ಶರಣ ನಗೆಯ ಮಾರಿತಂದೆ

ಶರಣ ನಗೆಯ ಮಾರಿತಂದೆ

ಶರಣ ನಗೆಯ ಮಾರಿತಂದೆಯವರ ವಚನ ವಿಶ್ಲೇಷಣೆ

ವಚನಾಂಕಿತ : ಆತುರವೈರಿ ಮಾರೇಶ್ವರಾ.
ಜನ್ಮಸ್ಥಳ : ಏಲೇಶ್ವರ (ಏಲೇರಿ) ಗುಲ್ಬರ್ಗ ಜಿಲ್ಲೆ.
ಕಾಯಕ : ನಗೆಗಾರ – ನಗಿಸುವುದನ್ನೇ ಕಾಯಕವಾಗಿ ಸ್ವೀಕರಿಸಿದವರು.
ಐಕ್ಯಸ್ಥಳ : ಏಲೇಶ್ವರ (ಏಲೇರಿ) ಗುಲ್ಬರ್ಗ ಜಿಲ್ಲೆ.

12 ನೇ ಶತಮಾನದ ವಚನ ಸಾಹಿತ್ಯ ಮತ್ತು ಶರಣ ಸಂಕುಲದಲ್ಲಿ “ಮಾರಿತಂದೆ” ಎಂಬ ಹೆಸರಿನ ಒಟ್ಟು ನಾಲ್ಕು ಶರಣರ ಪ್ರಸ್ತಾಪವಾಗುತ್ತದೆ.
 ಅರಿವಿನ ಮಾರಿತಂದೆ
 ಮನಸಂದ ಮಾರಿತಂದೆ
 ನಗೆಯ ಮಾರಿತಂದೆ
 ಕನ್ನದ ಮಾರಿತಂದೆ

ಈ ಲೇಖನದಲ್ಲಿ ನಾವು ನಗೆಯ ಮಾರಿತಂದೆಗಳ ಪರಿಚಯ ಮತ್ತು ಅವರ ಒಂದು ವಚನದ ವಿಶ್ಲೇಷಣೆ ಮಾಡೋಣ. ಇವರ ಜನ್ಮಸ್ಥಳ ಮತ್ತು ಐಕ್ಯಸ್ಥಳ ಎರಡೂ ಗುಲ್ಬರ್ಗ ಜಿಲ್ಲೆಯ ಏಲೇಶ್ವರ (ಏಲೇರಿ). 12 ನೇ ಶತಮಾನದ ಅನುಭವ ಮಂಟಪದಲ್ಲಿ 770 ಅಮರ ಗಣಂಗಳಲ್ಲಿ ಒಬ್ಬರಾದ ಬಸವಣ್ಣನವರ ಸಮಕಾಲೀನ ವಚನಕಾರರಾದ ನಗೆಯ ಮಾರಿತಂದೆಗಳ ಹೆಸರಿನಲ್ಲಿರುವ ನಗೆ ಭಾಷೆಯ ದೃಷ್ಟಿಯಿಂದ ನೋಡಿದರೆ ನಗಿಸುವದನ್ನೇ ಕಾಯಕವನ್ನಾಗಿ ಮಾಡಿಕೊಂಡ ಹಾಸ್ಯ ಕಲಾವಿದ ಶರಣರು. “ಆತುರವೈರಿ ಮಾರೇಶ್ವರ” ವಚನಾಂಕಿತದಲ್ಲಿ ರಚನೆ ಮಾಡಿದ 103 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ. ಸರಳ ಮತ್ತು ಸಂಕ್ಷಿಪ್ತ ಸಾಲುಗಳ ಮೂಲಕ ಇಡೀ ಪುರಾಣ ಪುಣ್ಯ ಕಥೆ ಮತ್ತು ದೃಷ್ಟಾಂತ ಕಥೆಗಳನ್ನು ತಮ್ಮ ವಚನಗಳಲ್ಲಿ ಅತ್ಯಂತ ಚತುರತೆಯಿಂದ ಹೇಳುವುದು ಇವರ ವಿಶೇಷತೆ. ಹಾಸ್ಯದ ಜೊತೆಗೆ ಆಧ್ಯಾತ್ಮವನ್ನು ಅಡಗಿಸಿಕೊಂಡಿರುವುದು ಇವರ ವಚನಗಳ ವಿಶೇಷತೆ. ಉದಾಹರಣೆಗಾಗಿ ಒಂದು ವಚನದಲ್ಲಿ ಪ್ರಸ್ತುತವಾಗಿರುವ ಬೆಡಗನ್ನು ಕಾಣಬಹುದು.

