ಮಹಾಶ್ವೇತೆ ಒಂದು ಭಾವನೆಗಳ ಆಗರ

ಮಹಾಶ್ವೇತೆ ಒಂದು ಭಾವನೆಗಳ ಆಗರ,

ಶ್ರೀಮತಿ ಸುಧಾಮೂರ್ತಿಯವರು ಬರೆದ ಕಾದಂಬರಿ, 19 ಬಾರಿ ಮರುಮುದ್ರಣಗೊಂಡು ಇಂದಿಗೂ ಅಷ್ಟೇ ವೇಗವಾಗಿ ಖಾಲಿಯಾಗುತ್ತಿರುವ ಮಹಾನ್ ಕಾದಂಬರಿ. ಓದಲು ಕುಳಿತರೆ ಸಮಯ ಮತ್ತು ಪುಟಗಳು ಲೆಕ್ಕಕ್ಕೆ ಸಿಗೊಲ್ಲ, ಸುತ್ತಲಿನ ಪರಿಸರವನ್ನೂ ಮರೀತೀವಿ, ಹೆಂಡತಿಯ ಕೂಗೂ ಕೇಳುವುದಿಲ್ಲ ಎಂಬ ಮಾತು ಫೈನಲ್… ಮುಂದೆ ಹೇಳುವ ಅವಶ್ಯಕತೆಯಿಲ್ಲ ಅಲ್ವಾ!

ಲೇಖಕಿಯವರೇ ತಿಳಿಸುವಂತೆ ಕಾದಂಬರಿ ಓದಿ ಪರಿವರ್ತನೆಗೊಂಡ ಯುವಕ ತಾನೇ ನಿರಾಕರಿಸಿದ ವಧುವನ್ನು ಮತ್ತೆ ಬಂದು ಸ್ವಮನಸ್ಸಿನಿಂದ, ಶ್ವೇತಮನದಿಂದ ಒಪ್ಪಿ ಮದುವೆಯಗುತ್ತಾನೆ. ಇದಕ್ಕಿಂತ ಸಾರ್ಥಕತೆ ಕಾದಂಬರಿಗೆ ಮತ್ತು ಕತೃವಿಗೆ ಬೇರೆ ಏನು ಬೇಕು ಹೇಳಿ! ಒಂದು ಕಾದಂಬರಿಯಿಂದ ಮನಸುಗಳು ಧನಾತ್ಮಕವಾಗಿ ಬದಲಾಗುತ್ತವೆ, ಬೇರ್ಪಟ್ಟ ಮನಸುಗಳು ಒಂದಾಗುತ್ತವೆ ಎಂದರೆ ಆ ಕಾದಂಬರಿ ಶಾಶ್ವತವಾಗಿ ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳುತ್ತದೆ ಎಂದರ್ಥ.

ನಾಯಕ ಡಾ. ಆನಂದ್, ತಾಯಿ ರಾಧಕ್ಕ
ತಂಗಿ ಗಿರಿಜಾ.. ಡಾ ದೇಸಾಯಿ ಅವರ ಹೆಂಡತಿ ವಸುಮತಿ, ಇತ್ತ ನಾಯಕಿ ಅನುಪಮಾ ತಂದೆ ಶ್ಯಾಮರಾಯರು, ಮಲತಾಯಿ ಸಾಬ್ಬಕ್ಕ, ಬಲ‌ ತಂಗಿಯರು, ಗೆಳತಿ‌ ಸುಮಿ(ಸುಮನಾ) , ಮುಂದೆ ಡಾಲಿ, ಸತ್ಯ, ವಸಂತ ಕಾದಂಬರಿಯ ಮುಖ್ಯ ಪಾತ್ರಧಾರಿಗಳಾಗಿ‌ ಕಾಣಸಿಗುತ್ತಾರೆ. ಮತ್ತಷ್ಟು ಪಾತ್ರಗಳು ಬಂದು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿ ಹೋಗುತ್ತವೆ.

ಬಾಣ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿದವಳು. “ಮಹಾಶ್ವೇತ” ನಾಟಕದಲ್ಲಿ ಮಹಾಶ್ವೇತೆ ಪಾತ್ರಧಾರಿಣಿ. ಶ್ವೇತವರ್ಣದ, ಸುಕೋಮಲೆ, ಅಷ್ಟೇ ಪರಿಪೂರ್ಣೆ, ವರ್ಣನೆಗೂ ಮೀರಿದ ಭಾವನಾತ್ಮಕ ಜೀವ, ಬದುಕನ್ನು ತನಗಿಂತ ಹೆಚ್ಚು ಕಾಳಜಿಯಿಂದ ನೋಡಿದಾಕೆ ಅಂತೆಯೇ ಬಾಳಿದಾಕೆ, ಎಷ್ಟು ನೋವುಗಳಿದ್ದರೂ ಬದುಕಿನ ಪ್ರಾಮುಖ್ಯತೆಗೆ ಧಕ್ಕೆ ಆಗದಂತೆ ನೋಡಿಕೊಂಡ; ಕಾದಂಬರಿ ಓದಿದ ನಂತರವೂ ಮನದಲ್ಲಿ ಅಚ್ಚಳಿಯದೇ ಉಳಿಯುವ ಪಾತ್ರ, ಅದು ನಾಯಕಿಯದ್ದು ಅವಳೇ ಅನುಪಮಾ…. “ಮಹಾಶ್ವೇತೆ”.

