ಪರಿವರ್ತನೆ ಕ್ರಾಂತಿ ನಿರಂತರ ಪ್ರಕ್ರಿಯೆ

ಪರಿವರ್ತನೆ ಕ್ರಾಂತಿ ನಿರಂತರ ಪ್ರಕ್ರಿಯೆ

ಸಾಮಾಜಿಕ ಕ್ರಾಂತಿ ಪರಿವರ್ತನೆಗಳು ನಿತ್ಯ ನಿರಂತರವಾಗಿ ಬೇರೆ ಬೇರೆ ಸ್ವರೂಪದಲ್ಲಿ ನಡೆಯುತ್ತಲೇ ಇರುತ್ತವೆ . ವೈಚಾರಿಕತೆ ಬೆಳೆದಂತೆಲ್ಲ ಕ್ರಿಯಾಶೀಲ ಮನಸುಗಳು ಬದಲಾವಣೆಗೆ ನಿರಂತರವಾಗಿ ಚಡಪಡಿಸುತ್ತವೆ . ಚಿಂತನೆ ಸಂವಾದಗಳು ಸಂಘರ್ಷಗಳು ಪ್ರಶ್ನೆಗಳು ಆರೋಗ್ಯಕರ ಟೀಕೆ ಟಿಪ್ಪಣಿಗಳು ಸುಂದರ ಸಮಾಜವನ್ನು ಕಟ್ಟಲು ಅಗತ್ಯವಾಗಿದೆ. ವೈಚಾರಿಕ ಸಂಘರ್ಷಗಳಿಂದ ಹೊಸ ಆಲೋಚನೆಗಳು ಹುಟ್ಟುತ್ತವೆ .ಪರ್ಯಾಯ ಸಮಾಜ ವ್ಯವಸ್ಥೆಯನ್ನು ನಿರ್ಮಿಸುತ್ತವೆ . ಮಾತಿನ ಚಕಮಕಿ ಸಂಘರ್ಷಗಳು ಸೈದ್ಧಾಂತಿಕ ಘರ್ಷಣೆ ಹೊಸ ಮಾರ್ಗವನ್ನು ಸೃಷ್ಟಿಸುತ್ತವೆ .ಆದರೆ ಇಂತಹ ಚರ್ಚೆ ಸಂಘರ್ಷಗಳು ಸಮಾನ ಮನಸ್ಕರ ಬುದ್ಧಿವಂತರ ಹೃದಯವಂತರ ಚಾವಡಿಯಲ್ಲಿ ನಡೆದರೆ ಅದರ ಫಲಶ್ರುತಿ ಸಮಾಜಮುಖಿಯಾಗಿರುತ್ತದೆ .

ಒಮ್ಮೊಮ್ಮೆ ಜನ ಪರ ಸಾಮಾಜಿಕ ಧಾರ್ಮಿಕ ಚಳುವಳಿಗಳು ಆಷಾಡಭೂತಿ ಸರ್ವಾಧಿಕಾರಿ ವ್ಯಕ್ತಿಗಳ ನೇತೃತ್ವದಲ್ಲಿದ್ದಾಗ ಅವು ನೆಲ ಕಚ್ಚುತ್ತವೆ .ಕಾರಣ ಅಲ್ಲಿ ವ್ಯಕ್ತಿ ಪ್ರತಿಷ್ಠೆ ಜೇಷ್ಠತೆ ಶ್ರೇಷ್ಠತೆ ಆಂದೋಲನದ ನಾಯಕನ ಅಹಂಕಾರದ ಅಮಲಿನಲ್ಲಿ ಜನ ಸಾಮಾನ್ಯರ ಕಳಕಳಿಯು ಮಸುಕಾಗುತ್ತವೆ . ಹೀಗಾಗಿ ಇಂತಹ ಚಲುವಯ್ಯ ಬೇಗನೆ ನೆಲ ಕಚ್ಚುತ್ತವೆ .
ಭಾರತದಲ್ಲಿ ಕಮ್ಯುನಿಸ್ಟ್ ಚಳುವಳಿ ಸಮಾಜವಾದಿ ಚಳುವಳಿ ವ್ಯಕ್ತಿ ಪ್ರತಿಷ್ಠೆಗೆ ಹಾಳಾದವು.ಸಂಪ್ರದಾಯಿ ಪಕ್ಷಗಳನ್ನು ಸೋಲಿಸಲು ಮುಂದಾಗಬೇಕಾದ ಶಕ್ತಿಗಳು ಪರಸ್ಪರ ಜಗಳವಾಡುತ್ತ ಸಂಪ್ರದಾಯಿ ಪಕ್ಷಗಳಿಗೆ ನೆರವಾಗುತ್ತವೆ .

