ಆದಯ್ಯನವರ ವಚನಗಳಲ್ಲಿ ಲಿಂಗಾಚಾರ
12 ನೇ ಶತಮಾನ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಬಸವಾದಿ ಶರಣರು ಮಾಡಿದ ಮಹಾನ್ ಕ್ರಾಂತಿ ಮತ್ತು ಅವರು ರಚಿಸಿದ ವಚನ ಸಾಹಿತ್ಯ. ಇದು ಒಂದು ಹೊಸ ಯುಗವನ್ನೆ ಸೃಷ್ಟಿಸಿತು. ಮತ್ತು ಹೊಸ ಇತಿಹಾಸವನ್ನೆ ಬರೆಯಿತು.
ಮೊದಲು ವಚನ ಎಂದರೆ ಏನು ಎಂದು “ತಿಳಿಯೋಣ. ವಚನ ಎನ್ನುವ ಪದ “ವಚ್” ಎಂಬ ಸಂಸ್ಕೃತ ಧಾತುವಿನಿಂದ ನಿಷ್ಪನ್ನವಾಗಿದೆ.”ವಚ್” ಎಂದರೆ ನಾಲಗೆ ಎಂದರ್ಥ. ವಚನ ಎಂದರೆ ನಾಲಗೆಯಿಂದ ನುಡಿದದ್ದು. ಅಂದರೆ ಮಾತು ಅಥವಾ ವಚನ ಎಂದರ್ಥ. ಎಂ. ಚಿದಾನಂದ ಮೂರ್ತಿ ಅವರು ಹೇಳುವಂತೆ ವಚನ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ಕೊಟ್ಟ ವಿಶಿಷ್ಟ ಕೊಡುಗೆ. ಮತ್ತು ವಚನ ಸಾಹಿತ್ಯ ವನ್ನು ಹೋಲುವ ಮತ್ತೊಂದು ಸಾಹಿತ್ಯ ಪ್ರಕಾರ ಜಗತ್ತಿನಲ್ಲಿಯೆ ಇಲ್ಲ ಎಂದು ಹೇಳಿದ್ದಾರೆ.
ವಚನಗಳು ಶರಣರ ಅಂತರಂಗದ ಅನುಭವದ ಅಭಿವ್ಯಕ್ತಿಯ ರಸಪಾಕದ, ಸರಳ ಸುಂದರ ಆಡು ಭಾಷೆಯ ರಚನೆ.
ಅವು ಹವ್ಯಾಸಕ್ಕಾಗಿ ಬರೆದವುಗಳಲ್ಲ. ಅವು ಶರಣರು ನುಡಿದಂತೆ ನಡೆದು ತೋರಿದ ನುಡಿಗಳು. ವಚನವು ಅತ್ತ ಪದ್ಯವು ಅಲ್ಲದ ಇತ್ತ ಗದ್ಯವು ಅಲ್ಲದ ತನ್ನದೆ ಆದ ಗೇಯ್ಮೆಯನ್ನು ಒಳಗೊಂಡಿದೆ.
ವಚನ ಸಾಹಿತ್ಯವು ಅಷ್ಟಾವರಣ, ಷಟ್ಸ್ಥಲ, ಪಂಚಾಚಾರಗಳ ಆಧಾರದ ಮೇಲೆ ನಿಂತಿದೆ.
ಅಷ್ಟಾವರಣ ಗಳು ನಾವು ಆಚರಿಸಬೇಕಾದ ಆಚರಣಾ ಕ್ರಮಗಳು. ಷಟ್ಸ್ಥಲ ನಾವೇ ಸಾಧಿಸಬೇಕಾದ ಅಂತರಂಗದ ಪಯಣದ ಮೂಲಕ ಐಕ್ಯತೆಯನ್ನು ಹೊಂದುವ ಕ್ರಮ. ಪಂಚಾಚಾರಗಳು ನಾವು ಪಾಲಿಸಬೇಕಾದ ಸಂಸ್ಕಾರ ಪೂರಿತ ಜೀವನ ಕ್ರಮ.