ಕಲ್ಲಿಯ ಹಾಕಿ ನೆಲ್ಲವ ತುಳಿದು | ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ ||
ವಾಗದ್ವೈತವ ಕಲಿತು ಸಂಸ್ಕೃತ ಮಾತಿನ | ಪಸರವ ಮುಂದಿಕ್ಕಿಕೊಂಡು ||
ಮತ್ಸ್ಯದ ವಕ್ತ್ರದಲ್ಲಿ | ಗ್ರಾಸವ ಹಾಕುವನಂತೆ ||
ಅದೇತರ ನುಡಿ ಮಾತಿನ ಮರೆ | ಆತುರ ವೈರಿ ಮಾರೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1323 / ವಚನ ಸಂಖ್ಯೆ-1190)

ಭತ್ತವನ್ನು ಕೆಳಗೆ ಹಾಕಿ ಕಳ್ಳರಂತೆ ಬಲೆಯನ್ನು ಬೀಸಿ ಕಲ್ಲಿನಿಂದ ಏನೂ ಅರಿಯದ ಗುಬ್ಬಿಯನ್ನು ಹೊಡೆದ ಹಾಗೆ, ಗಾಳ ಹಾಕಿ ಮೀನು ಹಿಡಿಯೋ ಹಾಗೆ, ಅದ್ವೈತ ಮುಂತಾದ ಸಂಸ್ಕೃತ ಮಾತಿನ ಅಂಗಡಿ ತೆಗೆದು ಬರೀ ಮಾತಲ್ಲೇ ಮಳ್ಳು ಮಾಡಿ ಮೋಸ ಮಾಡೋದು ನಮಗ್ಯಾಕೆ ಬೇಕು ಅಂತ ನಗೆಯ ಮಾರಿತಂದೆಯವರು ವಿಡಂಬನಾತ್ಮಕವಾಗಿ ಈ ವಚನದಲ್ಲಿ ಹೇಳಿದ್ದಾರೆ.

ಪುರಾಣ ಪುಣ್ಯ ಕಥೆಗಳನ್ನು ಬಹುತೇಕ ಶರಣರು ಒಪ್ಪಿಲ್ಲ ಮತ್ತು ವಿರೋಧಿಸಿದ್ದಾರೆ ಕೂಡ. ಆದರೆ ನಗೆಯ ಮಾರಿತಂದೆಯವರು ನಗಿಸುವುದನ್ನೇ ತಮ್ಮ ಕಾಯಕ ಮಾಡಿಕೊಂಡಿದ್ದರಿಂದ ಪುರಾಣ ಪುಣ್ಯ ಕಥೆಗಳ ಮೂಲಕ ರಂಜಿಸುತ್ತಿದ್ದರು. ಹಾಗಾಗಿ ಅವರ ಬಹುತೇಕ ವಚನಗಳಲ್ಲಿ ಇಂಥ ಕಥೆಗಳನ್ನು ಸೂಚ್ಯವಾಗಿ ಬಳಸಿದ್ದಾರೆ.

ಸುರ-ಅಸುರರ ನಡುವಿನ ವೈರತ್ವವನ್ನು ಪುರಾಣ ಪುಣ್ಯಕಥೆಗಳಲ್ಲಿ ವ್ಯಾಪಕವಾಗಿ ಪ್ರಸ್ತುತಪಡಿಸಲಾದ ಪ್ರಮುಖ ವಿಷಯ. ಸುರರು ಆದರ್ಶಪ್ರಾಯ ಮತ್ತು ಅಸುರರು ಪ್ರಜಾ ಕಂಟಕಪ್ರಾಯರಾಗಿದ್ದರು ಎನ್ನುವ ಕಥೆಗಳು ಜನಜನಿತ. ಅಸುರರನ್ನು ಸಂಹರಿಸುವ ಕಥೆಗಳನ್ನು ನಿರೂಪಿಸಿದ್ದಾರೆ. ಇಂಥ ಕಥೆಗಳನ್ನು ನಗೆಯ ಮಾರಿತಂದೆಯವರು ತಮ್ಮ ವಚನಗಳಲ್ಲಿ ಸರಳ ಮತ್ತು ಬೆಡಗಿನ ವಚನಗಳ ಮೂಲಕ ನಿರೂಪಿಸಿದ್ದಾರೆ. ಅಂಥ ಒಂದು ವಚನವನ್ನು ನಾವು ವಿಶ್ಲೇಷಣೆ ಮಾಡುವ ಪ್ರಯತ್ನವನ್ನು ಮಾಡೋಣ.

