e-ಸುದ್ದಿ, ಮಸ್ಕಿ
ಬಾರ್ ಮತ್ತು ರೆಸ್ಟೊರೆಂಟ್‍ಗಳ ತಮಗೆ ನೀಡಲಾದ ಪರವಾನಗಿ ಪರಿಮಿತಿಯಲ್ಲಷ್ಟೇ ಮದ್ಯ ಮಾರಾಟ ಮಾಡಬೇಕು. ನಿಯಮ ಉಲ್ಲಂಘಿಸಿ ಮದ್ಯ ಮಾರಿದ್ದು ಕಂಡು ಬಂದರೆ, ಕೇಸ್ ದಾಖಲಿಸುವುದರ ಜತೆಗೆ ಅಂಗಡಿ ಮಾಲೀಕರ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಎಸಿ ಹಾಗೂ ಚುನಾವಣಾಧಿಕಾರಿ ರಾಜಶೇಖರ ಡಂಬಳ ಹೇಳಿದರು.
ಪಟ್ಟಣದ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ಖಾಸಗಿ ಉದ್ಯಮಿಗಳ ಸಭೆಯಲ್ಲಿ ಮಾತನಾಡಿದರು.
ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು, ಮುಖಂಡರು ಚೀಟಿ ನೀಡಿ ಎಣ್ಣೆ ಅಂಗಡಿಗೆ ಕಳುಹಿಸುತ್ತಾರೆ. ಇಂತಹ ಪದ್ದತಿ ಕಂಡು ಬಂದರೆ ಅಂತಹ ಬಾರ್ ಮತ್ತು ರೆಸ್ಟೊರೆಂಟ್ ಮಾಲೀಕರ ವಿರುದ್ದ ಕೇಸ್ ದಾಖಲಿಸಬೇಕಾಗುತ್ತದೆ ಎಂದು ರಾಜಶೇಖರ ಡಂಬಳ ಎಚ್ಚರಿಸಿದರು.
ಚುನಾವಣೆ ಸಮಯದಲ್ಲಿ ಚೀಟಿ ನೀಡುವ ಪದ್ದತಿ ಜಾರಿಯಲ್ಲಿರುತ್ತದೆ. ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಪರವಾಗಿ ಮತ ಓಲೈಕೆಗೆ ಮದ್ಯದ ಅಂಗಡಿಗಳಿಗೆ ಬಿಳಿ ಚೀಟಿ ನೀಡಿ ಮದ್ಯ ನೀಡುವ ವ್ಯವಸ್ಥೆ ಇರುತ್ತದೆ ಇಂತಹ ಪದ್ದತಿಯನ್ನು ಕೈ ಬಿಡಬೇಕು. ಲೂಸ್ ಮಾರಾಟಕ್ಕೂ ಅವಕಾಶವಿಲ್ಲ ಎಂದು ಹೇಳಿದರು.
ಪರವಾನಗಿ ಅಗತ್ಯ: ಪ್ರಿಂಟಿಂಗ್ ಪ್ರೆಸ್‍ನಲ್ಲಿ ಬೇಕಾಬಿಟ್ಟಿಯಾಗಿ ಕರಪತ್ರಗಳನ್ನು ಮುದ್ರಣ ಮಾಡುವಂತಿಲ್ಲ. ಚುನಾವಣೆ ಅಧಿಕಾರಿಯಿಂದ ಪರವಾನಗಿ ಪತ್ರ ಪಡೆದು ಬಂದವರಿಂದ ಮಾತ್ರ ನಿಯಮಗಳನ್ವಯ ಕರಪತ್ರಗಳನ್ನು ಮುದ್ರಣ ಮಾಡಬೇಕು. ಅದರಲ್ಲಿ ಕಡ್ಡಾಯವಾಗಿ ಪ್ರತಿಗಳು ಮತ್ತು ಪ್ರಿಂಟಿಂಗ್ ಪ್ರೆಸ್‍ನ ಹೆಸರನ್ನು ನಮೂದು ಮಾಡಬೇಕು. ಪರವಾನಗಿ ಇಲ್ಲದೇ ಕರಪತ್ರ ಮುದ್ರಿಸಿದರೆ ಅಂತವರ ವಿರುದ್ದ ಶಿಸ್ತ್ರು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಫ್ಲೆಕ್ಸ್, ಬ್ಯಾನರ್‍ಗಳ ಮುದ್ರಣದಲ್ಲೂ ಎಚ್ಚರಿಕೆ ವಹಿಸಬೇಕು. ಪರವಾನಗಿ ರಹಿತ ಫ್ಲೆಕ್ಸ್ ಬ್ಯಾನರ್‍ಗಳು ಕಂಡು ಬಂದರೆ ಅಂಗಡಿ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಶಾಮಿಯಾನ್ ಸಪ್ಲಾಯರ್ಸ್ ಕೂಡ ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮಕ್ಕೆ ಅಗತ್ಯ ಸಾಮಗ್ರಿ ಪೂರೈಸುವ ಮೊದಲು ಕಡ್ಡಾಯವಾಗಿ ಚುನಾವಣೆ ಅಧಿಕಾರಿಯಿಂದ ಪರವಾಗಿ ಪಡೆದ ಪತ್ರ ನೋಡಿ ಸಾಮಗ್ರಿ ಪೂರೈಸಬೇಕು ಎಂದು ಹೇಳಿದರು.
ತಹಸೀಲ್ದಾರ್ ಮಹೇಂದ್ರ ಕೆ.ಎಚ್., ಸಹಾಯಕ ಪ್ರಾಧ್ಯಾಪಕ ಕ್ಯಾ.ಮಹೇಶ, ಪ್ರೊಬೇಷನರಿ ತಹಸೀಲ್ದಾರ್ ಗುರುರಾಜ ಸೇರಿ ಇತರರು ಇದ್ದರು.