ಪಂಚ ಆಚಾರಗಳಾದ
1) ಲಿಂಗಾಚಾರ – ಏಕದೇವೊಪಾಸನೆ ಜೋತೆಗೆ ತನು ಶುದ್ಧಿ
2) ಸದಾಚಾರ – ದಾಸೋಹಿಯಾಗಿರುವುದರ ಜೋತೆಗೆ ಮನ ಶುದ್ಧಿ
3) ಶಿವಾಚಾರ – ಎಲ್ಲರೂ ಸಮಾನರು ಎನ್ನುವ ಜೋತೆಗೆ ಭಾವ ಶುದ್ಧಿ
4) ಗಣಾಚಾರ – ಲಿಂಗಾಯತ ತತ್ವಗಳ ಪಾಲಣೆ ಪೋಷಣೆ ಮತ್ತು ರಕ್ಷಣೆ ಜೋತೆಗೆ ನಡೆ ಶುದ್ಧಿ
5) ಭೃತ್ಯಾಚಾರ – ಲಿಂಗಭಕ್ತರ ಸೇವೆಯ ಜೋತೆಗೆ ನುಡಿ ಶುದ್ಧಿ
ಇಂದು ನಾವು ಆದಯ್ಯನವರ ವಚನಗಳಲ್ಲಿ ಲಿಂಗಾಚಾರ ಎಂಬ ವಿಷಯದ ಬಗ್ಗೆ ನೋಡೋಣ.
ಆದಯ್ಯನವರು ಸೌರಾಷ್ಟ್ರದ ಸೋಮನಾಥ ಪುರದವರು. ಲೋಹದ ವಸ್ತುಗಳ ವ್ಯಾಪಾರಕ್ಕಾಗಿ ಗದಗ ಜಿಲ್ಲೆಯ ಲಕ್ಷ್ಮೆಶ್ವರಕ್ಕೆ ಬಂದರು. ಅಲ್ಲಿ ಜೈನ ಯುವತಿಯಾದ ಪದ್ಮಾವತಿಯೋಂದಿಗೆ ಪ್ರೇಮ ವಿವಾಹವಾದರು. ಪದ್ಮಾವತಿಯ ತಂದೆ ಇದನ್ನು ವಿರೋಧಿಸಿದಾಗ ಅವರ ಸವಾಲನ್ನು ಸ್ವೀಕರಿಸಿ ಒಂದುವರೆ ತಿಂಗಳಿನಲ್ಲಿ ಸೌರಾಷ್ಟ್ರ ದಿಂದ ಸೋಮನಾಥ ನನ್ನು ತಂದು ಲಕ್ಷ್ಮೆಶ್ವರದ ಬಸದಿಯಲ್ಲಿ ಸ್ಥಾಪಿಸಿದ ನೆಂದು ಐತಿಹ್ಯವಿದೆ. ಆದಯ್ಯನವರ ಅಂಕಿತನಾಮ ಸೌರಾಷ್ಟ್ರ ಸೋಮೇಶ್ವರ. ಮತ್ತು ನಮಗೆ ದೊರೆತಿರುವ ವಚನಗಳ ಸಂಖ್ಯೆ 403.
ಚೆನ್ನಬಸವಣ್ಣನವರು ಹೇಳುವಂತೆ ಲಿಂಗಾಚಾರ ಎಂದರೆ “ಲಿಂಗವನಲ್ಲದೆ ಅನ್ಯವನರಿಯದಿರ್ಪುದೆ ಲಿಂಗಾಚಾರ”.
ಆದಯ್ಯನವರ ಒಂದು ವಚನವನ್ನು ನೋಡೋಣ.
ಎತ್ತನೇರಿ ಎತ್ತನರಸುವಂತೆ
ತಾನಿರ್ದು ತನ್ನನರಸಿ ಕೇಳುವಂತೆ
ಹೊತ್ತು ನಿಜವನರಿಯದತ್ತಲಿತ್ತ ಸುತ್ತ ಬಳಲುವಂತೆ
ಹಿಡಿದಿರ್ದ ಲಿಂಗವ ಕಾಣದೆ ಮೂವಿಧಿಗಾಣ್ಬರನೆನೆಂಬೆನಯ್ಯಾ
ಅಜ್ಞಾನಬದ್ಧರನೆನಗೆ ತೋರದಿರಯ್ಯಾ ಸೌರಾಷ್ಟ್ರ ಸೋಮೇಶ್ವರಾ.