ಹಳ್ಳಿಯ ಹೊಲೆಯನ | ಕೈಯಲ್ಲಿ ಡಿಳ್ಳಿಯಧಿಪತಿ ಸತ್ತ ||
ಆಳುವ ಗಂಡ | ಹೆಂಡತಿಗೆ ಕೀಳಾಳಾದ ||
ಒಡೆಯ ಬಂಟನಿಗೆ | ಬಡಿಹೋರಿಯಾದ ||
ಹೊಡೆಯ ಹುಲ್ಲು | ಕರವಾಳ ಹಿಡಿಯ ಕೊಯ್ಯಿತ್ತು ||
ಆತುರವೈರಿ | ಮಾರೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1329 / ವಚನ ಸಂಖ್ಯೆ-1256)

ಹಳ್ಳಿಯ ಹೊಲೆಯನ ಕೈಯಲ್ಲಿ ಡಿಳ್ಳಿಯಧಿಪತಿ ಸತ್ತ :
ಸಂಚು ಮಾಡಿ ಇನ್ನೊಬ್ಬರಿಗೆ ಕೇಡು ಬಯಸಿದಲ್ಲಿ ಅವರಿಗೇ ಮುಳುವಾಗುವುದು ಮತ್ತು ಅದೇ ಅವರ ಮೃತ್ಯುವುಗೆ ಕಾರಣವಾಗುವುದು. ಇಂಥದ್ದೇ ಒಂದು ಸ್ವಾರಸ್ಯಕರವಾದ ಸಂದೇಶದ ಮೂಲಕ ಭಸ್ಮಾಸುರನ ಕಥೆಯನ್ನು ಈ ವಚನದ ಪ್ರಥಮ ಸಾಲಿನ ಮೂಲಕ ಹೇಳುತ್ತಿದ್ದಾರೆ ನಗೆಯ ಮಾರಿತಂದೆಯವರು.

ಶಿವನನ್ನು ಮೆಚ್ಚಿಸಿ ಅಮರತ್ವದ ವರವನ್ನು ಪಡೆಯಲು ಭಸ್ಮಾಸುರ ಉಗ್ರ ತಪಸ್ಸನ್ನು ಕೈಗೊಳ್ಳುತ್ತಾನೆ. ಈತನ ತಪಸ್ಸಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾದಾಗ ಅಮರತ್ವವನ್ನು ದಯಪಾಲಿಸಬೇಕೆಂದು ವರವನ್ನು ಬೇಡುತ್ತಾನೆ. ಇಂಥ ವರವನ್ನು ನೀಡಲು ನಿರಾಕರಿಸಿದ ಶಿವ “ಯಾರದೇ ತಲೆಯ ಮೇಲೆ ಕೈ ಇಟ್ಟರೂ ಅವರು ಸುಟ್ಟು ಭಸ್ಮವಾಗುವ ಅರ್ಥಾತ್ ಮರಣವಾಗುವಂಥ ವರ” ವನ್ನು ದಯಪಾಲಿಸುತ್ತಾನೆ.

ಅವಿವೇಕ ಹಾಗೂ ಕೃತಘ್ನತಾ ಭಾವದಿಂದ ಶಿವನ ಮೇಲೆಯೇ ಪರೀಕ್ಷಿಸಲು ಮುಂದಾಗುತ್ತಾನೆ. ಕಂಗಾಲಾದ ಶಿವನು ಓಡಿ ಹೋಗಿ ವಿಷ್ಣುವಿನ ವಾಸಸ್ಥಳವಾದ ವೈಕುಂಠವನ್ನು ತಲುಪುತ್ತಾನೆ. ವಿಷ್ಣುವು ಶಿವನಿಗೆ ನೆರವಾಗಲು ಸುಂದರವಾದ ಮೋಹಿನಿಯ (ಕನ್ಯೆ) ಯ ರೂಪವನ್ನು ಧರಿಸಿಕೊಂಡು ಭಸ್ಮಾಸುರನ ಎದುರು ಪ್ರಕಟಗೊಳ್ಳುತ್ತಾನೆ. ಭಸ್ಮಾಸುರನು ಆಕೆಯತ್ತ ಆಕರ್ಷಿತನಾಗುತ್ತಾನೆ. ಮೋಹಿನಿಯು ಒಂದು ತನ್ನ ಕೈಯ ತೋರು ಬೆರಳನ್ನು ತನ್ನದೇ ಶಿರದ ಮೇಲಿರಿಸಿಕೊಳ್ಳುವ ನೃತ್ಯಭಂಗಿಯನ್ನು ಪ್ರದರ್ಶಿಸುತ್ತಾಳೆ. ಮೋಹಿನಿಯ ನೃತ್ಯವನ್ನು ಅನುಸರಿಸುವುದರಲ್ಲಿಯೇ ತನ್ಮಯನಾಗಿದ್ದ ಭಸ್ಮಾಸುರನು, ಮೋಹಿನಿಯನ್ನನುಸರಿಸಿ ತಾನೂ ಕೂಡ ತನ್ನದೇ ತಲೆಯನ್ನು ತನ್ನದೇ ಕೈಯಿಂದ ಸ್ಪರ್ಶಿಸಿಬಿಡುತ್ತಾನೆ. ಒಡನೆಯೇ, ತಾನು ಪಡೆದುಕೊ೦ಡಿದ್ದ ವರಕ್ಕೆ ಅನುಸಾರವಾಗಿ ಭಸ್ಮಾಸುರನು ಅಲ್ಲಿಯೇ ಸುಟ್ಟು ಬೂದಿಯಾಗಿಬಿಡುತ್ತಾನೆ. ಅಲ್ಲಿಗೆ ಭಸ್ಮಾಸುರನೆಂಬ ಪ್ರಜಾಕಂಟಕನ ಅವಸಾನವಾಗಿ ಶಿವ ಬಿಡುಗಡೆ ಹೊಂದುತ್ತಾನೆ.

