ಪ್ರಾಣ ದೇವತೆ

ಪ್ರಾಣ ದೇವತೆ

‘ದಾದಿ’ಎಂದೆಲ್ಲ
ಕುಹಕವಾಡದಿರಿ
ಕರುಳ ಕೂಗಿದು ಕೇಳದೆ?
ದೇಶವನು ಅಪ್ಪಿ
ಸವಿನುಡಿಯಲೊಪ್ಪಿ
ಸೇವೆಗೈಯುವಳು ಹೇಳದೆ!

ಯಾವ ರೋಗವೇ
ತಾಗಿದರು ನಮಗೆ
ಪೊರೆಯುವಳು ಬೇಸರಿಸದೆ!
ತಾಯೊಲವ ತೋರಿ
ನಗೆಘಮಲು ಬೀರಿ
ಸಲುಹುವಳು ಬೇರೆಣಿಸದೆ!

ಹೊತ್ತು ಹೊತ್ತಿಗು
ಮಾತ್ರೆ ಕೊಡುವಳು
ರೋಗಿಯೊಡನೆಯೆ ಆಡಿ!
ತನ್ನೊಡಲ ಕುಡಿಯ
ಗದರುವಳು ಖೋಡಿ
ನಮಗೆಲ್ಲ ಲಾಲಿ ಹಾಡಿ!

ಬೆಂದೊಡಲ ಸಹಿಸಿ
ತನ್ ಸುಖವ ದಹಿಸಿ
ಹರಡುವಳು ಗಂಧ ಗಾಳಿ!
ಗರಗಸದ ನಡುವೆ
ಪರಸುಖದ ದುಡಿಮೆ
ಮರಣವನೆ ಇರಿವ ಕಾಳಿ!

-ನೀ.ಶ್ರೀಶೈಲ ಹುಲ್ಲೂರು

Don`t copy text!