ಭೂಮ್ತಾಯಿ ಅಜ್ಜಿ ಆದ್ಲಾ…??”

ಪುಸ್ತಕ ಪರಿಚಯ

“ಭೂಮ್ತಾಯಿ ಅಜ್ಜಿ ಆದ್ಲಾ…??”
(ಮಕ್ಕಳ ಕಥಾ ಸಂಕಲನ)
-ಲೇಖಕಿ-ಎಡೆಯೂರು ಪಲ್ಲವಿ

ಅದೇನೋ ಮಕ್ಕಳ ಕಥೆ ಎಂದಾಕ್ಷಣ ಸುಪ್ತವಾಗಿ ಅಡಗಿ ಕುಳಿತಿದ್ದ ಮಗುವಿನ ಮನಸು‌ ಎಚ್ಚೆತ್ತುಕೊಳ್ಳುತ್ತದೆ. ಮಕ್ಕಳ ಕಥೆಗಳನ್ನು ಓದುತ್ತಿದ್ದಂತೆ, ಪುಟಾಣಿ ಕಥೆಯಲ್ಲಿ ಬರುವ ಮುದ್ದು ಮುದ್ದಾದ ಪಾತ್ರ ನಿಭಾಯಿಸುವ ಮಕ್ಕಳೊಂದಿಗೆ ನಾವೂ ಪಾತ್ರಧಾರಿಗಳೇನೋ ಎನ್ನುವಷ್ಟು ತಲ್ಲೀನರಾಗಿಬಿಡುತ್ತೇವೆ. ನಿಜ ಅಲ್ವಾ, ಅದಕ್ಕೆ ನಾನು ಮಕ್ಕಳ ಕಥಾ ಸಂಕಲನ ಕಂಡರೆ ಓದುವ ತವಕದೊಂದಿಗೆ‌ ಕೊಳ್ಳಲು ತಕ್ಷಣ ಮುನ್ನುಗ್ಗುತ್ತೇನೆ.
ಹೌದು, ಆ ದಿನ ಒಂದೇ ವೇದಿಕೆಯಲ್ಲಿ ಬುಕ್ ಬ್ರಹ್ಮ ಪ್ರಾಯೋಜಕತ್ವದಲ್ಲಿ ಮೂರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಫೇಸ್ ಬುಕ್ ನಲ್ಲಿ ನೋಡಿದೆ, ಅದರಲ್ಲಿ ಮಕ್ಕಳಿಗಾಗಿ ರಚಿತವಾದ ಕಥಾ ಸಂಕಲನ “ಭೂಮ್ತಾಯಿ ಅಜ್ಜಿ ಆದ್ಲಾ….??” ಕೃತಿಯನ್ನು ನೋಡಿ, ಕೂಡಲೇ ಲೇಖಕಿಯವರನ್ನು ಸಂಪರ್ಕಿಸಿ ಪುಸ್ತಕ ತರಿಸಿಕೊಂಡೆ. ತರಿಸಿಕೊಂಡದ್ದಷ್ಟೇ ಆಗಿತ್ತು. ನನ್ನ ಕಿರು ಗ್ರಂಥಾಲಯದಲ್ಲಿ ಸ್ಥಾನ ಪಡೆದದ್ದು ಕೈಗೆ ಸಿಕ್ಕದ್ದು ತಡವಾಗಿಯೇ ಎಂಬುದು ನನಗೆ ಖೇದದ ವಿಷಯ.

ಇರಲಿ ತಡವಾದರೂ ಒಂದು ವಿಶೇಷವಾದ ಕೃತಿ ಓದಿದ ಖುಷಿ ತಮ್ಮೊಂದಿಗೆ ಹಂಚಿಕೊಳ್ಳುವುದು ನನ್ನ ಸೌಭಾಗ್ಯ ಅನಿಸುತ್ತದೆ.

ಮಕ್ಕಳೆಂದರೆ ಸಾಕು ಮುಗ್ಧತೆ, ತುಂಟತನ, ತೊದಲ್ನುಡಿ, ಜಗಳ, ಚೇಷ್ಟೆ, ಎಲ್ಲಕ್ಕೂ ಮಿಗಿಲಾಗಿ ಅವರು ತೋರುವ ಮಮತೆಗೆ ಸೋಲದವರು ಯಾರೂ ಇಲ್ಲ ಅಲ್ವಾ?. ಇದಕ್ಕೆ ಸಾಕ್ಷಿಯಂತೆ ಪಲ್ಲವಿಯವರು ೨೩ ಮಕ್ಕಳ ಕಥೆಗಳನ್ನು ನಮ್ಮ ಮನ ಮುಟ್ಟುವಂತೆ ರಚಿಸಿದ್ದಾರೆ. ಕೇವಲ ನಗು, ಆಟ, ಪ್ರಾಣಿಗಳು ಅವುಗಳ ಚಾಣಾಕ್ಷತನಕ್ಕೆ ಮಾತ್ರ ಕೃತಿ ಸೀಮಿತವಾಗದೆ ಮಕ್ಕಳು ಬೆಳೆಸಿಕೊಳ್ಳಬೇಕಾಗಿರುವ ಮೌಲ್ಯಗಳು, ಪರಿಸರ ಪ್ರೇಮ ಮತ್ತು ಕಾಳಜಿಯ ಕುರಿತಾಗಿ ಮತ್ತು ಪ್ರಸ್ತುತ ಮಕ್ಕಳ ಮನಸ್ಥಿತಿಗೆ ತಕ್ಕಂತೆ ಕಥಾವಸ್ತುಗಳನ್ನು ಆಯ್ದು ಉತ್ತಮವಾಗಿ ಪರಿಣಾಮಾತ್ಮಕವಾಗಿ ನಿರೂಪಿಸಿದ್ದಾರೆ. ಈ ಕಥಾ ಸಂಕಲನ ಎಷ್ಟು ಗುಣಮಟ್ಟದ್ದಾಗಿದೆ ಎಂದರೆ, ಈ ಕೃತಿಯಲ್ಲಿರುವ ಕಥೆಗಳನ್ನು ಓದುವ ಮಕ್ಕಳು ಭವಿಷ್ಯಕ್ಕೆ ಭರವಸೆಯ ಪೀಳಿಗೆಯಾಗುತ್ತವೆ ಎಂಬುದು ನನ್ನ ಪ್ರಬರವಾದ ಅಭಿಮತ.

