ಶಿವದಾಸಿಮಯ್ಯ ಮತ್ತು ಶಂಕರ ದಾಸಿಮಯ್ಯ ಬಸವಣ್ಣನವರ ಸಮಕಾಲೀನಶರಣರು

ಶಿವದಾಸಿಮಯ್ಯ ಮತ್ತು ಶಂಕರ ದಾಸಿಮಯ್ಯ ಬಸವಣ್ಣನವರ ಸಮಕಾಲೀನಶರಣರು

ಹನ್ನೆರಡನೆಯ ಶತಮಾನದ ಬಸವ ಸಮಕಾಲೀನರಲ್ಲಿ ಶರಣ ಶಿವ ದಾಸಿಮಯ್ಯ ಒಬ್ಬ ಅಗ್ರ ಗಣ್ಯ
ದಿಟ್ಟ ಕಾಯಕ ನಿಷ್ಠ ಶರಣನು.ಜೇಡರ ದಾಸಿಮಯ್ಯ ಶಂಕರ ದಾಸಿಮಯ್ಯ ಮತ್ತು ಶಿವ ದಾಸಿಮಯ್ಯ ಇವರು ಮೂರು ಜನರು ಬಸವಣ್ಣನವರ ಸಮಕಾಲೀನ ಶರಣರು ಇದಕ್ಕೆ ಹಲವು ಉಲ್ಲೇಖ ಸಾಕ್ಷಿಗಳಿವೆ.
ಜೇಡರ ದಾಸಿಮಯ್ಯ ಮತ್ತು ದುಗ್ಗಳೆ ಇವರ ವಚನಗಳಲ್ಲಿ ಬಸವಣ್ಣನವರ ಮತ್ತು ಇತರ ಶರಣರ
ಉಲ್ಲೇಖ ಇರುವದರಿಂದ ಇವರಿಬ್ಬರು ಬಸವಣ್ಣನವರ ಸಮಕಾಲೀನರು ಎಂದೆನ್ನಬಹುದು .
ಇವರು ಮೂಲ ಇಂದಿನ ಕಲ್ಬುರ್ಗಿ ಜಿಲ್ಲೆಯ ಮುದೇನೂರು ಗ್ರಾಮದವರು.

ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಬೇರೆ ಬೇರೆ 

ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ .ಪ್ರತಿ ವರ್ಷವೂ ಕರ್ನಾಟಕ ಸರಕಾರವು ಆದ್ಯ ವಚನಕಾರ ದೇವರ ದಾಸಿಮಯ್ಯನ ಜಯಂತಿಗೆ ೯೨ ಲಕ್ಷ ಹಣ ಕೊಟ್ಟು ರಾಜ್ಯಾದಂತ ದೇವರ ದಾಸಿಮಯ್ಯನವರ ಜಯಂತಿಯನ್ನು ಆಚರಿಸುವ ಕಾರ್ಯಕ್ಕೆ ಇಳಿದಿರುವುದು ಹಾಸ್ಯಾಸ್ಪದವಾಗಿದೆ.
ದೇವರ ದಾಸಿಮಯ್ಯ ೧೧ ನೆಯ ಶತಮಾನದ ಶಿವ ಭಕ್ತ ,ಇಮ್ಮಡಿ ಜಯಸಿ೦ಹನ ಮಡದಿ ಸುಗ್ಗಲೆ ಇವಳಿಗೆ ಶಿವಬೋಧ ದೀಕ್ಷೆ ನೀಡಿ ಅವಳನ್ನು ಶೈವ ಧರ್ಮದ ಅನುಯಾಯಿಯನ್ನಾಗಿ ಮಾಡಿದರು.ದೇವರ ದಾಸಿಮಯ್ಯ ಅಪ್ಪಟ ಸನ್ಯಾಸಿಯಾಗಿದ್ದು ಮತ್ತು ಯಾವುದೇ ವಚನ ರಚನೆ ಮಾಡಿಲ್ಲಾ .
ಆತನು ವೃತ್ತಿಯಿಂದ ಕೃಷಿಕನಾಗಿದ್ದನೆಂದು ತಿಳಿದು ಬರುತ್ತದೆ.ಆತನು ವಚನಕಾರನಲ್ಲ .

ಜೇಡರ ದಾಸಿಮಯ್ಯ ಮತ್ತು ದುಗ್ಗಳೆ ೧೨ ಶತಮಾನದ ಬಸವಾದಿ ಪ್ರಮಥರ ಸಮಕಾಲೀನರು .ಇಬ್ಬರೂ ವಚನಕಾರರು ,ಇವರಿಬ್ಬರ ಬಗ್ಗೆ ಬಸವಣ್ಣ ಆದಿಯಾಗಿ ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಜೇಡರ ದಾಸಿಮಯ್ಯ ಮತ್ತು ಮಡದಿ ದುಗ್ಗಳೆ ಇವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.ಅದೇ ರೀತಿ ಜೇಡರ ದಾಸಿಮಯ್ಯ ಮತ್ತು ದುಗ್ಗಳೆ ,೧೨ ಶತಮಾನದ ಬಸವಾದಿ ಪ್ರಮಥರ ಬಗ್ಗೆ ತಮ್ಮ ಅನೇಕ ವಚನಗಳಲ್ಲಿ ಉಲ್ಲೇಖ ಮಾಡಿದ್ದಾರೆ. ವೃತ್ತಿಯಲ್ಲಿ ನೇಯ್ಗೆ ಕೆಲಸ ಮಾಡುವ ನೇಕಾರರು.
ಇಂತಹ ಗೊಂದಲಗಳ ಬಗ್ಗೆ ಡಾ ಎಂ ಎಂ ಕಲಬುರ್ಗಿ ಅವರು ೪೦ ವರ್ಷಗಳ ಹಿಂದೆಯೇ ಈ ವಿಷಯವನ್ನು ಸಂಶೋಧನೆಯ ಮೂಲಕ ಬಹಿರಂಗಗೊಳಿಸಿದ್ದಾರೆ. ಡಾ ಎಚ. ದೇವಿರಪ್ಪ,ಡಾ ಎಚ ಚಂದ್ರಶೇಖರ , ಡಾ ಎಂ ಚಿದಾನಂದ ಮೂರ್ತಿ ಮುಂತಾದ ಅನೇಕ ಸಂಶೋದಕರು ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ.