ಆಳುವ ಗಂಡ ಹೆಂಡತಿಗೆ ಕೀಳಾಳಾದ :
ಪತಿಯಾದವನ್ನು ತನ್ನ ಧರ್ಮಪತ್ನಿಯನ್ನೇ ಇಕ್ಕಟ್ಟಿಗೆ ಸಿಲಿಕಿಸಿರುವ ಪುರಾಣ ಪುಣ್ಯ ಕಥೆಗಳಲ್ಲಿ ಸತ್ಯ ಹರಿಶ್ಚಂದ್ರನ ಕಥೆ ಬಹಳ ಪ್ರಸಿದ್ಧ. ಇಕ್ಷ್ವಾಕು ವಂಶದ ದೊರೆ ತ್ರಿಶಂಕು ಮತ್ತು ತಾಯಿ ಸತ್ಯವೃತೆಯ ಮಗ ಸತ್ಯ ಹರಿಶ್ಚಂದ್ರ. ಈತನ ಧರ್ಮಪತ್ನಿಯೇ ತಾರಾಮತಿ (ಶೈವ್ಯ) ಹಾಗೂ ಮಗ ರೋಹಿತಾಶ್ವ. ಸತ್ಯವೃತ ಪಾಲಿಸುವುದರಲ್ಲಿ ಹರಿಶ್ಚಂದ್ರ ಇಂದಿಗೂ ಆದರ್ಶ.

ಒಂದು ದಿನ ಹರಿಶ್ಚಂದ್ರ ಬೇಟೆಯಾಡಲು ಕಾಡಿಗೆ ಹೋಗಿದ್ದಾಗ ಅಕಸ್ಮಾತ್ತಾಗಿ ವಿಶ್ವಾಮಿತ್ರನ ಆಶ್ರಮ ತಲುಪಿದಾಗ ವಿಶ್ವಾಮಿತ್ರನ ತಪಸ್ಸು ಬಂಗವಾಗುತ್ತದೆ. ಕೋಪಗೊಂಡ ವಿಶ್ವಾಮಿತ್ರನನ್ನು ಸಮಾಧಾನ ಮಾಡಲು ತನ್ನ ರಾಜ್ಯವನು ಬಿಟ್ಟುಕೊಡುವದರ ಜೊತೆಗೆ ದಕ್ಷಿಣೆಯನ್ನೂ ಕೊಡುವ ವಾಗ್ದಾನ ಮಾಡುತ್ತಾನೆ. ಕೊಟ್ಟ ಮಾತನ್ನು ಉಳಿಸಿಕೂಳುವುದಕ್ಕಾಗಿ ಅವನು ರಾಜ್ಯವನ್ನು ಬಿಟ್ಟು ತನ್ನ ಹೆಂಡತಿ ತಾರಾಮತಿ (ಶೈವ್ಯ) ಹಾಗೂ ಮಗ ರೋಹಿತಾಶ್ವನೊಂದಿಗೆ ಕಾಶಿಗೆ ಹೂರಟರು. ಅಲ್ಲಿ ದುಡಿಯುವುದಕ್ಕೆ ಯಾವುದೇ ಕೆಲಸ ಸಿಗಲಿಲ್ಲ. ಆಗ ತನ್ನ ಹೆಂಡತಿ ಮತ್ತು ಮಗನನ್ನು ಹಣಕ್ಕಾಗಿ ಮಾರಾಟಕ್ಕಿಟ್ಟನು. ಇದರಿಂದ ಬಂದ ಹಣ ದಕ್ಷಿಣೆ ಕೊಡುವುದಕ್ಕೆ ಸಾಲದೆ ತನ್ನನ್ನೇ ತಾನು ಗುಲಾಮನಾಗಿ ಚಂಡಾಲನ (ಸ್ಮಶಾನ ಕಾಯುವವನು) ಹತ್ತಿರ ಮಾರಿಕೂಂಡ. ಈ ಹಣದಿಂದ ವಿಶ್ವಾಮಿತ್ರನಿಗೆ ಮಾತುಕೊಟ್ಟಂತೆ ದಕ್ಷಿಣೆ ಹಣವನ್ನು ಕೊಟ್ಟು ತನ್ನ ಸ್ಮಶಾನದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದನು.

