ಪುಸ್ತಕ ಪರಿಚಯ
ಕೃತಿ….*ಕಂಪಸಾಗರದ ಮಲ್ಲಿಗೆ*
ಲೇಖಕರು… ವಿರೂಪಾಕ್ಷಿ ಎಂ ಯಲಿಗಾರ
ಪ್ರಕಾಶನ….ತುಂಗಭದ್ರ ಪ್ರಕಾಶನ, ಕಂಪಸಾಗರ ಜಿ.ಕೊಪ್ಪಳ
ಮೊ.೯೯೧೬೯೦೬೨೦೦
ಮಲ್ಲಿಗೆ ಘಮದ ಅಮಲಿನಲಿ……..
ಹೃದಯ ಚಿಪ್ಪಿನಲಿ ಅಡಗಿದ ಭಾವನೆಗಳು ಹೊರ ಬಂದು ಕನಸುಗಳಾಗಿ ಮೈಮನ ದಲ್ಲಿ ಆವರಿಸಿದಾಗ ಕಾಡಿದಾಗ ಕಾವ್ಯ ಹುಟ್ಟುತ್ತದೆ.ಒಲವಿನ ನಾದ ಗುಂಗಿನಲಿ ಹೃದಯ ಮೀಟಿದಾಗ ಆ ಕಾವ್ಯರಾಗ ಹೃದಯ ವಂತರನ್ನು ತಟ್ಟುತ್ತದೆ.ಬದುಕಿನ ವಾಸ್ತವದ ಕನ್ನಡಿಗೆ ಒಲವಿನ ಬೆಳ್ಳಿಯ ಕಟ್ಟಾಗುತ್ತದೆ ಕಾವ್ಯ. ಕಾವ್ಯ ವೆನ್ನುವುದು ಹೃದಯದ ಭಾಷೆ, ನೋವು, ನಲಿವು, ಕನಸು, ಬಾಲ್ಯ,ಮುನಿಸು,ಎಲ್ಲವನ್ನು ಕಾವ್ಯ ಅಪ್ಪಿಕೊಳ್ಳುತ್ತದೆ. ಕಾವ್ಯ ವು ಆಗಲಿ
ನೈಜತೆ ,ತೀವ್ರತೆ, ಭಾವಗಳ ನಾವೀದ್ಯ ಶಬ್ದಗಳ ಸೌಂದರ್ಯ, ಪದಗಳ ಸಾರ್ಥಕ್ಯ,,ಶೈಲಿಯ ಬಂಧರತೆ ಮತ್ತು ಛಂದಸ್ಸಿನ ಅಥೋ೯ಚಿತ ಸ್ವಚ್ಛಂದವನ್ನು ಹೊಂದಿರ ಬೇಕು .ಅಂಥಹ ಕಾವ್ಯ ಓದುಗರ ಮನ ತಟ್ಟುತ್ತದೆ ಮತ್ತು ಮನ ಕಾಡುತ್ತದೆ ಚಿಂತನೆಗೆ ಹಚ್ಚುತ್ತದೆ.
ವಿರೂಪಾಕ್ಷಿ ಎಂ ಎಲೆಗಾರ ಅವರು ವೃತ್ತಿಯಿಂದ ರೇಲ್ವೆ ಇಲಾಖೆಯಲ್ಲಿ ಕಾರ್ಯನಿರ್ವವಹಿಸುತ್ತಿದ್ದರೂ ಪ್ರವೃತ್ತಿಯಲ್ಲಿ ಉತ್ತಮ ಕವಿಗಳಾಗಿದ್ದಾರೆ,ಬಿಡುವಿನ ಸಮಯದಲ್ಲಿ ಕಾವ್ಯ ಕೃಷಿಮಾಡುತ್ತಾ ಈಗಾಗಲೆ “ನನ್ನ ಎದೆಯಾಳದಿ” ಎಂಬ ಕವನ ಸಂಕಲನ ಮತ್ತು “ನಮ್ಮೂರ ಸಂತೆ” ಎಂಬ ಮಕ್ಕಳ ಕವನ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅಪಿ೯ಸಿ ಉತ್ತಮ ಕವಿಯಂದು ಹಲವು ಪ್ರಶಸ್ತಿಗಳನ್ನು ,ಸನ್ಮಾನ ದ ಗೌರವವನ್ನು ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿದ್ದಾರೆ.