ಜೇಡರ ದಾಸಿಮಯ್ಯನ ವಚನ ಅಂಕಿತ -ರಾಮನಾಥ ಮತ್ತು ದುಗ್ಗಳೆ ಇವರ ವಚನಾಂಕಿತ ದಾಸಯ್ಯ ಪ್ರಿಯ ರಾಮನಾಥ.
ವಸ್ತು ಸ್ಥಿತಿ ಹೀಗಿದ್ದರೂ ವಚನಕಾರನಲ್ಲದ ದೇವರ ದಾಸಿಮಯ್ಯನವರಿಗೆ ಆದ್ಯ ವಚನಕಾರ ಪಟ್ಟ ಕಟ್ಟಿ ಅವರು ರಚಿಸದ ವಚನಗಳಿಗೆ ಮಾಲಕರನ್ನಾಗಿ ಮಾಡಿ
ಕರ್ನಾಟಕ ಸರಕಾರ ಘೋರ ಅಪರಾಧ ಮಾಡುತ್ತಿದೆ..ಅಷ್ಟೆ ಅಲ್ಲ ಜೇಡರ ದಾಸಿಮಯ್ಯನವರ ಮಡದಿ ದುಗ್ಗಳೆಯನ್ನು ದೇವರ ದಾಸಿಮಯ್ಯನವರ ಮಡದಿ ಅಂತಾ ಹೇಳಿ ಜೇಡರ ದಾಸಿಮಯ್ಯನವರ ಮತ್ತು ಮಡದಿ ದುಗ್ಗಳೆಯ ಚರಿತ್ರೆಗೆ ಮಸಿ ಬಳೆಯುವ ಕೆಲಸ ಮಾಡಿದ್ದಾರೆ.
ಡಾ ಎಂ ಚಿದಾನಂದ ಮೂರ್ತಿ -ಈ ದಿಶೆಯಲ್ಲಿ ಪ್ರತಿಭಟಿಸಿದ್ದು ಸೂಕ್ತ ಮತ್ತು ಸ್ತುತ್ಯಾರ್ಹ ಆದರೆ ಇದು ಪ್ರಚಾರ ಗಿಟ್ಟಿಸುವ ತಂತ್ರವಾಗಬಾರದು. ಮತ್ತು ವಿರೋಧಕ್ಕಾಗಿ ವಿರೋಧಿಸುವ ಹುಚ್ಚುತನವಿರಬಾರದು.
ಇಂದು ಬಹುತೇಕ ಸಂಶೋಧಕರು ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ.
ಜೇಡರ ದಾಸಿಮಯ್ಯನವರ ಮತ್ತು ಮಡದಿ ದುಗ್ಗಳೆಯವರ ದಾರ್ಶನಿಕ ಮತ್ತು ಪವಿತ್ರ ಜೀವನದ ಜೊತೆ ಚೆಲ್ಲಾಟವಾಡುವ ಕೆಲಸ ಮೊದಲು ನಿಲ್ಲಲಿ.ಸರಕಾರವೂ ಕೂಡಾ ಇಂತಹ ಸಮಯದಲ್ಲಿ ಸಮಾಜವನ್ನು ಒಡೆಯುವ ಕೆಲ ಶಕ್ತಿಗಳಿಗೆ ಕಡಿವಾಣ ಹಾಕಿ ,ತಜ್ಞ ಸಮಿತಿ ರಚಿಸಿ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇವರ ಜೀವನ ಚರಿತ್ರೆಯ ನಿರ್ಧರಿಸಬೇಕು. ಇಂತಹ ವಿವಾದಗಳು ಕೊನೆಗೊಳ್ಳಲಿ. ನಮ್ಮ ವ್ಯಕ್ತಿ ಪ್ರತಿಷ್ಟೆಗೆ ಶರಣರ ಜೀವನವನ್ನು ಬೀದಿಗೆ ತರುವದು ತರವಲ್ಲ. ಕರ್ನಾಟಕ ಘನ ಸರಕಾರವು ಈ ಕೂಡಲೇ ಎಚ್ಚತ್ತು ಫೆಬ್ರವರಿ ತಿಂಗಳಲ್ಲಿ ಬರುವ ಸರಕಾರೀ ಘೊಷಿತ ಆದ್ಯ ವಚನಕಾರರ ದೇವರ ದಾಸಿಮಯ್ಯನವರ ಬದಲಾಗಿ ಆದ್ಯ ವಚನಕಾರ ಜೇಡರ ದಾಸಿಮಯ್ಯನಾಗಬೇಕು.
ಶರಣರ ಜಯಂತಿ ಆಚರಿಸುವುದು ಸೂಕ್ತ ಆದರೆ ಇಂತಹ ವಿವಾದ ಹುಟ್ಟಿಸಿ ಮತ್ತೆ ಜಾತಿಯ ಸಂಘಟನೆಯನ್ನು ಬಲ ಪಡಿಸಿ ಒಂದು ವರ್ಗವನ್ನು ಓಲೈಸುವ
ಕೆಲಸಕ್ಕೆ ಕರ್ನಾಟಕ ಸರಕಾರ ಮುಂದಾಗಿರುವುದು ದುರಂತದ ಸಂಗತಿ . ಈ ಕೂಡಲೇ ಇಂತಹ ವಿವಾದವು ಇತ್ಯರ್ಥಗೊಳ್ಳಲಿ . ಗೊಂದಲದಲ್ಲಿ ಒಬ್ಬ ಶರಣರ ಕೃತಿಯನ್ನು ಇನ್ನೊಬ್ಬ ಸಾಧಕನಿಗೆ ಹೋಲಿಸಿ ಅರ್ಥವಿಲ್ಲದ ಆಚರಣೆ ಮಾಡುವದು ಆತಂಕದ ವಿಷಯ.
ನನಗೆ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರ ಬಗ್ಗೆಯೂ ಗೌರವ ಆದರವಿದೆ .ಆದರೆ ಅವರು ಇಬ್ಬರು ಬೇರೆ ಬೇರೆ.