ಸತ್ಯ ಹರಿಶ್ಚಂದ್ರನ ಧರ್ಮಪತ್ನಿ ತಾರಾಮತಿ (ಶೈವ್ಯ) ಬ್ರಾಹ್ಮಣನ ಮನೆಯಲ್ಲಿ ಕೆಲಸದಾಳಾಗಿ ಕೆಲಸ ಮಾಡುತ್ತಿದ್ದಾಗ ರೋಹಿತಾಶ್ವನನ್ನು ಹಾವು ಅವನ ಕಾಲನ್ನು ಕಚ್ಚಿ ಮರಣವನ್ನಪ್ಪುತ್ತಾನೆ. ತನ್ನ ಮಗನ ಶವವನ್ನು ತೆಗೆದಕೊಂಡು ಸ್ಮಶಾನಕ್ಕೆ ಹೋಗುತ್ತಾಳೆ. ಸ್ಮಶಾನ ಕಾಯುತ್ತಿರುವ ಹರಿಶ್ಚಂದ್ರ ತನ್ನ ಒಬ್ಬನೆ ಒಬ್ಬ ಮಗನನ್ನು ಕಳೆದುಕೊಂಡ ದೃಶ್ಯವನ್ನು ಕಂಡು ದುಖಃ ಪಡುತ್ತಾನೆ. ಶವವನ್ನು ಸುಡುವುದಕ್ಕೆ ತಾರಾಮತಿ (ಶೈವ್ಯ) ಯ ಹತ್ತಿರ ಹಣ ಇರುವುದಿಲ್ಲ. ಆದರೆ ಹರಿಶ್ಚಂದ್ರ ತನ್ನ ಕರ್ತವ್ಯ ಬಿಡದಂತೆ ಇಲ್ಲಿ ಹಣ ಇಲ್ಲದೆ ಶವಸಂಸ್ಕಾರ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಹೇಳುತ್ತಾನೆ. ಆಗ ಅವಳು ನಿನಗೆ ಕೊಡಲು ನನ್ನ ಹತ್ತಿರ ಏನೂ ಇಲ್ಲ ಎಂದು ಹೇಳುತ್ತಾಳೆ. ಹರಿಶ್ಚಂದ್ರ ನಿನ್ನ ಬಳಿ ಇರುವ ತಾಳಿಯನ್ನು ಕೊಡು ಎಂದು ಕೇಳುತ್ತಾನೆ. ಪತಿಯ ವಿನ: ಬೇರೆಯವರಿಗೆ ಅವಳ ಕೊರಳಲ್ಲಿರುವ ತಾಳಿ ಕಾಣಿಸುವುದಿಲ್ಲ ಎಂಬ ವರದ ನೆನಪಾಗಿ ಅವಳು ತನ್ನ ಕತ್ತನ್ನು ಎತ್ತಿ ಪತಿಯನ್ನು ಗುರುತಿಸುತ್ತಾಳೆ. ಈ ಸಂದರ್ಭದಲ್ಲಿ ಬ್ರಹ್ಮ ದೇವರು ಪ್ರತ್ಯಕ್ಷವಾಗಿ ನಿಮ್ಮ ಸತ್ಯನಿಷ್ಠೆಯನ್ನು ಒಪ್ಪಿದೆ ಎಂದು ರೋಹಿತಾಶ್ವನನ್ನು ಬದುಕಿಸುತ್ತಾನೆ. ಹರಿಶ್ಚಂದ್ರ ತನ್ನ ಸತ್ಯ ಪ್ರಾಮಾಣಿಕತೆಗೆ ತನ್ನ ಪ್ರಾಣವನು ಬಿಡಲೂ ಸಿದ್ದನಾಗಿದ್ದ. ಹೀಗೆ ದೊರೆಯಾಗಿದ್ದ ಹರಿಶ್ಚಂದ್ರನ ಕಥೆಯನ್ನು ಎರಡನೇ ಸಾಲಿನ ಮೂಲಕ ಹೇಳಿದ್ದಾರೆ ನಗೆಯ ಮಾರಿತಂದೆಯವರು ತಮ್ಮ ಈ ವಚನದಲ್ಲಿ.

