ಮಸ್ಕಿ ಕ್ಷೆತ್ರದ ಉಪಚುನಾವಣೆ-ಹಳೆ ಮಧ್ಯ ಹೊಸ ಸೀಸೆ, ಗೌಡ್ರ ಗದ್ದಲ

 

 

e-ಸುದ್ದಿ, ಮಸ್ಕಿ
ಮಸ್ಕಿ ಕ್ಷೇತ್ರದ ಉಪ ಚುನಾವಣೆ 2018 ಚುನಾವಣೆಯನ್ನು ಮರುಕಳಿಸಿದಂತಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹಳೆ ಮದ್ಯವನ್ನು ಹೊಸ ಸೀಸೆಯಲ್ಲಿ ಹಾಕಿದಂತಾಗಿದೆ. ಅಭ್ಯಾರ್ಥಿಗಳು ಅದಲು ಬದಲು ಆಗಿ ಗೌಡ್ರ ಗದ್ದಲ ಮತ್ತೊಮ್ಮೆ ಕ್ಷೇತ್ರದಲ್ಲಿ ಶುರುವಾಗಿದೆ.
ಈ ಹಿಂದೆ 2018 ರಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದರೆ, ಆರ್.ಬಸನಗೌಡ ತುರ್ವಿಹಾಳ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್‍ನಿಂದ ಗೆದಿದ್ದ ಪ್ರತಾಪಗೌಡ ಪಾಟೀಲ ಬಿಜೆಪಿ ಕದ ತಟ್ಟಿದ್ದು, ಬಿಜೆಪಿಯಲ್ಲಿದ್ದ ಬಸನಗೌಡ ತುರ್ವಿಹಾಳಗೆ ಅನ್ನದಲ್ಲಿ ಅರಳು ಸಿಕ್ಕಿದಂತಾಗಿ ಉಗಳಲು ಆಗದೆ, ನುಂಗಲು ಹಾಗದೆ ಉಸಿರು ಗಟ್ಟಿದ ಪರಸ್ಥಿತಿ ನಿರ್ಮಾಣವಾಗಿತ್ತು.
ಸಮಿಶ್ರ ಸರ್ಕಾರದಲ್ಲಿ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ತಾರತಮ್ಯ ನೀತಿಯಿಂದ ಬೇಸತ್ತು, ರೈತಪರ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವುದಾಗಿ ಪ್ರತಾಪಗೌಡ ಪಾಟೀಲ ಸ್ಪಷ್ಟನೇ ನೀಡುತ್ತಿದ್ದಾರೆ.
ಪ್ರತಾಪಗೌಡ ಪಾಟೀಲ ವಿರುದ್ಧ ಅಲ್ಪ ಮತದಿಂದ ಪರಾಭವಗೊಂಡಿದ್ದ ಆರ್.ಬಸನಗೌಡ ತುರ್ವೀಹಾಳ ಅವರನ್ನು ಬಿಜೆಪಿ ತುಂಗಭಧ್ರಾ ಕಾಡ ಅಧ್ಯಕ್ಷರನ್ನಾಗಿ ಮಾಡಿ ಭಿನ್ನಮತ ಎಳದಂತೆ ನೋಡಿಕೊಂಡಿದ್ದರು. ಆದರೆ ತುರ್ವಿಹಾಳ ಬೆಂಬಲಿಗರು ಬಿಜೆಪಿಯಲ್ಲಿ ಉಳಿಗಾಲವಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಸ್ಕಿ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ ಮತ್ತು ಆರ್. ಬಸನಗೌಡ ತುರ್ವಿಹಾಳ ಪಕ್ಷವನ್ನು ಅದಲು ಬದಲು ಮಾಡಿಕೊಂಡು ಮತ್ತೇ ಚುನಾವಣೆಯ ಅಖಾಡಕ್ಕೆ ಇಳಿದಿದ್ದಾರೆ.
ಹಾಗೇ ನೋಡಿದರೇ ಮೊದಲಿಗೆ ಪ್ರತಾಪಗೌಡ ಪಾಟೀಲ ಬಿಜೆಪಿಯಿಂದ ಶಾಸಕರಾಗಿದ್ದರು. ಆರ್.ಬಸನಗೌಡ ತುರ್ವಿಹಾಳ ಕಾಂಗ್ರೆಸ್ ನಿಂದ ಜಿ.ಪಂ. ಸದಸ್ಯರಾಗಿದ್ದರು. ಈಗ ಇಬ್ಬರು ತಮ್ಮ ಮೂಲ ಪಕ್ಷಗಳಿಗೆ ಹೋಗಿದ್ದಾರೆ. ಮತದಾರರ ಒಲವು ಯಾರ ಕಡೆ ಎಂಬುದು ಕೂತುಹಲಕರವಾಗಿದೆ.

 

 

Don`t copy text!