ಕವಿತೆ,ಕಥೆ,ಹೈಕುಗಳು,ವಚನ,ರುಬಾಯಿ, ಟಂಕಾಗಳು ಗಜಲ್ ಗಳು, ಹೀಗೆ ಬರೆಯುತ್ತ ವಾಟ್ಸಪ್ ಗುಂಪುಗಳಲ್ಲಿ,ಪರಿಚಿತರಾಗಿದ್ದಾರೆ ಪ್ರಸ್ತುತ “ಕಂಪಸಾಗರದ ಮಲ್ಲಿಗೆ ” ಕವನ ಸಂಕಲನವನ್ನು ಲೋಕಾರ್ಪಣೆ ಮಾಡ ಓದುಗರ ಕೈಗೆ ಕೊಟ್ಟಿದ್ದಾರೆ. ಈ ಸಂಕಲನದಲ್ಲಿ ಒಟ್ಟು ೭೧ ಕವಿತೆಗಳಿವೆ. ಈ ಕವನ ಸಂಕಲನದಲ್ಲಿ ಗ್ರಾಮೀಣ ಸೊಗಡಿನ ಕಾಡು ಮಲ್ಲಿಗೆಯ ಘಮ ಹಿಡಿದಿಟ್ಟಿದ್ದಾರೆ ಕವಿತೆಗಳಲ್ಲಿ ವಿರೂಪಾಕ್ಷಿ ಯವರು ತಮ್ಮ ಸುತ್ತಲಿನ ಘಟನೆಗಳನ್ನು ಸೂಕ್ಷ್ಮ ವಾಗಿ ಅವಲೋಕಿಸಿ ತಂದೆ ,ತಾಯಿ,ಸೋದರ,ಸೋದರಿ, ಬಾಲ್ಯ,ನಾಡು ನುಡಿ ಭಾಷೆ ,ಶಾಲೆ,ಗುರುಗಳು,ಎಲ್ಲದರ ಬಗ್ಗೆ ಕಾವ್ಯ ರಚಿಸಿದ್ದಾರೆ.ಜೊತೆಗೆ ಪ್ರೀತಿ ,ಪ್ರೇಮ ,ವಿರಹ ,ದಾಂಪತ್ಯ ಜೀವನ,ಸಮಾಜದಲ್ಲಿನ ಮೋಸ,ವಂಚನೆ,ಗಳನ್ನು ವಿಡಂಬನಾತ್ಮಕವಾಗಿ ಕವಿತೆಯಲ್ಲಿ ಹಿಡಿದಿಟ್ಟಿದ್ದಾರೆ.ಇವರ ಕೆಲವು ಕವಿತೆಗಳಲ್ಲಿ ಬೇಂದ್ರೆಯವರ ಕವಿತೆಗಳಲ್ಲಿ ಇರುವ ಗ್ರಾಮೀಣ ಭಾಷೆಯ ಝಲಕ ಕಂಡುಬರುತ್ತವೆ,ಇನ್ನೂ ಕೆಲವು ಕವಿತೆಗಳಲ್ಲಿ ಕೆ.ಎಸ್.ನರಸಿಂಹ ಸ್ವಾಮಿಯವರ ದಾಂಪತ್ಯ ದ,ಕೌಟುಂಬಿಕದ,ಕವಿತೆಗಳ ನೆರಳುಬಿದ್ದಂತೆ ಅನಿಸುತ್ತದೆ.ಇದರಿಂದ ಅನಿಸುವುದೇನೆಂದರೆ ವಿರೂಪಾಕ್ಷಿ ಯವರು ಹಲವಾರು ಹಿರಿಯ ಕವಿಗಳ ಸಾಹಿತ್ಯ ಓದಿಕೊಂಡಿದ್ದಾರೆಂದು ಅನಿಸುತ್ತದೆ.ಓದಿದ ಮೇಲೆ ಅವುಗಳ ಛಾಯೆ ಕವಿಯ ಕಾವ್ಯ ದಲ್ಲಿ ಕಾಣುವುದು ಸಹಜ ವೆಂದೆನಿಸುತ್ತದೆ
*ಕಂಪಸಾಗರದ ಮಲ್ಲಿಗೆ ಸಂಕಲನದಲ್ಲಿ ನನ್ನ ಮನ ಸೆರೆ ಹಿಡಿದ ಕೆಲವು ಕವಿತೆಗಳ ಸಾಲುಗಳು ….*
೫. ಗಟ್ಟಿಗ ಇವ ಎಲ್ಲರ ಹಮ್ಮೀರ
“ಕಾಲನ ಗರ್ಭದಿ ಎಲ್ಲವೂ ಅಡಗಿದೆ
ತನ್ನ ಒಡಲಾಳದಲ್ಲಿ ಯುದ್ಧ ,ಬುದ್ಧ, ಸಿದ್ದರ
ವಾಕ್ಯವು ಮೆಲ್ಲನೆ ಎಲ್ಲವೂ ಸೇರಿದೆ….”