ನಿಜ ಶರಣ ಶಂಕರ ದಾಸಿಮಯ್ಯ

ಶಂಕರ ದಾಸಿಮಯ್ಯ ಒಬ್ಬ ದಿಟ್ಟ ಶರಣ ತಾವು ಬರೆದ ಐದು ವಚನಗಳಲ್ಲಿ ಬಸವಣ್ಣ ಅಲ್ಲಮಪ್ರಭು ಚೆನ್ನಬಸವಣ್ಣ ಮತ್ತು ಮರುಳ ಶಂಕರದೇವರನ್ನು ಸ್ತುತಿಸಿದ್ದಾನೆ.
ಶಂಕರ ದಾಸಿಮಯ್ಯ ಬಸವಣ್ಣನವರ ಸಮಕಾಲೀನ ಶರಣ ಅನುಭಾವಿ. ಶಂಕರ ದಾಸಿಮಯ್ಯನವರ ಚಾರಿತ್ರಿಕ ಐತಿಹಾಸಿಕ ವಿವರಗಳು ಪೌರಾಣಿಕ ರೂಪದಲ್ಲಿ ಮಾರ್ಪಟ್ಟು ಶಂಕರ ದಾಸಿಮಯ್ಯನವರ ರಗಳೆ ,ಶಂಕರ ದಾಸಿಮಯ್ಯಪುರಾಣಗಳಲ್ಲಿ ,ತೆಲುಗು ಬಸವಪುರಾಣ,ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರಗಳಲಿ ದಾಖಲೆಯಾಗಿವೆ.
ಅವುಗಳಲ್ಲಿ ಸ್ವಲ್ಪ ಮಟ್ಟಿಗೆ ವೈಭವೀಕರಣಗೊಂಡಿದ್ದು ಶರಣರ ಮೂಲ ಆಶಯಕ್ಕೆ ದಕ್ಕೆ ಬಾರದ ರೀತಿಯಲ್ಲಿ ಪುರಾಣ ಕೃತಿಕಾರರು ಎಚ್ಚರವಹಿಸಿದ್ದಾರೆ.

ಶಂಕರ ದಾಸಿಮಯ್ಯ ಮೂಲಗಳ ಪ್ರಕಾರ ಇಂದಿನ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಂದಗಲ್ಲ ಗ್ರಾಮದವನು ( ಸ್ಕಂದ ಶಿಲೆ ) . ಪಕ್ಕದ ಲಿಂಗಸಗೂರಿನ ಗ್ರಾಮದ
ನವಿಲೆಯ ಜಡೆಯ ಶಂಕರಲಿಂಗ ಈತನ ಆರಾಧ್ಯ ದೈವ. ಶಿವ ದಾಸಿ ಈತನ ಮಡದಿ , ಶಂಕರ ದಾಸಿಮಯ್ಯನ ಜೇವನದಲ್ಲಿ ನಡೆದ ಕೆಲ ಘಟನೆಗಳು ಪುರಾಣದಲ್ಲಿ ವೈಭವೀಕರಣಗೊಂಡಿವೆ. ಅವುಗಳಲ್ಲಿ ಶಿವನಿಂದ ಹಣೆಗಣ್ಣು ಪಡೆದ ಸಂಗತಿ , ಮಹಾ ಶಿವ ಭಕ್ತನಾದ ಈತ ಕಲ್ಯಾಣದಲ್ಲಿ ವಿಷ್ಣುವಿನ ವಿಗ್ರಹ ದಹಿಸಿದ ಘಟನೆ,ಮುದೆನೂರಿನಲ್ಲಿ
ಜೇಡರ ದಾಸಿಮಯ್ಯನವರ ಅಹಂಕಾರವನ್ನು ಮುರಿದ ಪ್ರಸಂಗಗಳು ಚರಿತ್ರೆಯ ರೂಪದಲ್ಲಿ ಪುರಾಣಗಳಲ್ಲಿ ದಾಖಲೆಗೊಂಡಿವೆ. ಕೇವಲ ಐದು ವಚನಗಳು ದೊರಕಿವೆ ಆದರೆ ಈತನ ಬಗ್ಗೆ ರಗಳೆ ತೆಲಗು ಬಸವ ಪುರಾಣ,ಭೈರವೇಶ್ವರ ಕಾವ್ಯದಲ್ಲಿ ಪಾಲ್ಗುರಿಕೆ ಸೋಮೇಶ್ವರ ಪುರಾಣ ಶಂಕರ ದಾಸಿಮಯ್ಯನ ಪುರಾಣಗಳು ರಚಿತಗೊಂಡಿದ್ದನ್ನು ನೋಡಿದರೆ ಈತನು ಬಸವಣ್ಣನವರ ಹಿರಿಯ ಸಮಕಾಲೀನನಾಗಿದ್ದು ಆರಂಭದಲ್ಲಿ ಶಿವ ಭಕ್ತಿಯ ಪಥದಲ್ಲಿದ್ದು ನಂತರ ಬಸವಣ್ಣನವರ ಪ್ರಭಾವಕ್ಕೆ ಒಳಪಟ್ಟು ಲಿಂಗದೀಕ್ಷೆ ಪಡೆದು ಶರಣರ ಅನುಭವ ಪಥಕ್ಕೆ ಹೆಜ್ಜೆ ಹಾಕಿದನು ಎಂದು ತಿಳಿದು ಬರುತ್ತದೆ.