ಸಮಾಜಕ್ಕೆ ಒಂದು ಸಂದೇಶವನ್ನು ನಾವು ರವಾನಿಸಬೇಕಾಗಿದೆ, ಆದರೆ ಯಾರಿಗೆ ಆ ಸಂದೇಶ ನೀಡಿದರೆ ಪರಿಣಾಮಕಾರಿಯಾಗುತ್ತದೆ? ಎಂದು ಯೋಚಿಸಿದರೆ ಖಂಡಿತವಾಗಿಯೂ ನಮ್ಮ ಉತ್ತರ ಮಕ್ಕಳಿಗೆ ಎಂದಾಗಿರುತ್ತದೆ. ಕಾರಣ ಭವ್ಯ ಭಾರತದ ಭವಿಷ್ಯವೇ ನಮ್ಮ ಮಕ್ಕಳು ತಾನೆ? ಅದಕ್ಕಾಗಿ, ಅಂತಹದ್ದೇ ಉದ್ದೇಶದಿಂದ ಪಲ್ಲವಿಯವರು ಧನಾತ್ಮಕ ಮತ್ತು ಮೌಲ್ಯಯುತ ಸಂದೇಶಗಳನ್ನು ಮಕ್ಕಳ ಕಥೆಯ ಮೂಲಕ, ಮಕ್ಕಳಿಗೆ ಮುಟ್ಟಿಸಲು ಈ ಕೃತಿಯಲ್ಲಿ ಪ್ರಯತ್ನಿಸಿ…. ಯಶಸ್ವಿಯೂ ಆಗಿದ್ದಾರೆ. ಆ ಸಂದೇಶಗಳಲ್ಲೂ ಕಲವೆಡೆ ಮಕ್ಕಳೇ ಹಿರಿಯರ ಕಣ್ಣು ತೆರೆಸುವಂತೆ ಮಾಡಿರುವುದು, ಈ ಕೃತಿಗೆ ಮತ್ತಷ್ಟು ಮಹತ್ವ ಬಂದಂತಾಗಿದೆ.
ಎಲ್ಲವನ್ನೂ ಬಲ್ಲ ಹಿರಿಯರೇ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಅದರಲ್ಲಿ ಪಾಲಕರೂ ಹೊರತಾಗಿಲ್ಲ. ಆದರೆ ಅವರಿಗೆ ಅವರ ತಪ್ಪುಗಳನ್ನು ತಿಳಿಸುವುದು ಹೇಗೆ ಎಂಬುದನ್ನು ಲೇಖಕಿಯವರು ಮಕ್ಕಳ ಮೂಲಕ ಉಪಾಯವಾಗಿ ತಿಳಿಸಿಕೊಡುತ್ತಾರೆ.

ಶಾಲೆಯಲ್ಲಿಯ ಶಿಕ್ಷಕರು ಮತ್ತು ಮಕ್ಕಳು ಉಪಾಯಮಾಡಿ ತಮ್ಮ ಪಾಲಕರ, ಹಿರಿಯರ ತಪ್ಪುಗಳನ್ನು ತಿದ್ದವುದು ನಿಜಕ್ಕೂ ಕುತೂಹಲ ಮತ್ತು ಆದರ್ಶವೆನಿಸತ್ತದೆ.

ಮೇಘನಾ ಮೇಡಂನ ಯುಕ್ತಿ, ಕಾಳಜಿ”
“ಪ್ರಗತಿಯ ಜಾಣತನ”
“ಬಾಟಲಿ ತೂತು ಮಾಡಿದವರು ಯಾರು”
—– ಕಥೆಗಳು ಇದಕ್ಕೆ ಉದಾಹರಣೆಯಾಗಿವೆ. ಮಕ್ಕಳು ಉಪಾಯ ಮಾಡಿ ತಂದೆ ತಾಯಿಯ ಮನಸ್ಸನ್ನು ಪರಿವರ್ತನೆ ಮಾಡುವುದೆಂದರೆ ಖುಷಿ ಆಗುತ್ತದೆ ಮತ್ತು ಮಕ್ಕಳಲ್ಲಿ ಎಷ್ಟು ಪ್ರಬುದ್ಧವಾದ ಆಲೋಚನೆಗಳಿವೆ ಎಂದು ಆಶ್ಚರ್ಯವೂ ಆಗುತ್ತದೆ. ಮಕ್ಕಳ ವಿಚಾರಧಾರೆಯ ಶಕ್ತಿಯೇ ಹಾಗೆ. ಕೇವಲ ಮೌಲ್ಯದ ಪಾಠ ಹೇಳಿ ನಾವು ಅದರಂತೆ ನಡೆಯದಿದ್ದರೆ, ಥಟ್ಟನೆ ಮುಲಾಜಿಲ್ಲದೆ ಪ್ರಶ್ನಿಸಿ ಬಿಡುತ್ತಾರೆ ಎಂಬುದು ಎಲ್ಲ ಪಾಲಕರಿಗೂ ಅನುಭವ ಇರುವಂತದ್ದೆ. ಆದ ಕಾರಣ ಮಕ್ಕಳ ಮುಂದೆ ಮಾತಿನಂತೆ ನಡೆಯಬೇಕು ಎಂಬುದನ್ನು ನಾವು ಎಂದಿಗೂ ಮರೆಯಬಾರದು.