೮. ನನ್ನ ದೇಶ
ನನ್ನ ದೇಶ ಬಿಡುಗಡೆ ಹೊಂದಿದೆ
ಪ್ರೆಂಚ್ ಬ್ರಿಟಿಷ್ ರಿಂದ
ನನ್ನ ದೇಶ ಬಿಡುಗಡೆ ಹೊಂದಲಿಲ್ಲ
ಭ್ರಷ್ಟರಿಂದ ………
೧೧ ಅಮ್ಮ ಎನ್ನುವ ದೇವತೆ
ಗರ್ಭದಿ ಒಂಬತ್ತು ತಿಂಗಳು ಹೊತ್ತವಳು
ನೆತ್ತರು ಮಾಂಸ ಉಸಿರು ನೀಡಿದವಳು
ಹೊಕ್ಕಳು ಬಳ್ಳಿಯಲ್ಲಿ ಸುತ್ತಿ ಕೊಂಡವಳು.
೨೧. ನಿನ್ನ ಈ ನಾಚಿಕೆ
ಈ ನಿನ್ನ ಚಲುವು ನಗುವಲ್ಲಿ ತುಂಬಿದೆ
ನನ್ನನು ಸೆಳೆಯುವ ತವಕದ ಬಿಂಬವಿದೆ
ಕಣ್ಣಂಚಿನಲಿ ಕೊಲ್ಲುವ ನೋಟವ ಬೀರಿದೆ
ಬಾಡಿದ ಮನಕೆ ನವ ಚೇತನದ ರಸವಿದೆ .
೨೬.ಮಾರೀಚಿಕೆ
ಇರುಳಿಗೆ ಗುಡಿಸಲಲಿ ಕಂದೀಲ ಬೆಳಗಿತ್ತು
ಹೊಲದಲ್ಲಿ ಅವ್ವನ ಬೆವರು ಸದಾ ಹರಿದಿತ್ತು
ಅಪ್ಪನ ನೆತ್ತರದ ಪರಿಶ್ರಮ ನಿಲ್ಲದೆ ಕರಗಿತ್ತು
ಗುಡಿಸಲ ಗರಿಯಲ್ಲಿ ಜೀವನ ಸುಮ್ಮನೆ ಸಾಗಿತ್ತು.
೩೨.ಕನ್ನಡ ಹಬ್ಬವು ನಿತ್ಯವೂ ಆಗಲಿ
ಕನ್ನಡದ ಹಬ್ಬವು ಮನೆ ಮನೆ ಮನಗಳಲಿ…ss
ಹರಿದು ಹಂಚಿದ ಕನ್ನಡಿಗರು ಎಚ್ಚೆತ್ತುಕೊಂಡು
ಒಂದಾದ ದಿನವೂ ಕನ್ನಡದ ರಾಜ್ಯೋತ್ಸವವು
ಸಾವಿರಾರು ವರ್ಷಗಳ ಇತಿಹಾಸವು ತನ್ನ ಒಡಲಲಿ….
೩೭.ಅಲ್ಲೋ ಎಪ್ಪಾ……!
ಅಲ್ಲೋ ಎಪ್ಪಾ …ನೀ….ಹಿಂಗಾ ss
ದುಡುದು ದುಡುದು ….ಬಿದುರು ಆದಂಗ ಆದಿ;
ನಿನ್ಗ ಒಂದು ದಿವಸಾನೂ ರಜೆನೇ …..ಇಲ್ಲ…….
ಜಾತ್ರಿ ಜಪ್ಟಿನಾ ನೀ ಹೋಗಿ ನೋಡಿಲ್ಲ….
೫೦ .ನಮ್ಮ ಜ್ಞಾನ ದೇಗುಲ.
ಓ ನನ್ನ ಜ್ಞಾನ ದೇಗುಲವೆ
ಸಾವಿರಾರು ವಿದ್ಯಾರ್ಥಿಗಳನ್ನು ನಿನ್ನ
ಮಡಿಲಲಿ ಸಲಹಿ ಸಾಕಿ ಬೆಳೆಸಿದೆ ಜಗದಗಲ
ನಿನ್ನ ಹೃದಯ ವಿಶಾಲತೆಗೆ
ಕೋಟಿ ಕೋಟಿ ಪ್ರಣಾಮಗಳು.