ಈತನು ನೇಕಾರ ಜಾಡರು ನೇಯ್ದ ಬಟ್ಟೆಗೆ ಮತ್ತು ನೂತ ನೂಲಿಗೆ ಬಣ್ಣವನ್ನು ಎದ್ದುತ್ತಿದ್ದನು ಈ ಕಾರಣದಿಂದ ಈಗಲೂ ಇಳಕಲ್ಲಿನಲ್ಲಿ ನೇಕಾರ ಸಮಾಜವು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತದೆ.ಬಣ್ಣ ಎದ್ದುವ ಕಾಯಕದಿಂದ ಇವರನ್ನು ಬಣಗಾರ ಅಥವಾ ನಾಗಲಿಕ ಸಮಾಜದವರೆಂದು ಈಗ ಕರೆಯುತ್ತಾರೆ.
ಕಲ್ಯಾಣ ಕ್ರಾಂತಿಯ ನಂತರ ಬೇರೆ ಬೇರೆ ಪ್ರದೇಶಗಳಿಗೆ ಚದುರಿದವರಲ್ಲಿ ಶಂಕರ ದಾಸಿಮಯ್ಯನವರೂ ಒಬ್ಬರು. ಇವರ “ನಿಜಗುರು ಶಂಕರ ದೇವಾ ” ವಚನಾಂಕಿತದಲ್ಲಿ ಐದು ವಚನಗಳು ದೊರೆತಿವೆ .

ಎನ್ನ ಕಾಯಕ್ಕೆ ಗುರುವಾದನಯ್ಯಾ ಬಸವಣ್ಣನು.
ಎನ್ನ ಜೀವಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು.
ಎನ್ನ ಪ್ರಾಣಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು.
ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು.
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ,ನಿಜಗುರು ಶಂಕರದೇವಾ.

ಶಂಕರ ದಾಸಿಮಯ್ಯನರಿಗೆ ತಮ್ಮ ಅನುಭಾವದ ಆವಿರ್ಭಾವದ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಬಸವಣ್ಣ ಚೆನ್ನ ಬಸವಣ್ಣ ಮರುಳಶಂಕರದೇವರು,ಪ್ರಭುದೇವರು ನೆರವಾದರು ಸ್ಪೂರ್ತಿಯಾದರು ಎಂದು ನೆನೆದಿದ್ದಾನೆ. ತಮ್ಮ ಕಾಯಕಕ್ಕೆ ಪಾವಿತ್ರ್ಯ ಒದಗಿಸಿದ ಮಹಾಮಣಿಹ ಬಸವಣ್ಣ ತನಗೆ ಕಾಯಕದ ಮಹತ್ವ ಕಳಿಸಿದ ಮತ್ತು ಕಾಯಕದ ಕಡ್ಡಾಯತನವನ್ನು ತೋರಿದ ಗುರು ಎಂದಿದ್ದಾರೆ.ಅದೇ ರೀತಿ ತಮ್ಮ ಜೀವಕ್ಕೆ ಲಿಂಗವಾದನು ಚೆನ್ನ ಬಸವಣ್ಣ .ಲಿಂಗವಿಲ್ಲಿ ಜ್ಞಾನವನ್ನಾಗಿ ತಿಳಿಯಬೇಕು.

ಎರಳೆ ಯತಿಯಂತೆ, ಪಿಕದಂತಿರಬೇಡವೆ ?
ತಿಟ್ಟನೆ ತಿರುಗಿ, ತೊಳಲಿ ಬಳಲುವರ ಹೇಸಿಕೆಯ ನೋಡಾ!
ಇರುಳು ಹಗಲೆನ್ನದೆ ತಿರುಗುವವರ ಕಂಡು ಹೇಸಿದೆ.
ಅರಿದಡೆ ಶರಣ, ಮರೆದಡೆ ಮಾನವ.
ಸತ್ತ ಕಸನ ಹೊತ್ತುಕೊಂಡು ಊರೂರಿಗೆ ಮಾರುವಕಾಶಾಂಬರಧಾರಿಗಳನೊಲ್ಲ, ನಿಜಗುರು ಶಂಕರದೇವ.

ಅರಿವಿನ ಮಹತ್ವವನ್ನು ಹೇಳುತ್ತಾ ಶುಕ ಪಿಕಗಳಂತಿರದೆ , ಅಧ್ಯಾತ್ಮ ಸಾಧನೆಗೆ ಹಗಲು ಇರುಳೆನ್ನದೆ ತಿರುಗುವ ಮೂಢರ ಕಂಡು ಹೇಸಿಕೆಯಾಗಿದೆ ಎಂದು ಹೇಳುತ್ತಾರೆ ಶಂಕರ ದಾಸಿಮಯ್ಯನವರು.ಅರಿವಿಲ್ಲದೆ ತಿರುಗುವುದು ಸತ್ತ ಕೂಸ ಹೊತ್ತು ಊರೂರು ತಿರುಗಿದಂತೆ ಎಂದಿದ್ದಾರೆ.ಇಂತಹ ಕಾಶಂಬರ ಲಾಂಛನ ತೊಟ್ಟವರನೊಲ್ಲ ಎಂದಿದ್ದಾರೆ.