ಬಗಲಲ್ಲಿ ಕೂಸ ಇಟಗೋಂಡು ಊರೆಲ್ಲಾ ಅಲೆದರಂತೆ ಎನ್ನುವಂತೆ ಎತ್ತಿನ ಮೇಲೆ ಕುಳಿತು ಎತ್ತನ್ನೆ ಹುಡುಕುವಂತೆ, ನಮ್ಮನ್ನು ನಾವೆ ಹುಡುಕಿದರೆ ಹೇಗೆ ಅಪಹಾಸ್ಯಕ್ಕೆ ಒಳಗಾಗುತ್ತೆವೊ ಹಾಗೆ ನಮ್ಮೋಳಗಿದ್ದ ಮಹಾಘನವನ್ನು ಅರಿಯುವುದೆ ಈ ಮಾನವ ಜನ್ಮದ ಮೂಲ ಉದ್ದೇಶ.
“ತನ್ನ ತಾನರಿದಡೆ ತಾನೆ ದೇವ ನೋಡಾ ಅಪ್ರಮಾಣ ಕೂಡಲಸಂಗಮ ದೇವಾ”
ಮತ್ತು “ಲಿಂಗವನರಿಯದೆ ಮತ್ತೆನನ್ನು ಅರಿತರು ಫಲವಿಲ್ಲ, ಲಿಂಗವ ನರಿತ ಬಳಿಕ ಮತ್ತೆನನ್ನು ಅರಿತಡೆಯು ಫಲವಿಲ್ಲ”.
ಎನ್ನುವಂತೆ ಲಿಂಗವನರಿಯದೆ ನನ್ನನ್ನು ನಾನು ಅರಿಯಲು ಅಥವಾ ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಲಿಂಗಜ್ಞಾನಿಗಳಲ್ಲದ ಅಜ್ಞಾನಿ ಗಳನ್ನು ಎನಗೆ ತೋರಿದರು ಎಂದು ಆದಯ್ಯನವರು ಹೇಳುತ್ತಾರೆ.
ಅಂಗವು ಲಿಂಗವೇಧಿಯಾದ ಬಳಿಕ
ಅಂಗವೆಲ್ಲವು ನಷ್ಟವಾಗಿ
ಲಿಂಗ ತನ್ಮಯವಾಗಿಪ್ಪುದಾಗಿ ದಿಟದಿಂದಪ್ಪ
ಸಜ್ಜನಿಕೆ ಬೇರೆ ಅಂಗವುಂಟೆ ಲಿಂಗವಲ್ಲದೆ
ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ನಿರ್ದೇಹಿಗಳು.
ಲಿಂಗಾಂಗ ಸಾಮರಸ್ಯವಾದ ಮೇಲೆ ಅಂಗವು ಲಿಂಗಸ್ವರೂಪವಾದ ಬಳಿಕ ದೇಹ ಭಾವ ಅಡಗಿ ದೇಹಿ ಭಾವ ಪ್ರಕಟವಾದಾಗ ಶರಣರು ನಿರ್ದೇಹಿಗಳು, ಎಂದು ಆದಯ್ಯನವರು ಹೇಳುತ್ತಾರೆ.
