ಸಂದೇಹದೊಡಲು
ಎದೆತುಂಬ ಸುಧೆ ಸುರಿದು
ಮರೆಯಾದೆಯೇಕೆ?
ಬೆಂಗಾಡಿನೆದೆಗೆ ಸರಿ
ದೊರೆಯಾದೆಯೇಕೆ?
ಹಸಿರಿಲ್ಲದೆ ಹಾಡು
ಹಾಡುವುದೆ ಕೋಗಿಲೆ
ರವಿ ಇಲ್ಲದೆ ಅರಳಿ
ನಿಲ್ಲುವುದೆ ನೈದಿಲೆ?
ಬಿಸಿಲಲೂ ಚಿಗುರುವುದು
ಬಯಕೆಯಾ ಲತೆಯು
ಮಧು ಬಯಸಿದೀ ಮನಕೆ
ನಿತ್ಯ ವ್ಯಥೆಯು!
ಬೇಗ ಬಾರೆಂದು ನಾ
ಹಾಕಿದರು ಗಡುವು
ಗೋಪಿಯರ ಸಂಗದಲಿ
ನಿನಗೆಲ್ಲಿ ಬಿಡುವು?
ಸಂದೇಹವಿಹುದೆನ್ನ
ಮೈ ಮನದ ತುಂಬ
ಹೇಳಲೋ ಬೇಡವೋ
ನೀನು ಬಲು ಹುಂಬ!
ನಂದ ಯಶೋದೆಗದು
ಚಂದ್ರನದೆ ಬಿಳುಪು!
ನಿನ್ನ ತನುವಿಗಿದೇಕೋ
ಈ ಕಪ್ಪು ಹೊಳಪು?
ಹೀಗೆ ಕೇಳಿದೆನೆಂದು
ಮುನಿಯದಿರು ಮಾಧವ
ಕೊರಳ ಪಸೆಯಿರುವನಕ
ನೀನೆನ್ನ ಬಾಂಧವ!
–ನೀ.ಶ್ರೀಶೈಲ ಹುಲ್ಲೂರು