ಬೆಂಕಿಗಿಟ್ಟು
ಮೈ ಕಾಸಿಕೊಂಡ ಖಳರು
ಶಿಖರಸೂರ್ಯರಾಗಿ ಸುರಕ್ಷಿತ, ಜೀವಿತ!
ಅಡವಿ ಮರಗಳಿಗೆ ಹಾಲೆರೆದು ಪೂಜಿಸಿ
ಬೆಳೆದವರಿಂದು ಅರಕ್ಷಿತ! ಅಲಕ್ಷಿತ”
ಎಂದು ರೋಧಿಸುತ್ತಾ, ಬೆಂಕಿ ಇಡುವ ಇಂತಹ ಪಾಪಿಗಳನ್ನು ನಿನ್ನೊಡಲೊಳಗೆ ಹುದುಗಿಸಿಕೊಂಡು ಬಿಡು
ಕೊಚ್ಚಿ ಹೋಗಲಿ ಇವರು ನಿನ್ನ ಒಡಲುರಿಯ ಪ್ರವಾಹದಲಿ! ಉಳಿಯದಿರಲಿ ಕ್ರೂರ ಸಂತತಿಯು ಮತ್ತೆ ಧರೆಯಲಿ! ಎಂದು ಆಕ್ರೋಶದ ಭಾವನೆಯಿಂದ ವನಮಾತೆಯನ್ನು “ಆಗ್ರಹಿ”ಸುತ್ತಾರೆ… ಕವಿಯಾದವರು ಪರಿಸರದ ಕುರಿತಾಗಿ ಅದಮ್ಯ ಕಾಳಜಿಯನ್ನು ವ್ಯಕ್ತಪಡಿಸಲೇಬೇಕೆಂಬ ದೃಷ್ಟಿಯನ್ನು ಕವಯಿತ್ರಿಯವರು ಈ ಕವಿತೆಯಲ್ಲಿ ಮೂಡಿಸಿದ್ದಾರೆ.
ನಮ್ಮ ತಾತ ಮುತ್ತಾತನ ಕಾಲದಲ್ಲಿದ್ದ ಕೂಡು ಕುಟುಂಬ, ಆ ಕುಟುಂಬವನ್ನು ಮುನ್ನಡೆಸುತ್ತಿದ್ದ, ಎಲ್ಲರನ್ನೂ ಸಮನಾಗಿ ಕಾಣುತ್ತಿದ್ದ ಅಜ್ಜ; ಕೂಡು ಕುಟುಂಬವನ್ನು ಪ್ರತಿಪಾದಿಸುತ್ತಾನೆ. ಅಂತಹ ಮನಸ್ಥಿತಿಯ ಅಜ್ಜನ ಮನೆ ಹೇಗೆ ವಿಭಕ್ತವಾಗುತ್ತದೆ. ದ್ವೇಷದ ದಳ್ಳುರಿ, ಮತ್ತು ಪರರ ಹೊಟ್ಟೇಕಿಚ್ಚಿಗೆ ಹೇಗೆ ಬಲಿಯಾಗುತ್ತದೆ ಎಂಬುದನ್ನು ವಿವರಣಾತ್ಮಕವಾಗಿ “ಅಜ್ಜ” ಕವಿತೆಯಲ್ಲಿ ಕಟ್ಟಿಕೊಟ್ಟ ಶೈಲಿ ಭಾವಪೂರ್ಣವೂ, ಸ್ವಾರಸ್ಯಕರವೂ ಆಗಿದೆ.
ಒಂದು ಪೌರಾಣಿಕ ಕಥೆಯನ್ನು ಹೇಗೆ ಕವಿತೆಯಲ್ಲಿ ಕಟ್ಟಬಹುದು, ಅದರ ಸಂಪೂರ್ಣ ಚಿತ್ರಣವನ್ನು ಹೇಗೆ ಕಾವ್ಯಕ್ಕೆ ಇಳಿಸಬಹುದೆಂಬುದನ್ನು
“ಯಯಾತಿಯ ಮಕ್ಕಳು” ಕವನದಲ್ಲಿ ತೋರಿಸಿದ್ದಾರೆ. ಇದು ಕವಿಯ ಒಂದು ಸ್ವಂತಿಕೆ ಮತ್ತು ಜೀವಂತಿಕೆಯನ್ನು ಸಾರುತ್ತದೆ ಎನ್ನುವಲ್ಲಿ ಹೆಮ್ಮೆ ಎನಿಸುತ್ತದೆ.