“ಕಿರಿದರೊಳ ಹಿರಿದರ್ಥಮಂ” ಎನ್ನುವಂತೆ ಕಿರಿದಾದ ಬೀಜದಲ್ಲಿ ಹಿರಿಯ ಮರ ಅಡಗಿದಂತೆ ನಮ್ಮೊಳಗೆ ಪರಾತ್ಪರ ಶಕ್ತಿ ಅಡಗಿದೆ. ಆ ಪರಾತ್ಪರ ಶಕ್ತಿಯನ್ನು ಅರಿಯಲು ಲಿಂಗವೆ ಆಧಾರ. ಅದಕ್ಕಾಗಿಯೆ ಆದಯ್ಯನವರು ಲಿಂಗವನ್ನು ಅರಿತರೆ ಅಂಗಗುಣಗಳು ಅಳೆಯುತ್ತವೆ ಎಂದು ಹೇಳಿದ್ದಾರೆ.ಲಿಂಗತನ್ಮಯರಾದಾಗ ಮಾತ್ರ ನಾವು ನಿಜವಾಗಿಯು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳಾಗುತ್ತೆವೆ. ಅಂದಾಗ ಅಂಗಗುಣಗಳು ಅಳಿದು ಲಿಂಗಗುಣಗಳು ನಮ್ಮಲ್ಲಿ ಅಳವಟ್ಟಾಗ ಲಿಂಗಾಂಗ ಸಾಮರಸ್ಯದಿ ಲಿಂಗದೇಹಿಗಳಾಗುತ್ತೆವೆ, ಅಂದರೆ ನಿರ್ದೇಹಿಗಳಾಗುತ್ತವೆ.
ಇಂತಹ ನಿರ್ದೇಹಿ ಸ್ಥಿತಿಯನ್ನು ಪಡೆಯಲು ಷಟ್ಸ್ಥಲ ಪಂಚಾಚಾರಗಳ ನಿರಂತರ ಸಾಧನೆ ಅವಶ್ಯ. ಲಿಂಗದ ಕುರುಹನ್ನು ಹಿಡಿದು ಅರಿವನ್ನು ಜಾಗೃತಮಾಡಿಕೊಂಡು ಅಂಗಗುಣಗಳಾದ ದ್ವೇಷ,ಅಸೂಯೆ,ಅರಿಷಡ್ವರ್ಗಗಳು ತಾಮಸ ಗುಣಗಳು,ವಿಷಯ ಗುಣಗಳು, ವ್ಯಸನಗಳನ್ನು ಅಳಿದು ಲಿಂಗಗುಣಗಳಾದ ಪ್ರೀತಿ, ಸ್ನೇಹ, ವಾತ್ಸಲ್ಯ, ದಯೆ, ಕರುಣೆ,ಪರಸ್ಪರ ವಿಶ್ವಾಸ,ಸರಳತೆ, ಸಜ್ಜನಿಕೆ,ಮುಂತಾದ ಸಾತ್ವಿಕ ಗುಣಗಳನ್ನು ಮೈಗೂಡಿಸಿಕೊಂಡವನೆ ನಿಜವಾದ ಶರಣ.ಇದು ಲಿಂಗಾಚಾರ ಅಳವಡದೆ ಸಾಧ್ಯವಿಲ್ಲ ಎಂದು ಆದಯ್ಯ ಶರಣರು ಹೇಳುತ್ತಾರೆ.
ಅತ್ಯಂತ ಮೇರು ಮಟ್ಟದಲ್ಲಿ ನಿಲ್ಲುವ ಇವರ ಇನ್ನೊಂದು ವಚನ,
ತನುವಿನಲ್ಲಿ ನಿರ್ಮೋಹ ಮನದಲ್ಲಿನಿರಹಂಕಾರ
ಪ್ರಾಣದಲ್ಲಿ ನಿರ್ಭಯ ಚಿತ್ತದಲ್ಲಿ ನಿರಾಪೇಕ್ಷೆ
ವಿಷಯಗಳಲಿ ಉದಾಸಿನ ಭಾವದಲ್ಲಿ ದಿಗಂಬರ
ಜ್ಞಾನದಲ್ಲಿ ಪರಮಾನಂದ ವೆಡೆಗೊಂಡ ಬಳಿಕ
ಸೌರಾಷ್ಟ್ರ ಸೋಮೆಶ್ವರ ಲಿಂಗವು ಬೇರಿಲ್ಲ ಕಾಣಿರೊ
ಈ ವಚನ ತುಂಬಾ ಅರ್ಥಗರ್ಭಿತ ಮತ್ತು ಈ ಭಾವದಂತೆ ನಡೆದರೆ ನಮ್ಮನ್ನು ಶರಣರ ಸ್ಥಾನಕ್ಕೆ ಏರಿಸುವ ವಚನ.
