ಲಾಂಛನವ ತೊಟ್ಟುಕೊಂಡು
ಲಾಂಛನವ ತೊಟ್ಟುಕೊಂಡು
ಹಗಲುವೇಷ ಹಾಕೆನು,
ಮುಗ್ಧ ಜನಕೆ ಹುಸಿದು ಹೇಳಿ
ಮೋಸ ಮಾಡಲಾರೆನು !
ಕಾವಿ ಬಿಳಿ ಸೀರೆಯುಟ್ಟು
ಹಣವ ದೊಚಲಾರೆನು,
ಬಸವಮೂರ್ತಿ ಸ್ಥಾಪಿಸಿ
ಸ್ಥಾವರಕೆ ಎರಗೆನು !
ನನ್ನ ಸ್ವಕಾಯಕದಲಿ
ಬಸವನನ್ನ ಕಾಣುವೆ,
ಬಸವತತ್ವ ಗಾಳಿಯಲ್ಲಿ
ಮೂಢತನವ ತೂರುವೆ !
ಮೂರ್ತಿಪೂಜೆಯನ್ನು ಬಿಟ್ಟು
ತತ್ವಪೂಜೆ ಮಾಡುವೆ,
ಅಪ್ಪ ಬಸವ ಮೆಚ್ಚುವಂತೆ
ನಿಷ್ಠಳಾಗಿ ಬಾಳುವೆ !
ನನ್ನ ಸ್ವಾನುಭಾವವನ್ನು
ನಾಲ್ಕು ಜನಕೆ ಹಂಚುವೆ,
ಬಸವಭಕ್ತಿ ಪಥವನಿಡಿದು
ಮುಂದೆ ನಾನು ಸಾಗುವೆ !
ಎನ್ನ ಕಾಯವೆ ಎನಗೆ
ಕೂಡಲಸಂಗಮವು,
ಎನ್ನ ಲಿಂಗ ಸಂಗವೆ
ಬಸವನ ಕಲ್ಯಾಣವು !
ಯಾವ ಹಂಗು ಇಲ್ಲದಂತೆ
ಬದುಕಿ ಬಾಳಿ ತೋರುವೆ,
ಏನೆ ನೋವು ಬಂದರೆನಗೆ
ಬಸವಪಾದಕರ್ಪಿಸುವೆ !
–ಶ್ರೀಮತಿ ರುದ್ರಮ್ಮ ಅಮರೇಶ ಹಾಸಿನಾಳ.