ಸಾಮರ್ಥ್ಯ (ABILITY ) ಧೈರ್ಯ ( GUTS ) ಪ್ರದರ್ಶನ ವಸ್ತುಗಳಲ್ಲ .

ಸಾಮರ್ಥ್ಯ (ABILITY ) ಧೈರ್ಯ ( GUTS ) ಪ್ರದರ್ಶನ ವಸ್ತುಗಳಲ್ಲ .ಅವುಗಳು ಯಾರೊಬ್ಬರ ಸೊತ್ತಲ್ಲ .ತನ್ನಿಂದಲೇ ಬದಲಾವಣೆ ತಾನೇ ಅದರ ನಾಯಕತ್ವ ವಹಿಸಬೇಕು ಅದರ ಹಿರಿಮೆ ಗರಿಮೆ ತನ್ನೊಬ್ಬನಿಗೆ ಮಾತ್ರ ದೊರೆಯಬೇಕು ಎಂದು ಹಪಹಪಿಸುವ ಸ್ವಾರ್ಥ ವ್ಯಕ್ತಿಗಳಿಂದ ಹೋರಾಟಗಳು ದಿಕ್ಕು ತಪ್ಪುತ್ತವೆ.
ಬದ್ಧತೆ ಸ್ಪಷ್ಟತೆ ಹಾಗೂ ನಿಷ್ಠತೆ ಇರದೇ ಹಾಗೆ ಫ್ಯಾಷನ್ ಗಾಗಿ ಹೋರಾಟ ಮಾಡುವ ಅರಿಸ್ಟೊಕ್ರಟಿಕ್ ಮನೋಭದವರಿಂದ ಬದಲಾವಣೆ ಸಾಧ್ಯವಿಲ್ಲ .
ಫ್ರಾನ್ಸ್ ಕ್ರಾಂತಿ ಒಬ್ಬ ಸಾಮಾನ್ಯ ಮಹಿಳೆಯಿಂದಾಯಿತು ಅವಳೇ ಜೋಆನ್ ಆಫ್ ಆರ್ಕ್ ಇಡೀ ಫ್ರಾನ್ಸ್ ಜನರನ್ನು ಹದಿನಾರನೆಯ ಲೂಯಿಯ ವಿರುದ್ಧ ಎತ್ತಿ ಕಟ್ಟಿ ಕ್ರಾಂತಿಗೆ ಕಾರಣವಾದಳು .
ಅದೇ ರೀತಿ ರಷ್ಯನ್ ಕ್ರಾಂತಿ ರಸಪುಟಿನ್ ಮತ್ತು ಅಲೆಕ್ಸಾಂಡ್ರಿಯಾ ವಿರುದ್ಧ ಜನ ಸಾಮಾನ್ಯರು ಬಂಡೆದ್ದರು .

