*ಮಹಾ ಮಣಿಹ ಸಂಗನ ಬಸವ ಜಗಕೆಲ್ಲ ಗುರು ಕಾಣಾ*
.
ಅಷ್ಟಾವರಣದಲ್ಲಿ ಗುರು ಒಂದು ಪ್ರಮುಖ ಘಟ್ಟ .ಸನಾತನ ಸಂಸ್ಥೆಯ ಗುರುಕುಲದ ವ್ಯವಸ್ಥೆಯ ಗುರು ಪದ್ದತಿಗೆ ವ್ಯತಿರಿಕ್ತವಾಗಿ ಶರಣರು ಗುರು ಪದವನ್ನು ಕಂಡುಕೊಂಡರು. ಗುರು ಅದು ಸ್ಥಾಯಿ ಭಾವವಲ್ಲ ಅದು ಸಂಚಾರಿ ಚೇತನ . ಅರಿವಿನ ಪ್ರಜ್ಞೆ .
ಭಕ್ತಿ ಎಂಬ ಪೃಥ್ವಿಯ ಮೇಲೆ ,ಗುರುವೆಂಬ ಬೀಜುಂಕರಿಸಿ
ಲಿಂಗವೆಂಬ ಎಲೆಯಾಯಿತ್ತು ವಿಚಾರವೆಂಬ ಹೂವಾಯಿತ್ತು.
ಆಚಾರವೆಂಬ ಕಾಯಾಗಿತ್ತು ,ನಿಷ್ಪತ್ತಿಯೆಂಬ ಹಣ್ಣಾಯಿತ್ತು .
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸಂಗಮದೇವ ತನಗೆಬೇಕೆಂದು ಎತ್ತಿಕೊಂಡ—- ಬಸವಣ್ಣನವರು.
ಈ ವಚನವನ್ನು ನಾವು ಮತ್ತೆ ಮತ್ತೆ ಅವಲೋಕಿಸುವುದು ಅಗತ್ಯವಾಗಿದೆ. ಗುರುವೆಂಬ ಬೀಜ ಎಂದರೆ ಏನು ?. ಬಸವ ಪೂರ್ವ ಯುಗದ ಗುರು ಪದ್ದತಿಯನ್ನು ಭೌತಿಕ ಗುರುವಿನಿಂದ ಭೌದ್ಧಿಕ ಗುರುವಿಗೆ ಮಾರ್ಪಾದುಗೊಳಿಸಿ. ಪ್ರತಿಯೊಬ್ಬ ವ್ಯಕ್ತಿಯ ಅರಿವಿನ ಆಳವನ್ನು ಜಾಗೃತಗೊಳಿಸಿ .ಅಂತಹ ಅರಿವನ್ನು ಗುರುವಾಗಿಸಿಕೊಂಡರು ನಮ್ಮ ಶರಣರು.
ಅರಿವೂಳ್ಳವರಿಗೇ ಗುರುವಿನ ಹಂಗೇಕೇ ?
ಅರಿವೂಳ್ಳವರಿಗೇ ಲಿಂಗದ ಹಂಗೇಕೇ ?
ಅರಿವುಳ್ಳವರಿಗೇ ಪಾದೋದಕ ಪ್ರಸಾದದ ಹಂಗೇಕೇ ?
ಅರಿವುಳ್ಳವರಿಗೇ ಅಮುಗೇಶ್ವರವನರಿದವನೆಂಬ ಸಂದೇಹವೇಕೆ ?
ಕೆಳಸ್ತರದ ಶರಣೆ ಅಮುಗೆ ರಾಯಮ್ಮ ಅರಿವೂಳ್ಳವರಿಗೇ ಗುರುವಿನ ಹಂಗೇಕೇ ? ಎಂದು ಕೇಳುವದರ ಮೂಲಕ ಸ್ಥಾಯಿಭಾವದ ಬಾಹ್ಯ ಗುರುವನ್ನು ಸಂಪೂರ್ಣ ಅಲ್ಲಗಳೆದಿದ್ದಾಳೆ. ಗುರು ಮನೋವಿಕಾಸದ ಮಾರ್ಗ. ದಾಸ್ಯತ್ವದ ಶ್ರೇಣಿಕೃತ ವ್ಯವಸ್ಥೆ ಅಲ್ಲ. ಗುರು ಪಾದ ಅಂದ್ರೆ ಜ್ಞಾನದ ಸಂಚಲನತೆ.
