e-ಸುದ್ದಿ, ಮಸ್ಕಿ
ಸಮಿಶ್ರ ಸರ್ಕಾರದಲ್ಲಿ ಮಸ್ಕಿ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ತಾಳಿದ್ದನ್ನು ಖಂಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಹೇಳಿದರು.
ಮೆದಕಿನಾಳ ಜಿ.ಪಂ.ವ್ಯಾಪ್ತಿಯ ನಾಗರಬೆಂಚಿ ಗ್ರಾಮದಲ್ಲಿ ಶನಿವಾರ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಾನು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾರೆ. ರಾಜೀನಾಮೆ ಫಲದಿಂದ ಮಸ್ಕಿ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ಜಾರಿಗೆ ಬರಲು ಸಾಧ್ಯವಾಗಿದೆ ಎಂದರು.
ಕಳೆದ 12 ವರ್ಷಗಳಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ಮತ ನೀಡಿ ಎಂದು ಮನವಿ ಮಾಡಿದರು.
ಮಾಜಿ ಸಂಸದ ಕೆ.ವೀರುಪಾಕ್ಷಪ್ಪ ಮಾತನಾಡಿ ಆರ್.ಬಸನಗೌಡ ಅವರನ್ನು ಬೆಳಿಸಿದ್ದು ಬಿಜೆಪಿ, ಆದರೆ ಅಧಿಕಾರದ ಆಸೆಗೆ ಬೆಳಸಿದ ಪಕ್ಷಕ್ಕೆ ಚೂರಿ ಹಾಕಿದ್ದಾರೆ. ಇಂತವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಹಾದಿಮನಿ ವೀರಲಕ್ಷ್ಮೀ, ಮುಖಂಡರಾದ ಮಹಾದೇವಪ್ಪಗೌಡ ಪಾಟೀಲ, ಬಸವಂತರಾಯ ಕುರಿ ಸೇರಿದಂತೆ ಅನೇಕರು ಇದ್ದರು.