ಇದಕ್ಕೆ ಮತ್ತೊಂದು ಉದಾಹರಣೆಯಾಗಿ ರಾಮಾಯಣದಲ್ಲಿ ಬರುವ ಮಂಥರೆಯ ಕುರಿತಾಗಿ
” ಮನ ಮಂಥರೆ ” ಕವಿತೆ ಕಾಣಸಿಗುತ್ತದೆ. ಮಂಥರೆಯ ವಿಷಯುಕ್ತ ಕುರೂಪ ಮನಸಿನ ಕುರಿತಾಗಿ ಹೀಗೆ ಹೇಳುತ್ತಾರೆ.
” ಮಂಥರೆಯ ಬಸಿರ ಉರಿಗೆ
ಬಲಿಯಾಯಿತು ಜೀವನಗಳ ಭವಿತವ್ಯ!
ಆದರವಳು ಕೈಕೆಯ ದಾಸಿ ಮಾತ್ರವಲ್ಲ!
ದುರ್ಬಲ ಮನದ ಸಾಮ್ರಾಜ್ಞಿಯೂ ಹೌದು!”
ಎಂದು ಎಲ್ಲರ ಸುತ್ತಲೂ ಇಂತಹ ಮಂಥರೆಯರು ಇರುತ್ತಾರೆ, ಆದರೆ ದುರ್ಬಲ ಮನಸು ನಮ್ಮದಾಗಿದ್ದರೆ ನಾವು ಆ ಕುರೂಪದ ಉರಿಗೆ ಸುಡುತ್ತೇವೆ, ನಾವು ಎಂದಿಗೂ ಅಂತಹ ಮನಸ್ಥಿತಿಗೆ ಬಲಿಯಾಗಬಾರದೆಂದು ತಿಳಿಸುತ್ತಾ ರಾಮಾಯಣದ ದೃಷ್ಟಾಂತವನ್ನು ವಿವರಿಸಿ ನಮ್ಮ ಮನಸನ್ನು ಬದಲಿಸಲು ಯತ್ನಿಸುವ ಕವಯಿತ್ರಿಯ ಔದಾರ್ಯತೆಯನ್ನು ಓದುಗ ಮೆಚ್ಚದೇ ಇರಲು ಸಾಧ್ಯವಾಗುವುದಿಲ್ಲ.
ಊರ ದೇವಿ ಒಲಿಯುವುದ್ಯಾರಿಗೆ, ತುಂಬು ಮನಸಿನಿಂದ ಭಕ್ತಿ ಸೇವೆಗೈಯ್ಯುವ ಬಡವನ ಭಕ್ತಿಗಲ್ಲ, ಬದಲಾಗಿ ಸಿರಿವಂತರ ಕಾಣಿಕೆ ದೇಣಿಗೆಗೆ ಎಂದು, ಮತ್ತು ಕಾಲಕ್ಕೆ ತಕ್ಕಂತೆ ಹೇಗೆ ದೇವಿ ಬದಲಾದಳೆಂದು ಮಾರ್ಮಿಕವಾಗಿ ಓದುಗನ ಮನಕೆ ನಾಟುವಂತೆ ತಿಳಿಸುತ್ತಾರೆ….