ಕಾಯದ ಮದವಳಿದಲ್ಲದೆ ಮಾಯಾವಿಕಾರವಳಿಯದು.
ಮಾಯಾವಿಕಾರವಳಿದಲ್ಲದೆ ಭವನಾಶವಾಗದು.
ಭವನಾಶವಾದಲ್ಲದೆ ಲಿಂಗಸಂಬಂಧವಳವಡದು.
ಲಿಂಗಸಂಬಂಧವಳವಟ್ಟಲ್ಲದೆ ಸುಖವು ಸಾಧ್ಯವಾಗದು.
ಪರಮಸುಖ ಪರಿಣಾಮಕ್ಕೆ ಮಹಾನುಭಾವಿಗಳ ಸಂಗವೇ ಬೇಕು.
ಮಹಾನುಭಾವಿಗಳ ಸಂಗದಿಂದಲ್ಲದೆ ವಿಶ್ರಾಮವಿಲ್ಲ.
ಇಂತಪ್ಪ ಮಹಾನುಭಾವದ ಮೂರ್ತಿ
ಸಂಗನ ಬಸವಣ್ಣನ ಕೃಪೆಯಿಂದಲೆನಗೆ ನಿಜವು ಕಾಣಬಂದಿತ್ತು.
ಇದು ಕಾರಣ, ನಿಜಗುರು ಶಂಕರದೇವರ ಶರಣಪ್ರಭುದೇವರ ಶ್ರೀಪಾದವ ಕಂಡು ನಿಶ್ಚಿಂತನಾದೆನಯ್ಯಾ.

ಕಾಯದ ಮೇಲಿನ ಮೋಹ ಅಳಿಯದೆ ಮಾಯೆಯ ವಿಕಾರ ಅಳಿಯದು ,ಮಾಯಾವಿಕಾರ ಅಳಿಯದೆ ಭಾವ ನಾಶವಾಗದು, ವಿಷಯಾದಿ ಜಗತ್ತಿನಲ್ಲಿ ಬಂಧನವಾಗುತ್ತಾನೆ ಸಾಧಕ .ಭಾವ ನಾಶವಾಗದೆ ಲಿಂಗ ಸಂಬಂಧ ಅಳವಡಲಾಗದು.ಲಿಂಗ ಸಂಬಂಧವಿಲ್ಲದೆ ಪರಮ ಸುಖದ ಸಾಧ್ಯವಲ್ಲ .ಮಹಾನುಭಾವಿಗಳ ಸಂಗದಲ್ಲಿ ವಿಶ್ರಾಂತಿಯಿಲ್ಲ ,ಇಂತಹ ಮಹಾ ಮೂರ್ತಿ ಸಂಗನ ಬಸವಣ್ಣನ ಕೃಪೆಯಿಂದ ಅಧ್ಯಾತ್ಮದ ನಿಜ ಕಾರಣವನ್ನು ಕಾಣಬಹುದು ಎಂದಿದ್ದಾರೆ.

ಕಾಯವಿಲ್ಲಾಗಿ ಮಾಯವಿಲ್ಲ, ಮಾಯವಿಲ್ಲಾಗಿ ಮಥನವಿಲ್ಲ,
ಮಥನವಿಲ್ಲಾಗಿ ಭಾವವಿಲ್ಲ, ಭಾವವಿಲ್ಲಾಗಿ ಬಯಕೆಯಿಲ್ಲ,
ಬಯಕೆಯಿಲ್ಲಾಗಿ ನಿಜವನೈದಿ,ನಿಜಗುರು ಶಂಕರದೇವರೆಂಬುದು ತಾನಿಲ್ಲ.

ಕಾಯ ಗುಣ ಅಳಿದು ಮಯವಿಲ್ಲದೆ ,ಮಯವಿಲ್ಲದೆ ಮಥನವಿಲ್ಲ ,ಮಥನವಿಲ್ಲದೆ ಭಾವವಿಲ್ಲ ,ಭಾವವಿಲ್ಲದೆ ಬಯಕೆಯಿಲ್ಲ ,ಬಯಕೆಯಿಲ್ಲಾಗಿ ನಿಜವನರಿಯಲು ಸಾಧ್ಯ ಎಂದಿದ್ದಾರೆ ಶಂಕರ ದಾಸಿಮಯ್ಯನವರು.

ಹರನ ನಿರೂಪದಿಂದ ಧರೆಗೆ ಬಸವಣ್ಣನವತರಿಸಿದ ಕಾರಣ,
ಶಿವಾಚಾರ ಸದಾಚಾರವೆಂಬುದು ಧರೆಗೆ ವಿಖ್ಯಾತವಾಯಿತ್ತು.
ಶಿವಗಣ ಪ್ರಮಥಗಣಂಗಳೆಂಬ ಮಹಾಮಹಿಮರ ಸುಳುಹು,
ಧರೆಯ ಮೇಲೆ ಕಾಣಬಂದಿತ್ತು ನೋಡಯ್ಯಾ.
ಪರುಷವ ಸಾಧಿಸಿದಂತಾಯಿತ್ತು, ನಿಮ್ಮ ಶರಣರ ಸಂಗದಿಂದ.
ಎನ್ನ ನಂದಿಯ ಮೊಗವಾಡ, ನೊಸಲಕಣ್ಣುಂಟೆಂಬ
ಅಹಂಕಾರವ ಮುಂದುಗೊಂಡಿದ್ದೆನಯ್ಯಾ.
ಎನ್ನ ಮದ ಉಡುಗಿ, ಸಂಗನಬಸವಣ್ಣನ ಕರುಣದಿಂದ
ಪ್ರಭುದೇವರೆಂಬ ನಿರಾಳವ ಕಂಡು ಬದುಕಿದೆನು ಕಾಣಾ,ನಿಜಗುರು ಶಂಕರದೇವಾ.