ಜೊತೆಗೆ, ಮಕ್ಕಳ ನಡುವಿನ ಸ್ನೇಹ ಮತ್ತು ಸ್ನೇಹದ ಮುಗ್ಧತೆಯನ್ನು ಅರಿತ ಲೇಖಕಿಯವರು ಅವರ ನಡುವೆ ಹುಟ್ಟುವ ಜಗಳ ಮತ್ತು ಎಷ್ಟೇ ದ್ವೇಷಿಸಿದರೂ ಕಷ್ಟ ಎಂದಾಗ ಒಂದಾಗುವ ಅವರ ಬಾಂಧವ್ಯವನ್ನು ಉತ್ತಮವಾದ ನಿದರ್ಶನದೊಂದಿಗೆ
“ಹಾವನ್ನು ಸಾಯಿಸಿದ್ದು ಯಾರು?” ಕಥೆಯಲ್ಲಿ ನಿರೂಪಿಸುತ್ತಾರೆ. ಚಿರು, ಭೀರು, ಮಿಕ್ಕೂ ಎಂಬ ಮೂವರು ಆಪ್ತ ಸ್ನೇಹಿತರಲ್ಲಿ ಚಿರು ಮತ್ತು ಭೀರುವಿನ ನಡುವೆ ಪೆನ್ಸಿಲ್ಗಾಗಿ ಜಗಳವಾಗುತ್ತದೆ. ಚಿರುವಿನ ಪೆನ್ಸಿಲ್ ಕಳುವಾಗಿ ಅದರ ಆಪಾದನೆ ಭೀರುವಿನ ಮೇಲೆ ಬಂದು ಜಗಳವಾಗಿ ಮಾತು ಬಿಡುತ್ತಾರೆ. ಮುಂದೆ ಇವರಿಬ್ಬರನ್ನು ಒಂದು ಮಾಡಲು, ಮಿಕ್ಕೂ ಸತ್ತ ಹಾವನ್ನು ಇವರ ನಡುವೆ ಎಸೆಯುತ್ತಾನೆ. ಅವರಿಬ್ಬರೂ ಸತ್ತ ಹಾವನ್ನು ಬಡೆಯುತ್ತಾರೆ, ನಾವೇ ಕೊಂದೆವು ಎಂದು ಅಂದುಕೊಳ್ಳುತ್ತಾರೆ. “ಭೀರು
ನಿನ್ನ ಪ್ರಾಣವನ್ನು ಚಿರು ಉಳಿಸಿದ, ಅವನಿಲ್ಲದಿದ್ದರೆ ಅದು ನಿನಗೆ ಕಡಿಯುತ್ತಿತ್ತು” ಎಂದು ಮಿಕ್ಕೂ ಅನ್ನುತ್ತಾನೆ.
ಚಿರು, “ನಾನೇ ಸಾಯಿಸಿದ್ದು, ಅವನಿಲ್ಲದಿದ್ದರೂ ಏನೂ ಆಗುತ್ತಿರಲಿಲ್ಲ” ಎಂದರೆ, ಭೀರು, “ಇಲ್ಲ ನಾನೇ ಕೊಂದದ್ದು, ನಾನೇ ತಲೆಗೆ ಹೊಡೆದು ಸಾಯಿಸಿದ್ದು” ಎಂದು ವಾದಿಸುತ್ತಾನೆ. ಮತ್ತೆ ಇಬ್ಬರೂ ಜಗಳ ಕಾದು ದೂರವಾಗಿಬಿಡುತ್ತಾರೆ. ಈ ನಡುವೆ ಚಿರುವಿಗೆ ಟೈಫಾಯ್ಡ್ ಜ್ವರ ಬಂದು ಹಾಸಿಗೆ ಹಿಡಿದಾಗ, ಭೀರು ಮತ್ತು ಮಿಕ್ಕೂ ಇಬ್ಬರೂ ಬಂದು ಚಿರುವನ್ನು ಕಾಣುತ್ತಾರೆ. ಧೈರ್ಯ ತುಂಬುತ್ತಾರೆ. ಮುಂದೆ ಉತ್ತಮ ಸ್ನೇಹಿತರಾಗಿ, ನಡೆದ ಕಹಿ ಘಟನೆ ಮರೆತು, ಆದರ್ಶ ಸ್ನೇಹಿತರಾಗಿರುತ್ತಾರೆ. ಮಕ್ಕಳ ಮನಸ್ಸನ್ನರಿತೇ ಕಥೆಗಾರ್ತಿ ಇಂತಹ ಅದ್ಭುತ ಕಥೆಯನ್ನು ನಮಗೆ ನೀಡಿದ್ದಾರೆ.

