ಲಿಂಗಾಯತ ಮುಖ್ಯಮಂತ್ರಿ ಮಾಡಲು ಪ್ರತಾಪಗೌಡ ಪಾಟೀಲ ರಾಜೀನಾಮೆ- ರಾಜುಗೌಡ

e-ಸುದ್ದಿ, ಮಸ್ಕಿ
ವೀರಶೈವ ಲಿಂಗಾಯತ ಪ್ರಶ್ನಾತೀತ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಪ್ರತಾಪಗೌಡ ಪಾಟೀಲ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದಾರೆ ಆಗಲಿ ಬಿ.ಶ್ರೀರಾಮುಲು, ರಾಜುಗೌಡ ಅವರನ್ನು ಮುಖ್ಯಮಂತ್ರಿ ಮಾಡಲು ಅಲ್ಲಾ ಎಂದು ಸುರುಪೂರ ಶಾಸಕ ರಾಜುಗೌಡ ಹೇಳಿದರು.
ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಈಚೆಗೆ ಸಭೆಯೊಂದರಲ್ಲಿ ಮಾತನಾಡಿ ಒರ್ವ ಲಿಂಗಾಯತ ಮುಖಂಡ ಮನಸ್ಸು ಮಾಡಿದರೆ ಬೇರೆ ಜಾತಿಯ ನೂರು ಓಟನ್ನು ಹಾಕಿಸಬಹುದು ಆದರೆ ಹತ್ತು ಜನ ಮನಸ್ಸು ಮಾಡಿದರೆ ಒರ್ವ ಲಿಂಗಾಯತನ ಓಟು ಹಾಕಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ನಾವು ಕೂಡ ವೀರಶೈವ ಲಿಂಗಾಯತ ಸಮಾಜದವರನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ ಪ್ರತಾಪಗೌಡ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ಅಮರೇಗೌಡ ಬಯ್ಯಾಪೂರು ಮರೆಯಬಾರದು ಎಂದರು.
ನಾವು ಉಪಚುನಾವಣೆಯಲ್ಲಿ ಜಾತಿಯ ಆಧಾರದ ಮೇಲೆ ಮತ ಕೇಳುವುದಿಲ್ಲ. ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಪ್ರತಾಪಗೌಡ ಪಾಟೀಲ ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ ಎಂದು ರಾಜುಗೌಡ ಹೇಳಿದರು.
ಕಾಂಗ್ರೆಸ್‍ನವರು ಉಹಾಪೋಹ ಸುದ್ದಿಗಳನ್ನು ಹರಿ ಬಿಡುವ ಮೂಲಕ ಕ್ಷೇತ್ರದ ಮತದಾರರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ನಾಟಕ ನಡೆಯುವುದಿಲ್ಲ. ಪ್ರತಾಪಗೌಡ ಪಾಟೀಲ ನಾಲ್ಕನೇ ಬಾರಿಗೆ ಶಾಸಕರಾಗಿ ಕ್ಷೇತ್ರದ ಜನರು ಆಯ್ಕೆ ಮಾಡಲಿದ್ದಾರೆ ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳಕೇರಿ, ನೇಮಿರಾಜ ನಾಯ್ಕ್, ಸಿದ್ದೇಶ ಯಾದವ್, ಅಮರೇಗೌಡ ವಿರಾಪಾಪೂರು ಹಾಗೂ ಇತರರು ಇದ್ದರು.

Don`t copy text!