ಡಾ ಆನಂದ್ ಸ್ಫುರದ್ರೂಪಿ, ನೋಡಿದ ಎಲ್ಲ ಹುಡುಗಿಯರೂ ಅವನನ್ನೇ ಮೋಹಿಸಬೇಕು ಅಷ್ಟು ಸುರಸುಂದರಾಂಗ. ಅನುಪಮಾಳನ್ನು ನೋಡಿದ ಕೂಡಲೇ ತನ್ನ ಮನಸನ್ನು ಕೊಟ್ಟು, ಶ್ರೀಮಂತ ಮನೆತನದಿಂದಲೇ ಸೊಸೆಯನ್ನು ತರಬೇಕೆಂದು ನಿರ್ಧರಿಸಿದ ತಾಯಿ ರಾಧಕ್ಕಳ ಮನಸನ್ನೂ ಕರಗಿಸಿ ಬಡ ಮಾಸ್ತರನ‌ ಮಗಳಾದ ಅನುಪಮಾಳನ್ನು ಒರಿಸುತ್ತಾನೆ. ಮಲತಾಯಿ ಧೋರಣೆಯಿಂದ, ಕಡೆಗಣನೆಗೆ ಸಿಲುಕಿ, ಕೇವಲ‌ ವಿದ್ಯರ್ಥಿ ವೇತನದ ಸಹಾಯದಿಂದಲೇ ತನ್ನ ವಿದ್ಯಾಭ್ಯಾಸದ ಖರ್ಚನ್ನು ನೀಗಿಸಿಕೊಂಡಿದ್ದ ಅನುಪಮಾಳು ಮದುವೆ ಆಗಿ ಹೊರಬಿದ್ದರೆ‌ ಸಾಕು, ತನಗೆ ಹುಟ್ಟಿದ ಹೆಣ್ಣು ಮಕ್ಕಳ ಮದುವೆ ಮಾಡಬಹುದೆಂಬ‌ ಆಸೆ ಹೊಂದಿದ ಸಾಬಕ್ಕಳು ಒಲ್ಲದ ಮನಸ್ಸಿನಿಂದ, ಹೊಟ್ಟೇ ಕಿಚ್ಚಿನಿಂದಲೇ ಶ್ರೀಮಂತರ ಮನೆಗೆ ಮಗಳನ್ನು ಧಾರೆ ಎರೆಯುತ್ತಾಳೆ. ಎಲ್ಲ ಕಷ್ಟಗಳು ಮುಗಿದವು. ಬಡತನ ಕನಸಂತೆ ಮುಗಿದು ಹೋಯಿತಾದರೂ ಅನುಪಮಾ ಯಾವತ್ತೂ ಶ್ರೀಮಂತರ ಸೊಸೆಯಾದೆನೆಂದು ಬೀಗವುದೇ ಇಲ್ಲ. ಮಧುರ ದಾಂಪತ್ಯದ ಸುಖದೊಂದಿಗೆ ಸಂತೋಷವಾಗಿದ್ದ ಅನುಪಮಾಳಿಗೆ ವಿರಹ ವೇದನೆ ಪ್ರಾರಂಭ ಆಯ್ತು ನೋಡಿ. ಉನ್ನತ ವಿದ್ಯಭ್ಯಾಸಕ್ಕೆಂದು ಆನಂದ ಮದುವೆಯಾದ ಮೂರು ತಿಂಗಳಿಗೇ ಇಂಗ್ಲೆಂಡಿಗೆ ಹೊರಟು ನಿಂತ. ರಾಧಕ್ಕಳ ಶರತ್ತಿನಂತೆ “ಲಕ್ಷ್ಮೀನಿವಾಸ”ದಲ್ಲಿ ಹೆಚ್ಚು ಮಡಿವಂತಿಕೆ ಇದ್ದು ಮುಂದೆ ಅನುಪಮಾಳೇ ಗೌರಿ ಪೂಜೆ, ಲಕ್ಷ್ಮೀ ಪೂಜೆ ಮಾಡಬೇಕಿತ್ತು. ಯಾವುದೇ ಕಾರಣಕ್ಕೂ ತಕ್ಷಣವೇ ಅನುಪಮಾಳನ್ನು ಇಂಗ್ಲೆಂಡಿಗೆ ಕರೆದೊಯ್ಯಬಾರದೆಂಬ ಶರತ್ತಿನೊಂದಿಗೆ ಅನುಪಮಾಳೊಂದಿಗೆ ಮದುವೆಗೆ ಅಸ್ತು ಎಂದಿದ್ದಳು ರಾಧಕ್ಕ. ಅನುಪಮಾಳನ್ನು ಬಿಟ್ಟುಕೊಡಲಾಗದಿದ್ದರೂ ಚೆಂದುಳ್ಳಿ ಗೊಂಬೆಯನ್ನು ಮದುವೆ ಆದರೆ ಸಾಕು ಎಂದು, ಸೌಂದರ್ಯ ಆರಾಧಕ ಆನಂದ; ತಾಯಿ ಹೇಳಿದ್ದಕ್ಕೆಲ್ಲ ಒಲ್ಲದ ಮನಸಿಂದಲೇ ಗೋಣು ಹಾಕಿದ್ದ. ಮತ್ತೆ ಪಾಸ್ ಪೋರ್ಟ್, ವೀಸಾ ಆಗುವುದಕ್ಕೂ ನಾಲ್ಕಾರು ತಿಂಗಳು ಬೇಕೆಂಬ ಸಮಾಧಾನ ಅನುಪಮಾಳಿಗೂ ಹೇಳಿ ಸಂತೈಸಿದ್ದ. ಅಂತೂ ಹೊರಟೇ ಹೋದ ಆನಂದನೂ ಅಲ್ಲಿ ವಿರಹ ಗೀತೆ ಗುನುಗುತ್ತಲೇ ಇದ್ದು ದಂಪತಿಗಳ ನಡುವೆ ಪತ್ರ ವ್ಯವಹಾರ ನಡೆಯುತ್ತಲೇ ಇತ್ತು.

ಸಿರಿವಂತಿಕೆಯ ಗತ್ತು ಗಮ್ಮತ್ತು ಹೊಂದಿದ ಅನುಪಮಾಳ ನಾದಿನಿ ಗಿರಿಜಾ, ಸ್ವೇಚ್ಛಾಚಾರಿಣಿಯಾಗಿ, ಕೊಟ್ಟ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಳು. ತಮ್ಮದೇ ಔಟ್ ಹೌಸಲ್ಲಿ ಬಾಡಿಗೆಗೆ ಇದ್ದ, ವಾರದ ಹುಡುಗ ವಿಜಯ ಎಂಬ ಯುವಕನೊಂದಿಗೆ ಸರಸ ಸಲ್ಲಾಪವನ್ನು ಅನೈತಿಕವಾಗಿ ಮೆರೆದಿದ್ದಳು. ಗಮನಿಸಿದ, ಗುಮಾನಿಸಿದ ಅನುಪಮಾಳಿಗೂ ಒಂದು ರೀತಿ ಬೆದರಿಕೆ ಹಾಕಿ, ತಾಯಿಗೆ ಇಲ್ಲ ಸಲ್ಲದ ದೂರು ನಿಡಿ ಬೈಸಿಯೂ ಆಗಿತ್ತು, ಅಸಮಾಧಾನದಿಂದಲೇ ಸುಮ್ಮನಾದ ಅನುಪಮಾ ಗಂಡ ಅನಂದನಿಗೂ ಈ ವಿಷಯದ ಕುರಿತಾಗಿ ತಿಳಿಸಲಿಲ್ಲ.

ಮನೆಯಲ್ಲಿ ಪೂಜಾ ಕಾರ್ಯ ಸಂದರ್ಭ, ಅನುಪಮಾ ಅತ್ತೆಯ ಅಣತಿಯಂತೆ, ಧೂಪದಾರತಿಗೆ ಕೆಂಡ ತರಲು ಹೋದಾಗ ಕೈ ತಪ್ಪಿ ಅವಳ ಕಾಲ ಮೇಲೆ ಬೀಳುತ್ತದೆ. ನೋವು ಸಹಿಸಿಕೊಂಡು ಯಾರಿಗೂ ಹೇಳದೆ ಪೂಜೆ ಮುಗಿಸುತ್ತಾಳೆ. ಅದಷ್ಟೇ ಕಾರಣ ಗಾಯ ಮಾದರೂ ಬಿಳುಪು ಕಲೆ ಉಳಿದುಬಿಡುತ್ತದೆ. ಭಯಗೊಂಡ ಅನುಪಮಾ ಮನೆಯಲ್ಲಿ ತಿಳಿಸದೆ ಚರ್ಮರೋಗ ತಜ್ಞ ಡಾ ರಾವ್ ರನ್ನು ಸಂಧಿಸಿದಾಗ ಅವಳ ಸಂಕಟ ಎಲ್ಲೆ ಮೀರುತ್ತದೆ. ಯಾವುದು ಆಗಬಾರದೆಂದು ಅಂದು ಕೊಂಡಿದ್ದಳೋ ಅದೇ ಬಿಳುಪು ಬಂದು ಬಿಟ್ಟಿತ್ತು. ಎತ್ತರದ ಬೆಟ್ಟದಿಂದ ಒಮ್ಮಿಂದೊಮ್ಮೆಲೆ ಕೆಳಗೆ ಬಿದ್ದ ಅನುಭವ. ಅತ್ತೆ ಗಂಡಗೆ ತಿಳಿದರೆ ಏನೆನ್ನುವರೋ, ಮದುವೆ ಮುಂಚಿನ ರೋಗ ಎಂದು ಅನುಮಾನಿಸಿ, ಮುಚ್ಚಿಟ್ಟು ಮೋಸದ ಮದುವೆ ಮಾಡಿದ್ದಾರೆ ಎಂದು ತಿಳಿಯುತ್ತಾರೆ. ಯಾವುದೇ ಕಾರಣಕ್ಕೂ ಅವರಿಗೆ ತೋರುಗೊಡದೆ, ಡಾ ರಾವ್ ಹೇಳಿದಂತೆ ಕಡಿಮೆ ಆಗಬಹುದೆಂಬ ನಿರೀಕ್ಷೆಯೊಂದಿಗೆ, ಕದ್ದು ಮುಚ್ಚಿ ಔಷಧೋಪಚಾರ ಮಾಡಿಕೊಳ್ಳುತ್ತಿದ್ದಳು.