ಭೂಮಿತಾಯಿ ಅಜ್ಜಿ ಆದ್ಲಾ….??” ಕಥೆಯಂತೂ ನಮ್ಮನ್ನು, ನಮ್ಮ ಕಾರ್ಯವನ್ನು ನಾವೇ ವಿಮರ್ಶೆಗೆ ಒಳಪಡಿಸಿಕೊಳ್ಳುವಂತಹ ಅನುಭಾವವನ್ನು ನೀಡುತ್ತದೆ. ನಾವು ಪ್ರಕೃತಿಯ ಮೇಲೆ ಮಾಡುತ್ತಿರುವ ರೌದ್ರಾವತಾರದ ಮಾಲಿನ್ಯವನ್ನು ತೋರಿಸಿಕೊಡುವ ಕಥೆ. ನಮ್ಮ ಮೇಲೆ ನಮಗೇ ಹೇಸಿಗೆ ಹುಟ್ಟಿಸುವಂತಹ ಕಥಾವಸ್ತುವನ್ನು ಚಾಣಾಕ್ಷತೆಯಿಂದ ನಮ್ಮೆದೆಗೆ ಬಿತ್ತಿದ ಲೇಖಕಿಯವರ ಸೃಜನಶೀಲತೆಯನ್ನು ನಾವೂ ಮೆಚ್ಚದೇ ಇರಲು ಸಾಧ್ಯವಿಲ್ಲ.
ಭೂಮ್ತಾಯಿ ಅಜ್ಜಿ ಆದ್ಲಾ…?? ಈ ಶೀರ್ಷಿಕೆಯೇ ನಮ್ಮನ್ನು ವಿಚಾರಧಾರೆಗೀಡುಮಾಡುತ್ತದೆ. ಭೂಮಿತಾಯಿಯನ್ನು ನಾವು ಶೋಷಣೆ ಮಾಡುತ್ತಿದ್ದೇವಾ? ಎಂಬ ಪ್ರಶ್ನೆಯನ್ನು ಮನಸಲ್ಲಿ ಹುಟ್ಟುಹಾಕುತ್ತದೆ. ಭೂಮಿ ತಾಯಿ, ಚಂದಿರ, ಸೂರ್ಯರ ನಡುವಿನ ಸಂಭಾಷಣೆ ಓದಗನನ್ನು ಆಕರ್ಷಿಸುತ್ತದೆ. ಭೂಮ್ತಾಯಿ ಅಜ್ಜಿ ತರಹ ಕಾಣುವುದಕ್ಕೆ ಮೂಲ ಕಾರಣವೂ ಮನುಷ್ಯನ ಅತಿ ಆಸೆ ಮತ್ತು ಅವನು ಮಾಡುತ್ತಿರುವ ಭೂ ಮಾಲಿನ್ಯ ಎಂಬ ಸತ್ಯದ ದರ್ಶನ ಈ ಕಥೆಯಲ್ಲಾಗುತ್ತದೆ. ಇದೇ ಹೆಸರು ಕೃತಿಗೆ ಶೀರ್ಷಿಕೆಯಾಗಿದ್ದು, ಸಾಹಿತ್ಯ ಪ್ರೇಮಿಗಳ ಕಣ್ಸೆಳೆಯುವಂತಿದೆ.

ನಮ್ಮ ಸಂಸ್ಕೃತಿಯನ್ನು ಅನೇಕ ಖಾಸಗೀ ಶಾಲೆಗಳು‌ ಧಿಕ್ಕರಿಸಿ ನಡೆಯುವುದನ್ನು, ಪಾಲಕರು ಪ್ರಶ್ನೆಮಾಡಿ ಶಾಲಾ ಸಿಬ್ಬಂದಿಯವರ ಮನಸನ್ನು ಓಲೈಸುವ ಕಥೆ “ಹೂವನ್ನೇಕೆ ಮುಡಿಯಬಾರದು?” ಉತ್ತಮವಾದುದಾಗಿದ್ದು ಎಲ್ಲರೂ ಒಮ್ಮೆ ನಮ್ಮತನವನ್ನು ಅವಲೋಕಿಸುವಂತೆ ಮಾಡುತ್ತದೆ.

ಆಹಾ! ಎಷ್ಟು ಸುಂದರ! ಎಂತಹ ಅದ್ಭುತವಾದ ವಿಚಾರಧಾರೆ! ಅಭಯಾರಣ್ಯ ಎಲ್ಲಿ? ಮಕ್ಕಳು ಸ್ವತಂತ್ರವಾಗುವುದೆಲ್ಲಿ? ಏನಾದರೂ ಸಂಬಂಧವಿದೆಯಾ? ಎಂದು ಆಲೋಚಿಸುತ್ತಿದ್ದೀರಾ?
ಇದೆ ರೀ! ನಮ್ಮ ಲೇಖಕಿಯವರು (ನಾಗರಹೊಳೆ)ಅಭಯಾರಣ್ಯದಲ್ಲಿ ಹೇಗೆ ಗಿಡ ಮರಗಳು ಸ್ವತಂತ್ರವಾಗಿ; ನೀರು, ಗೊಬ್ಬರ, ಬೇಲಿ ಹಾಕಿ ಯಾರು ಕೂಡ ಪೋಷಣೆ ಮಾಡದಿದ್ದರೂ, ಹೇಗೆ ಬೃಹದಾಕಾರವಾಗಿ ಬೆಳೆದು ನಿಲ್ಲುತ್ತವೆಯೋ, ಹಾಗೆ ಮಕ್ಕಳೂ ಸಹ ಮನೆಯಲ್ಲಿ ತಂದೆ-ತಾಯಿಯರ ಮೇಲೆ ಅವಲಂಬಿತರಾಗದೆ ಶಾಲೆಯ ಹೋಂ ವರ್ಕ್ ನಿಂದ ಹಿಡಿದು ತಮ್ಮ ಎಲ್ಲ ಕೆಲಸಗಳನ್ನೂ ತಾವೇ ಮಾಡಿಕೊಳ್ಳುವಂತಹ ಪ್ರೇರೇಪಣೆಯನ್ನು ನೀಡಿ,
” ನಾಗರಹೊಳೆ ಅಭಯಾರಣ್ಯ” ಕಥೆಯ ಮೂಲಕ ಮಕ್ಕಳಿಗೆ ನವಿರಾಗಿ ಕಣ್ತೆರೆಸುತ್ತಾರೆ. ಕಥೆ ಓದಿದರೆ ಹೀಗೂ… ಪರಿಸರ ಪ್ರಜ್ಞೆಯ ಜೊತೆಜೊತೆಗೆ ಲೌಕಿಕ ಅನುಭವಗಳನ್ನು ನೀಡಬಹುದಾ!? ಏಂದು ಓದುಗನಿಗೆ ಅನ್ನಿಸದೇ ಇರಲಾರದು.