ತನುವಿನಲ್ಲಿ ನಿರ್ಮೋಹ: ಅಷ್ಟ ಮದಗಳಲ್ಲಿ ಸೌಂದರ್ಯ ಮದವು ಒಂದು. ನಮ್ಮ ದೇಹ ಸೌಂದರ್ಯದ ಬಗ್ಗೆ ಅಪಾರ ಹೆಮ್ಮೆ ನಮಗೆ. ದೇಹದ ವ್ಯಾಮೋಹ ಅಳಿಯದೆ ಆತ್ಮ ಜ್ಞಾನ ದೊರೆಯಲು ಸಾಧ್ಯವಿಲ್ಲ. ಆದ್ದರಿಂದ ಆದಯ್ಯನವರು ತನುವಿನಲ್ಲಿ ನಿರ್ಮೋಹ ಎಂದಿದ್ದಾರೆ.
ಮನದಲ್ಲಿ ನಿರಹಂಕಾರ : ಅಂದರೆ ಪ್ರತಿಯೊಂದು ವಿಷಯಕ್ಕು ನಾನು ಮಾಡಿದೆ, ನನ್ನಿಂದ ಆಯಿತು ನಾನು ನಾನು ಎನ್ನುವ ಅಹಂಕಾರ ಭಾವ ಚಿಗುರೊಡೆಯುತ್ತಲೆ ಇರುತ್ತದೆ. ಈ ಅಹಂಕಾರದಿಂದಲೆ ಎಷ್ಟೊ ಅನಾಹುತಗಳು ನಡೆಯುತ್ತವೆ. ಅಹಂಕಾರ ಅಭಿಮಾನ ನಮ್ಮನ್ನು ಹಾಳು ಮಾಡುತ್ತವೆ. ಅದಕ್ಕಾಗಿ ಮನದಲ್ಲಿ ನಿರಹಂಕಾರಿಗಳಾಗಿರಬೇಕು, ಎಂದು ಆದಯ್ಯನವರು ಹೇಳಿದ್ದಾರೆ.
ಪ್ರಾಣದಲ್ಲಿ ನಿರ್ಭಯ : ಪ್ರಾಣದ ಮೇಲೆ ಯಾರಿಗೆ ತಾನೆ ಆಸೆ ಇರುವದಿಲ್ಲ. ಎಲ್ಲರೂ ಪ್ರಾಣವನ್ನು ಪ್ರೀತಿಸುವವರೆ, ಆದರೆ ಬಸವಣ್ಣನವರು ಹೇಳುವಂತೆ “ಬಾರದು ಬಪ್ಪದು, ಬಪ್ಪದು ತಪ್ಪದು”, ಮತ್ತು “ಆಯುಷ್ಯ ತೀರಿದ ಬಳಿಕ ಒಂದರೆಘಳಿಗೆಯು ಇರಲಾಗದು”, ಮತ್ತು ಅಕ್ಕಮಹಾದೇವಿ ಹೇಳುವಂತೆ “ಆವ ವಿದ್ಯೆ ಕಲಿತರೇನು ಸಾವ ವಿದ್ಯೆ ಬೆನ್ನ ಬಿಡದು” ಅಂದರೆ ಪ್ರಾಣ ಎಂದಾದರು ಒಂದು ಹೋಗುವಂತದ್ದೆ. ಆ ನಿಜದ ಅರಿವು ನಮಗೆ ಇದ್ದಾಗ ಆ ಪ್ರಾಣದ ಮೇಲಿನ ಭಯ ಹೋಗುತ್ತದೆ. ಅದಕ್ಕಾಗಿ ಆದಯ್ಯನವರು ಪ್ರಾಣದಲ್ಲಿ ನಿರ್ಭಯ ಎಂದು ಹೇಳಿದ್ದಾರೆ.
