e-ಸುದ್ದಿ, ಮಸ್ಕಿ
ಮಾ.27 ರಂದು ನಡೆಯಲಿರುವ ಮಸ್ಕಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ಬಸನಗೌಡ ತುರ್ವಿಹಾಳ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಧೃವನಾರಯಣ ಹೇಳಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ನಾಮಪತ್ರ ಸಲ್ಲಿಸುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಭಾಗವಹಿಸಲಿದ್ದಾರೆ.
ಮದ್ಯಾಹ್ನ 12 ಕ್ಕೆ ಡಾ.ಅಂಬೇಡ್ಕರ್ ಪ್ರತಿಮೆ ಮುಂಬಾಗದಿಂದ ರ್ಯಾಲಿ ಆರಂಭವಾಗಲಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತೇರಿನ ಮನೆ ಹತ್ತಿರ ಕಾರ್ಯಕರ್ತರ ಬೃಹತ್ ಬಹಿರಂಗ ಸಭೆ ನಡೆಯಲಿದೆ ಎಂದರು.
ಮದ್ಯಾಹ್ನ 2 ಗಂಟೆಗೆ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಸಮ್ಮುಖದಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಸರ್ಕಾರದ ವಿರುದ್ಧ ವಾಗ್ದಾಳಿ ಃ ಕೊವಿಡ್ 19 ನಿಯಮ ಜಾರಿಯಲ್ಲಿ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ. ಸಾರ್ವಜನಿಕರಿಗೊಂದು ತಮಗೊಂದು ನಿಯಮ ಮಾಡಿಕೊಂಡಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಧೃವನಾರಯಣ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣೆ ಪೂರ್ವದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 24 ತಾಸಿನಲ್ಲಿ ಎಸ್.ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸುವುದಾಗಿ ಹೇಳಿದ್ದರು. ಈಗ ಅವರೇ ಸಚಿವರಾಗಿದ್ದಾರೆ. ಆದರೆ ಹೆಚ್ಚಿಸಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ರಕ್ತದಲ್ಲಿ ಬರೆದುಕೊಡುವುದು ಇದೇನಾ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸಿದ್ಧರಾಮಯ್ಯನವರ ಸರ್ಕಾರ ಆಡಳಿತದಲ್ಲಿ ಇದ್ದಾಗ ನಂದವಾಡಗಿ ಯೋಜನೆ ಜಾರಿಗೆ ತಂದಿದೆ. ಅದರಂತೆ ಅನೇಕ ಯೋಜನೆಗಳು ಜಾರಿಗೊಂಡಿವೆ. ಆದರೆ ಬಿಜೆಪಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಬಿಜೆಪಿ ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ. ನನ್ನ ಅಭಿವೃದ್ದಿ ಕಾರ್ಯ ನೋಡಿ ಮತನೀಡಿ ಎನ್ನುತ್ತಿದ್ದಾರೆ. ಇವರ ಅಭಿವೃದ್ದಿ ಕಾರ್ಯಗಳು ಏನು ಎಂಬುದನ್ನು ಪಟ್ಟಿಕೊಡಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ, ಎನ್.ಎಸ್.ಬೋಸರಾಜ, ಯುಥ್ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ, ಮುಖಂಡರಾದ ಕೆ.ಕರಿಯಪ್ಪ, ಎಚ್.ಬಿ.ಮುರಾರಿ, ಶ್ರೀಶೈಲಪ್ಪ ಬ್ಯಾಳಿ, ಸಿದ್ದಣ್ಣ ಹೂವಿನಬಾವಿ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಂಜನೆಯ, ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು ಹಾಗೂ ಇತರರು ಇದ್ದರು.
————————————————
ಆಣೆ ಮಾಡಲು ಸಿದ್ಧ-ಆರ್,ಬಸನಗೌಡ ತುರ್ವಿಹಾಳ
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ನಾನು ಹಣ ಪಡೆದಿದ್ದೇನೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ನಾನು ವಿಜೆಯೇಂದ್ರ ಅವರನ್ನು ಭೇಟಿ ಮಾಡಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಆರ್.ಬಸನಗೌಡ ತುರ್ವಿಹಾಳ ತಳ್ಳಿ ಹಾಕಿದರು.
ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಪ್ರತಾಪಗೌಡ ಪಾಟೀಲ ಯಾವ ದೇವಸ್ಥಾನಕ್ಕೆ ಬರುತ್ತಾರೆ ಹೇಳಲಿ ನಾನು ಅಲ್ಲಿಗೆ ಬುರುತ್ತೇನೆ. ಇಬ್ಬರು ಪ್ರಮಾಣ ಮಾಡೋಣ ಎಂದು ಸವಾಲು ಹಾಕಿದ ಆರ್.ಬಸನಗೌಡ ತುರ್ವಿಹಾಳ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.