e-ಸುದ್ದಿ, ಮಸ್ಕಿ
ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಸಂಭವನೀಯ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹಾಗೂ ಕಾಂಗ್ರೆಸ್‍ನ ಸಂಭವನೀಯ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಸಾಂಕೇತಿಕವಾಗಿ ಬುಧವಾರ ನಾಮಪತ್ರ ಸಲ್ಲಿಸಿದರು.
ಪ್ರತಾಪಗೌಡ ಪಾಟಲ ಬೆಳಿಗ್ಗೆ ತಮ್ಮ ಮನೆಯಲ್ಲಿ ಮನೆ ದೇವರಾದ ಉರುಕುಂದಿ ಈರಣ ಮನೆ ಮುಂದಿನ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಅಂಕಲಿಮಠಕ್ಕೆ ತೆರಳಿ ಶ್ರೀವೀರಭದ್ರ ಮಾಹಸ್ವಾಮಿಗಳು ಮತ್ತು ಮಸ್ಕಿಯ ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರ ದರ್ಶನ ಪಡೆದುಕೊಂಡರು.
ನಂತರ ಬಿಜೆಪಿ ಕಚೇರಿಯಿಂದ ತಮ್ಮ ಬೆಂಬಲಿಗರೊಂದಿಗೆ ತಾಲೂಕು ಪಂಚಾಯತಿಯಲ್ಲಿನ ಚುನಾವಣಾ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ರಾಜಶೇಖರ ಡಂಬಳ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವಾಗ ಇಬ್ಬರಿಗೆ ಮಾತ್ರ ಅವಕಾಶವಿದ್ದರಿಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಜತೆಗೆ ಮಸ್ಕಿ ನಾಗರಾಜ ಹಿರಿಯ ವಕೀಲರು ರಾಯಚೂರು ಇದ್ದರು.
ನಾಮಪತ್ರ ಸಲ್ಲಿಸಿ ಮರಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪಗೌಡ ಪಾಟೀಲ ಈ ಭಾರಿಯ ಜಯ ನನ್ನದೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು. ಇಂದು ಸಾಂಕೇತಿಕವಾಗಿ ನಾಮ ಪತ್ರಸಲ್ಲಿಸಿದ್ದು ಮಾ.29 ರಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಬಿ.ವೈ.ವಿಜಯೇಂದ್ರ, ಸುರುಪುರ ಶಾಸಕ ರಾಜುಗೌಡ, ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ ಹಾಗೂ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸುವದಾಗಿ ತಿಳಿಸಿದರು.
ಪ್ರತಾಪಗೌಡ ಪಾಟೀಲರು ನಾಮಪತ್ರ ಸಲ್ಲಿಸುವಾಗ ಹಿರಿಯ ಮುಖಂಡರಾದ ಮಹಾದೇವಪ್ಪಗೌಡ ಪಾಟೀಲ, ಅಂದಾನಪ್ಪ ಗುಂಡಳ್ಳಿ, ಡಾ.ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್.ದಿವಟರ್, ಪ್ರಸನ್ನ ಪಾಟೀಲ, ಬಸನಗೌಡ ಪಾಟೀಲ, ರವಿಗೌಡ ಸೇರಿದಂತೆ ಅಪಾರ ಬೆಂಬಲಿಗರು ಆಗಮಿಸಿದ್ದರು.
ಆರ್.ಬಸನಗೌಡ ತುರ್ವಿಹಾಳ ಃ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ತಮ್ಮ ಬೆಂಬಲಿಗರೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ರಾಜಶೇಖರ ಡಂಬಳ ಅವರಿಗೆ ಬುಧವಾರ ನಾಮಪತ್ರ ಸಲ್ಲಿಸಿದರು.