15 ನೆ ಶತಮಾನದ ಶೂನ್ಯ ಸಂಕಲನಾಕಾರರು ಮತ್ತು ಕೆಲ ಕಾಳಾಮುಖಿ ಶೈವರು ತಮ್ಮ ಅನುಕೂಲಕ್ಕೆ ಮತ್ತೆ ಈ ಗುರು ಪದವನ್ನು ಅಲ್ಲಲ್ಲಿ ತುರುಕಿ ಧರ್ಮದಲ್ಲಿ ಯಜಮಾನಿಕೆಯ ಪದ್ಧತಿಯನ್ನು ಮುಂದುವರೆಸಲು ಮಾಡಿಕೊಂಡ ಒಂದು ವ್ಯವಸ್ಥೆ.
ವಚನಗಳು ಹಲವು ಅರ್ಥವನ್ನು ಕೊಡುವ ಅಮೂಲ್ಯ ರತ್ನಗಳು ಅರಿದಷ್ಟು ಜ್ಞಾನ ವಿಸ್ತಾರಗೊಳ್ಳುತ್ತದೆ. ಅಂದಿನ ಸನಾತನಕ್ಕೆ ಸಮಗ್ರವಾಗಿ ಪರ್ಯಾಯವಾಗಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಶರಣರು ಅದರಲ್ಲೂ ಬಸವಣ್ಣನವರು ಹೆಣಗಾಡಿದರು.
ನಾನು ಹೇಳಿದ್ದೆ ಸತ್ಯ ಅಂತಾ ಮೊಳೆ ಹೊಡೆಯುವ ಜಾಯಮಾನ ನನ್ನದಲ್ಲ.
ಅರಿವಿನ ನೈಜ ಮೂರುತಿಯಾದ ಬಸವಣ್ಣ ಸತ್ಯದ ಪ್ರತಿಪಾದಕ, ಬಸವಣ್ಣ ಸರ್ವಕಾಲಿಕ ಅರಿವಿನ ಸತ್ಯದ ಸಂಕೇತವಾಗಿ ನಿಲ್ಲುತ್ತಾನೆ .
ಅಂತೆಯೇ ಅಲ್ಲಮರು ಮಹಾ ಮಣಿಹ ಸಂಗನ ಬಸವ ಎನಗೆಯು ಗುರು ನಿನಗೂ ಗುರು ಜಗಕೆಲ್ಲಾ ಗುರು ಕಾಣಾ ಗುಹೇಶ್ವರ ಎಂದಿದ್ದಾರೆ.
ಅಕ್ಕ ಬಸವನ ಅರಿವನರಿಯದೆ ಕೆಟ್ಟೆನಲ್ಲ ಎಂದಿದ್ದಾಳೆ. ಮಡಿವಾಳರು ಗುರುವು ಬಸವಣ್ಣನಿಂದಾ ಎಂದರೆ,, ಚೆನ್ನ ಬಸವಣ್ಣ ಗುರುವು ಬಸವಣ್ಣನ ಪಾದದಿಂದ ಎಂದಿದ್ದಾರೆ. ಅನೇಕ ಶರಣರು ಬಸವಣ್ಣ ಕಂಡುಕೊಂಡ ಸತ್ಯವನ್ನು ಸಾರ್ವತ್ರಿಕಗೊಳಿಸಿದ್ದಾರೆ. ಹೀಗಿದ್ದಾಗ ಹೊರಗಿನ ಗುರು ಎಷ್ಟು ಸಮಂಜಸ ?
ಇದು ನನ್ನ ವ್ಯಕ್ತಿಗತವಾದ ಅಭಿಮತ ಚರ್ಚೆಗೆ ಕೊನೆ ಇರುವದಿಲ್ಲ. ಆದರೆ ನಾನು ಅಂತರಂಗದ ಅರಿವೇ ಅಷ್ಟಾವರಣದಲ್ಲಿನ ಗುರು ಎಂದು ಬಲವಾಗಿ ನಂಬಿದ್ದೇನೆ ಮತ್ತು ಅದಕ್ಕೆ ಬದ್ಧವಾಗಿದ್ದೇನೆ. ಇನ್ನು ಅವರವರ ಅಭಿಮತ ಅಭಿಪ್ರಾಯಕ್ಕೆ ಉತ್ತರಿಸುವ ಜಾಣತನ ಬುದ್ಧಿ ಮತ್ತೆ ಅಥವಾ ಪಾಂಡಿತ್ಯ ನನ್ನ ಬಳಿ ಇಲ್ಲ .ಸರಳ ವಚನಾಧಾರಿತ ಸತ್ಯವನ್ನು ಒಪ್ಪಿಕೊಂಡಿರುವೇನು. ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ -ಶರಣಾರ್ತಿ
-ಡಾ.ಶಶಿಕಾಂತ. ಪಟ್ಟಣ ಪೂನಾ