ಒಡೆಯ ಬಂಟನಿಗೆ ಬಡಿ ಹೋರಿಯಾದ :
ಹಿಂದೂ ಧರ್ಮದಲ್ಲಿ ವೇದ ಹಾಗೂ ಪುರಾಣ ಕಥೆಗಳಲ್ಲಿ ತಿಳಿಸಿರುವಂತೆ ವೀರಭದ್ರನ ಅವತಾರದ ಕಥೆಯನ್ನು ನಗೆಯ ಮಾರಿತಂದೆಯವರು ತಮ್ಮ ವಚನದ ಮೂರನೇಯ ಸಾಲಿನ ಮೂಲಕ ನಿರೂಪಿಸಿದ್ದಾರೆ.

ಸತಿ, ರಾಜಾ ದಕ್ಷ ಪ್ರಜಾಪತಿಯ ಪುತ್ರಿ. ರಾಜಾ ದಕ್ಷ ಪ್ರಜಾಪತಿಯು ದ್ವೇಷಿಸುತ್ತಿದ್ದ ಕೈಲಾಸ ವಾಸಿ ಶಿವನನ್ನೇ ಆರಾಧಿಸುತ್ತ ಆತನನ್ನೇ ವಿವಾಹವಾಗಬೇಕೆಂದು ಚಿಕ್ಕಂದಿನಿಂದಲೂ ಬಯಸಿರುತ್ತಾಳೆ. ಹಾಗೆಯೇ ಸತಿ ಶಿವನನ್ನೇ ವಿವಾಹವಾದಳು.

ಕೆಲವು ದಿನಗಳ ಬಳಿಕ, ರಾಜಾ ದಕ್ಷ ಪ್ರಜಾಪತಿ ಮಹಾಯಜ್ಞಕ್ಕೆ ಸಿದ್ದತೆ ನಡೆಸಿದ. ಇದಕ್ಕೆ ತನ್ನ ಪುತ್ರಿಯರು ಹಾಗೂ ಅಳಿಯಂದಿರು ಮತ್ತು ದೇವತೆಗಳು ಹಾಗೂ ಋಷಿಗಳನ್ನು ಆಹ್ವಾನಿಸುತ್ತಾನೆ. ಆದರೆ, ಅಳಿಯ ಶಿವ ಮತ್ತು ಮಗಳು ಸತಿಯನ್ನು ಮಾತ್ರ ಆಹ್ವಾನಿಸದೆ ಕಡೆಗಣಿಸುತ್ತಾನೆ. ಯಜ್ಞದಲ್ಲಿ ಭಾಗವಹಿಸಲೇಬೇಕೆಂದು ಪಟ್ಟು ಹಿಡಿದು ಯಜ್ಞ ನಡೆಯುವ ಸ್ಥಳಕ್ಕೆ ತೆರಳುತ್ತಾಳೆ. ಅಲ್ಲಿ ಪತಿ ಶಿವನನ್ನು ಅವಮಾನಿಸಿದ್ದನ್ನು ಸಹಿಸಲಾಗದೆ, ಯಜ್ಞದಲ್ಲಿ ಹಾರಿ ಪ್ರಾಣ ಬಿಟ್ಟಳು. ಸತಿ ಯಜ್ಞಕ್ಕೆ ಹಾರಿದ್ದನ್ನು ಕೇಳಿ ಶಿವನಿಗೆ ಕೋಪವನ್ನು ತಡೆದುಕೊಳ್ಳಲಾಗಲಿಲ್ಲ. ತನ್ನ ಕೇಶದಿಂದ ವೀರಭದ್ರನನ್ನು ಸೃಷ್ಟಿಸಿದ. ಕೈಯಲ್ಲೆಲ್ಲ ಆಯುಧ, ಅಸ್ಥಿ ಪಂಜರಗಳುಳ್ಳ ಆಭರಣಗಳನ್ನು ಧರಿಸಿದ್ದ ವೀರಭದ್ರ ದಕ್ಷ ಪ್ರಜಾಪತಿ ಹಾಗೂ ಆತನ ಸೇನೆಯನ್ನು ನಿರ್ಮಾಮ ಮಾಡಿದ. ಸ್ಕಂದ ಪುರಾಣದಲ್ಲಿ ತಿಳಿಸಿದಂತೆ, ಭಗವಾನ್ ವಿಷ್ಣು ಪ್ರಯೋಗಿಸಿದ ಸುದರ್ಶನ ಚಕ್ರವನ್ನೂ ಕೂಡ ವೀರಭದ್ರ ನುಂಗಿ ಹಾಕಿದನಂತೆ.