ಹೀಗೆ ಒಮ್ಮೆ ಸುಳ್ಳು ಹೇಳಿ ಡಾ ರಾವ್ ರನ್ನು ಭೇಟಿ ಆಗಿ ಹೊರಬರುವಾಗ ಅತ್ತೆ ಕಣ್ಣಿಗೆ ಬಿದ್ದು ಬಿಡುತ್ತಾಳೆ. ಬಿದ್ದದ್ದು ಅತ್ತೆ ಕಣ್ಣಿಗಲ್ಲ. ಹದ್ದಿನ ಕಣ್ಣಿಗೆ ಎಂಬಂತ ಪರಿಸ್ಥಿತಿ. ಮನೆಗೆ ಬಂದವರೇ ಅನುಪಮಾ ಅನುಪಮಾ ಎಂದು ಕೂಗುತ್ತಾರೆ. ಆನಂದನ ಪ್ರೇಮಸಲ್ಲಾಪದ ಪತ್ರದಲ್ಲಿ ಕಳೆದು ಹೋಗಿದ್ದ ಅನುಪಮಾಳಿಗೆ ಅತ್ತೆಯ ಕೂಗು ಕೇಳಿಸುವುದಿಲ್ಲ. ಮತ್ತೊಮ್ಮೆ ಜೋರಾಗಿ ಕೂಗಿದೊಡನೆ ಬೆಚ್ಚಿ ಬಿದ್ದು ಬಂದೆ, ಎನ್ನುತ್ತಾಳೆ. ಗೆಳತಿ ಮನೆಗೆ ಹೋಗ್ತೀನಿ ಅಂದಿದ್ದಿ, ಹೋಗಿಲ್ಲೇನು? ಕೆಳಗೆ ಬಾ ಎಂದೊಡನೆ. ಲಗುಬಗೆಯಿಂದ ಮೆಟ್ಟಿಲಿಳಿಯುವಾಗ ಆಯ ತಪ್ಪಿ ಬೀಳುತ್ತಾಳೆ. ಹಣೆಗೆ ಪೆಟ್ಟಾಗಿ ಸ್ಮೃತಿ ತಪ್ಪುತ್ತಾಳೆ. ಯಾವುದು ಗೌಪ್ಯವಾಗಿರಬೇಕಿತ್ತೋ ಅದು, ಆಕೆ ಬಿದ್ದಾಗ ಸೀರೆ ನಿರಿಗೆ ಸರಿದು ಎಲ್ಲರಿಗೂ ಗೋಚರವಾಗಿಬಿಡುತ್ತದೆ. ಡಾ ರಾವ್ ಭೇಟಿಯ ಹಿಂದಿನ ಸತ್ಯ, ಅತ್ತೆ ರಾಧಕ್ಕಗೆ ತಿಳಿದು…. ಅದೊಂದು ದೋಷ, ಮಡಿಗೆ ಬರುವುದಿಲ್ಲ, ಮೈಲಿಗೆ ಇದ್ದಂತೆ. ಮತ್ತು ರೋಗ ಮುಚ್ಚಿಟ್ಟು ಮದುವೆ ಮಾಡಿಕೊಂಡಿದ್ದಿ ಎಂದು ದೂಷಿಸಿ, ಬಿಳುಪು ಕಡಿಮೆ ಆದ ಮೇಲೆ ನಮ್ಮನೆಗೆ ಪ್ರವೇಶ ಎಂದು ಶ್ಯಾಮರಾಯರಿಗೆ ಟೆಲಿಗ್ರಾಂ ಕೊಟ್ಟು , ಅವರನ್ನು ಕರೆಸ ಅನುಪಮಾಳನ್ನು ನಿರ್ದಯವಾಗಿ ತವರಿಗೆ ಕಳಿಸುತ್ತಾಳೆ.
ತನ್ನ ಗುಟ್ಟು ಕಂಡುಹಿಡಿಯಲು ಹೋದ ನಿನಗೆ ತಕ್ಕ ಶಾಸ್ತಿ ಆಯ್ತು ಅಂತ ಗಿರಿಜಾ ಮನದೊಳಗೇ ಕುಹಕ ನಗೆ ಬೀರುತ್ತಾಳೆ.
ಆನಂದನಿಗೂ ರಾಧಕ್ಕ ಪತ್ರ ಮುಖೇನ ಅನುಪಾಳ ಬಿಳುಪಿನ ರೋಗದ ಬಗೆಗೆ, ತಿಳಿಸಿದಾಗ ಆನಂದ ಕುಸಿದು ಬೀಳುತ್ತಾನೆ. ತನ್ನ ಆಶಾ ಗೋಪುರವೇ ನೆಲ ಕಚ್ಚಿದಂತಾಗಿ ದಿಗ್ಭ್ರಮೆಗೆ ಒಳಗಾಗುತ್ತಾನೆ. ಸೌಂದರ್ಯದ ಆರಾಧಕ ಅನುಪಮಾಳ ಮುಂದಿನ ಕುರೂಪ ಮುಖ, ಮೈ ನೆನೆದು ಜಿಗುಪ್ಸೆ ಹೊಂದುತ್ತಾನೆ.
ಇತ್ತ ಅನುಪಮಾಳ‌ ತಂಗಿ ವಸುಧಾಳ ಮದುವೆ ಗೊತ್ತಾಗಿರುತ್ತೆ. ಹಿರಿ ಮಗಳು ತವರಿಗೆ ಸೇರಿರುತ್ತಾಳೆ. ಕಾರಣ ಬಾಯಿಂದ ಬಾಯಿಗೆ ಹಬ್ಬಿ; ತಂಗಿಯ ಬೀಗರ ಕಡೆಯಿಂದ ಇಬ್ಬರು ಬಂದು ಪರಿಸ್ಥಿತಿಯ ಸತ್ಯಾಸತ್ಯತೆ ತಿಳಿದು ಮದುವೆ ಮುರಿದುಬಿಡುತ್ತಾರೆ. ಇದರಿಂದ ಕುಪಿತಗೊಂಡ ಮಲತಾಯಿಯ ಚುಚ್ಚು ಮಾತು, ತಂದೆಯ ಅಸಹಾಯಕತೆ, ತಂಗಿಯ ನೋವು ಎಲ್ಲವನ್ನು ಕಂಡು ಕುಗ್ಗಿಹೋಗುತ್ತಾಳೆ ಅನುಪಮಾ.

ಇದರ ಮಧ್ಯೆ ತವರಿನಲ್ಲಿರುವಾಗ ಅತ್ತೆ ತೊರೆದರೂ ಗಂಡ ಕೈ ಬಿಡುವುದಿಲ್ಲ ಎಂಬ ಭರವಸೆಯೊಂದಿಗೆ ಪತ್ರ ಬರೆಯುತ್ತಾಳೆ. ಒಂದು, ಎರಡು, ಮೂರು ಪತ್ರ ಬರೆದರೂ, ಆನಂದನಿಂದ ಒಂದೂ ಮರು ಪತ್ರ ಬರದೆ ಖಿನ್ನತೆಗೆ ಒಳಗಾಗಿರುತ್ತಾಳೆ. ಆನಂದನದು ಪ್ರೇಮವೇ ಅಲ್ಲ, ಅವನು ನೆಚ್ಚಿಕೊಂಡದ್ದು ನನ್ನ ಶ್ವೇತವರ್ಣದ ದೇಹವನ್ನೇ ಹೊರತು ನನ್ನ ಮನಸನ್ನಲ್ಲ. ಅಥವಾ ನನ್ನ ಈ ಸ್ಥಿತಿಯನ್ನು ಅರಗಿಸಿಕೊಳ್ಳಲಾಗದೇ ಇದ್ದಾನೆಯೇ? ಯಾವ ನಿರ್ಧಾರಕ್ಕೂ ಬರಲಾಗದೆ ತಳಮಳಿಸುತ್ತಾಳೆ. ಶ್ಯಾಮರಾಯರೂ ಅಳಿಯನಿಗೆ ಪತ್ರ ಬರೆಯುತ್ತಾರೆ ಅದಕ್ಕೂ ಪ್ರತ್ಯುತ್ತರವಿಲ್ಲ. ಅದನ್ನೂ ಕಂಡ ಅನುಪಮಾಗೆ ಕೊನೆಗೆ ಗಂಡನ ಮೇಲೆ ಇದ್ದ ಭರವಸೆ ನುಚ್ಚುನೂರಾಗುತ್ತದೆ. “ಅಂಟಿಲ್ ಡೆತ್ ಡಿಪಾರ್ಟ್ಸ್ ಅಸ್” ಎಂಬ ಆನಂದನ ಮಾತು ಸುಳ್ಳು ಅನಿಸುತ್ತದೆ.