ವಿಷಯಗಳಲಿ ಉದಾಸಿನ : 10 ವಿಷಯಂಗಳು ನಮ್ಮನ್ನು ವಿನಾಶದತ್ತ ಒಯ್ಯುತ್ತವೆ. ಇವು ನಮಗೆ ಆಧ್ಯಾತ್ಮಿಕ ಸಾಧನೆಗೆ ಅಡ್ಡಿ. ವಿಷಯಗಳು ಮನೋಚಿತ್ತ ಚಾಂಚಲ್ಯವನ್ನುಂಟು ಮಾಡುತ್ತವೆ.ಇವುಗಳನ್ನು ಜಯಿಸದೆ ಲಿಂಗಸಾಮರಸ್ಯ ಅಸಾದ್ಯ ಆದ್ದರಿಂದ ಆದಯ್ಯನವರು ವಿಷಯಗಳ ಬಗ್ಗೆ ಉದಾಸಿನತೆಯನ್ನು ಸೂಚಿಸಿದ್ದಾರೆ.
ಭಾವದಲ್ಲಿ ದಿಗಂಬರ : ಮನದಲ್ಲಿ ಪ್ರತಿ ನಿಮಿಷವು ವಿವಿಧ ಭಾವಗಳು ಅಂದರೆ ಸಂಕಲ್ಪಗಳು ವಿಕಲ್ಪಗಳು ಹುಟ್ಟುತ್ತಿರುತ್ತವೆ.ಅವು ಮನಸ್ಸಿನ ಏಕಾಗ್ರತೆಗೆ ಅಡ್ಡಿಯನ್ನುಂಟು ಮಾಡುತ್ತವೆ. ಭಾವ ನಿರ್ಭಾವವಾದಾಗ ಮನೋಸ್ಥೈರ್ಯ ವೃದ್ಧಿಯಾಗುತ್ತದೆ. ಅದಕ್ಕಾಗಿಯೆ ಆದಯ್ಯನವರು ಭಾವದಲ್ಲಿ ನಿರ್ಭಾವ ಅಂದರೆ ದಿಗಂಬರ ಸ್ಥಿತಿ ಇರಬೇಕು ಎಂದಿದ್ದಾರೆ.
ಜ್ಞಾನದಲ್ಲಿ ಪರಮಾನಂದ: ಮೇಲಿನ ಎಲ್ಲ ಗುಣಗಳನ್ನು ನಮ್ಮಲ್ಲಿ ಮೈಗೂಡಿಸಿಕೊಂಡಾಗ, ಲಿಂಗಾಚಾರದ ಮೂಲಕ ಪರವಸ್ತುವಿನ ಅನುಭವ ನಮ್ಮಲ್ಲಿ ಆದಾಗ ಪರಮಾನಂದ ಪ್ರಾಪ್ತಿಯಾಗುತ್ತದೆ. ಆಗ ಐಕ್ಯಸ್ಥಿತಿಯನ್ನು ಹೊಂದುತ್ತೆವೆ. ಇಂತಹ ಭಾವ ನಮ್ಮಲ್ಲಿ ಬೆಳೆಯಬೇಕಾದರೆ ಲಿಂಗ ಸಾಮರಸ್ಯವೊಂದೆ ದಾರಿ. ಅಂದರೆ ಲಿಂಗಾಚಾರದ ಪಾಲನೆ.
ಕಾಷ್ಟದಲ್ಲಿ ಅಗ್ನಿ ಇದ್ದಂತೆ
ಹಾಲೊಳಗೆ ತುಪ್ಪವಿದ್ದಂತೆ
ತನುವಿನೊಳಗೆ ಚೇತನವಿಪ್ಪಂತೆ
ಪಿಂಡದಲ್ಲಿ ಘನಲಿಂಗ ಪೂರ್ಣವಾಗಿಪ್ಪನಾಗಿ
ಇಹಪರ ನಾಸ್ತಿ ನಿರ್ವಯಲನೈದಿರ್ಪನಯ್ಯ
ಸೌರಾಷ್ಟ್ರ ಸೋಮೆಶ್ವರಾ ನಿಮ್ಮ ಶರಣ.
