ಡಾ.ಬಿ.ಎಮ್.ಶರಭೇಂದ್ರ ಸ್ವಾಮಿಗೆ ರಾಜ್ಯ ಮಟ್ಟದ ರಂಗಸಿರಿ ಪ್ರಶಸ್ತಿ
e- ಸುದ್ದಿ, ರಾಯಚೂರು
ಧಾರವಾಡದ ರಂಗ ಪರಿಸರ ರಂಗತಂಡ ಕೊಡಮಾಡುವ ರಾಜ್ಯ ಮಟ್ಟದ ರಂಗಸಿರಿ ಪ್ರಶಸ್ತಿಗೆ ರಾಯಚೂರು ಆಕಾಶವಾಣಿಯ ಮುಖ್ಯಸ್ಥರಾದ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಅವರು ಆಯ್ಕೆಯಾಗಿದ್ದಾರೆ.
ಮೂಲತಃ ಜಿಲ್ಲೆಯ ಸಿಂಧನೂರು ತಾಲೂಕಿನ ರೌಡಕುಂದ ಗ್ರಾಮದವಾರದ ಡಾ. ಬಿ. ಎಂ. ಶರಭೇಂದ್ರ ಸ್ವಾಮಿಯವರು ಮುತ್ತಜ್ಜ ದೊಡ್ಡಾಟ, ಸಣ್ಣಾಟಗಳ ಮಾಸ್ತರರಾಗಿ ಜನಪದರ ಮನದಂಗಳದಲ್ಲಿ ಕಲೆಯನ್ನು ಅರಳಿಸಿದವರು. ರಾಜಶೇಖರನ ’ಕಾವ್ಯವೀಮಾಂಸೆ’ ಹಾಗೂ ಕನ್ನಡದ ಖ್ಯಾತ ಕವಿ ರನ್ನನ ಗುರುವಾದ ಜಿನಸೇನಾಚಾರ್ಯರ ’ಪೂರ್ವಪುರಾಣ’ದ ಅಧ್ಯಯನದ ಹಿನ್ನೆಲೆಯಲ್ಲಿ ’ ಕಾವ್ಯಸ್ವರೂಪ : ಒಂದು ಮರ್ಶಾತ್ಮಕ ನಿಲುವು’ ಎಂಬ ಮಹಾಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಪಡೆದವರು.
ಧಾರವಾಡದ ಸಿಎಸ್‌ಐ. ಕಾಲೇಜಿನಲ್ಲಿ ಕೆಲ ವರ್ಷ ಸಂಸ್ಕೃತ ಉಪನ್ಯಾಾಸಕರಾಗಿ ಕೆಲಸ ನಿರ್ವಹಿಸಿದ್ದಾರೆ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
’ಕಲಾದರ್ಪಣ’ ಎಂಬ ಹವ್ಯಾಾಸಿ ನಾಟಕ ತಂಡ ಕಟ್ಟಿಕೊಂಡು ’ಬಂಗಾರದ ಕೊಡ’, ಸ್ವರ್ಗಸ್ಥ, ’ಜೈಸಿದನಾಯ್ಕ’, ಹೆಜ್ಜೆಗಳು, ಇತಿಹಾಸಚಕ್ರ, ಅತೃಪ್ತರು, ಅಂಧಯುಗ, ಮಾನಿಷಾದ, ಹಾವು ಹರಿದಾಡತಾವ
ಮೊದಲಾದ ನಾಟಕಗಳಲ್ಲಿ ಅಭಿನಯಿಸಿ ಉತ್ತಮ ನಟನಾಗಿ ರೂಪುಗೊಂಡವರು.
ಇವರೇ ಬರೆದು, ಅಭಿನಯಿಸಿದ ’ಕೊನೆ ಎಂದು?’ ಎಂಬ ನಾಟಕ ರಾಷ್ಟ್ರೀಯ ಯುವಜನೋತ್ಸವಕ್ಕೆ ಆಯ್ಕೆಯಾಗಿತ್ತು.