ಗಂಡನಿಂದ ಪರಿತ್ಯಕ್ತಳಾಗಿ, ಈ ಸುಕೋಮಲ ದೇಹಕ್ಕೆ ತಗುಲಿದ ರೋಗವಿಟ್ಟುಕೊಂಡು
ಮತ್ತೇಕೆ ಬದುಕಬೇಕೆಂದು ಸಾಯಲು ಹೊರಟು, ಕಂದಕಕ್ಕೆ ಹಾರಲು ಕೋಡುಗಲ್ಲಿನ ಮೇಲೆ ನಿಂತವಳಿಗೆ
ಕೊನೆಯ ಕ್ಷಣದಲ್ಲಿ ಮನಃಪರಿವರ್ತನೆ ಆಗುತ್ತದೆ. ಮದುವೆ ಮುಂಚೆಯೇ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ ಗಿರಿಜಾಳೆ ಈಗ ಮದುವೆ ಆಗಿ ನೀತಿವಂತಳೆಂದು ಬದುಕುತ್ತಿರುವಾಗ, ನಾನೇಕೆ ಸಾಯಬೇಕು? ಬದುಕಿ ತೋರಿಸುತ್ತೇನೆ ಎಂಬ ಛಲ ಬೆಳೆದು ಸಾವಿನ ಅಂಚಿನಿಂದ ಕಾಲ್ಕಿತ್ತು ವಾಪಸಾಗುತ್ತಾಳೆ. ಕೇವಲ ದೈಹಿಕ ಸಾವಿನಿಂದ ಗೇಲ್ಲಲಿಲ್ಲ, ಆಕೆ ಭಾವನಾತ್ಮಕವಾಗಿ ಗೆದ್ದು ಬದುಕಿನಲ್ಲಿ ದಿಟ್ಟ ಹೆಜ್ಜೆ ಇಡಲು ಮುಂದಾಗಿದ್ದಳು.
“ಜೀವನದ ಪ್ರೀತಿ” ನನ್ನನ್ನು ಉಳಿಸಿತು‌ ನಾನೂ ಜೀವನವನ್ನು ಪ್ರೀತಿಸುತ್ತೇನೆ ಎಂದು ನಿರ್ಧರಿಸುತ್ತಾಳೆ.
ಸುಮ್ಮಿ ಅನುಪಾಳ‌ ಸ್ಥಿತಿ ಕಂಡು, ಗಂಡ ಹರಿಯ ಒಪ್ಪಿಗೆ ಮೇರೆಗೆ ಮುಂಬೈಗೆ ಕರೆಯುತ್ತಾಳೆ. ಅಂತೆ ಅಪ್ಪನ ಒಪ್ಪಿಗೆ ಆಶೀರ್ವಾದ ಪಡೆದು ಅನುಪಮಾ ಮುಂಬೈ ಸೇರುತ್ತಾಳೆ. ಸಮ್ಮಿಯ ಉಪಚಾರ ಹಿತವೆನಿಸುತ್ತದೆ. ಹರಿಯ ಸಹಾಯದಿಂದ ಕೆಲಸಕ್ಕೆ ಸೇರುತ್ತಾಳೆ. ಹರಿಯ ಗೆಳೆಯ ಗೋಪಾಲ ಅತ್ರೇಯನ ಆಫೀಸಿನಲ್ಲಿ ಕ್ಲರ್ಕ್ ಕೆಲಸಕ್ಕೆ ಸೇರುತ್ತಾಳೆ. ಇಲ್ಲಿಯ ಡಾಲಿ ಆಪ್ತ ಸ್ನೇಹಿತೆಯಾಗುತ್ತಾಳೆ. ಒಮ್ಮೆ ಡಾಲಿಗೆ ಅಪಘಾತವಾದಾಗ ಅನುಪಮಾಳೇ ರಕ್ತದಾನ ಮಾಡಿ, ಗೆಳತಿಯನ್ನು ಉಳಿಸಿಕೊಳ್ಳುತ್ತಾಳೆ.

ಒಂದು ದಿನ ಆಫೀಸಿನಲ್ಲಿಯ ಚಂದ್ರಿಕಾಳ ಮದುವೆಗೆ ಎಲ್ಲರೂ ಹೋಗುತ್ತಾರೆ. ಮಧ್ಯಾಹ್ನ ಆಫೀಸಿಗೆ ಮರಳದೆ‌ ಮನೆಗೆ ಹೋಗುತ್ತಾಳೆ ಅನುಪಮಾ. ಮನೆಯಲ್ಲಿ ಹರಿ ಮಾತ್ರ ಇದ್ದ. ತಂಗೀ ತಂಗೀ ಎನ್ನುತ್ತಿದ್ದವ ಅನುಪಾಮಳ ಮೇಲೆ ಇದ್ದಕ್ಕಿದ್ದಂತೆ ಎರಗುತ್ತಾನೆ. ಮನೆಗೆ ಸೇಲ್ಸ್ ಗರ್ಲ್ ಬಂದದ್ದರಿಂದ ನಡೆಯುತ್ತಿದ್ದ ಅನಾಹುತ ತಪ್ಪುತ್ತದೆ. ಅನುಪಮಾ ಹೊರಬರುತ್ತಾಳೆ. ಸಂಬಂಧಗಳಿಗೆ‌ ಬೆಲೆಯೇ ಇಲ್ಲ ತಂಗಿಯೆನ್ನುತ್ತಿದ್ದವನು, ದೇಹವನ್ನು ಬಯಸಿ ಬಿಟ್ಟು, ರಾಕ್ಷಸನಂತೆ ವರ್ತಿಸಿದ್ದು ನೈತಿಕತೆಯ ಅಧಃಪತನ ವಾಯಿತೆಂದು ರೋಸಿಹೋಗುತ್ತಾಳೆ.

ತಡವಾಗಿ ಮನೆಗೆ ವಾಪಾಸಾದಾಗ ಹರಿ ಎಂಟು ದಿನ ಟೂರ್ ಗೆ ಹೋಗಿರುತ್ತಾನೆ. ಆ ಎಂಟು ದಿನದಲ್ಲಿಯೇ ಮನೆ ಬಿಡಬೇಕೆಂದು ಸುಮ್ಮಿಯನ್ನು ಒಪ್ಪಿಸಿ, ಮನೆ ತೊರೆಯುತ್ತಾಳೆ. ಡಾಲಿ ತಮ್ಮ ಮನೆಯಲ್ಲಿಯೇ ಪೇಯಿಂಗ್ ಗೆಸ್ಟಾಗಿ ಇರಲು ಅನುಪಮಾಳನ್ನು ಒಪ್ಪಿಸುತ್ತಾಳೆ. ಮೊದಲಿದ್ದ ಕ್ಲರ್ಕ್ ನೌಕರಿಯನ್ನೂ ತೊರೆಯುತ್ತಾಳೆ.
ಅದೃಷ್ಟವಶಾತ್ ವಿಲೇಪಾರ್ಲಿಯ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕ ಹುದ್ದೆಗೆ ಆಯ್ಕೆಯಾಗುತ್ತಾಳೆ.
ನಾಟಕದಲ್ಲಿ ಸಾಧನೆ ಗೈದವಳಿಗೆ, ಸಂಸ್ಕೃತ ಜ್ಞಾನ ಹೊಂದಿದವಳಿಗೆ ಶಾಲೆಯಲ್ಲಿ ಅಧ್ಯಾಪಕಿಯ ಕೆಲಸ ಸಿಕ್ಕಿದ್ದು ತನ್ನನ್ನು ಮತ್ತಷ್ಟು ಬೆಳೆಸಿಕೊಳ್ಳಲು ಅನುವಾಯಿತೆಂದುಕೊಳ್ಳುತ್ತಾಳೆ.