ಕಪ್ಪು ಬಣ್ಣದ ಬಗ್ಗೆ ಮೊದಲಿಂದಲೂ ನಮ್ಮ ಮನಸಲ್ಲಿ ಒಂದು ತಾತ್ಸಾರ ಭಾವನೆ ಇದ್ದೇ ಇದೆ.
ಕರಿ ಮಣಿಯನ್ನು ಬಿಟ್ಟರೆ ನಾವು ಕಪ್ಪು ಬಣ್ಣದ ವಸ್ತುವನ್ನೂ ಸಹ ಕೊಳ್ಳಲು ಹಿಂದ್ಹೇಟಹಾಕುತ್ತೇವೆ. ಮಕ್ಕಳಿಗೂ ನಾವು ಅದೇ ರೀತಿ ಮೂಢನಂಬಿಕೆಯನ್ನು ಬಿತ್ತುತ್ತೇವೆ. ಇದನ್ನರಿತ ಮಕ್ಕಳ ಸಾಹಿತಿ, ಪಲ್ಲವಿ ಅವರು ಈ ದೃಷ್ಟಿಕೋನವನ್ನು ಮೂಲವಾಗಿ ಮಕ್ಕಳಲ್ಲೇ ಹೋಗಲಾಡಿಸದರೆ ಸೂಕ್ತ ಎಂದು ಉತ್ತಮವಾದ ನಿದರ್ಶನದೊಂದಿಗೆ ” ಬೆಳ್ಳಗಿನ ಭೂತ ಮತ್ತು ಅಜ್ಜಿಯ ಕಥೆ” ಯನ್ನು ಹೆಣೆಯುತ್ತಾರೆ. ಕಪ್ಪಗಿನ ಅಜ್ಜಿ ಮಾಡುವ ಕಪ್ಪಾದ (ರಾಗಿ) ರೊಟ್ಟಿಯ ಬಗ್ಗೆ ಅಸಡ್ಡೆಯಾಗಿ ನಡೆದುಕೊಂಡ ನವೀನನಿಗೆ ಕತ್ತಲಲ್ಲಿ ಕಪ್ಪಾದ ರೊಟ್ಟಿ ತಿನ್ನಿಸಿ ಅದರ ಸವಿಯನ್ನು ತಿಳಿಸಿಕೊಡುತ್ತಾಳೆ. ಹಾಗೆ ಕಥೆಯೊಳಗೊಂದು ಕಥೆ ಸೃಷ್ಟಿಸಿ, ರಾಜ ರಾಣಿ, ಅವರಿಗೆ ಹುಟ್ಟಿದ ಕಪ್ಪಾದ ಮಗನ ಕಥೆ ಹೇಳಿ ಬಣ್ಣ ಯಾವತ್ತಿಗೂ ಮುಖ್ಯವಲ್ಲ, ಮಾನವೀಯತೆ ಮುಖ್ಯ ಎಂದು ತಿಳಿಸಿ ಬೆಳ್ಳನೆಯ ಭೂತವನ್ನು ಮನಸಿಂದ ಓಡಿಸುತ್ತಾಳೆ. ಇಂತಹ ಮಾದರಿ ಕಥೆಗಳು ನಮ್ಮ ಮಕ್ಕಳಿಗೆ ತಿಳಿಸುವುದರಿಂದ ಮಕ್ಕಳ ಮನಸು ಶುಭ್ರವಾಗುವುದರೆ ಆಶ್ಚರ್ಯವೇನಲ್ಲ.

ಮಕ್ಕಳಿಗೆ ಮನೋರಂಜನೆಯನ್ನು ಮತ್ತು ಕುತೂಹಲವನ್ನು ಬೆಳೆಸುವ ಸಲುವಾಗಿ‌ ಹುಟ್ಟಿದ ಕಥೆ “ಚಿಂಟಿ ಮಿಂಟಿ ಸಾಂಟಾ ವಂಡರ್ಗೆ ಹೋಗಿದ್ದು ನಿಜವಾ?”. ಕ್ರಿಸ್ಮಸ್ ಹಬ್ಬದ ಗುಂಗಲ್ಲೆ ಮಲಗಿದ ಮಕ್ಕಳು ಕನಸಲ್ಲಿ ಆಚರಿಸಿದ ಹಬ್ಬ, ವಂಡರ್ ಗೆ‌ ಹೋಗಿ ಬಂದದ್ದನ್ನು ಸುಂದರವಾಗಿ ಹೆಣೆದು ಕೊಡುತ್ತಾರೆ, ಲೇಖಕಿ ಪಲ್ಲವಿಯವರು. ಈ ಕಥೆ ಮಕ್ಕಳಿಗೆ ಕುತೂಹಲವನ್ನು ಹುಟ್ಟಿಸುವುದರ ಜೊತೆಗೆ ಆನಂದವನ್ನೂ ನೀಡುತ್ತದೆ.

