e-ಸುದ್ದಿ, ಮಸ್ಕಿ
ಮಾದಿಗ ಮೀಸಲಾತಿಯನ್ನು ಹೆಚ್ಚಿಸುವ ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಮುಖಂಡರು ಶನಿವಾರ ರಾಷ್ಟ್ರೀಯ ಹೆದ್ದಾರಿ 150 (ಎ) ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಸ್ಕಿ ಪಟ್ಟಣಕ್ಕೆ ಶನಿವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸುವ ವೇಳೆ ದಲಿತ ಮುಖಂಡರು ಏಕಾಏಕಿ ಪ್ರತಿಭಟನೆಗೆ ಮುಂದಾದ ಘಟನೆ ನಡೆಯಿತು.
ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಕೊಡುವುದಾಗಿ ಹೋರಾಟ ಸಮಿತಿಯ ಮುಖಂಡರಾದ ದೊಡ್ಡಪ್ಪ ಮುರಾರಿ, ಸಾಹಿತಿ ಸಿ.ದಾನಪ್ಪ, ಮಲ್ಲಯ್ಯ ಬಳ್ಳಾ, ಹನುಮಂತಪ್ಪ ವೆಂಕಟಾಪುರ, ಹನುಮಂತಪ್ಪ ಮುದ್ದಾಪುರ ಹಾಗೂ ಇತರರು ಸಿದ್ದತೆ ಮಾಡಿಕೊಂಡಿದ್ದರು.
ಬಸವೇಶ್ವರ ವೃತ್ತದ ಹತ್ತಿರ ಎಪಿಎಂಸಿ ಮುಂದಿನ ಭಾಗದಲ್ಲಿ ಜಮಾಯಿಸಿದ್ದರು. ಮುಖ್ಯಮಂತ್ರಿಗಳು ಪಟ್ಟಣಕ್ಕೆ ಆಗಮಿಸುತ್ತಿರುವಾಗ ದಲಿತ ಮುಖಂಡರು ಪ್ರತಿಭಟನೆಗಿಳಿದು ಸರ್ಕಾರದ ವಿರುದ್ಧ ದಿಕ್ಕಾರ ಕೂಗತೊಡಗಿದರು. ಪೊಲೀಸರು ಎಚ್ಚತ್ತುಕೊಂಡು ಪ್ರತಿಭಟನಾಕರಾರನ್ನು ಸಮಾದಾನ ಪಡಿಸಿ ಮನವಿ ಪತ್ರ ಕೊಡುವ ವ್ಯವಸ್ಥೆ ಮಾಡುವದಾಗಿ ತಿಳಿ ಹೇಳಿದರು ಹೋರಾಟಗಾರರು ಜಪ್ಪಯ್ಯ ಎನ್ನದೆ ಪ್ರತಿಭಟನೆ ಮುಂದುವರಿಸಿದರು.
ಒಂದು ಹಂತದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ನೂಕೂ ನುಗ್ಗಲು ಏರ್ಪಟು ತಳ್ಳಾಟ ನಡೆಯಿತು. ಸಿಪಿಐ ದೀಪಕ್ ಬೂಸರಡ್ಡಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ಯಾವುದೆ ಅವಘಡ ಸಂಬವಿಸದಂತೆ ನೋಡಿಕೊಂಡರು. ಪೊಲೀಸರು ಬಿಗಿ ಬಂದೋಬಸ್ತ ಏರ್ಪಡಿಸಿದ್ದರು.
ಪ್ರತಿಭಟನೆಯಲ್ಲಿ ಸಿದ್ದು ಮುರಾರಿ, ಸುರೇಶ ಅಂತಗಂಗಿ, ಪ್ರಶಾಂತ, ಅಶೋಕ ಮುರಾರಿ, ದುರುಗರಾಜ ವಟಗಲ್ ಸೇರಿದಂತೆ ನೂರಾರು ಯುವಕರು ಇದ್ದರು.