“ಆಡುನುಡಿಗಳಲಿ ಅರಿಕೆಯಾದರೆ ಸಾಕೆನ್ನುತ್ತಿದ್ದವಳು
ಮೋಹಗೊಂಡಳು ಹಾರುವನಾಡುವ ಮಂತ್ರಕೆ
ಜನರ ಹೆಗಲ ಹತ್ತಿ ಕುಣಿದು ತಣಿಯುತ್ತಿದ್ದವಳು
ಮನಸೋತಳು ಪಲ್ಲಕ್ಕಿ ಉತ್ಸವ ಸೇವೆಗಳಿಗೆ
ಹಣತೆಯ ಜ್ಯೋತಿಯಲಿ ಬೆಳಗುತ್ತಿದ್ದವಳು
ವಿದ್ಯುತ್ ದೀಪ ಸರಮಾಲೆಯ ಬೈಗಬಯಸುವಳು”…
ಎಂದು ದೇವಿಯ ಮಹಿಮೆಯನ್ನು ವ್ಯಂಗ್ಯವಾಗಿಯೂ, ಮತ್ತು ಆಕೆ ಪಡೆದುಕೊಂಡ ಆಡಂಬರದ ಶೈಲಿಯನ್ನು ಅಣುಕಿಸುತ್ತಾರೆ, ನೈಜ ಭಕ್ತಿಗೆ ಬೆಲೆ ಇಲ್ಲ ಎಂಬುದೂ ಈ ಕವಿತೆಯ ಒಳಗುಟ್ಟು ಎಂದರೆ ತಪ್ಪಾಗಲಾರದು.
ಬುದ್ಧನ ಶಾಂತಿಯನರಸಿದ ಮಹಾತ್ಮನ ಕುರಿತಾದ
“ಮಹಾತ್ಮ ಬುದ್ಧ” ಕವಿತೆಯಂತೂ ಕಣ್ಣಾಲೆಗಳಲ್ಲಿ ಹನಿ ತರಿಸುವಂತಿದೆ. ಬುದ್ಧನ ಶಾಂತಿಯ ಅನುಯಾಯಿಯಾಗಿ ವಿಶ್ವಕ್ಕೇಲ್ಲಾ ಶಾಂತಿದೂತನಾದ ಮಹಾತ್ಮ ದ್ವೇಷದಳ್ಳುರಿಯಲಿ ಬೂದಿಯಾದ,
“ಸುಟ್ಟದ್ದು ಕೇವಲ ದೇಹವನ್ನಲ್ಲ, ಬುದ್ಧನ ಶಾಂತಿವನವು,
ಮುಚ್ಚಿದ್ದು ಕೇವಲ ಧರ್ಮಾತ್ಮನ ಕಣ್ಣಲ್ಲ, ಧ್ಯಾನದ ಕಣ್ಣೆವೆಗಳು”
ಎಂದು ಮನಮಿಡಿಯುವಂತ ಕವಿತೆಯನ್ನು ಓದುಗನ ಅಂತರಂಗಕೆ ನೂಕುವ ಕವಯಿತ್ರಿ ಪ್ರತಿ ಹಂತದಲ್ಲೂ ಗೆಲ್ಲುತ್ತಾ ಹೋಗುತ್ತಾರೆ…
ನಾಗರಿಕತೆ ಬೆಳೆದಂತೆ ಬದಲಾದ ಹೆಣ್ಣು ಮನಸುಗಳು ಮಲ್ಲಿಗೆಯನ್ನೂ ಮುಡಿಯಲು ಹಿಂದ್ಹೇಟು ಹಾಕುತ್ತಿರುವುದನ್ನು ” ಮಲ್ಲಿಗೆಯ ಕೊಳ್ಳಿ” ಕವಿತೆಯಲ್ಲಿ ತಿಳಿಸುತ್ತಾ… ನಮ್ಮ ಸಂಸ್ಕೃತಿಗೂ ನಗರೀಕರಣದ ಮನಸು ಕೊಳ್ಳಿ ಇಡುತ್ತಿವೆ. ಉದ್ದುದ್ದ ಜಡೆಯೂ ಇಲ್ಲ, ಮುಡಿಯೇರಬೇಕಾದ ಮಲ್ಲಿಗೆಯೂ ಇವರಿಗೆ ಸಲ್ಲ ಎಂದು ಹೆಣ್ಮನದ ನೋವನ್ನು ಅರ್ಥಪೂರ್ಣವಾಗಿ ತಿಳಿಸುತ್ತಾರೆ.