ಮತ್ತೆ, ಚಿನ್ನದ ಮೊಟ್ಟೆಯ ಕಥೆಯನ್ನು ನಾವೆಲ್ಲ ಕೇಳಿದ್ದೀವಲ್ವಾ, ಅಂತೆಯೇ, “ಚಿನ್ನದ ಗರಿಯ ಕೋಳಿ ಮತ್ತು ಸಾಗರಿ” ಕಥೆಯು ಒಂದು ರೋಮಾಂಚನದ ಅನುಭವ ನೀಡುತ್ತದೆ. ತಂದೆ ತಾಯಿಯನ್ನು ಕಳೆದುಕೊಂಡು ಅನಾಥಳಾದ ಪುಟ್ಟ ಹುಡುಗಿ ಕೋಪಿಷ್ಟ ಮತ್ತು ಸ್ವಾರ್ಥಿ ಅಣ್ಣನಿಂದ ಸದಾ ತೆಗಳಿಕೆಗೆ ಗುರಿಯಾಗಿ, ಒಂದು ಸಂದರ್ಭದಲ್ಲಿ ಬೇಸರಗೊಂಡು ತನ್ನ ಗೆಳೆಯರಾದ ಹೆಂಟಿ(ಕೊಳಿ) ಗಳ ಜೊತೆ ಮನೆ ಬಿಟ್ಟು ಕಾಡಿಗೆ ಬರುತ್ತಾಳೆ.
ಒಂದು ಗುಹೆಯಲ್ಲಿ ಚಿನ್ನದ ಪುಕ್ಕಗಳಿದ್ದ ಬೆಳ್ಳಿಯ ಕಾಲುಗಳುಳ್ಳ ಒಂದು ಕೋಳಿ ನಾಯಕಿಯಾಗಿರುತ್ತದೆ. ಆ ಚಿನ್ನದ ಪುಕ್ಕದ ಕೋಳಿ, ಸಾಗರಿಯನ್ನು ಅಲ್ಲೇ ಇರಿಸಿಕೊಂಡು ಚೆನ್ನಾಗಿ ನೋಡಿಕೊಳ್ಳುತ್ತದೆ. ಒಂದೊಮ್ಮೆ ಕಾಡಿನಲ್ಲಿ ರಾಜ ಬರುವಾಗ ಒಂದು ಚಿನ್ನದ ಗರಿ ಸಿಗುತ್ತದೆ. ಚಿನ್ನದ ಗರಿ ಸಿಕ್ಕ ರಾಜ, ಚಿನ್ನದ ಗರಿಯುಳ್ಳ ಪಕ್ಷಿಯನ್ನು ಹುಡುಕುವಾದ ಸುಂದರಿ ಸಾಗರಿಯನ್ನು ಕಂಡು ಮೋಹಿತನಾಗಿ ಮದುವೆಯಾಗುತ್ತಾನೆ. ನಾಯಕಿ ಕೋಳಿಯೇ ಇವರ ಮದುವೆಯನ್ನು ಮಾಡುತ್ತದೆ. ನಂತರ ರಾಣಿಯಾದ ಸಾಗರಿ, ಕಷ್ಟ ಕೊಟ್ಟಿದ್ದ ಅಣ್ಣನನ್ನು ಕ್ಷಮಿಸಿ‌ ತನ್ನ ಜೊತೆ ಕರೆದುಕೊಂಡು ಹೋಗುತ್ತಾಳೆ. ಇಷ್ಟು ಕಥೆ ಆದರೆ ನೋಡಿ! ಬದುಕು ಯಾವಾಗ ಬದಲಾಗುತ್ತದೆ ಯಾರಿಗೆ ಗೊತ್ತು? ನಾವು ಒಳ್ಳೆಯ ನಡತೆ ಉಳ್ಳವರಾಗಿರಬೇಕು ಮತ್ತು ಪ್ರಾಣಿ ಪಕ್ಷಿಗಳನ್ನು ಪ್ರೀತಿಸಿ ಪೋಷಿಸಬೇಕೆಂದು ಕಥೆ ಅರ್ಥೈಸುತ್ತದೆ. ಮಕ್ಕಳಿಗೆ ಒಂದು ಅಭೂತಪೂರ್ವ ಅನುಭವವನ್ನು ನೀಡುವ ಕಥೆ ಇದು ಎಂದು ಓದಿದವರು ತರ್ಕಿಸದೆ ಒಪ್ಪಬೇಕಾಗುತ್ತದೆ.

ಮಂತ್ರಿಯ ಉಪಾಯದಿಂದ ಕಳ್ಳನನ್ನು ಸೆರೆಹಿಡಿಯುವ ಕಥೆ “ದಿವ್ಯ ಜಲ ಮತ್ತು ಮಾಯಾ ಗನ್ನಡಿ” ಚೆನ್ನಾಗಿದೆ, ಹಾಗೆ….
“ಹಗಲು ಮೊದಲಾ ರಾತ್ರಿ ಮೊದಲಾ” ಕಥೆ, ತನ್ನ ಬುದ್ಧಿವಂತಿಕೆಯಿಂದ ಮಂತ್ರಿ, ರಾಜನ ಕಣ್ಣನ್ನು ತೆರೆಸಿದ ಕಥೆ. ರಾಜ ಸದಾ ಪ್ರಜೆಗಳ‌ ಸೌಖ್ಯವನ್ನು ವಿಚಾರಿಸಬೇಕು. ಅವರ ಬಡತನವನ್ನು ನಿವಾರಿಸಬೇಕೆಂಬುದನ್ನು ಉತ್ತಮ ನಿದರ್ಶನ ಜೊತೆ ತಿಳಿಸಿಕೊಡುತ್ತಾರೆ. ನಮ್ಮ ಮಕ್ಕಳು, ಕಥೆ ಕೇಳುವಾಗ ಅಥವಾ ಓದುವಾಗ ರಾಜ, ಮಂತ್ರಿ ಎಂದರೆ ಸಾಕು ಬಿಟ್ಟ ಕಣ್ಣು ಬಿಟ್ಟಂಗೆ ಕುಳಿತು ಬಿಡುತ್ತಾರೆ. ಲೇಖಕಿಯವರು ಅಂತಹ ಮಕ್ಕಳ ಸೂಕ್ಷ್ಮ ಮನಸ್ಥಿತಿಯನ್ನರಿತೇ ಈ ಎರಡೂ ಕಥೆಗಳನ್ನು ಬರೆದಿದ್ದು; ಖಂಡಿತ ಮಕ್ಕಳಿಗೆ‌ ಮುಟ್ಟುತ್ತದೆ.