ಒಂದು ದಿನ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದವಳಿಗೆ ಪುಸ್ತಕದ ಕಾರಣದಿಂದ ಕನ್ನಡಿಗ ವೈದ್ಯನಾದ ವಸಂತ್ ನ ಪರಿಚಯವಾಗುತ್ತದೆ. ಮತ್ತು ಅವನ ವೈದ್ಯ ಗೆಳೆಯ ಸತ್ಯನ ಪರಿಚಯವೂ ಆಗುತ್ತದೆ. ಅನುಪಮಾಳ ಬಾಳಲ್ಲಿ ಇವರಿಬ್ಬರ ಆಗಮನ ಹೊಸ ಅಧ್ಯಾಯದಂತೆ ಅನಿಸುತ್ತದೆ. ಮೂವರೂ ಸಮಾನ ಮನಸ್ಕರು. ಸಹಜವಾಗಿಯೇ ಬೇಗ ಬೇಗ ಸ್ನೇಹ ಬೆಳೆಯುತ್ತದೆ. ತುಸು ಸಂಸ್ಕೃತ ಜ್ಞಾನ ವನ್ನು ಹೊಂದಿದ ವಸಂತ್ ಅನುಪಮಾಳ‌ ನಾಟಕ ನೋಡುವ ಹಂಬಲ ವ್ಯಕ್ತಪಡಿಸುತ್ತಾನೆ. ಇದರ ಮಧ್ಯೆ ಪ್ರೇಮ ವೈಫಲ್ಯಕ್ಕೆ ತುತ್ತಾದ ಸತ್ಯನಿಗೆ ಕಾಮಾಲೆ ರೋಗ ಬಂದು, ಪಥ್ಯದ ಅಡುಗೆ ಮಾಡಲು ಯಾರೂ ಇರದ ಕಾರಣ ಅನುಪಮಾಳ ಮನೆಯಲ್ಲಿಯೇ ಉಳಿಯುವ ಅನಿವಾರ್ಯ ಬರುತ್ತದೆ. ಅನುಪಾಳು ತೋರಿದ ಔದಾರ್ಯತೆ ಕಾಳಜಿಗೆ ಸೋತು “ಅನುಪಾಮ, ನೀವು ನನ್ನ ತಂಗಿ ಇದ್ದಂತೆ” ಎನ್ನುತ್ತಾನೆ. ಆಗ ಅನುಪಮಾ “ದಯವಿಟ್ಟು ನಮ್ಮ ನಡುವೆ ಕೇವಲ ಪವಿತ್ರ ಸ್ನೇಹ ಮಾತ್ರವಿರಲಿ. ಈ ಸಂಬಂಧಗಳು ಎಲ್ಲವೂ ಸುಳ್ಳು…. ಗಂಡು ಹೆಣ್ಣು ಇಬ್ಬರೂ ಯಾವುದೇ ಕೆಟ್ಟ ಆಲೋಚನೆಗಳಿಲ್ಲದೆ, ಪವಿತ್ರವಾದ ಸ್ನೇಹಿತರಾಗಿಯೇ ಇರಬಹುದೆಂದು ತೋರಿಸೋಣ, ಹಾಗೆಯೇ ಇರೋಣ” ಎಂದು ಹೇಳುತ್ತಾಳೆ. ತನ್ನ ಪ್ರೇಮ ವೈಫಲ್ಯವೇ ದೊಡ್ಡದು ಎಂದು ಕೊರಗುತ್ತಿದ್ದ ಸತ್ಯನಿಗೆ ತಾನು ಗಂಡನಿಂದ ಪರಿತ್ಯಕ್ತಳಾದವಳು, ನನ್ನ ವೈಫಲ್ಯಕ್ಕಿಂತ ನಿಮ್ಮದೇನಲ್ಲ. ನೀವು ಮತ್ತೆ‌ ಸಹಜವಾಗಿ ವರನ ಸ್ಥಾನ ಅಲಂಕರಿಸಬಹುದು ಆದರೆ ನನ್ನದು ಹಾಗಲ್ಲ.. ಬದಲಾಗಿ ಎಂದು ಸತ್ಯನ ಮನಸ್ಸನ್ನು ಜಾಗೃತಗೊಳಿಸಿ ಮೊದಲಿನಂತೆ ಮಾಡುತ್ತಾಳೆ.
ಇತ್ತ ಅನುಪಮಾಳ ನೆನಪುಗಳಿಂದ ಬಸವಳಿದ ಆನಂದ, ಕೆಲವು ವರ್ಷ ಇಂಗ್ಲೆಂಡಿನಲ್ಲಿಯೇ ಇದ್ದು, ತಾಯಿಯ ಅನಾರೋಗ್ಯದ ನಿಮಿತ್ಯ ಅನಿವಾರ್ಯವಾಗಿ ಭಾರತಕ್ಕೆ ವಾಪಸಾಗುತ್ತಾನೆ. ತಾಯಿ ಮತ್ತೊಂದು ಮದುವೆಗೆ ಒತ್ತಾಯಿಸಿದಾಗ ಮೊದಲಿಗೆ ಬೇಡ ಎನ್ನುತ್ತಿದ್ದವನು, ನಿನ್ನಿಷ್ಟ ಬಂದಂಗೆ ಮಾಡು ಎಂದಿದ್ದನಾದರೂ, ಅನುಪಮಾಳ ನೆನಪಿನಿಂದ ಹೊರ ಬರಲಾಗದೇ ಒದ್ದಾಡುತ್ತಾನೆ.