ಜೀವವಿಲ್ಲದ ತನ್ನ ಸತಿಯ ಮೃತ ದೇಹವನ್ನು ಹೊತ್ತುಕೊಂಡು ಲೋಕವನ್ನೆಲ್ಲ ಸುತ್ತಿದ. ಈ ವೇಳೆ, ಶಿವ ತನ್ನ ಹೊಣೆಗಾರಿಕೆಯನ್ನು ಮರೆತನಲ್ಲದೆ ನಿರ್ಲಕ್ಷ್ಯ ವಹಿಸಿದ. ಬಳಿಕ ಬ್ರಹ್ಮ ಎಲ್ಲಾ ದೇವತೆಗಳೊಂದಿಗೆ ಜತೆಗೂಡಿ, ಕೈಲಾಸಕ್ಕೆ ತೆರಳಿ, ದಕ್ಷ ಮಹಾರಾಜನಿಗೆ ಕ್ಷಮೆ ನೀಡುವಂತೆ ಬೇಡಿಕೊಂಡರು. ಶಿವ ಅನುಕಂಪದಿಂದ, ದಕ್ಷನ ತಲೆಗೆ ಆಡಿನ ತಲೆಯನ್ನು ಮರು ಜೋಡಣೆ ಮಾಡಿದ. ಯಜ್ಞ ಸಂಪೂರ್ಣಗೊಳಿಸಲು ಅನುಮತಿ ನೀಡಿದ. ತನ್ನ ತಪ್ಪಿನ ಅರಿವಾಗಿ, ದಕ್ಷ ಪ್ರಜಾಪತಿ ಯಜ್ಞ ಸ್ಥಳಕ್ಕೆ ಶಿವನನ್ನು ಆಮಂತ್ರಿಸಿದ. ಹೀಗೆ, ಎಲ್ಲಾ ದೇವತೆಗಳು ಹಾಗೂ ಭಗವಾನ್ ಶಿವನ ಉಪಸ್ಥಿತಿಯಲ್ಲಿ ಯಜ್ಞವು ಸಕಲ ಸಂಪ್ರದಾಯದಂತೆ ನೆರವೇರಿತು. ಈ ಘಟನೆ ಬಳಿಕ, ದಕ್ಷ ರಾಜ ಶಿವನ ಪರಮ ಭಕ್ತನಾದ.

ವೀರಭದ್ರನೆಂದರೆ ನಮ್ಮೊಳಗಿನ ಅಹಂಕಾರ ಹಾಗೂ ನಿರ್ಲಕ್ಷ್ಯ ಭಾವವನ್ನು ಸಂಹರಿಸುವವನು ಎಂದು ಭಾವಿಸಲಾಗುತ್ತದೆ. ಹೀಗೆ ವೀರಭದ್ರನನ್ನು ಸೃಷ್ಟಿಸಿದ ಶಿವ ವೀರಭದ್ರನನ್ನು ಸಂತೈಸಲು ಮಾಡುವ ಪ್ರಸ್ತುತಿಯನ್ನು ನಗೆಯ ಮಾರಿತಂದೆಯವರು ತಮ್ಮ ಈ ವಚನದ ಮೂರನೇಯ ಸಾಲಿನ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ.

ಹೊಡೆಯ ಹುಲ್ಲು ಕರವಾಳ ಹಿಡಿಯ ಕೊಯ್ಯಿತ್ತು :
ವಚನದ ನಾಲ್ಕನೇಯ ಸಾಲು ತಾಯಿ ಅನ್ನಪೂರ್ಣೇಶ್ವರಿಯ ಕಥೆಯನ್ನು ಜ್ಞಾಪಿಸುತ್ತದೆ. ಈ ತಾಯಿಯ ಬಗ್ಗೆ 2 ಕಥೆಗಳು ಪ್ರಚಾರದಲ್ಲಿದೆ.