ಪ್ರಕೃತಿಯನ್ನು ಹಾಳು ಮಾಡುತ್ತಿರುವ ಮಾನವ, ಅದನ್ನು ಸ್ವಚ್ಛಗೊಳಿಸುವ ಕುರಿತಾಗಿ ಎಂದಿಗೂ ಯೋಚಿಸುವುದಿಲ್ಲ. ಆಧುನಿಕತೆಗೆ ಮರುಳಾದದ್ದು ಕೇವಲ ಮನುಷ್ಯ. ಇತರೆ ಪ್ರಾಣಿಗಳು ಮಾತ್ರ ಯಾವತ್ತಿಗೂ ತಮ್ಮ ಜೀವನ ಶೈಲಿಯನ್ನಾಗಲೀ, ಆಹಾರ ಪದ್ಧತಿಯನ್ನಾಗಲಿ ಬದಲಿಸಿಕೊಂಡಿಲ್ಲ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಾಣಿಗಳನ್ನು ಬಳಸಿಕೊಳ್ಳುತ್ತಿರುವುದನ್ನು
“ನೀಲು, ಬಾಲು ಮತ್ತು ರಾಣಿ ಮೀನು” ಕಥೆಯಲ್ಲಿ ಮಕ್ಕಳಿಗೆ ಪ್ರಭಾವವಾಗುವಂತೆ, ತದೇಕಚಿತ್ತರಾಗುವಂತಹ ಕಥಾವಸ್ತುವಿನೊಂದಿಗೆ ತಿಳಿಸಿರುವುದು ಮಕ್ಕಳ ಸಾಹಿತ್ಯದಲ್ಲಿನ ಲೇಖಕರ ದೃಷ್ಟಿಕೋನ ಸರಿಯಾದುದೆಂದು ಸಾಬೀತುಪಡಿಸಿದಂತೆನಿಸುತ್ತದೆ.

“ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು” ಎಂಬ ಗಾದೆ ಮಾತಿಗೆ, ಸೂಕ್ತವಾದ ಕಥೆಯೊಂದಿಗೆ ವಿವರಣೆ ನೀಡುತ್ತಾರೆ ನಮ್ಮ ಕಥೆಗಾರ್ತಿಯವರು.
“ಪಾಪಿ ರಾಜ ಮತ್ತು ಸಮುದ್ರ” ಕಥೆಯಲ್ಲಿ, ರಾಜನಿಗೆ‌ ಕೆಲಸ ಕೇಳಿಕೊಂಡು ಬಂದು ಅವನಿಂದ ತಿರಸ್ಕಾರಿತಳಾಗಿ ಹೋಗುತ್ತಾಳೆ ಒಬ್ಬ ಅಜ್ಜಿ. ನಂತರ ಇಡೀ ಊರೇ ಸಮುದ್ರದ ಉಕ್ಕುವುಕೆಯಲ್ಲಿ ಮುಳುಗುವಾಗ; ಅದೇ ಅಜ್ಜಿ ರಾಜನಿಗೆ ನೀನೆ ಸಮುದ್ರಕ್ಕೆ ಬಂದು ಬೇಡಿಕೊ ಎಂದು ಹೇಳುತ್ತಾಳೆ. ಆಗ ರಾಜ ಸಮುದ್ರಕ್ಕೆ ಕಾಲಿಡುತ್ತಲೇ ಸಮುದ್ರ ಇಳಿಯುತ್ತಾ ಹೋಗುತ್ತದೆ. ಕಾರಣ ಕೇಳಿದಾಗ; ಅಜ್ಜಿ ಈ ಮೇಲಿನ ಗಾದೆ ಮಾತನ್ನು ಹೇಳಿ ರಾಜನ ಪಾಪಿತನವನ್ನು ತೋರಿಸುತ್ತಾಳೆ. ತನ್ನ ತಪ್ಪನ್ನು ಅರಿತ ರಾಜ, ಅಜ್ಜಿಗೆ ಕೆಲಸವನ್ನೂ ನೀಡುತ್ತಾನೆ. ದಾನ ಧರ್ಮವನ್ನೂ ಆಚರಿಸತೊಡಗುತ್ತಾನೆ. ಹೀಗೆ ಕಥೆಗಾರ್ತಿ ಪಲ್ಲವಿ ಅವರು ಉತ್ತಮ ಚಿಂತನೆಗಳನ್ನು ಕಥಾ ರೂಪದಲ್ಲಿ ಮಕ್ಕಳಿಗೆ ಆದರ್ಶದ ಪಾಠವಾಗಿ ನೀಡುತ್ತಾರೆ.