ಬಸವಣ್ಣವರ ಬಗ್ಗೆ ಅಪಾರವಾದ ಪ್ರೀತಿ ಗೌರವ ಹೊಂದಿದ ಶಂಕರ ದಾಸಿಮಯ್ಯನವರು ಬಸವಣ್ಣ ಭೂಮಿಗೆ ಬಂದ ಹರಣ ಸ್ವರೂಪದ ಭಗವಂತ ,ಅವರಿಂದಲೇ ಶಿವಾಚಾರ ಸದಾಚಾರವೆಂಬುದು ಧರೆಗೆ ವಿಖ್ಯಾತವಾಯಿತ್ತು.ಬಸವಣ್ಣನಿಂದಲೇ ಶಿವಗಣ ಪ್ರಮಥಗಣಂಗಳೆಂಬ ಮಹಾಮಹಿಮರ ಸುಳುಹುಭೂಮಿಯ ಮೇಲೆ ಕಾಣ ಹತ್ತಿತು .
ಹರನ ಸ್ವರೂಪದ ಬಸವಣ್ಣ ನಂದಿಯ ಮುಖವಾಡ ನೊಸಲಗಣ್ಣಿನ ಅಹಂಕಾರವನ್ನು ಕಿತ್ತೊಗೆದನು. ಹೀಗಾಗಿ ನನ್ನ ಮದ ಉಡುಗಿ ,ಸಂಗನ ಬಸವಣ್ಣನವರ ಕೃಪೆ ಕರುಣೆಯಿಂದ
ಪ್ರಭುದೇವನೆಂಬ ನಿರಾಳ ಕಂಡು ಬದುಕಿದೆನು ಎಂದಿದ್ದಾನೆ .
ಬಣ್ಣ ಎದ್ದುವ ಕಾಯಕವನ್ನು ಅಣ್ಣ ಶಂಕರ ದಾಸಿಮಯ್ಯನು ಮಾಡಿದರೆ ಆತನ ತಮ್ಮ *ಶಿವ ದಾಸಿಮಯ್ಯ* ಬಟ್ಟೆಯನ್ನು ಹೊಲೆಯುವ ಕಾಯಕವನ್ನು ಎತ್ತಿಕೊಂಡಿದ್ದನು .
ಇನ್ನೊಂದು ವಿಶೇಷವೆಂದರೆ ಇವರ ತಮ್ಮ ಶಿವ ದಾಸಿಮಯ್ಯನವರ ಉಲ್ಲೇಖವು ಕೆಲ ಶರಣರ ವಚನದಲ್ಲಿ ಬಂದಿದೆ ಆದರೆ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ತಮ್ಮ ಸ್ವರಚಿತ ವಚನದಲ್ಲಿ ಮಡಿವಾಳಯ್ಯನವರ ಬಟ್ಟೆ ನಾ ಮಡಿ ಮಾಡುವೆ ,,,,,,, ಶಿವ ದಾಸಿಮಯ್ಯನವರ ಬಟ್ಟೆ ನಾ ಹೊಲಿವೆ ಎಂದಿದ್ದಾರೆ.
ಪುರಾಣ ಪುಣ್ಯ ಕಥೆಗಳಲ್ಲಿ ಜಾನಪದದಲ್ಲಿ ಶಂಕರ ದಾಸಿಮಯ್ಯನವರಿಗೆ ಶಿವ ದಾಸಿಮಯ್ಯನೆಂಬ ಸಹೋದರನಿದ್ದನು ಆತನು ಅಣ್ಣನೊಂದಿಗೆ ಕಾಯಕ ದಾಸೋಹ ಮಾಡುತ್ತಿದ್ದನು ವೃತ್ತಿಯಲ್ಲಿ ಈತನು ಸಿಂಪಿಗನಾಗಿದ್ದನು ಎಂದು ತಿಳಿದು ಬರುತ್ತದೆ, ಅವನು ಹುನಗುಂದ ತಾಲೂಕಿನ ಕಂದಗಲ್ಲದಲ್ಲಿ ಐಕ್ಯವಾಗಿರಬಹುದು .
ಈಗಲೂ ಶಿವಸಿಂಪಿ ಲಿಂಗಾಯತ ಸಮಾಜವು ಹುನಗುಂದ ತಾಲೂಕಿನ ಕಂದಗಲ್ಲಕ್ಕೆ ಭೇಟಿ ಕೊಡುತ್ತಾರೆ.
ಶಿವ ದಾಸಿಮಯ್ಯನವರ ವಚನಗಳು ಕಂಡು ಬಂದಿಲ್ಲ ಕಾರಣ ಕಲ್ಯಾಣದ ಕ್ಷಿಪ್ರ ಕ್ರಾಂತಿಯ ವೇಳೆ ವಚನ ಭಾಂಡಾರಕ್ಕೆ ಬೆಂಕಿ ಇಟ್ಟಾಗ ಅವರ ವಚನಗಳು ಸುಟ್ಟು ಹೋಗಿರಬಹುದು.ಚೆಟ್ಟಿಯಾರ ಚೆಟ್ಟಿ ಚಿಗಟೇರಿ ಕುಬಸದ ಕುಪ್ಪಸ್ತ ಭೂಸನೂರೆ ಮುಂತಾದವರ ಧಾರ್ಮಿಕ ಆಚರಣೆಗಳಲ್ಲಿ ಶಿವ ದಾಸಿಮಯ್ಯ ತಮ್ಮ ಗುರುಗಳು ಎಂದು ನಂಬುತ್ತಾರೆ.