ಬಸನಗೌಡ ತುರ್ವಿಹಾಳ ಅವರು ನಾಮಪತ್ರ ಸಲ್ಲಿಸುವಾಗ ಸೋಮಲಿಂಗಪ್ಪ ಸಾಥ ನೀಡಿದರು. ಆರ್.ಬಸನಗೌಡ ತುರ್ವಿಹಾಳ ಬೆಳಿಗ್ಗೆ ತಮ್ಮ ಸ್ವಗ್ರಾಮದ ಮನೆಯಲ್ಲಿ ಹುಲಿಗೆಮ್ಮಳಿಗೆ ಪೂಜೆ ಸಲ್ಲಿಸಿದರು. ತುರ್ವಿಹಾಳದ ಶಂಕರಲಿಂಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಂಕಲಿಮಠದ ಗದ್ದುಗೆ ಹಾಗೂ ಶ್ರೀ ವೀರಭಧ್ರಸ್ವಾಮಿಗಳ ದರ್ಶನ ಪಡೆದುಕೊಂಡು ಬಂದು ನಾಮಪತ್ರ ಸಲ್ಲಿಸಿದರು.
ಆರ್.ಬಸನಗೌಡ ತುರ್ವಿಹಾಳ ಅವರ ಸಹೋದರ ಸಿದ್ದನಗೌಡ ತುರ್ವಿಹಾಳ, ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಯುಥ್ ಕಾಂಗ್ರೆಸ್ ಮಾಜಿ ರಾಜ್ಯ ಅಧ್ಯಕ್ಷ ಬಸನಗೌಡ ಬಾದರ್ಲೀ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಂಪನಗೌಡ, ನಿರ್ದೆಶಕ ಶರಣಗೌಡ ಭಯ್ಯಾಪೂರು, ಬಸನಗೌಡ ಮುದಬಾಳ, ಕೃಷ್ಣ ಚಿಗರಿ, ಮಹಾಂತೇಶ ಹೂವಿನಬಾವಿ ಹಾಗೂ ಇತರರು ಇದ್ದರು.
——————————-
ಅಧಿಕಾರಿಗಳ ದ್ವಂದ್ವ
ಚುನವಾಣಾ ಕಚೇರಿಯನ್ನಾಗಿ ಪರಿವರ್ತಿಸಿರುವ ತಾ.ಪಂ. ಕಚೇರಿಯ 100 ಮೀ ಒಳಗಡೆ ನಾಮ ಪತ್ರ ಸಲ್ಲಿಸುವ ಅಭ್ಯರ್ಥಿ ಮತ್ತು ಅವರ ಜತೆಗೆ ಒಬ್ಬರಿಗೆ ಮಾತ್ರ ಬರಲು ಅವಕಾಶವಿದೆ ಎಂದು ತಿಳಿಸಿದ್ದರು. ಆದರೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ನಾಮಪತ್ರ ಸಲ್ಲಿಸುವಾಗ ತಾ.ಪಂ.ಕಚೇರಿಯವರೆಗೆ ನೂರಾರು ಜನ ಬರಲು ಅವಕಾಶ ನೀಡಿದ್ದರು. ಆದರೆ ಕಾಂಗ್ರೆಸ್‍ನ ಬಸನಗೌಡ ತುರ್ವಿಹಾಳ ನಾಮಪತ್ರ ಸಲ್ಲಿಸುವಾಗ ಅವರ ಬೆಂಬಲಿಗರನ್ನು ನೂರು ಮೀ.ದೂರು ಇರುವಂತೆ ಕಟ್ಟು ನಿಟ್ಟಾಗಿ ಬ್ಯಾರಿಕೇಡರ್ ಹಾಕಿ ತಡೆ ಹಿಡಿದರು. ಆಗ ಕಾಂಗ್ರೆಸ್ ಮುಖಂಡರು ಅಧಿಕಾರಗಳ ತಾರತಮ್ಯ ದ್ವಂದ್ವ ನೀತಿ ಮಾಡದಂತೆ ಪೊಲೀಸರೊಂದಿಗೆ ವಾದ ಮಾಡಿದ ಘಟನೆ ನಡೆಯಿತು.
ಚುನಾವಣಾ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳ ಫೋಟೋ ಮತ್ತು ವಿಡಿಯೋ ಚಿತ್ರಕರಿಸಲು ಮಾದ್ಯಮದವರಿಗೆ ಅವಕಾಶ ಕೊಡುವುದಿಲ್ಲ ಎಂದು ಚುನಾವಣಾಧಿಕಾರಿ ರಾಜಶೇಖರ ಡಂಬಳ ನಿರಾಕರಿಸಿದ ಪ್ರಸಂಗ ಕೂಡ ನಡೆಯಿತು.