ಮರೆಯಾದ ಅಹಂಕಾರ “,
” ಚಿಂಟೂವಿನ ಸಂಗೀತ ಕಛೇರಿ “,
” ಪೃಥ್ವಿಯ ಮಾದರಿ ಸರ್ಕಾರಿ ಶಾಲೆ ”
” ಗುಬ್ಬಿ ಹಕ್ಕಿ ”
” ಆಗಸಕ್ಕೆ ಸೇರಿದ ಚಂದಿರ “
ಮುಂತಾದ ಕೃತಿಯಲ್ಲಿರುವ ಎಲ್ಲಾ ೨೩ ಕಥೆಗಳೂ ಸಹ ಮಕ್ಕಳಿಗೆ ಅಚ್ಚುಮೆಚ್ಚಾಗುತ್ತವೆ. ಬಹುತೇಕ ಕಥೆಗಳಲ್ಲಿ ಲೇಖಕಿಯವರ ಪ್ರಕೃತಿ ಪ್ರೇಮ ಮತ್ತು ಕಾಳಜಿ ಎದ್ದು ಕಾಣುತ್ತದೆ.

ಭೂಮ್ತಾಯಿ ಅಜ್ಜಿ ಆದ್ಲಾ….? ಕೃತಿ, ಮಕ್ಕಳ‌ ಸಾಹಿತ್ಯ ಲೋಕದಲ್ಲಿ ಸಂಪೂರ್ಣವಾಗಿ ಆವರಿಸಿ; ಮಕ್ಕಳಿಗೆ, ಅಂತೆಯೇ ಹಿರಿಯ ಓದುಗರಿಗೂ ಒಂದು ಆದರ್ಶವನ್ನು ಹುಟ್ಟಿಸುತ್ತದೆ ಎಂಬುದು ಸತ್ಯ.
ಪರಿಸರ ನಾಶ ಯಥೇಚ್ಚವಾಗಿ ಸಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ನಮ್ಮ ಸುತ್ತಲಿನ ಪರಿಸರ ಹಾಳಾಗುತ್ತಿರುವ ವಿಷಮ ಪರಿಸ್ಥಿತಿಯಲ್ಲಿ,
ಕೇವಲ ಮನೋರಂಜನೆಗೆ, ಆಕರ್ಷಣೆಗೆ ಸೀಮಿತವಾಗುವ ಮಕ್ಕಳ ಕಥಾ ಪುಸ್ತಕಗಳ ಹೊರತಾಗಿ, ಇಂತಹ ಜೀವನದ ಬಗ್ಗೆ ಜಾಗೃತಿ, ಪರಿಸರ ಪ್ರೇಮ ಮತ್ತು ನಾವು ಪರಿಸರಕ್ಕಾಗಿ ಏನು ಮಾಡಬೇಕೆಂಬುದನ್ನು ಮಕ್ಕಳಿಗೆ; ಮಕ್ಕಳ ಕಥೆಯ ಮೂಲಕವೇ ಅರಿವು ಮೂಡಿಸುವುದು ವಿಶೇಷವೆನಿಸುತ್ತದೆ. ಇದು ಅನಿವಾರ್ಯವೂ ಹೌದು.

ಈ ಉದ್ದೇಶಕ್ಕಾಗಿಯೇ ಮಕ್ಕಳ ಸಾಹಿತ್ಯ ಪ್ರೇಮಿಗಳಾದ ಎಡೆಯೂರು ಪಲ್ಲವಿ ಅವರು “ಭೂಮ್ತಾಯಿ ಅಜ್ಜಿ ಆದ್ಲಾ..??” ಕಥಾ ಸಂಕಲನವನ್ನು ಮಕ್ಕಳ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಅವರ ಉದ್ದೇಶವು ಸಫಲವಾಗಬೇಕೆಂದರೆ ಪ್ರತಿಯೊಂದು ಶಾಲೆಯಲ್ಲೂ ಮಕ್ಕಳಿಗೆ‌ ಈ ಕೃತಿಯನ್ನು ಪರಿಚಯಿಸಬೇಕಿದೆ, ಓದಿಸಬೇಕಿದೆ…. ಅವರ ಆಶಯ ಈಡೇರಲಿ, ಕೃತಿ ಎಲ್ಲರಿಗೂ ತಲುಪಲಿ, ಮತ್ತಷ್ಟು ಮಕ್ಕಳ ಸಾಹಿತ್ಯ ಸಹೋದರಿ ಪಲ್ಲವಿ ಅವರಿಂದ ನಮ್ಮನ್ನು ಸೇರಲಿ ಎಂದು ಆಶೀಸುತ್ತೇನೆ. ಸಹೋದರಿ ಪಲ್ಲವಿ ಅವರ ನಿರೂಪಣಾ ಶೈಲಿಯು ಮತ್ತಷ್ಟು ಪ್ರಬಲವಾಗಲಿ, ಮತ್ತಷ್ಟು ಮಗದಷ್ಟು ಕಥೆಗಳು ಮಕ್ಕಳನ್ನು, ನಮ್ಮನ್ನು ರಂಜಿಸಲಿ; ಎಂದು ಹಾರೈಸುತ್ತಾ ನನ್ನ ಅನಿಸಿಕೆಗಳನ್ನು ಮಕ್ಕಳ ಸಾಹಿತ್ಯ ಲೋಕಕ್ಕೆ ಅರ್ಪಿಸುತ್ತೇನೆ.
“ಧನ್ಯವಾದಗಳೊಂದಿಗೆ”

ವರದೇಂದ್ರ ಕೆ ಮಸ್ಕಿ
9945253030

ಪುಸ್ತಕಕ್ಕಾಗಿ ಸಂಪರ್ಕಿಸಿ:
ಎಡೆಯೂರು ಪಲ್ಲವಿ
9741632669

Don`t copy text!