ಭ್ರಮೆ
ಭ್ರಮೆಯ ಸಾಗರದಲ್ಲಿ
ಮುಳುಗಿ ಏಳುವ ಮುನ್ನ
ಬದುಕ ಎಳೆಯೊಂದು
ಬಾಡಬಹುದು ಅರಿವಿರಲಿ..!!
ನಂಬಿಕೆಯ ಒಳಗೊಂದು ಶೂನ್ಯ
ಅಡಗಿಹುದು ನೋಡು..
ವಿಶ್ವಾಸ ಎಂಬಾ ವಾಕ್ಯದಲ್ಲಿ
ಶ್ವಾಸ ಕೊಲ್ಲುವ ಕಲೆ ಉಂಟು..!!
ಕಪ್ಪು ಹಲಗೆಯ ಮೇಲಿನ
ಬಿಳಿಯ ಚುಕ್ಕಿ ದೃಷ್ಟಿ ಬೊಟ್ಟು
ಅಳಿಸಿದರೂ ನಷ್ಟವಿಲ್ಲ
ಬೆರಳ ತುದಿಗೆ ತಾಗಿದ
ಧೂಳಿಗೆ ಇಲ್ಲಿ ಲೆಕ್ಕವುಂಟು..!!
ನನ್ನೊಳಗಿನ ನಾನೇ
ನನ್ನರಿವಿಗೆ ಬರಬೇಕಿದೆ..
ಜಗದ ಊಹೆಯಲ್ಲಿ ಬಿಡು
ಚಂದಿರ ಸದಾ ತಂಪು…!!
ಬೆಳದಿಂಗಳ ಒಂದು ರಾತ್ರಿ
ತಾರೆಗಳ ಕೇಳಬೇಕಿದೆ
ಅಗೋ ಅದೆಷ್ಟು ಹನಿಗಳು
ಸಾಗರದ ಒಡಲಲ್ಲಿ
ಬಣ್ಣ ಮರೆತು ಅಲೆಯುತ್ತಿದೆ..!!
–ಪಾರ್ವತಿ ಸಪ್ನ