ಶರಭೇಂದ್ರಸ್ವಾಮಿಯವರ ಬೆಳಕಿಗೆ ಬೆನ್ನು ಹಾಕಿದ್ದಾಳೆ ಗಾಂಧಾರಿ ಕವನ ಸಂಕಲನ ಪ್ರಕಟಗೊಂಡಿದೆ. ಅಮರು ಕವಿಯ ’ಅಮರುಶತಕ’ ಹಾಗೂ ಭರ್ತೃಹರಿಯ ’ಶೃಂಗಾರ ಶತಕ’ಗಳ ಮುಕ್ತಕಗಳು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದವಾಗಿವೆ.
ಕಳೆದ ಒಂದು ದಶಕದಿಂದ ಇಂಗ್ಲೀಷನ ಥೆಜಾರಸ್ ರೂಪದಲ್ಲಿ ಕನ್ನಡಕ್ಕೊಂದು ಪರ್ಯಾಯ ಪದಕೋಶದ ತಯಾರಿಯಲ್ಲಿ ನಿರತರಾಗಿದ್ದಾಾರೆ.
ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಸಿ, ಪ್ರಸ್ತುತ ರಾಯಚೂರು ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿದ್ದಾರೆ. 1000ಕ್ಕೂ ಹೆಚ್ಚು ರೇಡಿಯೋ ನಾಟಕ, ರೂಪಕಗಳನ್ನು ನಿರ್ಮಿಸಿ, ನಿರ್ದೇಶಿಸಿ ಬಾನುಲಿ ಕೇಳುಗರ ಪ್ರೀತಿಗೆ ಪಾತ್ರರಾದವರು.
ರಾಜ್ಯಮಟ್ಟದ ಆಕಾಶವಾಣಿ ಕಾರ್ಯಕ್ರಮಗಳ ನಿರ್ಮಾಣದಲ್ಲಿ ಕಿನ್ನರಿ ನಾಟಕಕ್ಕೆ ರಾಜ್ಯ ಪ್ರಶಸ್ತಿ, ಪ್ರಿಯ ಕಾರಂತರೇ,….. ಇತಿ ನಿಮ್ಮ ಕಡಲು ರೂಪಕಕ್ಕೆ ರಾಜ್ಯಪ್ರಶಸ್ತಿ, ತೆರೆದ ಕಿಯೆಡೆ ತಿರುಗು ನಾದಬ್ರಹ್ಮನೆ ನಾಟಕಕ್ಕೆ ನಿರ್ಣಾಯಕರ ಮೆಚ್ಚುಗೆ ಪ್ರಮಾಣಪತ್ರ ಲಭಿಸಿದೆ. ’ಹನಿ ಹನಿ ಇಬ್ಬನಿ’, ’ಕಥಾಮೃತ’, ’ಯಕ್ಷಾಂತರಂಗ’, ’ಕಾವ್ಯಯಾನ’ ಮೊದಲಾದವು ಇವರು ರೂಪಿಸಿದ ಜನಪ್ರಿಯ ಕಾರ್ಯಕ್ರಮಗಳು. ’ಕೆಂಪುಕಳವೆ’, ’ಅನುಭವದಡುಗೆಯ ಮಾಡಿ’, ’ತಾಳಮದ್ದಳೆ’, ’ಕಥೆ ಇನ್ನೂ ಇದೆ’ ಮೊದಲಾದ ಬಾನುಲಿ ನಾಟಕ ಧಾರಾವಾಹಿಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಇವರದ್ದು.
ವಿಶ್ವ ರಂಗಭೂಮಿ ದಿನದ ಅಂಗವಾಗಿ ಧಾರವಾಡದಲ್ಲಿ ಮಾ.27 ರಂದು ಪ್ರದರ್ಶನವಾಗುವ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ರಚಿಸಿದ ನಿನಗೆ ನೀನೇ ಗೆಳತಿ ಎನ್ನುವ ನಾಟಕವನ್ನು ಡಾ.ಬಿ.ಎಮ್.ಶರಭೇಂದ್ರ ಸ್ವಾಮಿ ನಿರ್ದೇಶಿಸಿರುವುದು ವಿಶೇಷವಾಗಿದೆ.