“ಗಲ್ಲಿಗಲ್ಲಿಗಳನು ಹಾಯ್ದು ಬೊಬ್ಬಿರಿದು
ಬಸವಳಿದು ಕಟ್ಟಿತು ಕರುಳು
ಸರಿಯಲಿಲ್ಲ ಸುಳಿಯಲಿಲ್ಲ
ಅವನ ಸುತ್ತ ಒಂದೂ ನೆರಳು” ಎಂದು ಹೂ ಮಾರುವವನ ಪಾಡನ್ನು ಉಲ್ಲೇಖಿಸಿ, ಅವನ ಕೂಗಿಗೂ ಬೆಲೆಯಿಲ್ಲದೆ ದನಿ ಕರಗುತ್ತಿದೆ, ಮಲ್ಲೆಯನು ಕೊಳ್ಳುವವರಿಲ್ಲದೆ ಅದರ ಮೇಲಿನ ಮಮತೆಯೂ ಇಲ್ಲದಂತಾಗಿ ಬದುಕ ತನ್ನ ಚೈತನ್ಯವನ್ನೂ ಕಳೆದುಕೊಳ್ಳುತ್ತಿದೆ ಎಂದು ತಿಳಿಸುತ್ತಾರೆ.
ಸದಾ ರಾಧೆಯನ್ನು ಅಂತರಂಗದ ವೀಣೆಯಲ್ಲಿ ಆಸ್ವಾದಿಸುತ್ತಿದ್ದ ಕೃಷ್ಣನೂ ರಾಜಕಾರಣಕ್ಕೆ ಸಿಲುಕಿ ರಾಧೆಯನ್ನು ಮರೆತುಬಿಟ್ಟನೇ? ಜೀವಸ್ವಪ್ನವಾಗಿದ್ಧವಳ ನೆನಪೇಕೆ ಕೃಷ್ಣನ ಬಾಧಿಸಲೊಲ್ಲದು? ರಾಧೆ ಕೇವಲ ಅವನ ನಾಟಕದ ಆಟಕ್ಕೆ ಪಾತ್ರಳಾಗಿಬಿಟ್ಟಳೇ? ಎಂಬುದಾಗಿ ಪ್ರಶ್ನಿಸುತ್ತ; ಜಗದೋದ್ಧಾರಕೆ ಹೊರಟ ಕೃಷ್ಣನ ಪ್ರೇಮವೈಫಲ್ಯಕೆ
“ಎದೆಯ ವೀಣೆ ಮಿಡಿಯದೇಕೆ” ಕವನವನ್ನು ಸಾಕ್ಷಿಯಾಗಿ ನೀಡುತ್ತಾರೆ.
ಮುಂದೆ…
” ಏಕೆ ತೊರೆದ ಮಾಧವ?” ಕವಿತೆಯಲ್ಲೂ ಇಂತಹುದೇ ಭಾವವನ್ನು ತುಂಬಿ, ರಾಧೆಯ ಧ್ಯಾನಕ್ಕೆ ಒಲಿಯಲಿಲ್ಲ,
ಕೊನೆಗೂ ರಾಧೆಯ ಆಂತರ್ಯವ ಮುಟ್ಟದೆ! ಏಕೆ ರಾಧೆಯನ್ನು ತೊರೆದ ಎಂಬ ಪ್ರಶ್ನೆಯನ್ನು ಓದುಗನಲ್ಲಿ ಹುಟ್ಟಿಸುತ್ತಾರೆ.