ಕೆಲ ಸಂಶೋಧಕರ ಪ್ರಕಾರ ಶಂಕರ ದಾಸಿಮಯ್ಯ ಮತ್ತು ಶಿವ ದಾಸಿಮಯ್ಯ ಒಬ್ಬರೇ ಎನ್ನುವ ವಾದವೂ ಇದೆ. ಆದರೆ ಈ ಎರಡು ಸಮಾಜದ ಮುಖಂಡರನ್ನು ಸಂಪರ್ಕಿಸಿದಾಗ ಅವರ ಆಚರಣೆ ಧಾರ್ಮಿಕ ನಂಬಿಕೆ ನಡೆದು ಬಂದ ಪದ್ಧತಿಗಳ ಗಣನೆಗೆ ತೆಗೆದುಕೊಂಡು ಅವರಿಬ್ಬರೂ ಬೇರೆ ಬೇರೆ ಮತ್ತು ಅಣ್ಣ ತಮ್ಮಂದಿರರು ಎನ್ನುವ ತೀರ್ಮಾನಕ್ಕೆ ಬರಲಾಗುವುದು.
ಕಳೆದ ಹದಿನೆಂಟು ತಿಂಗಳಿನಿಂದ ಸಂಶೋಧನೆಗೆ ಕಾಯ್ದಿರುವ ಶರಣರ ಸಮಾಧಿ ಸ್ಮಾರಕಗಳು ಎಂಬ ಶೀರ್ಷಿಕೆಯಲ್ಲಿ ನಿರಂತರವಾದ ಆಧಾರ ಸಹಿತ ಶರಣರ ಸಮಾಧಿ ಸ್ಮಾರಕ ಗಳನ್ನು ಹುಡುಕಿ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದೇವೆ.
ಈ ಸಲದ ನನ್ನ ಸಂಶೋಧನೆಗೆ ನವಿಲೇ ಮತ್ತು ಕಂದಗಲ್ಲ ಸ್ಥಳ ಗುರುತಿಸಲು ಸಹಾಯ ಮಾಡಿದ ಇಳಕಲ್ಲಿನ ಶ್ರೀ ಪ್ರಕಾಶ ಸಾರವಾಡ ,ಮತ್ತು ಶಿವದಾಸಿಮಯ್ಯನವರ ಬಗ್ಗೆ ನಿಖರ ಮಾಹಿತಿ ನೀಡಲು ಸಹಕರಿಸಿದ ಅಖಿಲ ಕರ್ನಾಟಕ ಶಿವ ಸಿಂಪಿ ಸಮಾಜದ ಅಧ್ಯಕ್ಷರಾದ ಶರಣ ಜಯಪ್ರಕಾಶ್ ಚಿಗಟೇರಿ ಅವರಿಗೆ ಮತ್ತು ಇಂತಹ ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ಪ್ರೋತ್ಸಾಹಿಸುತ್ತಿರುವ ಬಸವ ಸಮಿತಿಯ ಅಧ್ಯಕ್ಷರಾದ ಶರಣ ಅರವಿಂದ ಜತ್ತಿಯವರಿಗೆ ಬಸವ ಪಥದ ಸಂಪಾದಕ ಮಂಡಳಿಗೆ
ನನ್ನ ಅನಂತ ಶರಣಾರ್ಥಿಗಳು. ದೂರದ ಪುಣೆಯಿಂದ ಪ್ರತಿ ತಿಂಗಳು ಒಬ್ಬ ಶರಣರು ಮತ್ತು ಒಂದೊಂದು ಕ್ಷೇತ್ರವನ್ನು ಹುಡುಕಿ ಅವುಗಳ ಪ್ರಕಾಶನಕ್ಕೆ ನಾನು ಬದ್ಧನಾಗಿದ್ದೇನೆ. ಇನ್ನು ನೂರಾರು ಶರಣರ ಸಮಾಧಿಗಳು ಅತ್ಯಂತ ಶೋಚನೀಯ ಸ್ಥಿತಿಯಲ್ಲಿವೆ.
ಶರಣರ ಸಮಾಧಿ ಸ್ಮಾರಕಗಳು ಸ್ಥಾವರವಾದರೂ ಅವುಗಳ ಹಿಂದಿನ ಜಂಗಮ ಚೈತನ್ಯವನ್ನು ಗುರುತಿಸುವ ಕಾರ್ಯ ನಮ್ಮೆಲ್ಲರ ಮೇಲಿದೆ.
ಶರಣರು ತಮ್ಮ ಜೀವವನ್ನು ಬಲಿಕೊಟ್ಟು ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಕೊಟ್ಟು ಹೋಗಿದ್ದಾರೆ. ಇವುಗಳನ್ನು ದಾಖಲಿಸುವಲ್ಲಿ ಗ್ರಂಥ ರೂಪದಲ್ಲಿತರುವಲ್ಲಿ ಸಂಘ ಸಂಸ್ಥೆಗಳು ಪ್ರಕಾಶಕರು ಮುಂದೆ ಬಂದರೆ ನನ್ನ ಮತ್ತು ನಮ್ಮೆಲ್ಲರ ಶ್ರಮ ಸಾರ್ಥಕವಾಗುತ್ತದೆ.
ಸಿದ್ಧರಾಮರ ವಚನದಲ್ಲಿ ಶಿವ ದಾಸಿಮಯ್ಯನವರ ಪ್ರಸ್ತಾಪವು ಬಂದಿದೆ