೫೫. ನಿನ್ನ ನೆನಪು
ನಿನ್ನ ದಾರಿ ಕಾದು ಕಾದು ಸಾಕಾಯ್ತು
ಮನದಲ್ಲಿ ನಿನ್ನ ನೋಡುವ ಕುತೂಹಲ ಶುರುವಾಯ್ತು
ಬಯಕೆಗಳು ಮೈ ತಳೆದು ಕುಣಿದಿದ್ದಾಯ್ತು
ತಾಳ್ಮೆಯ ಕಟ್ಟೆಯು ಹೊಡೆದೋಯ್ತು
ಆದ್ರೆ ಯಾಕಿನ್ನು ನೀ ಬರಲರಚಿಸಿದ್ದರೆಇನ್ನು
೬೦.ಭಾವ ತರಂಗ ನೀ
ಕವಿತೆ ನೀ ನನ್ನೊಳು ಅವಿತೆ ಏಕೆ ಹೇಳು?
ಕಥೆ ವ್ಯಥೆ ಸಂಕಟ ಸಂತಸದಿ ಇಣುಕಿದೆ ಹೊರಗೆ
ಭಾವನೆಯ ಹೊತ್ತು ಬರುವ ನಿನಗೆ ಹೊತ್ತು ಗೊತ್ತು ಗಳಿಲ್ಲ
ಹಗಲಿರುಳುಗಳ ವ್ಯತ್ಯಾಸ ನಿನಗೆ ಬೇಕಿಲ್ಲ!
೬೬.ಮೀಟಿದೆ.
ಏಕೆ ಸುಮ್ಮನೆ ನೀ ಮೀಟುವೆ ನನ್ನೊಳಗೆ ?
ನನ್ನೆದೆಯ ವೀಣೆಯಲಿ ನಿನಾದ ಬರದು
ಭಾವನೆಗಳಿಗೆ ಜೀವ ತುಂಬಲು ಈಗ ಆಗದು…
ವಿರೂಪಾಕ್ಷಿ ಯಲಿಗಾರ ಇವರ “ಕಂಪಸಾಗರದ ಮಲ್ಲಿಗೆ” ಸಂಕಲನಕ್ಕೆ ಡಾ.ಮಲ್ಲಿನಾಥ ಎಸ್ ತಳವಾರ,ಕನ್ನಡ ಉಪನ್ಯಾಸಕರು ಕಲಬುರಗಿ ಇವರು ಮೌಲಿಕ ಮುನ್ನುಡಿಯನ್ನು ಬರೆದಿದ್ದಾರೆ. ಕೊಪ್ಪಳದ ಹಿರಿಯ ಸಾಹಿತಿಗಳು ಸಂಘಟಕರು, ಸಮಾಜ ಸುಧಾರಕರು ಆದ ಅಕ್ಬರ್.ಸಿ.ಕಾಲಿಮಿಚಿ೯ ಯವರು ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ ಕೃತಿ ಯ ಮುಖ ಪುಟ ಚಿತ್ರ ಸೊಗಸಾಗಿದೆ.
ವಿರೂಪಾಕ್ಷಿ ಯಲಿಗಾರ ಅವರ “ಕಂಪಸಾಗರದ ಮಲ್ಲಿಗೆ ” ಸಂಕಲನದಲ್ಲಿ ಸರಳ ಶಬ್ದ ಗಳಿಂದ ಕವಿ ತನ್ನ ಭಾವನೆಗಳನ್ನು ಕವಿತೆಯಲ್ಲಿ ತುಂಬಿದ್ದಾರೆ. ಜಾನಪದದ ರೀತಿಯ ಆಡು ಭಾಷೆಗೆ ಕಾವ್ಯ ರೂಪ ಕೊಟ್ಟಿದ್ದಾರೆ.ಒಟ್ಟಿಗೆ ಹೇಳುವುದಾದರೆ ಸಂಕಲನ ಓದಿಸಿಕೊಂಡು ಹೋಗುತ್ತದೆ .ರೂಪಕಗಳನ್ನು ಪ್ರತಿಮೆಗಳನ್ನು ಬಳಿಸಿ ಕಾವ್ಯ ರಚಿಸಿದ್ದರೆ ಇನ್ನೂ ಸೊಗಸಾಗುತ್ತಿತ್ತು.ಅಲ್ಲಲ್ಲಿ ಕವಿತೆಗಳಲ್ಲಿ ವಾಚ್ಯಕ ಸೂಚಿಸುತ್ತವೆ.ಮುನ್ನುಗ್ಗಿ ಬರೆಯಿರಿ,ಮುಂದಿನ ಸಂಕಲನವು ಇನ್ನೂ ಉತ್ತಮ ವಾಗಲೆಂದು ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಕೊಡುವೆ.
–ಶ್ರೀ ಮತಿ ಪ್ರಭಾವತಿ ಎಸ್ ದೇಸಾಯಿ
ವಿಜಯಪುರ
ಮೊ.೮೪೦೮೮೫೪೧೦೮