ನಾನು ತಪ್ಪು ಮಾಡಿದೆನೇ?? ಸಪ್ತಪದಿ ತುಳಿದು ಕಟ್ಟಿಕೊಂಡು ಬಂದವಳನ್ನು ನಡು ನೀರಿನಲ್ಲಿ ಬಿಟ್ಟು ಬಿಟ್ಟೆ. ಕಡೇ ಪಕ್ಷ ಗಂಡನಾಗಿ ಅಲ್ಲದಿದ್ದರೂ ಒಬ್ಬ ವೈದ್ಯನಾಗಿ ಆಕೆಯನ್ನು ಉಪಚರಿಸಬಹುದಿತ್ತು. ಭಾವನಾತ್ಮಕವಾಗಿ ಧೈರ್ಯ ತುಂಬ ಬಹುದಿತ್ತು. ಗಂಡನಾಗಿಯೂ, ವೈದ್ಯನಾಗಿಯೂ ನಾನು ನನ್ನ ಕರ್ತವ್ಯ ಪಾಲಿಸದೇ ಹೋದೆ ಎಂಬ ವೇದನೆಗೆ ಒಳಗಾಗುತ್ತಾನೆ.
ನಂತರ ತನ್ನ ಮೇಲಿನ ಕೋಣೆಯನ್ನು ಬಿಟ್ಟು ಕೆಳಗಿನ ತನ್ನ ತಂಗಿಯ ಕೋಣೆಗೆ ಬರುತ್ತಾನೆ. ಪುಸ್ತಕಗಳನ್ನು ಜೋಡಿಸುವಾಗ, ಡ್ರಾವರಿನಲ್ಲಿ ಗಿರಿಜಳ ರಹಸ್ಯಮಯ ಅನೈತಿಕತೆಯ ಗುಟ್ಟಿನ ಒಂದು ಪತ್ರ ಸಿಗುತ್ತದೆ. ಔಟ್ ಹೌಸ್ ನಲ್ಲಿಯ ವಿಜಯ್ ಗಿರಿಜಳಿಗೆ‌ ಬರೆದ ಪತ್ರದಿಂದ ಅವರಿಬ್ಬರಿಗೂ ಮದುವೆ ಮಂಚೆ ದೈಹಿಕ ಸಂಬಂಧ ಇದ್ದು, ಮದುವೆ ಆಗುವುದಕ್ಕೆ ಗಿರಿಜಳೇ ಒಪ್ಪಿರುವುದಿಲ್ಲ. ಕಾರಣ ಅವನು ಬಡವ ಎಂದು. ಆದರೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದರು, ಎಂಬುದು ತಿಳಿದು ಅಸಹ್ಯ ಪಟ್ಟು, ತಾಯಿಗೆ ಕೇಳುತ್ತಾನೆ. ತಾಯಿ ಗುಟ್ಟು ಬಿಟ್ಟುಕೊಡಲು ಹಿಂಜರಿದಾಗ ಒತ್ತಾಯವಾಗಿ ಕೇಳುತ್ತಾನೆ. ಹೌದು ನನಗೆ ಗೊತ್ತಿತ್ತು, ಅದಕ್ಕೆ ತರಾತುರಿಯಲ್ಲಿ ಅವಳಿಗೆ ಮದುವೆ ಮಾಡಿದೆ. ಈಗ ಗಿರಿಜಾ ಚೆನ್ನಾಗಿದ್ದಾಳಲ್ವಾ? ಬಿಡು ಎನ್ನುತ್ತಾಳೆ. ವಿಜಯನಿಗೆ ಕೊಟ್ಟು ಮದುವೆ ಮಾಡಬೇಕಿತ್ತು ಎಂದಾಗ, ಅದು ಹೇಗೆ ಸಾಧ್ಯ… “ಬಡವರ ಮನೆಯಿಂದ ಹೆಣ್ಣು ತರಬೇಕು, ಶ್ರೀಮಂತರ ಮನೆಗೆ ಹೆಣ್ಣು ಕೊಡಬೇಕು”, ಎಂದು ನಮ್ಮ ಸಮಾನರಿಗೆ ಕೊಟ್ಟೆ, ಗಿರಿಜಳೂ ಅದಕ್ಕೆ ಒಪ್ಪಿದ್ದಳು. ವಾಸ್ತವದ ಅರಿವು ಅವಳಿಗಿತ್ತು, ಈ ವಿಷಯ ನನಗೆ ಗಿರಿಜಳಿಗೆ ಮತ್ತು ಅನುಪಮಳಿಗೂ ಗೊತ್ತಿತ್ತು, ಎಂದಾಗ, ಅನುಪಮಾ ಯಾವತ್ತೂ ಪತ್ರದಲ್ಲಿ ಗಿರಿಜಾಳ ವಿಷಯ ಬರೆದಿರಲಿಲ್ಲ ಎಂಬುದು ನೆನಪಾಗುತ್ತದೆ. ಅಷ್ಟೇ ತಂಗಿ ಮತ್ತು ತಾಯಿಯ ಬಗ್ಗೆ ಅಸಹನೆಯೂ ಆಗುತ್ತದೆ.
ಸದಾ ಮಡಿ, ಪೂಜೆ, ಸಂಪ್ರದಾಯ ಎಂದು ಬೀಗುವ ರಾಧಕ್ಕಳ ಈ ವಿಷಯಕ್ಕೆ ಮೌನವಹಿಸಿರುವುದು ಸಂಪ್ರದಾಯಗಳೆಲ್ಲ ಗೊಡ್ಡು ಎನಿಸಿಬಿಡುತ್ತವೆ. ಗಿರಿಜಳ ಅನೈತಿಕತೆ ಎಲ್ಲಿ, ಅನುಪಮಾಳ ಪರಿಪೂರ್ಣತೆ ಎಲ್ಲಿ. ನಿಜಕ್ಕೂ ಅವಳಿಗೆ ಮದುವೆ ಮುಂಚೆ ಬಿಳುಪಿರಲಿಲ್ಲ, ಮದುವೆ ನಂತರವೇ ಬಂದದ್ದು ಎಂಬ ಸತ್ಯ ಆನಂದನಿಗೂ ಗೊತ್ತಿತ್ತು. ಅದನ್ನೆಲ್ಲ ನೆನೆದು ಹೇಗಾದರೂ ಮಾಡಿ ಅನುಪಾಳನ್ನು ಸಂಧಿಸಿ ಕ್ಷಮೆಯಾಚಿಸಿ ಕರೆದುಕೊಂಡು ಬರಬೇಕೆಂದು ಅವರ ಊರಿಗೆ‌ ಹೋಗುತ್ತಾನೆ.
ಅಲ್ಲಾಗಲೇ ಶ್ಯಮಾರಾಯರು ತೀರಿರುತ್ತಾರೆ, ಸಾಬಕ್ಕ ಮಕ್ಕಳೊಂದಿಗೆ ತನ್ಧ ತವರಿಗೆ‌ ಸೇರಿರುತ್ತಾಳೆ. ತಂದೆ ಇರುವವರೆಗೆ ಅನುಪಮಾ ಮುನ್ನೂರು ರುಪಾಯಿ ಮನೆಗೆ ಕಳಿಸುತ್ತಿದ್ದಳು. ನಂತರ ಎಲ್ಲಿ ಹಣ ಕಳಿಸುವುದು ನಿಲ್ಲಿಸುತ್ತಾಳೋ ಎಂದು, ಸಾಬಕ್ಕ ಅನುಪಮಾಳಿಗೆ ಪತ್ರ ಬರೆದು ಮನೆಯ ಜವಾಬ್ದಾರಿಯನ್ನು ಮರೆಯಬೇಡ “ದೊಡ್ಡ ಮನಸ್ಸು” ಮಾಡು ಎಂದಿರುತ್ತಾಳೆ. ಇದನ್ನು ಓದಿದ ಅನುಪಮಾಗೆ ಜಿಗುಪ್ಸೆ ಮೂಡಿದರೂ ತನ್ನ ಕರ್ತವ್ಯ ಪ್ರಜ್ಞೆ ಮೆರೆಯುತ್ತಾಳೆ. ಇದು ಅಗಲಿ ಹೋದ ತಂದೆಗೂ ತೃಪ್ತಿ ತರುವಂತದ್ದು ಎಂದುಕೊಳ್ಳುತ್ತಾಳೆ.
ಅನುಪಮಾಳನ್ನು ವಿಚಾರಿಸಿದ ಆನಂದನಿಗೆ, ಏನೋ ಗೊತ್ತಿಲ್ಲ, ಅನುಪಮಾಳಿಗೆ ಏನೋ ರೋಗ ಆಗಿತ್ತಂತೆ. ಎಲ್ಲಿಗೋ ಹೋದಳೆಂದು ಒಬ್ಬರು ಅಂದರೆ, ಮತ್ತೊಬ್ಬರು ಗಾಡಿ ಹಳಿಮ್ಯಾಲ ಬಿದ್ದು ಸತ್ರಂತ ಎಂಬ ಮಾತು ಕೇಳಿ. ಇನ್ನೆಲ್ಲಿಯ ಹುಡುಕಾಟ ಮುಗಿದೇ ಹೋಯಿತೆಂದು ಸೋತು ಮುಖದೊಂದಿಗೆ ಹಿಂದಿರುಗುತ್ತಾನೆ.

ಇತ್ತ ಅನುಪಮಾಳ ವಿಷಯವನ್ನು ಸತ್ಯನಿಂದ ತಿಳಿದ ವಸಂತ, “ಅನುಪಮಾ, ನನ್ನನ್ನು ಮದುವೆ ಆಗುವಿರಾ?” ಎಂದು ಕೇಳುತ್ತಾನೆ. ಅದರ ಉದ್ದೇಶವೇನಿಲ್ಲ ನಿಮ್ಮ ಭವಿಷ್ಯದ ಕುರಿತಾಗಿ ಚಿಂತಿಸಿ ನಾನು ಬಿಳುಪು ರೋಗಿ. ಎಂದು ಹೇಳಿದರೂ ಒಂದು ತಿಂಗಳು ಸಮಯ ತಗೋಳಿ. ನಾನು ಇನ್ನೆರಡು ತಿಂಗಳು ಮುಂಬೈನಲ್ಲಿರುತ್ತೇನೆ ಎನ್ನುತ್ತಾನೆ.
ಅದೇ ವಸಂತನ ಸಹಾಯದಿಂದ, ಟಾಟಾ ಥಿಯೇಟರಿನಲ್ಲಿ ನಾವು “ಸ್ವಪ್ನವಾಸವದತ್ತ” ನಾಟಕ ಪ್ರದರ್ಶಿಸಬೇಕು ಅದಕ್ಕೆ ಒಪ್ಪಿಗೆ ಕೊಡಿಸಿ. ಎಂದು ಕೇಳಿ ಅಲ್ಲಿ ಪ್ರದರ್ಶನಕ್ಕೆ ಸಿದ್ಧ ಮಾಡಿರುತ್ತಾಳೆ, ನಿರ್ದೇಶಕಿ ಅನುಪಮಾ.