ಸಹಜವಾಗಿ ಪ್ರತಿ ಮನುಷ್ಯನೂ ಒಂದು ಸ್ವಂತ ಸೂರನ್ನು ಮಾಡಿಕೊಳ್ಳುವ ಬಯಕೆಯನ್ನು ಹೊಂದಿರುತ್ತಾನೆ. ಅದರ ಕುರಿತಾಗಿ ಕವಯಿತ್ರಿ
” ಸೂರನೇನೋ ಪಡೆದೆ ನಾ
ಅದರೊಟ್ಟಿಗೆ ಕೋಟಿ ಗಡಿಯ
ದಾಟಿ ಕಡವನು ಬೆಟ್ಟದಂತೆ
ಬಳಿಯಲೇ ಬೆಳೆದ ಬಡ್ಡಿಯಂತೂ
ಹರಿಶ್ಚಂದ್ರನ ನೆರಳಿಡಿದು ಬಂದ ನಕ್ಷತ್ರಿಕ “ಎಂದು…
ಸಾಲ ಮಾಡಿ ಫ್ಲಾಟು ಕೊಂಡು, ಕಡವನು ಅದರ ಜೊತೆ ಬೆಳೆದ ಬಡ್ಡಿಯನ್ನು, ಹರಿಶ್ಚಂದ್ರನ ನೆರಳು ಬೀಳುವವರೆಗೆ ಕಟ್ಟುತ್ತಲೇ ಇರಬೇಕಾಗುತ್ತದೆ ಎಂಬುದಾಗಿ ಮನೆ ಕಟ್ಟುವವರ, ಫ್ಲಾಟು ಕೊಳ್ಳುವವರ ಗೋಳನ್ನು ” ಒಂದು ಸೂರಿಗಾಗಿ” ಕವನದಲ್ಲಿ ಬಿಚ್ಚಿಡುತ್ತಾರೆ.
“ಸೋವಿಯಾಗಿ ಸಿಕ್ಕಿದ್ದಲ್ಲ ಸ್ವಾತಂತ್ರ್ಯ
ಮೌಲ್ಯ ತೆತ್ತ ಬಳಿಕವಷ್ಟೇ
ಹರಿಯಿತು ದಾಸ್ಯದ ಹೊಲೆಯು”
ಎಂದು ನಮ್ಮ ದೇಶದ ಸ್ವಾತಂತ್ರ್ಯದ ಪಯಣವನ್ನು ಮೂರೇ ಸಾಲುಗಳಲ್ಲಿ ಮನ ಮುಟ್ಟುವಂತೆ ತಿಳಿಸುತ್ತಾ… ಇಂತಹ ಸ್ವತಂತ್ರ ದೇಶವನ್ನು ಮತ್ತೊಮ್ಮೆ ದಾಸ್ಯಕೆ ದೂಡದಿರಿ, ಪರದೇಶಿ ವಸ್ತುಗಳ ತೊರೆದು ಸ್ವದೇಶಿಗಳು ನಮ್ಮ ವ್ಯಾಪಾರದ ಯೋಜನೆಯ ಫಲಾನುಭವಿಗಳಾಗಲಿ. ಇದು ನನ್ನ ” ಭಿನ್ನಹ ” ಎಂದು ದೇಶಾಭಿಮಾನವನ್ನು ವ್ಯಕ್ತಪಡಿಸುತ್ತ, ಓದುಗನಲ್ಲಿ ಭಿನ್ನವಿಸುತ್ತ ಕವಿಯ ಜವಾಬ್ದಾರಿಯನ್ನು ನೆನಪಿಸುತ್ತಾರೆ.
ಮುಂದುವರೆದು
“ಸಮಾಜ ಸಾಮರಸ್ಯ ಕದಡದಿರಿ ಜಾತಿ ಎನುತ
ರಾಷ್ಟ್ರ ಐಕ್ಯತೆಯನು ಕಲಕದಿರಿ ಧರ್ಮ ಎನ್ನುತ
ತಾಯಿ ಭಾರತಾಂಬೆ ಅವಳೇ ಕುಲ ಅವಳೇ ಮತ
ಇದುವೆ ಧ್ಯೇಯ ಮಂತ್ರವಾಗಲೆಂಬ ಅಭಿಮತ”
ಎಂತಹ ಸುಂದರ ಸಾಲುಗಳು, ಜಾತಿ, ಧರ್ಮ ಎನ್ನುತ ನಮ್ಮ ಐಕ್ಯತೆಯನು ಹಾಳುಗೆಡುವುದ ಬಿಟ್ಟು ಭಾರತಾಂಬೆಯೇ ನಮ್ಮ ಕುಲ ಗೋತ್ರ ಮತವಾಗಲೆಂಬ ಅಭಿಮತವನ್ನು ಕವಯಿತ್ರಿ ಸಾರಿ ದೇಶಾಭಿಮಾನಕ್ಕೆ ಸ್ಪೂರ್ತಿಯಾಗುತ್ತಾರೆ.