ಇದು ಲಿಂಗಾಚಾರದ ಘನ ವ್ಯಕ್ತಿತ್ವವನ್ನು ತೋರುವ ವಚನ.
ಕಟ್ಟಿಗೆಯಲ್ಲಿ ಅಗ್ನಿಇರುವಂತೆ, ಹಾಲಿಗೆ ವಿವಿಧ ಸಂಸ್ಕಾರ ಸಿಕ್ಕಾಗ ತುಪ್ಪ ದೊರೆಯುವಂತೆ, ನಮ್ಮ ದೇಹದಲ್ಲಿಯೆ ಪರಾತ್ಪರ ವಸ್ತು ಅಡಗಿದೆ. ಅದನ್ನು ಕಾಣುವ ಸನ್ಮಾರ್ಗವೆ ಲಿಂಗಾಚಾರ,ಆ ಘನವಸ್ತುವನ್ನು ಅರಿತಾಗ ನಮಗೆ ಇಹವು ಇಲ್ಲ, ಪರವು ಇಲ್ಲ. ಬಯಲುರೂಪಿಯಾಗುತ್ತೆವೆ.ಎಂದು ಆದಯ್ಯನವರು ಹೇಳುತ್ತಾರೆ.
ಭಾವ ದುರ್ಭಾವವಳಿದು
ಸ್ವಭಾವಿಯಾದ ಸದ್ಬಾವಿಗೆ ಅಂಗದಲ್ಲಿ
ಆಯತ ಪ್ರಾಣದಲ್ಲಿ ಸ್ವಾಯತ
ಉಭಯ ಐಕ್ಯವಾದಲ್ಲಿ ನಿರ್ಭಾವಿ
ಸೌರಾಷ್ಟ್ರ ಸೋಮೆಶ್ವರಾ ನಿಮ್ಮ ಶರಣ.
ನಮ್ಮ ಮನದ ಆಶೆ ಕ್ಲೇಶ ರೋಷ ದುರ್ಭಾವಗಳು ಅಳಿದು ಸದ್ಭಕ್ತಿ,ಸದ್ವಿಚಾರ, ಸುಜ್ಞಾನ, ಅಂಗದಲ್ಲಿ ಅಳವಟ್ಟಾಗ ಅಂಗದಲ್ಲಿ ಆಯತ, ಪ್ರಾಣದಲ್ಲಿ ಸ್ವಾಯತ ಈ ಎರಡು ಭಾವಗಳು ಐಕ್ಯವಾದಲ್ಲಿ ಶರಣ ನಿರ್ಭಾವಿಯಾಗುತ್ತಾನೆ. ಎಂದು ಆದಯ್ಯನವರು ಹೇಳುತ್ತಾರೆ.
ಹೀಗೆ ಆದಯ್ಯ ಶರಣರ ಕುರಿತು ಎಷ್ಟು ಹೇಳಿದರು ಕಡಿಮೆ. ಸಾತ್ವಿಕ, ಸಚ್ಛಾರಿತ್ರೆಯ, ಸುಜ್ಞಾನ ಸದ್ಭಕ್ತಿಯ ದಾರಿಯಲ್ಲಿ ನಡೆಯಲು ಶರಣರ ವಚನಗಳು ದಾರಿ ದೀವಿಗೆ ಇದ್ದಂತೆ. ಅದಕ್ಕಾಗಿ ಈ ಶರಣ ಮಾರ್ಗದಲ್ಲಿ ನಾವು ನಡೆಯೋಣ, ನಮ್ಮ ಮಕ್ಕಳನ್ನು ನಡೆಸೋಣ.
ಶರಣರು ಕೊಟ್ಟ ಲಿಂಗದ ಕಲ್ಪನೆ ಶ್ರೇಷ್ಠ ಮತ್ತು ಸಾರ್ವಕಾಲಿಕ ಮೌಲ್ಯಯುತವಾದದ್ದು.
-ಸವಿತಾ.ಎಮ್.ಮಾಟೂರ.
ಇಲಕಲ್ಲ.