ಅನುಪಮಾ ಸಿಗದೆ ಹಿಂದಿರುಗಿದ ಆನಂದ, ಮಂಬೈಯಲ್ಲಿ ನಡೆಯುವ ವೈದ್ಯಕೀಯ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಬಂದಿರುತ್ತಾನೆ. ಇಲ್ಲಿ ತನ್ನ ಇಂಗ್ಲೇಂಡ್ ಮಿತ್ರ ಪ್ರಕಾಶನನ್ನು ಅಚಾನಕ್ಕಾಗಿ ಭೇಟಿಯಾಗುತ್ತಾನೆ. ಪ್ರಕಾಶನ ಒತ್ತಾಯದ ಮೇರೆಗೆ ಅವರ ಮನೆಗೆ ಹೋಗುತ್ತಾನೆ. ಅದೇ ದಿನ ಪ್ರಕಾಶನ ಒತ್ತಾಯಕ್ಕೆ ಮಣಿದು ಟಾಟಾ ಥಿಯೇಟರಲ್ಲಿ ಪ್ರದರ್ಶನಗೊಳ್ಳುವ “ಸ್ವಪ್ನವಾಸವದತ್ತ” ನಾಟಕ ನೋಡಲು ಒಲ್ಲದ ಮನಸಿನಿಂದಲೇ ಬರುತ್ತಾನೆ.
ಅಲ್ಲಿ ರಂಗಭೂಮಿಯ ಹಿಂದಿನಿಂದ, ತೆರೆಮರೆಯಿಂದ ಒಂದು ಧ್ವನಿ ಸಭಿಕರನ್ನು ಸ್ವಾಗತಿಸುತ್ತದೆ. ನಾಟಕದ ಕುರಿತಾಗಿ ಪೀಠಿಕೆ ಹೇಳತೊಡಗುತ್ತದೆ. ಆನಂದನ ಕಿವಿಗಳು ಜಾಗೃತವಾಗಿ ಇದು ಪರಿಚಿತ ಧ್ವನಿ, ನನ್ನ ಅನುಪಮಳದೇ ಆಗಿರಬೇಕು, ಅಂದರೆ ಅವಳು ಬದುಕಿದ್ದಾಳೆ… ಇಲ್ಲಿಯೇ ಇದ್ದಾಳೆ. ನಾಟಕವೆಂದರೆ ಪ್ರಾಣ ಅವಳಿಗೆ, ಅವಳೇ ಹೌದೋ? ಅಲ್ಲವೋ? ಎಂಬ ಕುತೂಹಲದೊಂದಿಗೆ ನಾಟಕ ಮುಗಿಯುವವರೆಗೆ ಜಾತಕ ಪಕ್ಷಿಯಂತೆ ಕಾಯುತ್ತಾನೆ.
ನಾಟಕ ಮುಗಿದ ಬಳಿಕ ಪಾತ್ರ ಪರಿಚಯದ ಜೊತೆಗೆ ನಿರ್ದೇಶಕರ ಪರಿಚಯವೂ ಆದಾಗ ಅದೇ ಅನುಪಮಾ, ಮಹಾಶ್ವೇತೆ ಪಾತ್ರ ಧಾರಿಯಾಗಿದ್ದ ಅವಳೇ ಇಂದು ಮಹಾಶ್ವೇತೆಯಾಗಿ ನಿಂತಿದ್ದಾಳೆ. ಅದೇ ಶ್ರದ್ಧೆ ಇದೆ ನಾಟಕದ ಮೇಲೆ. ಅದೇ ವ್ಯಕ್ತಿತ್ವ.
ನಂತರದಲ್ಲಿ ಭೇಟಿಯಾಗ ಬೇಕೆಂದರೆ, ಅನುಪಮಾ ಸಿಗಲೇ ಇಲ್ಲ. ರಾತ್ರಿ ತಡವಾಗಿದ್ದಕ್ಕೆ ಯಾರೂ ಅನುಪಮಾಳ‌ ವಿಚಾರ ಪೂರ್ತಿ ತಿಳಿಸಲಿಲ್ಲ. ಪ್ರಕಾಶ ಹೇಳಿದ ನೆನಪಾಗಿ ಅನುಪಮಾ ಕರ್ತವ್ಯ ನಿರ್ವಹಿಸುತ್ತಿದ್ದ ಕಾಲೇಜಿಗೆ ಹೋಗಿ ಅವಳ ವಿಳಾಸ ತಿಳಿದು ಅವಳ ಮನೆಗೆ ಬರುತ್ತಾನೆ.
ಅನುಪಮಾ ಮುಂದೆ ನಿರ್ದೇಶಿಸಬೇಕಾದ ನಾಟಕಗಳ ಕುರಿತಾಗಿ ಪುಸ್ತಕಗಳನ್ನು ಹರವಿಕೊಂಡು ಕುಳಿತಿರುತ್ತಾಳೆ. ಆನಂದನ ಮುಖ ನೋಡಿ ಯಾವುದೇ ಭಾವುಕತೆಗೆ ಒಳಗಾಗುವುದಿಲ್ಲ. ಆನಂದ ಕ್ಷಮೆ ಕೇಹಿದರೂ, ಅದಕ್ಕೆ ಪ್ರತಿಯಾಗಿ ಅನೇಕ ಪ್ರಶ್ನೆಗಳನ್ನು ಸುರಿಸುತ್ತಾಳೆ. ಯಾವುದಕ್ಕೂ ಉತ್ತರವಿಲ್ಲದೆ, ಕ್ಷಮೆ ಕೇಳುತ್ತ “ಒಮ್ಮೆ ಮುಂದಿನ ಬದುಕಿನ ಬಗ್ಗೆ ಚಿಂತಿಸು, ನನ್ನನ್ನು ಕ್ಷಮಿಸಿ ನನ್ನೊಡನೆ ಬಾ ಮುಂದಿನ ಬದುಕನ್ನು ಪ್ರೀತಿಯಿಂದ ಅನುಭವಿಸೋಣ” ಎನ್ನುತ್ತಾನೆ. ಆದರೆ ಅನುಪಮಾ “ನನಗೆ ಸಂಬಂಧಗಳ ಬಗೆಗೆ ವಿಶ್ವಾಸವೇ‌ ಕಳೆದು ಹೋಗಿದೆ. ನಾನು ನನ್ನ ಬದುಕಿನ ದಾರಿಯನ್ನು ಕಂಡು ಕೊಂಡಿದ್ದೇನೆ. ನನಗೆ ಮಧ್ಯಾಹ್ನದ ಕಾಲೇಜಿನ ಸಂಘಕ್ಕೆ ಹೋಗುವ ವೇಳೆಯಾಯಿತು” ಎನ್ನುತ್ತಾಳೆ. ನನ್ನನ್ನು ಹೊರಡಿ ಎನ್ನುತ್ತಿದ್ದಾಳೆಂದು ಅರಿವಾಗಿ,
“ಅನುಪಮಾ ಮತ್ತೊಮ್ಮೆ ಯೋಚಿಸು” ಎನ್ನುತ್ತಾನೆ, “ನೀವು ವಿದ್ಯಾವಂತರು ಪರಸ್ತ್ರೀಯನ್ನು ಏಕವಚನದಿಂದ ಕರೆಯಬಾರದು” ಎಂದು ಹೇಳಿ ಒಳಗೆ ಹೋಗುತ್ತಾಳೆ. ದಿಗ್ಭ್ರಮೆಗೊಂಡ ಆನಂದ ಮೂಕನಾಗುತ್ತಾನೆ,
ಲಕ್ಷ್ಮೀ ನಿವಾಸ ಇಂದು ಬರಿದಾದಂತಾಗುತ್ತದೆ.
ಕೂಡಲೇ ವಸಂತನ ಆಗಮನವಾಗುತ್ತದೆ. “ಅನುಪಮಾ ಏನು ವಿಚಾರ ಮಾಡಿದಿರಿ?” ಎಂಬುದಕ್ಕೆ ಉತ್ತರವಾಗಿ, ” ಡಾಕ್ಟರ್, ನನಗೆ ಸಂಬಂಧಗಳೆಲ್ಲ ಅಸತ್ಯ ಎನಿಸುತ್ತವೆ. ಸಂಸಾರದ ಜಂಜಾಟ ನನಗೆ ಬೇಡ, ನಾವು ಹೀಗೆಯೇ ಗೆಳೆಯರಾಗಿಯೇ ಇರೋಣ” ಎಂದು ತನ್ನ ನಿರ್ಧಾರವನ್ನು ಗಟ್ಟಿಯಾಗಿ ಹೇಳುತ್ತಾಳೆ. “ನೀವು ಸದಾ ನನ್ನ ನೆನಪಲ್ಲಿರುತ್ತೀರಿ, ನೀವು ಯಾವಗ ಮುಂಬೈಗೆ‌ ಬಂದರೂ ನಿಮಗೆ ಯಾವ ಸಹಾಯ ಬೇಕಾದರೂ ಈ “ಮಹಾಶ್ವೇತೆ” ಸದಾ ಸಿದ್ಧಳಿರುತ್ತಾಳೆ. ಸತ್ಯ ಇಲ್ಲೇ ಇರುತ್ತಾರೆ, ನನಗೆ ಸಹಾಯ ಮಾಡುತ್ತಾರೆ. ನಮ್ಮ ಸ್ನೇಹ ಮದುವೆಯಲ್ಲಿ ಅಂತ್ಯವಾಗುವುದು ಬೇಡ, ಅದಕ್ಕೆ ಯಾವ ಸಂಬಂಧದ ಚೌಕಟ್ಟೂ ಬೇಡ ಎಂದು, ನಿಮಗೊಂದು ಸಣ್ಣ ಕಾಣಿಕೆ‌ ನನ್ನಿಂದ” ಎಂದು ಸ್ವೆಟರ್ ಕೊಡುತ್ತಾಳೆ. ಆ ದಿನ ಡಾಕ್ಟರ್ ಗೆ ಶೀತ ಆಗಿರುವುದನ್ನು ಕಂಡು, “ಡಾಕ್ಟರ್, ನೀವು ಒಂದು ಸ್ವೆಟರ್ ತಗೋಳಿ” ಅಂದಾಗ, “ನನಗೆ ಸ್ವೆಟರ್ ಮಾಡಲು ಯಾರಿದ್ದಾರೆ? ಕೊಂಡುಕೊಳ್ಳಲು ನೆನಪೂ ಆಗುವುದಿಲ್ಲ. ಅಂತೆಯೇ ಈ ನೆಗಡಿಯ ಸಮಸ್ಯೆ ಬಗೆಹರಿಯದೇ ನಿಂತಿದೆ” ಎಂಬ ಸಂಭಾಷಣೆ ನೆನಪಾಗಿ ಇಬ್ಬರೂ ನಗುತ್ತಾರೆ.
ಅಷ್ಟರಲ್ಲಿ ಬಂದ ವಿದ್ಯಾರ್ಥಿನಿ ವಿನುತೆ “ಮ್ಯಾಡಂ, ನಮ್ಮ ಕನ್ನಡ ಸಂಘದ ವಾರ್ಷಿಕೋತ್ಸವಕ್ಕೆ “ಮಹಾಶ್ವೇತೆ” ನಾಟಕ ಪ್ರದರ್ಶಿಸೋಣ ಎನ್ನುತ್ತಾಳೆ. ಅನುಪಮಾ ಅರಿವಿಲ್ಲದಂತೆ, ಹೂಂ ಗುಟ್ಟುತ್ತಾಳೆ. ಮಹಾಶ್ವೇತೆ ಪಾತ್ರ ಮಾಡುವಾಸೆಯ ವಿನುತೆ, ಅದರಲ್ಲೇ ಮಹಾಶ್ವೇತೆಯನ್ನು ಪಡೆಯದೇ ಹೋಗುವ ಪುಂಡರೀಕನಂತಿದ್ದ ವಸಂತ ಅನುಪಮಾಳನ್ನು ನೋಡುತ್ತಾರೆ.

