ಮನುಷ್ಯನೂ ಇದ್ದಾನೆ ನೋಡಿ!

ಮನುಷ್ಯನೂ ಇದ್ದಾನೆ ನೋಡಿ!

ಬೆಳ್ಳಂಬೆಳಿಗ್ಗೆ ಸೂರ್ಯ ಇನ್ನೂ ಕಣ್ಣು ಬಿಟ್ಟಿಲ್ಲ
ಕಾಗೆಯೊಂದು ಆಕ್ರೋಶದಿಂದ ಖಾ..ಖಾ..
ಇನ್ನೊಂದನ್ನು ಅಟ್ಟಿಸಿ ಹಾರಾಡುತ್ತಿದೆ
ಕಾಲಿಂದ ಮೆಟ್ಟಿ ರೆಕ್ಕೆ ಬಡಿದು ಕೊಕ್ಕಿಂದ ಕುಕ್ಕಿ
ತಡೆಯಲಾಗದ ಸಿಟ್ಟು ಬಂದಿದೆ ಅದಕ್ಕೆ!

ಮನುಷ್ಯನೂ ಇದ್ದಾನೆ ನೋಡಿ
ಎಷ್ಟು ಒಳ್ಳೆಯವನು
ಈಚೀಚೆಗೆ ಅವನಿಗೆ ಸಿಟ್ಟೇ ಬರುವುದಿಲ್ಲ

ರೈತ ರಸ್ತೆಯಲ್ಲಿ ಮಲಗಿದ್ದಾನೆ
ದಲ್ಲಾಳಿಗಳು ಹೊಲಕ್ಕೆ ನುಗ್ಗಿದ್ದಾರೆ

ಹರೆಯದ ಹುಡುಗರ ಹಸಿದ ಕಂಗಳು ಒಳಪುಟಗಳಲ್ಲಿ
‘ಬೇಕಾಗಿದ್ದಾರೆ’ ಕಣ್ಮರೆಯಾಗಿದೆ

ಗಾರ್ಮೆಂಟ್ಸ್ ಗೇಟುಗಳ ಹೊರಗೆ
ಚೂಡಿದಾರ್ ಹುಡುಗಿಯರು
ನಿಟ್ಟುಸಿರು ಬಿಟ್ಟು ಕಾಯುತ್ತಿದ್ದಾರೆ ಕರೆಗೆ

ಶಾಲೆಗಳಲ್ಲಿ ಪುಟ್ಟ ಪಾದಗಳಿಲ್ಲ
ಟೀಚರಮ್ಮಂದಿರ ಗಂಟಲು ಕಟ್ಟಿದೆ

ಟೀವಿಯ ತುಂಬೆಲ್ಲ ಶಾಸಕರ ಪಲ್ಲಂಗ
ಗಂಡಿನ ಮೇಲೆ ಅತ್ಯಾಚಾರ ಆಗಿದೆಯಂತೆ
ಹುಡುಕುತ್ತಿದ್ದಾರೆ ಪೊಲೀಸರು ಹುಡುಗಿಯನ್ನು!

ಸದನದೊಳಗೆ ಮಾತ್ರ ಎಷ್ಟು ಟನ್ನು ಮಾತು!

ಕಾಗೆಗಳೇ ವಾಸಿ!

ಬಿ.ಎಂ.ಹನೀಫ್

Don`t copy text!