ಭಕ್ತಿಯ ಕೂಟವಾಯಿತ್ತು ಬಸವಣ್ಣಂಗೆ
ಶಕ್ತಿಯ ಕೂಟವಾಯಿತ್ತು ಶಿವದಾಸಣ್ಣಂಗೆ
ಆಚಾರ ಕೂಟವಾಯಿತ್ತು ಏಲೇಶ್ವರದ ಕೇತಯ್ಯನಿಗೆ
ಅರ್ಪಿತಾ ಕೂಟವಾಯಿತ್ತು ಚೆನ್ನಬಸವಣ್ಣಂಗೆ
ಐಕ್ಯ ಕೂಟವಾಯಿತ್ತು ಅನಿಮಿಷಂಗೆ
ಪ್ರಾಣಕೂಟ ಸಿದ್ಧವಾಯಿತ್ತು ನಿಮಗೆ ಕಪಿಲ ಸಿದ್ಧ ಮಲ್ಲಿನಾಥಯ್ಯ

ದಾಸಿಮಯ್ಯನವರ ಬಗೆಗಿನ ವಿವಾದಗಳು
————————————————-
ರಂಜಾನ್ ದರ್ಗಾ ಅವರು ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರು ಒಂದೇ ಅಂದು ಅಭಿಪ್ರಾಯ ಪಡುತ್ತಾರೆ .ಇದು ಸಂಪೂರ್ಣ ತಪ್ಪು ಮತ್ತು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.
ಡಾ ಹಾಲಭಾವಿಯವರು ಶಂಕರ ದಾಸಿಮಯ್ಯ ಮತ್ತು ಶಿವ ದಾಸಿಮಯ್ಯ ಇಬ್ಬರು ಒಬ್ಬರೇ ಎಂದು ವಾದ ಮಾಡುತ್ತಾರೆ
ಡಾ ಅನ್ನಪೂರ್ಣ ಜಾಲವಾದಿ ಅವರು ಶಂಕರ ದಾಸಿಮಯ್ಯ ಬಸವ ಪೂರ್ವದ ಶರಣ ಎಂಬ ಪ್ರಬಂಧವನ್ನು ಸಾದರ ಪಡಿಸಿದ್ದಾರೆ .
ಡಾ ಎಂ ಎಂ ಕಲಬುರ್ಗಿ ಅವರ ಪ್ರಕಾರ ಸಂಶೋಧನೆ ಎಂಬುದು ಅಲ್ಪ ವಿರಾಮದಿಂದ ಪೂರ್ಣವಿರಾಮದ ಕಡೆಗೆ ನಡೆಯುವ ಪಯಣವಾಗಿದೆ .
ವಸ್ತು ಸ್ಥಿತಿ ಹೀಗಿರುವಾಗ ನನ್ನ ಆತ್ಮೀಯಸ್ನೇಹಿತ ಶರಣ ಸಾಹಿತಿ ಡಾ ಶಿವಾನಂದ ಕುಬಸದ ಅವರು ಇತ್ತೀಚಿಗೆ ಚಡಚಣದಲ್ಲಿ ಶಿವ ಸಿಂಪಿ ಸಮಾಜದ ಸಮಾವೇಶದಲ್ಲಿ ಶಿವದಾಸಿಮಯ್ಯ ಬಸವಣ್ಣನವರ ಪೂರ್ವದ ಶರಣನು ಎಂದು ಹೇಳಿ ಶರಣ ಸಾಹಿತ್ಯಕ್ಕೆ ಮತ್ತು ದಿಟ್ಟ ಶರಣ ಶಿವ ದಾಸಿಮಯ್ಯನವರ ಚರಿತ್ರೆಗೆ ಅಪಚಾರ ಬಗೆದಿದ್ದಾರೆ . ಬಿ ಟಿವಿಯಲ್ಲಿ ಮುಧೋಳದಲ್ಲಿ ಶಸ್ತ್ರ ವೈದ್ಯರಾದ ಡಾ ಶಿವಾನಂದ ಕುಬಸದ ಅವರ ಭಾಷಣದ ವರದಿ ನೋಡಿ ಮನಸ್ಸಿಗೆ ನೋವೆನಿಸಿತು. ಯಾವುದೇ ಪೂರ್ವ ಭಾವಿ ತಯಾರಿ ಇಲ್ಲದೆ ಕೇವಲ ಒಂದು ಜಾತಿಯ ಸಮುದಾಯದವರ ಸಂತೋಷಕ್ಕೆ ಮತ್ತು ಬಸವಣ್ಣನವರ ಪೂರ್ವದಲ್ಲಿ ಶಿವ ದಾಸಿಮಯ್ಯ ಶಂಕರ ದಾಸಿಮಯ್ಯ ಜೇಡರ ದಾಸಿಮಯ್ಯ ಆಗಿ ಹೋಗಿದ್ದಾರೆಂದು ಹೇಳುವುದು ಉಚಿತವಲ್ಲ.
ಡಾ ಶಿವಾನಂದ ಕುಬಸದ ಅವರು ಶರಣ ಶಿವದಾಸಿಮಯ್ಯ ಬಸವಣ್ಣನವರ ಪೂರ್ವ ಕಾಲದವರು ಎಂದು ಕೊಟ್ಟ ಕಾರಣ ಶಿವ ದಾಸಿಮಯ್ಯನವರ ವಚನಗಳು ದೊರಕಿಲ್ಲ ಎಂಬ ಅತ್ಯಂತ ಸಣ್ಣತಾಣದಿಂದ ಕೂಡಿದೆ . ಹಾಗೆ ನೋಡಿದರೆ ಹರಳಯ್ಯ ಬಿಷ್ಟಾದೇವಿ ಮತ್ತು ಇನ್ನು ಅನೇಕರ ವಚನಗಳು ದೊರಕಿಲ್ಲ ಹಾಗಂತ ಅವರೆಲ್ಲರನ್ನು ಬಸವ ಪೂರ್ವ ಯುಗದ ಶರಣರೆಂದು ಹೇಳುವುದು ಸರಿಯೇ ?ವೈದಿಕರ ಕೋಪಕ್ಕೆ ವಚನಗಳು ಸುತ್ತು ಹೋದವು ಮತ್ತು ಇನ್ನು ಅನೇಕರ ಮಠಗಳಲ್ಲಿ ಮತ್ತು ಮನೆಗಳಲ್ಲಿ ವಚನಗಳ ತಾಡೋಲೆಗಳು ಸಿಗುತ್ತಿವೆ ಎಲ್ಲ ಲಿಂಗಾಯತ ಸಮಾಜದವರಿಗೆ ಬಸವಣ್ಣನೇ ಅಗ್ರ ನಾಯಕ ‘
ಒಂದು ವರ್ಗದ ಜನರನ್ನು ಓಲೈಸಲು ನಾವು ಒಬ್ಬೊಬ್ಬ ಶರಣರನ್ನು ಒಂದೊಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ನಾಚಿಕೆಗೇಡಿತನ . ಭಾಷಣಕಾರರು ಉಪನ್ಯಾಸಕರು ಮತ್ತು ಸಂಶೋಧಕರು ಉಪಲಬ್ದವಿದ್ದ ದಾಖಲೆ ಸಾಕ್ಷಿ ಪುರಾವೆಗಳನ್ನು ಓದಿ ಅಧ್ಯಯನ ಮಾಡಿ ತಮ್ಮ ವಿಚಾರಗಳನ್ನು ಮಂಡಿಸುವುದು ಸೂಕ್ತ .

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!