ಅನುಪಮಾ ನಸುನಗುತ್ತಾಳೆ, ಅದರ ಅರ್ಥ ವಸಂತನಿಗೆ ಮಾತ್ರ ಅರ್ಥವಾಗುತ್ತದೆ. ಎಂಬಲ್ಲಿಗೆ ಕಾದಂಬರಿ ಅಂತ್ಯಗೊಳ್ಳುತ್ತದೆ.
ಪ್ರತಿಯೊಂದು ಸನ್ನಿವೇಶದಲ್ಲೂ ಅನೇಕ ರೂಪಕ, ಉಪಮೆಗಳನ್ನು ಬಳಸುತ್ತ ವರ್ಣನಾತ್ಮಕವಾಗಿ ಓದುಗನನ್ನು ರಂಜಿಸುವಂತಿದೆ. ಅಷ್ಟೇ ಭಾವನಾತ್ಮಕ ಸನ್ನಿವೇಶಗಳಲ್ಲಿ ಅಂತಃಕರಣವನ್ನು ಅಲುಗಾಡಿಸಿಬಿಡುತ್ತದೆ. ಒಬ್ಬ ವೈದ್ಯನಿಗೆ ರೋಗಿಯ ಮೇಲಿರಬೇಕಾದ ಕಾಳಜಿಯನ್ನು, ಅಂತೆಯೇ ರೋಗಿಗೆ ವೈದ್ಯನ ಮೇಲೆ ಬೆಳೆಸಿಕೊಳ್ಳಬೇಕಾದ ಅಭಿಮಾನ, ಗೌರವ ಹೇಗಿರಬೇಕೆಂಬುದೂ ಕಾದಂಬರಿಯಲ್ಲಿ ವ್ಯಕ್ತವಾಗಿದೆ. ಕಾದಂಬರಿಯನ್ನು ಓದಿದ ಬಳಿಕ ಒಬ್ಬ ಬಿಳುಪಿನ ವ್ಯಕ್ತಿಯನ್ನು ಕಂಡರೆ ಖಂಡಿತವಾಗಿಯೂ ಮನಸು ಮರುಗುತ್ತದೆ, ಜೊತೆಗೆ ವಿಹ್ವಲಗೊಳ್ಳದೆ ಮಾನವೀಯತೆ ಜಾಗೃತವಾಗುತ್ತದೆ. ಮದಲೇ ಹೇಳಿದಂತೆ ಬಿಳುಪಿನ ಕಲೆ ಕಂಡು, ಮದುವೆಯನ್ನು ಮುರಿದು ಹೊರಟ ಯುವಕ ಮಧುಕರ “ಮಹಾಶ್ವೇತೆ” ಕಾದಂಬರಿ ಓದಿ ಮತ್ತೆ ಅದೇ ಹುಡುಗಿಯನ್ನು ಮದುವೆಯಾಗುತ್ತಾನೆ. ಕಾದಂಬರಿಯಲ್ಲಿ ಆನಂದ ಮಾಡಿದ ತಪ್ಪು ನಾನು ಮಾಡಬಾರದೆಂದು ಮಧುಕರ ಬದಲಾಗುತ್ತಾನೆ, ಕಾದಂಬರಿಯಲ್ಲಿ ಅನುಪಮಾ ಅನುಭವಿಸಿದ ಬವಣೆ ನನ್ನ ಮಾಲತಿ ಅನುಭವಿಸಬಾರದೆಂದು ಬದಲಾಗುತ್ತಾನೆ. ಇದೇ ಅಲ್ಲವೇ ಕಾದಂಬರಿಯ ಸಾರ್ಥಕತೆ. ಈ ಕಥೆಗೂ ಮತ್ತು ಕಾದಂಬರಿಗೂ ಒಂದು ವ್ಯತ್ಯಾಸವಿದೆ, ಆನಂದ ಅನುಪಮಾಳೊಂದಿಗೆ ಮೂರು ತಿಂಗಳು ಸಂಸಾರ ಮಾಡಿ ಆಕೆಯನ್ನು ಬಿಟ್ಟ, ಇಲ್ಲಿ ಮಧುಕರ ಅದೇ ಮೂರು ತಿಂಗಳಲ್ಲಿ ಆನಂದ ಅನುಪಮಾಳ ಕಥೆಯನ್ನೇ ಓದಿ ಮಾಲತಿಯನ್ನು ಕೈ ಹಿಡಿದ… ಎರಡು ಕಥೆಗಳಲ್ಲೂ ಮೂರು ತಿಂಗಳ ಸಮಯ ಎಷ್ಟು ಮಹತ್ವ ಪಡೆದಿದೆ. ಮೂರು ತಿಂಗಳ ಬಳಿಕ ಅನುಪಾಮಗೆ ವೇದನೆ ಶುರುವಾದರೆ, ಮಾಲತಿಯ ವೇದನೆ ಮೂರು ತಿಂಗಳಲ್ಲಿ ಅಂತ್ಯವಾಗುತ್ತದೆ.

ಇದಿಷ್ಟೂ ಓದಿದರೂ ಅಮ್ಮ,
ಸುಧಾ ಮೂರ್ತಿಯವರ ಕಾದಂಬರಿಯನ್ನು ಓದುವುದರಲ್ಲಿನ ಖುಷಿ, ಭಾವನೆ ಸಿಗುವುದಿಲ್ಲ. ಒಮ್ಮೆ ಓದಿ ನೋಡಿ … ನಂತರ ಅದೆಷ್ಟು ಬದಲಾವಣೆ ನಮ್ಮಲ್ಲಾಗುತ್ತದೆ ಎಂಬುದನ್ನು ಸ್ವತಃ ಅನುಭವಿಸಿ….


ವರದೇಂದ್ರ ಕೆ ಮಸ್ಕಿ
9945253030

Don`t copy text!