ಬ್ರಹ್ಮನಿಗೆ ಮೊದಲು ಐದು ಶಿರಗಳಿದ್ದವು. ಈ ಪಂಚಮುಖಿ ಬ್ರಹ್ಮನ ಒಂದು ಶಿರವನ್ನು ಶಿವನು ಕಿತ್ತು ಹಾಕಿದಾಗ ಆ ಶಿರಸ್ಸು (ಕಪಾಲ) ಅವನ ಕೈಯನ್ನು ಬಿಡದಂತೆ ಕಚ್ಚಿ ಹಿಡಿಯುತ್ತದೆ. ಬ್ರಹ್ಮ ಕಪಾಲವನ್ನು ಹಿಡಿದು ಭಿಕ್ಷೆ ಬೇಡಿ ತುಂಬಿಸಿದಾಗ ಅದರಿಂದ ಮುಕ್ತಿ ಸಿಗುವುದೆಂದು ಶ್ರೀಮನ್ನಾರಾಯಣ ತಿಳಿಸುತ್ತಾನೆ. ಅದರಂತೆ ಶಿವ ಮೂರು ಲೋಕವೆಲ್ಲ ತಿರುಗಿ ಭಿಕ್ಷೆ ಬೇಡಿದರೂ ಕಪಾಲ ತುಂಬುವುದಿಲ್ಲ. ಕೊನೆಗೆ ಪಾರ್ವತಿಯೇ ಅನ್ನಪೂರ್ಣೇಶ್ವರಿಯಾಗಿ ಭೂಮಿಯಲ್ಲಿ ಅವತರಿಸಿ ಶಿವನಿಗೆ ಭಿಕ್ಷೆ ನೀಡುತ್ತಾಳೆ. ಜಗಜ್ಜನನಿ ನೀಡುವ ಭಿಕ್ಷೆಗೆ ಕಪಾಲ ತುಂಬಿ ಶಿವ ಮುಕ್ತನಾಗುತ್ತಾನೆ.

ಇನ್ನೊಂದು ಕಥೆಯ ಪ್ರಕಾರ ಶಿವ ಮಡದಿ ಪಾರ್ವತಿ ದೇವಿಯ ಜೊತೆಗೆ ರಸಿಕದಾಟದಲ್ಲಿ ತೊಡಗಿಕೊಂಡಿದ್ದಾಗ ಶಿವನ ಮೂರೂ ಕಣ್ಣುಗಳನ್ನು ಮುಚ್ಚಿದಳು. ಇದರಿಂದ ಜಗತ್ತಿನೆಲ್ಲೆಡೆ ಅಂಧಕಾರ ವ್ಯಾಪಿಸಿತು. ಪಾರ್ವತಿ ದೇವಿಯೂ ಕೂಡ ತನ್ನ ಪ್ರಭೆಯನ್ನು ಕಳೆದುಕೊಂಡಳು. ಇದರಿಂದ ಬೇಸರಗೊಂಡ ಪಾರ್ವತಿ ದೇವಿಯು ಅದೃಶ್ಯಳಾಗಿ ಆಹಾರವನ್ನೆ ಲೋಕದಿಂದ ಮಾಯ ಮಾಡಿದಳು.

ಪಾರ್ವತಿ ದೇವಿ ಹೀಗೆ ಮಾಡಿದ್ದರಿಂದ ಹಸಿವಿನ ಹಾಹಾಕಾರ ಉಂಟಾಯಿತು. ಜನರು ಹಸಿವಿನಿಂದ ನರಳತೊಡಗಿದರು. ಶಿವನಿಗೂ ಸಹ ಹಸಿವಿನ ತೀವ್ರತೆ ಭಾದಿಸಿತು. ನಂತರ ಪಶ್ಚಾತಾಪ ಪಟ್ಟು ಕರುಣೆಯಿಂದ ಪಾರ್ವತಿ ದೇವಿ ಅನ್ನಪೂರ್ಣೆಯಾಗಿ ಕಾಶಿಯಲ್ಲಿ ಅಡುಗೆ ಮನೆಯನ್ನು ತೆರೆದು ಎಲ್ಲರಿಗೂ ಆಹಾರವನ್ನು ನೀಡತೊಡಗಿದಳು.

ಹೀಗೆ ಅನ್ನವನ್ನು ನೀಡಬೇಕಾದ ಕೈಗಳೇ ಕಟ್ಟಿದಂತಾದ ಕಥೆಯನ್ನು ಈ ಸಾಲುಗಳ ಮೂಲಕ ಹೇಳಿದ್ದಾರೆ ನಗೆಯ ಮಾರಿತಂದೆಯವರು.

ನಗೆಯ ಮಾರಿತಂದೆಯವರು ಬಹಳ ಪ್ರಮುಖವಾಗಿ ಪುರಾಣ ಪುಣ್ಯ ಕಥೆಗಳ ಮೂಲಕ ಸಂಸ್ಕೃತಿ, ಪರಂಪರೆ ಮತ್ತು ಆಚರಣೆಗೆ ಮಹತ್ವವನ್ನು ಕೊಟ್ಟು ಹಾಸ್ಯದ ಹೊನಲನ್ನು ಬೀರುವ ಕೆಲಸವನ್ನು ಮಾಡಿದ್ದಾರೆ.


ವಿಜಯಕುಮಾರ ಕಮ್ಮಾರ
ತುಮಕೂರು 
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com

Don`t copy text!