ಇಂತಹ ಕ್ರಾಂತಿಯ ಮಾದರಿಗಿಂತಲೂ ಮೇಲ್ಮಟ್ಟದ ಕ್ರಾಂತಿ ಹನ್ನೆರಡನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ . ಬಸವಣ್ಣನವರ ವಿನಯತೆ ಮಾನವೀಯ ಮೌಲ್ಯಗಳು ಕೆಳ ವರ್ಗದ ದಲಿತರನ್ನು ಆಕರ್ಷಿಸಿ ವರ್ಗ ವರ್ಣ ಆಶ್ರಮ ಲಿಂಗ ತಾರತಮ್ಯದ ವಿರುದ್ಧ ಸೆಟೆದು ನಿಂತು ಸಾಂಸ್ಥಿಕರಣವಲ್ಲದ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು ಶರಣರು . ಅತ್ಯಂತ ನೋವಿನ ಸಂಗತಿ ಎಂದರೆ ಯಾವ ಉದ್ದೇಶಕ್ಕಾಗಿ ಬಸವಣ್ಣ ಒಂದು ಸುಂದರ ಸಾಮಾಜಿಕ ಧಾರ್ಮಿಕ ವೈಚಾರಿಕ ಕ್ರಾಂತಿಗೆ ಕಾರಣವಾದನೋ ಇಂದು ಅದೇ ವರ್ಗದ ಜನರು ಬಸವಣ್ಣನವರನ್ನು ಕೇವಲ ಬಂಡವಾಳ ಮಾಡಿಕೊಂಡು ಮಠಗಳನ್ನು ಆಶ್ರಮಗಳನ್ನು ಮಾಡಿಕೊಂಡ ಜನರನ್ನು ಸುಲಿಗೆ ಮಾಡ ಹತ್ತಿದರು.
ಗುರು ವ್ಯಕ್ತಿಯಲ್ಲ ಲಿಂಗ ವಸ್ತುವಲ್ಲ ಜಂಗಮ ಜಾತಿಯಲ್ಲ .ಆದರೆ ಇಂದು ಒಂದೇ ವರ್ಗದ ಜನರು ಗುರುಗಳಾದರು ಲಿಂಗವು ಪೂಜಾ ವಸ್ತುವಾಯಿತು ಜಂಗಮ ಜಾತಿಯಾಯಿತು .ಕರ್ಮಠ ವ್ಯವಸ್ಥೆಯಲ್ಲಿ ಬಸವ ತತ್ವ ನಳನಳಿಸಿ ಹೋಗಿದೆ .

ಬಸವ ತತ್ವವು ಸತ್ಯದ ಹಾದಿಯಲ್ಲಿ ರೂಪಗೊಂಡಿದೆ ಭ್ರಮೆ ಬ್ರಾಂತಿ ಉನ್ಮಾದ ಉತ್ಸಾಹಗಳಲ್ಲಿ ನ್ಯಾಯವನು ಹುಡುಕಿದರೆ ಖಂಡಿತ ಸಾಧ್ಯವಿಲ್ಲ. ಸ್ವಾರ್ಥ ರಹಿತ ಲಿಂಗ ತತ್ವ ಆಚರಣೆ ಸಹಿತ ಹೋರಾಟ ಅತಿ ಮುಖ್ಯವಾಗಿದೆ ಸರ್ವಾಧಿಕಾರದ ಧೋರಣೆಯ ಕಪಟ ನಾಟಕಗಳ ಮುಖವಾಡಗಳು ಕಳಚಿ ಬಿದ್ದಾಗ ಸಮಾಜಕ್ಕೆ ಹುಸಿ ಹೋರಾಟದ ಅರಿವಾಗುವುದು . ಆದರೆ ಕಾಲ ಸಮಯ ಶ್ರಮ ಹಣ ಎಲ್ಲವೂ ವ್ಯರ್ಥವಾಗಿ ಹೋಗಿರುತ್ತವೆ . ಸಾಮಾಜಿಕ ಪರಿವರ್ತನೆ ಇದು ಪ್ರವಾಹದ ವಿರುದ್ಧ ಈಸುವ ಪ್ರಯಾಸದ ಕೆಲಸ.ಇಂದಲ್ಲ ನಾಳೆ ಬುದ್ಧ ಬಸವ ಅಂಬೇಡ್ಕರ ಪುಲೆ ಇವರ ಮಾನವೀಯ ಮೌಲ್ಯಗಳಿಗೆ ನ್ಯಾಯ ಸಿಕ್ಕಿತು ಎಂದು ಆಶಿಸೋಣ

.
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

Don`t copy text!