ಹೀಗೆ … ಒಟ್ಟು ನಲವತ್ನಾಲ್ಕು ಕವಿತೆಗಳುಳ್ಳ ಈ ಕಥಾ ಸಂಕಲನ ಅತ್ಯಂತ ವಿಭಿನ್ನವಾದ ಅನುಭವವನ್ನು ನೀಡುತ್ತದೆ. ಪ್ರತಿ ಕವಿತೆಗಳೂ ತಮ್ಮತನವನ್ನು ಎಲ್ಲಿಯೂ ಬಿಟ್ಟುಕೊಡುವುದಿಲ್ಲ. ಉತ್ಕೃಷ್ಟವಾದ ಸಾಹಿತ್ಯ ಹೊಂದಿದ್ದು, ಓದುಗನನ್ನು ಚಿಂತನೆಗೆ ಈಡು ಮಾಡುವ ಕವಿತೆಗಳು ಸುಲಭಕ್ಕೆ ಅರ್ಥವಾಗದಿದ್ದರೂ ಅರ್ಥವಾದೊಡನೆ ಮೈ ಮನಸುಗಳನ್ನು ಭಾವಪರವಶವನ್ನಾಗಿಸುತ್ತವೆ ಎಂಬುದು ಉತ್ಪ್ರೇಕ್ಷೆಯೂ ಅಲ್ಲ, ಸುಳ್ಳೂ ಅಲ್ಲ. ಇಲ್ಲಿ ವಿಶ್ಲೇಷಿಸಿದ ಕವಿತೆಗಳ ಹೊರತಾಗಿಯೂ; ಗುಬ್ಬಿ ಹಾರಿವೆ, ಕಪ್ಪು ಕೋಟಿನವನು, ಬದುಕಿನ ದಹನ, ಹಸಿರಾದಳು ಧರಿಣಿ, ಲೆಕ್ಕ ಮರೆಯುವ ಬಾರಾ, ಸಾವಿನ ಬೆರಳು, ಮೌನ ಕರೆಯುತಿದೆ…. ಮುಂತಾದ ಎಲ್ಲ ಕವಿತೆಗಳೂ ಒಂದೊಂದು ಸಂದೇಶವನ್ನು ನೀಡುತ್ತವೆ ಮತ್ತು ಶಾಶ್ವತವಾಗಿ ಸಾಹಿತ್ಯದೋದುಗನ ಮನಸಲ್ಲಿ ಭಾವಗಳು ಉಳಿದುಬಿಡುತ್ತವೆ.
ಕವಯಿತ್ರಿ ಶಿಲ್ಪ ಬೆಣ್ಣೆಗೆರೆ, ಅವರು ಪ್ರತಿಯೊಬ್ಬರ ಬದುಕಿನಲ್ಲಿ ಹಾಸು ಹೊಕ್ಕಾದ ವಿಷಯಗಳ ಕುರಿತಾದ ಕವಿತೆಗಳನ್ನು ಸಾಹಿತ್ಯಾಸಕ್ತರಿಗೆ ನೀಡಿರುವುದು ಈ ಕೃತಿಯ ವಿಶೇಷತೆಯೆನಿಸುತ್ತದೆ. ತಮ್ಮ ಪ್ರಥಮ ಸಂಕಲನದಲ್ಲೇ ದೊಡ್ಡ ವಿಚಾರಧಾರೆಗಳನ್ನು ದೃಷ್ಟಿಕೋನದಲ್ಲಿರಿಸಿಕೊಂಡು ಕಾವ್ಯರಚಿಸಿದ್ದಾರೆ ಎಂಬುದು ಈ ಕೃತಿಯ ಶಕ್ತಿ. ಮತ್ತು ಈ ಕೃತಿಯಿಂದ ಶಿಲ್ಪ ಬೆಣ್ಣೆಗೆರೆ ಅವರು ಅತ್ಯಂತ ಅನುಭವಿ ಕವಿಗಳು ಎಂಬ ಖ್ಯಾತಿಗೆ ಅರ್ಹರಾಗುತ್ತಾರೆ ಎಂಬುದು ನನ್ನ ಅನಿಸಿಕೆ. ಉತ್ತಮ ಚಿಂತನಾಶೀಲರಾಗಿ , ಬದುಕಿನ ಎಲ್ಲಾ ಆಯಾಮಗಳ ಕುರಿತಾಗಿ ನೇರವಾಗಿ ಸ್ಮೃತಿಗೆ ತಾಕುವಂತೆ ಬರೆದು ಕವಿತೆಗಳಿಗೆ ಜೀವ ತುಂಬಿರುವುದು ಈ ಕೃತಿಗೆ ಖಳೆ ನೀಡುತ್ತದೆ.
ಒಟ್ಟಿನಲ್ಲಿ ಕವಯಿತ್ರಿ ಶಿಲ್ಪ ಬೆಣ್ಣೆಗೆರೆ ಅವರು ತಮ್ಮ ಪ್ರಥಮ ಸಂಕಲನದಲ್ಲೇ ಎಲ್ಲ ಓದುಗರನ್ನು ಸೆರೆಹಿಡಿಯುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ “ಕೊಲ್ಲುವವನೇ ದೇವರಾದನಲ್ಲ” ಕೃತಿ ಎಲ್ಲರ ಅತ್ಯಂತ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಸಂಶಯವಿಲ್ಲ.
ನಾನು ಮೊದಲೇ ಹೇಳಿದಂತೆ ಈ ಕವಿತೆಗಳನ್ನು ಸುಮ್ಮನೇ ಓದುವ ಹವ್ಯಾಸಕ್ಕೆ ಓದಿದರೆ ಎದೆಯೊಳಗೆ ಇಳಿಯದೇ ಹೋಗಿಬಿಡುತ್ತವೆ. ತದೇಕಚಿತ್ತದೊಂದಿಗೆ ಸಾಲುಗಳನ್ನು ವಿಚಾರಧಾರೆಗೆ ಸಿಲುಕಿಸಿಕೊಂಡಾಗ ಮಾತ್ರ ಕವಿಯ ಅಂತರಾಳದ ಕಾವ್ಯದ ಭಾವ ಗ್ರಹಿಕೆಯಾಗುತ್ತವೆ.
ಒಂದೊಂದು ಕವಿತೆಯ ಮೇಲೆ ಹತ್ತಾರು ಬಾರಿ ಅನುಸಂಧಾನದ ಕಣ್ಣು ಹಾಯಿಸಿ ನನ್ನ ವಿವೇಚನಾ ಲಹರಿಗೆ ಹತ್ತಿದ ಬಳ್ಳಿಯನ್ನು ಇಲ್ಲಿ ಕಟ್ಟಿಕೊಟ್ಟಿದ್ದೇನೆ. ಕವಯಿತ್ರಿಯ ಭಾವನೆಗೆ ನನ್ನ ಅಭಿಪ್ರಾಯಗಳು ಸಾಮ್ಯತೆಯಾಗುತ್ತವೆ ಎಂದು ಹೇಳಲು ಅಸಾಧ್ಯವಾದರೂ, ಈ ಕೃತಿಯ ಮುಂದಿನ ಓದುಗರಿಗೆ ಒಂದು ಪರಿಕಲ್ಪನೆಯಾಗಿ ಈ ಸಾಲುಗಳು ನಿಂತರೆ ಅದು ನನ್ನ ಆಶಾಭಾವಕ್ಕೆ ಸಂತೃಪ್ತಿ ಅಷ್ಟೆ..
– ವರದೇಂದ್ರ ಕೆ ಮಸ್ಕಿ
– 9945253030
ಪುಸ್ತಕಗಳಿಗಾಗಿ ಸಂಪರ್ಕಿಸಿ
– ಶಿಲ್ಪ ಬೆಣ್ಣೆಗೆರೆ
– 7019764208